ಪ್ರಕಾಶಕರು
ಭಾಗವತಾಶ್ರಮ ಪ್ರಕಾಶನ
ಗಿರಿನಗರ, ಬೆಂಗಳೂರು
ಎರಡು ಮಾತುಗಳು
ಶ್ರೀ ಮದ್ಭಗವದ್ಗೀತೆಯು ಅಜ್ಞ -
ಜ್ಞಾನಿಗಳಿಬ್ಬರಿಗೂ ಸ್ವೋಚಿತ ಕರ್ಮವು ಅನಿವಾರ್ಯವೆಂದು ತಿಳಿಸಿದೆ. ಸ್ವತಃ
ಶ್ರೀಕೃಷ್ಣನೇ ತಾನು ಕೃತ ಕೃತ್ಯನಾಗಿದ್ದರೂ ಲೋಕಕ್ಕೆ ಸನ್ಮಾರ್ಗವನ್ನು
ತೋರಲು ಕರ್ಮ ಮಾಡುತ್ತಿದ್ದೇನೆಂದು ತಿಲಿಸಿದ್ದಾನೆ. ತನ್ನಂತೆಯೇ
ಜ್ಞಾನಿಯು ಲೊಕಶಿಕ್ಷಣಾರ್ಥವಾಗಿ ಕರ್ಮವನ್ನು ಮಾಡಬೇಕೆಂದು ೩ನೇ ಅಧ್ಯಾಯದ ೨೦ ನೇ
ಶ್ಲೋಕದಲ್ಲಿ ಆದೇಶಿಸಿದ್ದಾನೆ.
ಇಲ್ಲಿ ''ಲೋಕಸಂಗ್ರಹ '' ಎನ್ನುವ ಶಬ್ದಕ್ಕೆ ''ಲೋಕ ಶಿಕ್ಷಣ '' ಯಾ
'' ಲೋಕವನ್ನುಸ್ವಧರ್ಮದಲ್ಲಿ ತೊಡಗಿಸುವುದು '' ಎಂದಿಷ್ಟೆ ಅರ್ಥವಲ್ಲ.
ಸಂಸಾರದಿಂದ ಮುಕ್ತರಾದ ಜೀವರ ಸುಖವೂ ''ಲೋಕ'' ಶಿಬ್ದದ ಅರ್ಥವೆಂದು ಶ್ರೀ ಮದ್ವರು
ಬೃಹದಾರಣ್ಯಕ ಉಪನಿಷತ್ ಭಾಷ್ಯದಲ್ಲಿ ತಿಳಿಸಿದ್ದಾರೆ. ಆದುದರಿಂದ ''ಲೋಕಸಂಗ್ರಹ''
ಶಬ್ದಕ್ಕೆ ''ಮುಕ್ತಿ ಸುಖದ ಸಮೀಚನಜ್ಞಾನ - ಅಬಿವ್ಯಕ್ತಿ'' ಎನ್ನುವ ಅರ್ಥವೂ
ಸಂದರ್ಭೋಚಿತವಾಗಿದೆ. ಈ ಪ್ರಯೋಜನವನ್ನು ಅಪೇಕ್ಷಿಸಿ ಜ್ಞಾನಿ ಯಾದ ನೀನೂ (ಅರ್ಜುನನೂ)
ಕರ್ಮ ಮಾಡಬೇಕೆಂದು ಶ್ರೀಕೃಷ್ಣನ ಆಶಯವಾಗಿದೆ.
ಜ್ಞಾನೋತ್ತರ
ಕಾಲದಲ್ಲಿ ಕರ್ಮ ಮಾಡದಿದ್ದಲಿ ''ಜ್ಞಾನಿನೋಪಿ ಯತೋಹ್ರಾಸ ಆನಂದಸ್ಯ ಭವೇದೃವಂ '' ಎಂದು
ಜ್ಞಾನಿಗಳ ವಚನವು ಮೋಕ್ಷದಲ್ಲಿ ಆನಂದಹ್ರಾಸವಾಗುವ ಅಪಾಯ ವಿದೆಯೆಂದು ಎಚ್ಚರಿಸಿದೆ.
