ಹೃದಯವಾಣಿ
ಶ್ರೀ ಜಗದ್ಗುರು ಶ್ರೀಮದಾನಂದತೀರ್ಥರ ಭಕ್ತಿಸಿದ್ಧಾಂತವು ಸಮಾಜಜೀವನವನ್ನು
ಸಚ್ಚಾರಿತ್ರ್ಯದಿಂದ ಪರಿಶುದ್ಧವಾಗಿ ರೂಪಿಸುವಲ್ಲಿ ಅನನ್ಯ ಕೊಡುಗೆಯನ್ನು ನೀಡಬಲ್ಲದು.
ಭಗವಂತನ ಭಕ್ತನು ತನ್ನ ಜೀವನವನ್ನು ಭಗವತ್ ಪ್ರಿಯವಾದ ಸತ್ಯ, ಅಹಿಂಸೆ, ಪ್ರಾಮಾಣಿಕತೆ,
ಔದಾರ್ಯ, ನಯ-ವಿನಯ, ಕರುಣೆ ಮುಂತಾದ ದೈವಿಕ ಮೌಲ್ಯಗಳಿಂದ ಯಜ್ಞರೂಪದಲ್ಲಿ ಪರಿವರ್ತಿಸಿ
ಭಗವಂತನಿಗೆ ಪ್ರಿಯನಾಗಿ ಬದುಕುತ್ತಾನೆ. ಪರಮಾತ್ಮನ ಪ್ರೀತಿಯ ಗಳಿಕೆಯೇ ಆತನ
''ಜೀವನಯಜ್ಞದ '' ಉದಾತ್ತ ಧ್ಯೇಯವಾಗಿರುತ್ತದೆ. ಅದಕೆಂದೇ ಮಧ್ವರು ತಮ್ಮ
ಸಿದ್ಧಾಂತದಲ್ಲಿ ಭಕ್ತಿಗೆ ಪ್ರಾಧಾನ್ಯವನ್ನು ಪ್ರತಿಪಾದಿಸಿದರು. ವೇದಗಳು ಭಗವದ್
ಭಕ್ತಿಯ ಜಾಗೃತಿಗಾಗಿ ಪರಮಾತ್ಮನ ಗುಣಗಳನ್ನು ಬಣ್ಣಿಸುತ್ತಿವೆ. ''ಕೇವಲೋನಿರ್ಗುಣಶ್ಚ''
ಎನ್ನುವ ಶ್ರುತಿಯೂ ಸ್ವತಂತ್ರನಾಗಿ ''ಕೇವಲ'' ಎನಿಸಿದ ನಾರಾಯಣನು ಜ್ಞಾನಿಗಳಿಂದ
ನಿರ್ಧಾರಿತವಾದ ''ಗುಣಸಾಗರ'' ನೆನಿಸಿ ''ನಿರ್ಗುಣ'' ನೆಂದು ಪ್ರಖ್ಯಾತನಾಗಿದ್ದಾನೆ
ಎಂದೇ ಸಾರುತ್ತಿದೆ, ಆತನಲ್ಲಿ ಗುಣವನ್ನು ನಿಷೇಧಿಸುತ್ತಿಲ್ಲ. ''ನಿರ್ವಾದೋ ನಿಶ್ಚಿತೇ
ವಾದೇ'' ಎನ್ನುವ ಕೋಶವು ತಿಳಿಸಿರುವಂತೆ 'ನಿರ್' ಉಪಸರ್ಗವು 'ನಿಶ್ಚಿತ' ಎನ್ನುವ
ಅರ್ಥವನ್ನು ನೀಡುವುದರಿಂದ (ನಿಶ್ಚಿತಃ ಗುಣಃ ಯಸ್ಯ ಸಃ ನಿರ್ಗುಣಃ) 'ನಿರ್ಗುಣ'
ಪದವನ್ನು ''ನಿಶ್ಚಿತ ಗುಣಸಾಗರ'' ಎಂಬರ್ಥಪರವಾಗಿ ವ್ಯಾಖ್ಯಾನಿಸುವುದು
ಸಮರ್ಪಕವೆನಿಸುತ್ತದೆ.