ಹೀಗಾಗಿ ಜ್ಞಾನಿಯೂ ಕರ್ತವ್ಯಚ್ಯುತನಾದರೆ ನರಕಾದಿ ಅನರ್ಥಕ್ಕೊಳಗಾಗದಿದ್ದರೂ
ಆನಂದಹ್ರಾಸಕ್ಕೆ ಪ್ರಯೋಜಕವೆನಿಸಬಲ್ಲ ಪಾಪಲೇಪಕ್ಕೆ ಗುರಿಯಾಗುವನು. ಆದುದರಿಂದ ಈ
ತೆರೆನಾದ ಪಾಪಲೇಪದಿಂದಲೂ ದೂರನಾಗಬೇಕಾದರೆ ಜ್ಞಾನಿಯೂ ಯಜ್ಞ, ದಾನ, ತಪಸ್ಸುಗಳನ್ನು
ಕಡ್ಡಾಯವಾಗಿ ಆಚರಿಸಬೇಕು. ಈ ಮೂರು ಕರ್ಮಗಳು ಅವರಿಗೂ ಪಾವನ (ಆನಂದಹ್ರಾಸಕ್ಕೆ
ಪ್ರಯೋಜಕವೆನಿಸಿದ ಪಾಪಲೇಪದಿಂದ ದೂರವಿಡುವುದರಿಂದ) ಗಳೆಂದು ಬಣ್ಣಿಸಿದ್ದಾನೆ.
ಬ್ರಹ್ಮಜ್ಞಾನಿಯಿಂದ ಮಾಡಲ್ಪಡುವ ಕರ್ತವ್ಯವೇ ''ಮುಖ್ಯಕರ್ಮ'' ಎನಿಸಿದೆ - ''ತಸ್ಮಾತ್
ಕರ್ಮೇತಿತತ್ ಪ್ರಾಹುತ್ಯತ್ ಕೃತಂಬ್ರಹ್ಮದರ್ಶಿನಾ'' ಹೀಗಾಗಿ ಜ್ಞಾನಿಗೆ ಈ ತೆರನಾದ
ಕರ್ಮದ ನಿರ್ಬಂಧವಿಲ್ಲವಾದರೆ, ವೀರ್ಯವತ್ತರವಾದ ಈ ಮುಖ್ಯ ಕರ್ಮಗಳಿಗೆ ಯಾರು
ಅಧಿಕಾರಿಗಳು? ಬಿ.ಎಡ್ ಡಿಗ್ರಿಯನ್ನು ಹೊಂದಿದವ್ಯಕ್ತಿ ಶ್ಕ್ಷಣ ನೀಡಲು ಎಷ್ಟು ಅರ್ಹನೋ
ಅಷ್ಟು ಅದನ್ನು ಹೊಂದಲು ಅಭ್ಯಾಸ ನೆಡೆಸುತ್ತಿರುವ ವ್ಯಕ್ತಿಯಲ್ಲ. ಅದೇ ತೆರದಿ ಲೋಕಕ್ಕೆ
ತನ್ನ ಆಚರಣಿಯಿಂದ ಮಾರ್ಗದರ್ಶನ ನೀಡುವ ವಿಚಾರದಲ್ಲೂ ಅಜ್ಞಾನಿಗಿಂತ ಜ್ಞಾನಿಯೇ ಮುಖ್ಯ
ಅರ್ಹನು. ಜ್ಞಾನಿಗಳು ವಿಶೇಷ ಭಗವತ್ ಪೂಜಾ ರೂಪಕರ್ಮಗಳನ್ನು ಮಾಡಿದರೆ ಮೋಕ್ಷದಲ್ಲಿ ಸುಖ
ವಿಶೇಷದ ಲಾಭವಾಗುವುದೆಂದು ''ಯಾವತ್ ಸೇವಾ ಪರೇತತ್ಜೇತಾವತ್ ಸುಖ ವಿಶೇಷತಾ'' ಎನ್ನುವ
ಜ್ಞಾನಿಗಳ ವಚನವು ಸ್ಪಷ್ಟಪಡಿಸಿದೆ. ಅದಕೆಂದೆ ಜ್ಞಾನಿಗಳಾದ ಶುಕ ವಾಮದೇವಾದಿಗಳು
ಭಾಗವತೋಪದೇಶಾದಿ ಕರ್ಮಗಳನ್ನು ಮಾಡಿದ್ದಾರೆ. ಒಟ್ಟಿನಲ್ಲಿ ಮೂರುಲೋಕಗಳನ್ನು ಉದ್ಧರಿಸುವ
ಸಾಮರ್ಥ್ಯವುಳ್ಳ ಮಹಾಪುರುಷನೂ ಕರ್ತವ್ಯದ ಹೊಣೆಗಾರಿಕೆಯಿಂದ ಮುಕ್ತನಲ್ಲ ಎನ್ನುವ
ಸಂಗತಿಯನ್ನು ತನ್ನ ನಿದರ್ಶನದಿಂದ ಶ್ರೀ ಕೃಷ್ಣನು ಸ್ಪಷ್ಠಪಡಿಸಿದ್ದಾನೆ.
ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ
ಇಲ್ಲಿ
ಶಂಕರರು ''ಕ್ಷೇತ್ರಜ್ಞ'' ಶಬ್ದದಿಂದ ಜೀವನನ್ನು ಪರಿಗ್ರಹಿಸಿ, ಶ್ರೀಕೃಷ್ಣನು
ತಾನೇ ''ಜೀವ'' ನಾಗಿದ್ದಾನೆಂದು ಅರ್ಜುನನಿಗೆ ಉಪದೇಶಿಸಿದ್ದಾನೆಂದು ಅಭಿಪ್ರಾಯ
ಪಟ್ಟಿದ್ದಾರೆ. ಆದರೆ ''ಕ್ಷೇತ್ರಜ್ಞ'' ಶಬ್ದಕ್ಕೆ ಶಂಕರರು ತೀಳಿಸಿದ ಅರ್ಥ (ಜೀವ) ವು
ಸಮರ್ಪಕವಲ್ಲ. ಗೀತೆಯ ಸಾರವನ್ನು ಹೇಳುವ ಗರುಡ ಪುರಾಣದ ಭಾಗವು
''ಸರ್ವಜ್ಞಃಸರ್ವದರ್ಶೀಚಕ್ಷೇತ್ರಜ್ಞ ಇತಿಗೀಯತೇ '' ಎನ್ನುವ ವಚನದಲ್ಲಿ ಸರ್ವಜ್ಞನಾದ
ಈಶ್ವರನನ್ನೆ ''ಕ್ಷೇತ್ರಜ್ಞ'' ಎಂದು ಹೆಸರಿಸಿದೆ. ''ಜೀವಸ್ಥೋ ಭಗವಾನ್
ವಿಷ್ಣುಃ ಕ್ಷೇತ್ರಜ್ಞ ಇತಿ ಕಥ್ಯತೇ '' ಎನ್ನುವ ಜ್ಞಾನಿಗಳ ವಚನವು ತಿಳಿಸಿರುವಂತೆ
ಜೀವನ ಅಂತರ್ಯಾಮಿಯಾದ ಭಗವಂತನೇ ''ಕ್ಷೇತ್ರಜ್ಞ'' ಎನಿಸಿದ್ದಾನೆ. ಆಕ್ಷೇತ್ರಜ್ಞನೇ
ತಾನು ಎಂದು ಹಿಂದೆ ಹೇಳಿದ ಕೃಷ್ಣವಚನದ ಆಶಯವಾಗಿದೆ. ''ಕ್ಷೇತ್ರಜ್ಞಂ ಸರ್ವಭೂತೇಷು
ಸಮತ್ವೇನಯಜೀತ ಮಾಂ'' ಎನ್ನುವ ಭಾಗವತ ವಚನದಲ್ಲಿ ಸರ್ವ ಜೀವರಾಶಿಗಳಲ್ಲಿ ಹುದುಗಿದ
ಕ್ಷೇತ್ರಜ್ಞನಾದ ತನ್ನನ್ನೇ ಸಮತ್ವದೃಷ್ಠಿ (ನಿರ್ದೋಷತ್ವ ದೃಷ್ಟಿ) ಯಿಂದ
ಆರಾಧಿಸಬೇಕೆಂದು ಶ್ರೀ ಕೃಷ್ಣನು ತಿಳಿಸಿದ್ದಾನೆ. ಇಲ್ಲದ ಶ್ರೀರವನ್ನು ಭ್ರಮಿಸಿಕೊಂಡ ,
(ಅದ್ವೈತ ಮತದಲ್ಲಿ ಶರೀರ ಮನೆ ಮೊದಲಾದ ವಸ್ತಗಳು ಕೇವಲ ತೋರಿಕೆ.ವಾಸ್ತವಿಕವಾಗಿ ಅವುಗಳು
ಕಾಲ್ಪನಿಕಗಳೆಂದು ಅಭಿಪ್ರಾಯವಿದೆ.) ಅಜ್ಞಾನಕ್ಕೊಳಗಾದ ಈ ಬಡಪಾಯಿ ಜೀವನು
''ಕ್ಷೇತ್ರಜ್ಞ'' ನೆಂದು ಸಮ್ಮತನಾಗಿದ್ದರೆ ಇಂತಹ ಕ್ಷೇತ್ರ್ಜ್ಞ ಸ್ವರೂಪನಾದ ಶ್ರೀ
ಕೃಷ್ಣನನ್ನು ''ದೋಷದೂರ'' ಎನ್ನುವ ಸಮತ್ವದ ದೃಷ್ಠಿಯಿಂದ ಆರಾಧಿಸಲು ಹೇಗೆ ತಾನೆ
ಸಾಧ್ಯವಾಗಬಹುದು? ''ನಿರ್ದೋಷಂ ಹಿಸಮಂಬ್ರಹ್ಮ'' ಎನ್ನುವ ಗೀತಾ ವಚನವು ಹರಿಯ
ನಿರ್ದೋಷತ್ವವೇ ಸಮತ್ವವೆಂದು ವಿವರಣೆ ನೀಡಿದೆ ತಾನೆ? ''ಸರ್ವಜ್ಞ'' ನೆನಿಸಿದ ಶ್ರೀ
ಕೃಷ್ಣನಿಗೆ ಅಲ್ಪಜ್ಞನಾದ ಜೀವನಿಂದ ಐಕ್ಯವನ್ನು ಶಂಕರರೇ ''ಉಪದೇಶಾ ಸಾಹಸ್ರೀ ಎನ್ನುವ
ಗ್ರಂಥದಲ್ಲಿ ಅಲ್ಲಗಳಿದಿದ್ದಾರೆ. ಶ್ರೀ ಕೃಷ್ಣನೇ ''ಈಶ್ವರೋಹಂ '' ಎನ್ನುವ ಜೀವ -
ಈಶ್ವರ ಐಕ್ಯ ಪ್ರಜ್ಞೆಯು ಅಸುರ ಪ್ರಜ್ಞೆಯೆಂದು ನಿಂದಿಸಿ, ಅದನ್ನು ಖಂಡ್ಸಿದ್ದಾನೆ.
ಭಗವಾನ್ ವಾಸುದೇವನೇ ತಾನು ಎಂದು ಪ್ರಲಾಪುಸಿದ ಪೌಂಡ್ರಕ ವಾಸುದೇವನನ್ನು ದೇವತಾ
ಸ್ವರೂಪರಾದ ಯಾದವರು ಅಪಹಾಸ್ಯಮಾಡಿರುವುದಲ್ಲದೆ, ಶ್ರೀ ಕೃಷ್ಣನೇ ಆತನನ್ನು
ಸಂಹರಿಸಿದ್ದಾನೆ. ಹೀಗಾಗಿ ಐಕ್ಯವಾದವು ದೇವತೆಗಳ ಅಪಹಾಸ್ಯಕ್ಕೆ ಗುರಿಯಾಗಿದೆ. ಇಂತಹ
ಅಪಹಾಸ್ಯಾಸ್ಪದವಾದ ಜೀವೇಶ್ವರರ ಐಕ್ಯವನ್ನು ತಾನೇ ಗೀತೆಯಲ್ಲಿ ಖಂಡಿಸಿ ಪುನಃ
ಗೀತೆಯಲ್ಲಿ ಅದನ್ನೇ ಶ್ರೀ ಕೃಷ್ಣನು ಹೇಗೆ ತಾನೆ ಮಂಡಿಸಬಲ್ಲನು? ಜೀವ - ಕೃಷ್ಣ
(ಈಶ್ವರ) ರಲ್ಲಿರುವ ಸರ್ವಜ್ಞತ್ವ - ಅಲ್ಪಜ್ಞತ್ವ ಮೋದಲಾದ ವಿರುದ್ಧಾಂಶಗಳನ್ನು
ಪರಿತ್ಯಜಿಸಿ, ಕೇವಲ ಚೈತನ್ಯ ಸ್ವರೂಪರಾದ ಅವರಿಗೆ ಐಕ್ಯವನ್ನು ಹೇಳಬೇಕೆಂದು