ಹೀಗೆ ಸಕಲ ವೇದಗಳೂ ಭಕ್ತಿಪ್ರಚೋದಕಗಳಾದ ಗುಣಗಳನ್ನೇ ಭಗವಂತನಲ್ಲಿ ಪ್ರತಿಪಾದಿಸುತ್ತವೆ.
ಇಂತಹ ಭಕ್ತಿಸಿದ್ಧಾಂತವನ್ನು ಸಮಾಜದಲ್ಲಿ ಪ್ರಸಾರಮಾಡುವ ಸಲುವಾಗಿ ನಮ್ಮ ಪರಮಪೂಜನೀಯ
ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥರು ''ಮಾಧ್ವರಾದ್ಧಾಂತ ಸಂವರ್ಧಕ ಸಭೆ'' ಯನ್ನು ೫೦
ವರ್ಷಗಳ ಹಿಂದೆ ಭಂಡಾರಕೇರಿ ಮಠದಲ್ಲಿ ಪ್ರಾರಂಭಿಸಿದರು. ತಮ್ಮ ಸಭಾ ಅಧಿವೇಶನಗಳಲ್ಲಿ
ವಿವಿಧ ವಿದ್ವದ್ ಗೋಷ್ಠಿಗಳನ್ನು ನಡೆಸಿ ವಿದ್ಯಾರ್ಥಿ - ಪಂಡಿತರನ್ನು ಸನ್ಮಾನಿಸಿ
ಪ್ರೋತ್ಸಾಹಿಸಿದರು. ಮಧ್ವರ ಭಕ್ತಿಸಿದ್ಧಾಂತವನ್ನು ಸಮಾಜದಲ್ಲಿ ಗಮನಾರ್ಹವಾಗಿ
ಪ್ರಸಾರಮಾಡಿದರು. ಇದೀಗ ಈ ಸಭೆಯ ಸುವರ್ಣಮಹೋತ್ಸವವನ್ನು ಉಡುಪಿ ಶ್ರೀಕೃಷ್ಣನ
ಸನ್ನಿಧಾನದಲ್ಲಿ ನಮ್ಮ ಗುರುಗಳು ನಡೆಸಲಿದ್ದಾರೆ. ಅದರ ಸ್ಮಾರಕವಾಗಿ
''ಹರಿತೀರ್ಥವಿವೇಕ'' ಎನ್ನುವ ಜ್ಞಾನಪುಷ್ಪವನ್ನು ನಮ್ಮ ಗುರುವರ್ಯರ ಅಂತರ್ಗತರಾದ
ಮಧ್ವರ ಅಂತರ್ಯಾಮಿ ಶ್ರೀಕೃಷ್ಣನಿಗೆ ಸಮರ್ಪಿಸುತ್ತಿದ್ದೇವೆ.
ನಮ್ಮ ''ಗಾಯತ್ರಿಯಲ್ಲಿ ಆಧ್ಯಾತ್ಮದೀಪ'' ಎಂಬ ಕೃತಿಯನ್ನು ಪ್ರಕಟಣೆಗೊಳಿಸಿದ ಶ್ರೀಕಾಂತ
ಕೆಮ್ತೂರು ಸಹೋದರರು ಇದೀಗ ಪುನಃ ಉದಾರಹೃದಯಿಗಳಾಗಿ ಈ ಕಿರುಕೃತಿಯ ಪ್ರಕಟಣೆಯ ಪೂರ್ಣ
ವೆಚ್ಚವನ್ನು ವಹಿಸಿದ್ದಾರೆ. ಅವರಿಗೆ ಹರಿ-ಮಧ್ವ-ಗುರುಗಳು ಪೂರ್ಣಾನುಗ್ರಹವನ್ನು ಮಾಡಲಿ
ಎಂದು ಪ್ರಾರ್ಥಿಸುತ್ತೇವೆ.
ಇತಿ
ಶ್ರೀ ವಿದ್ಯೇಶತೀರ್ಥ ಶ್ರೀಪಾದರು
೨೯.೧.೧೯೯೩
ಶ್ರೀ ಸತ್ಯತೀರ್ಥ
ಭಂಡಾರಕೇರಿ ಮಠ, ಉಡುಪಿ.
ಪ್ರಸ್ಥಾವನೆ
ಮುಂದುವರೆಯಿವುದು