ವಾದಿಸುವುದು ಸರಿಯಲ್ಲ. ಪತಿವ್ರತಾಸ್ತ್ರಿ - ವೇಶ್ಯಾಸ್ತ್ರಿಯರ ವಿರುದ್ಧಾಂಶಗಳನ್ನು
ಪರಿತ್ಯಜಿಸಿ ಅವರಿಗೆ ಐಕ್ಯವನ್ನು ಹೇಳಬಹುದೇ? ಆದುದರಿಂದ ''ಕ್ಷೇತ್ರಜ್ಞ'' ಪದವು
ಅಲ್ಪಜ್ಞತ್ವ ರೂಪ ವಿರುದ್ಧಾಂಶದಿಂದ ದೂರವಾದ ಜೀವನ ಚೈತನ್ಯ ಸ್ವರೂಪ್ವನ್ನು ಮಾತ್ರ
ಲಕ್ಷಣಾದಿಂದ ( ತಾತ್ಪರ್ಯಾರ್ಥವನ್ನು ಬೋಧಿಸುವ ಶಬ್ದದಲ್ಲಿರುವ ಸಾಮರ್ಥ್ಯ ವಿಶೇಷ)
ಬೋಧಿಸಿ, ಆತನ ಸ್ವರೂಪದಿಂದ ಐಕ್ಯವನ್ನು ಶ್ರೀ ಕೃಷ್ಣ್ನಿಗೆ ಗೀತಾವಚನವು ಸಾರುತ್ತದೆ
ಎನ್ನುವವಾದವೂ ಸಮಂಜಸವಲ್ಲ. ಇದಲ್ಲದೆ ''ಏತತ್ ಯೋ ವೇತ್ತಿ ತಂಪ್ರಾಹುಃ ಕ್ಷೇತ್ರಜ್ಞ
ಇತಿ ತದ್ವಿದಃ '' ಎನ್ನುವ ವಚನವು ಕ್ಷೇತ್ರಜ್ಞ ಶಬ್ದದ ಅವಯವದ ಅರ್ಥವನ್ನು
ಉದ್ದೇಶಪೂರ್ವಕವಾಗಿಯೇ ವಿವರಿಸಿ ಆ ಶ್ಬ್ದವು ಯೌಗಿಕವಿನಹ ಲಾಕ್ಷಣಿಕವಲ್ಲವೆಂದು
ಸ್ಪಷ್ಟವಾಗಿ ತಿಳಿಸಿದೆ. ಆದುದರಿಂದ ಲಕ್ಷಣಾದಿಂದ ಈ ಶಬ್ದವು ಜೀವನ ಚೈತನ್ಯಾಂಶವನ್ನು
ಮಾತ್ರ ಹೇಗೆ ಬೋಧಿಸ ಬಲ್ಲದು ? ಕ್ಷೇತ್ರ್ಜ್ಞಂಚ ಎನ್ನುವಲ್ಲಿ ಚಶಬ್ದವು
ಅವಧಾರಣಾರ್ಥವನ್ನು ನೀಡುತ್ತದೆ. ಹೀಗಾಗಿ ಪ್ರಕೃತಿ ಮೋದಲಾದ ಕ್ಷೇತ್ರದ ಸಾಕ್ಷಿಯೆಂದೇ
ತನ್ನನ್ನು ತಿಳಿಯಬೇಕೇ ವಿನಹ ಜೀವನಂತೆ ಅದರಿಂದಬಂಧಿತನೆಂದು ತಿಳಿಯಬಾರದೆನ್ನುವ
ಆಶಯವನ್ನು ಸ್ಪಷ್ಟಪಡಿಸಿದ್ದಾನೆ. ಆದುದರಿಂದ ಕ್ಷೇಯ್ರದಿಂದ ಬಂಧಿತನಾದ ಜೀವನೇ ತಾನು
ಎನ್ನುವ ಉಪದೇಶವನ್ನು ಇಲ್ಲಿ ಶ್ರೀಕೃಷ್ಣನು ಹೇಗೆ ನೀಡಬಲ್ಲನು?
''ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ'' ಎನ್ನುವ ಗೀತಾವಚನವೂ ಜೀವನು, ಮತ್ಸ, ಕೂರ್ಮ
ಮೊದಲಾದ ಭಗವಂತನ ಅವತಾರಗಳಂತೆ ಭಗವಂತನ ಸ್ವರೂಪದ ಒಂದಂಶವೆಂದು ಸಾರುವುದಿಲ್ಲ. ಶ್ರೀ
ಕೃಷ್ಣನು ಈ ವಚನದಿಂದ (ಜೀವಲೋಕೇ) ಜೀವನನಿಜಸ್ವರೂಪ ಸಾಕ್ಷಾತ್ ಕಾರವಾದಗಲೂ (ಜೀವಭೂತಃ
ಮಮ ಅಂಶಃ) ಜೀವರೂಪವಾದ ನನ್ನ ಭಿನ್ನಾಂಶವು (ಸನಾತನಏವ) ದಾಸ್ಯ ಪ್ರಜ್ಞೆಯಿಂದ,
ಮೋಕ್ಷದಲ್ಲೂ ತನ್ನ ಗುಣನಾದ (ಸ್ತಿತಿ) ಸಹಿತವಾಗಿಯೇ (ಸದನ್ನು ಮಾಡತಕ್ಕದ್ದಾಗಿಯೆ)
ಇರುತ್ತದೆಂದು ತಿಳಿಸಿದ್ದಾನೆ. ''ನಾದೇನ ಮಹತಾ ತೇನಸನಾತನ ಇತೀರಿತಃ '' ಎನ್ನುವ
ಪ್ರಮಾಣ ವಚನವು ಸನಾತನ ಶಬ್ದಾರ್ಥವನ್ನು ವಿವರಿಸುವ ಕ್ರಮವನ್ನು ತಿಳಿಸಿದೆ.
ಮೋಕ್ಷದಲ್ಲೂ ಮುಕ್ತರಾದ ಬ್ರಹ್ಮಾದಿಚೇತನರು ಹರಿಯ ಗುಣ್ಗಾನವನ್ನು ಮಾಡುವರಂದು ''ಏತತ್
ಸಾಮಗಾಯನ್ನಾಸ್ತೇ'' ''ನೈರ್ಗುಣ್ಯಸ್ಥಾರಮಂತೇತ್ರ ಗುಣಾನುಕಥನೇ ಹರೇಃ'' ಎನ್ನುವ
ಪ್ರಮಾಣಗಳು ತಿಳಿಸಿವೆ. ಹೀಗಾಗಿ ಅಜ್ಜಾನದ ಲವ ಲೇಶವೂ ಇಲ್ಲದ ಮೋಕ್ಷದಲ್ಲಿ ಇರುವ
ಜೀವೇಶ್ವರಭೇದ ಹಾಗೂ ಅವರ ನಡುವೆ ಇರುವ ಸ್ವಾಮಿ ಭೃತ್ಯ ಭಾವಗಳು ಕಾಲ್ಪನಿಕಗಳಲ್ಲ,
ಪರಮಸತ್ಯಗಳೇ ಸರಿ. ಬ್ರಹ್ಮಜ್ಞಾನದಿಂದ ಬ್ರಹ್ಮಭಾವವು ಪ್ರಾಪ್ತಿಯಾಗುವುದೆಂದು ಕೆಲವರು
ಸಮರ್ಥಿಸುತ್ತಾರೆ. ಆದರೆ ಗೀತೆಯು ಜ್ಞಾನದಿಂದ ಭಗವಂತನಸಾದೃಶ್ಯವನ್ನು ಪಡೆಯಬಹುದೆ?
ವಿನಹ ಐಕ್ಯವನ್ನಲ್ಲವೆಂದು ಅಭಿಪ್ರಾಯ ಪಟ್ಟಿದೆ. ''ಇದಂ ಜ್ಞಾನಮುಪಾಶ್ರಿತ್ಯ
ಮಮಸಾಧರ್ಮ್ಯಮಾಗತಾಃ '' ಎನ್ನುವ ವಚನದಲ್ಲಿ ಸಾಧರ್ಮ್ಯ ಶ್ಬ್ದವು ಮುಕ್ತನಿಗೆ ಹರಿ
ಸಾದೃಶ್ಯವನ್ನೇ ಹೇಳುತ್ತದೆ. ಶಂಕರರು ''ಭಗವತ್ ಸ್ವರೂಪತ್ವವೇ'' ಸಾಧರ್ಮ್ಯ, ಶಬ್ದದ
ಅರ್ಥವೆಂದು ತಿಳಿಸಿದ್ದಾರೆ. ಆದರೆ ಇದು ಸಾಧರ್ಮ್ಯ ಶಬ್ದದ ಮುಖ್ಯ ಅರ್ಥವಲ್ಲ. ಈ ಅರ್ಥದ
ವರ್ಣನೆಯು ಕ್ಲಿಷ್ಟಕಲ್ಪನೆಯೆಂದು ಅವರ ಮತಾನುಯಾಯಿಗಳಾದ ಆನಂದಗಿರಿಯವರೂ ಅಭಿಪ್ರಾಯ
ಪಟ್ಟಿದ್ದಾರೆ. ಜನನ, ಮರಣ, ದುಃಖಾದಿಗಳ ಅಭಾವದಿಂದಲೇ ಮುಕ್ತರು ಈಶ್ವರಣ್ ಸಾಮ್ಯವೇ
ವಿನಹ. ಆತನಲ್ಲಿರುವ ಗುಣಪರಿಪೂರ್ಣತ್ವ ಸ್ವಾತಂತ್ರ್ಯಾದಿಗಳಿಂದ ಸಾಮ್ಯವಲ್ಲ. ಅದಕೆಂದೆ
''ಸರ್ಗ್ಯೇಪಿನೋಪಜಾಯಂತೇ ಪ್ರಳಯೇ ನವ್ಯಥಂತಿ ಚ '' ಎನ್ನುವ ಮಾತಿನಲ್ಲಿ ಈ ತೆರನಾದ
ಸಾಧರ್ಮ್ಯ, ಶಬ್ದಾರ್ಥವನ್ನು ವಿವರಿಸಲಾಗಿದೆ ''ಪರಮಂಸಾಮ್ಯಮುಪೈತಿ'' ಎನ್ನುವ
ಉಪನಿಷದ್ವಚಕ್ಕನುಗುಣವಾಗಿ ಅದರ ಸಾರವೆನಿಸಿದ ಗೀತೆಯಲ್ಲಿರುವ ಸಾಧರ್ಮ್ಯ, ಶಬ್ದಕ್ಕೆ
ಸಾದೃಶ್ಯವೆಂದು ಅರ್ಥವಿಸುವುದೇ ಸೂಕ್ತವಾಗುವದು. ಪರಮಸಾಮ್ಯ ಎನ್ನುವ ಶಬ್ದವು
ಜೀವೇಶ್ವರರಿಗೆ ಅಭೇದವನ್ನೇ ಹೇಳುತ್ತದೆ ಎಂದು ವೆಂಕಟನಾಥನು ಹೇಳುತ್ತಾನೆ. ಆದರೆ ಇದು
ಸಮರ್ಪಕವಲ್ಲ. ಅವಳಿಜವಳಿ ಮಕ್ಕಳಲ್ಲಿ ಪರಮಸಾಮ್ಯವಿದೆ ಎನ್ನುವ ಮಾತಿಗೆ ಅವುಗಳಿಗೆ
ಅಭೇದವಿದೆಯೆಂದು ಅರ್ಥವೆ? ಗೀತೆಯು ಮುಕ್ತಾತ್ಮನಿಗೆ ಉಪಜನ್ಮವಿಲ್ಲವೆಂದು ''ನೋಪಜಾಯಂತೇ
ಎನ್ನುವ ಮಾತಿನಲ್ಲಿ ತಿಳಿಸಿದೆ. ಇದರಿಂದ ತಂದೆತಾಯಿಗಳನ್ನು ಸಮೀಪಿಸಿ ಪಡೆಯುವ
ಜನ್ಮವಿಲ್ಲದಿದ್ದರೂ ಪರಾಧೀನವಿಶೇಷಾವ್ಯಾಪ್ತಿ (ಭಗವದಧೀನ ಆನಂದಜ್ಞಾನಾದಿಗಳ ಪ್ರಾಪ್ತಿ)
ರೂಪ ಜನ್ಮವಿದೆಯೆಂದು ಸೂಚಿತವಾಗುವದು. ಆದುದರಿಂದ ಭಗವದನುಗ್ರಹದಿಂದ ಪ್ರಾಪ್ತವಾದ
ಆನಂದಾನುಭವವನ್ನು ಹೊಂದುವ ಮುಕ್ತ ಜೀವನು ಹರಿಯ ಅಧೀನನಾಗಿ ಆತನಿಂದ ಭಿನ್ನನೇ ಸರಿ .
ಈತೆರನಾದ ಅನುಸಂದಾನವೇತಾರಕ ತಾನು ಮೋಕ್ಷ ಅವಸ್ಥೆಯಲ್ಲಿಯೂ ಹರಿಯ ಅಧೀನನಾಗಿದ್ದೇನೆ
ಎನ್ನುವ ಆತ್ಮ ಸಮರ್ಪಣವೇ ಭಾಗವತದಲ್ಲಿ ಹೇಳಿದ ಒಂಭತ್ತನೆಯ ಅತ್ಯುತ್ಕೃಷ್ಟ ಭಕ್ತಿ
ಆಗಿದೆ. ಈ ಮಾತನ್ನೇ ಆಚಾರ್ಯ ಮಧ್ವರು '' ಮುಕ್ತಸ್ಯಾಪಿ ಮಮಾಂತಃಸ್ಥೋ ನಿಯಂತೈವ
ಹರಿಃಸದಾ | ಇತಿಜ್ಞಾನಂ ಸಮುದ್ದಿಷ್ಟಂ ಸಮ್ಯಗಾತ್ಮನಿವೇದನಂ'' ಎನ್ನುವ ಪ್ರಮಾಣ
ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ''ಗೀತಾ ಸಾರ ಸೌರಭ'' ಎನ್ನುವ ಕಿರುಕೃತಿಯ ಪ್ರಕಾಶನದ ಜವಾಬುದಾರಿಯನ್ನು ವಹಿಸಿಕೊಂಡ
ಶ್ರೀಅಶೋಕ ಚಚಡಿ ಯವರು ಸಾಮಾಜಿಕ ಸೇವಾ ಪರಾಯಣರು, ವಿಜಯನಗರದ ಪ್ರಾಣದೇವರ ಗುಡಿಯ ಜ್ಞಾನ
ಮಹಾಸತ್ರದ ಅಧ್ವರ್ಯುಗಳು, ಧರ್ಮಶ್ರದ್ದಾಳುಗಳಾದ ಇವರಿಂದ ಶ್ರೀ ಹರಿವಾಯುಗಳು
ವಿಶೇಷವಾಗಿ ಸದಾಜ್ಞಾನ ಸೇವೆಯನ್ನು ಸ್ವೀಕರಿಸಿ, ಅನುಗ್ರಹಿಸಲಿ ಯೆಂದು
ಪ್ರಾರ್ಥಿಸುತ್ತೇವೆ. ಈ ಕೃತಿಪುಷ್ಪವನ್ನು ನಮ್ಮ ಗುರುವರ್ಯ ಶ್ರೀ ವಿದ್ಯಾಮಾನ್ಯರ
ಅಂತರ್ಗತರಾದ ಮಧ್ವರ ಹೃದಯ ನಿವಾಸಿ ವಿಶ್ವಂಭರಾಭಿನ್ನ ಶ್ರೀ ಕೃಷ್ಣನಿಗೆ
ಅರ್ಪಿಸಿದ್ದೇವೆ.