ಭಂಡಾರಕೇರಿ ಮಠ,ಉಡುಪಿ


ಶ್ರೀ ವಿದ್ಯೇಶತೀರ್ಥರ ಕೃತಿ

ಶ್ರೀಶಸ್ತೇ ವಿಜಯಂ ದದ್ಯಾತ್
ವೇದವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ |
ವೇದಃ ಪ್ರಾಚೇತಸಾದಾಸೀತ್ ಸಾಕ್ಷಾದ್ರಾಮಾಯಣಾತ್ಮನಾ ||
ಗಾಯತ್ರೀ ಕಂಡ ರಾಮಾಯಣ


ಪ್ರಕಾಶಕರು
ಭಾಗವತಾಶ್ರಮ ಪ್ರಕಾಶನ
ಗಿರಿನಗರ, ಬೆಂಗಳೂರು
ಇಪ್ಪತ್ನಾಲ್ಕುಸಾವಿರ ಶ್ಲೋಕಗಳನ್ನೊಳಗೊಂಡ ಶ್ರೀರಾಮಾಯಣವು ಇಪ್ಪತ್ನಾಲ್ಕು ಅಕ್ಷರಗಳಿಂದ ಅಲಂಕೃತವಾದ ಗಾಯತ್ರೀಮಂತ್ರದ ವ್ಯಾಖ್ಯಾನ (ವಿವರಣೆ) ರೂಪವಾಗಿದೆ.
''ಇದಂ ರಾಮಾಯಣಂ ಕೃತ್ಸ್ನಂಗಾಯತ್ರೀಬೀಜಸಂಯುತಂ ''
ಎಂಬ ಜ್ಞಾನಿಗಳ ಉಕ್ತಿಯು  ಇದನ್ನು ಸ್ಪಷ್ಟಪಡಿಸಿದೆ. ಇದು ಹೇಗೆ ಎಂಬುದನ್ನು ಚಿಂತಿಸೋಣ.
ಭಗವಾನ್ ಶ್ರೀರಾಮಚಂದ್ರನು  ಮಾನವೀಯಮೌಲ್ಯಗಳ ಬಗೆಗೆ ಮನುಕುಲಕ್ಕೆ ಶಿಕ್ಷಣ ನೀಡುವ ಸಲುವಾಗಿಯೂ ಧರೆಗಿಳಿದು ಬಂದಿದ್ದಾನೆ -
ಮರ್ತ್ಯಾವತಾರಸ್ತ್ವಿಹಮರ್ತ್ಯ ಶಿಕ್ಷಣಂ (ಭಾಗವತ)
ಮರ್ಯಾದಾಪುರುಷೋತ್ತಮನಾದ ಆತನ ನಡೆ - ನುಡಿ - ಗುಣ - ಶೀಲಗಳೆಲ್ಲವೂ ಮಾನವ ಸಮಾಜಕ್ಕೆ ಆದರ್ಶಗಳೆನಿಸಿವೆ.
ಸತ್ಯನಿಷ್ಠೆ, ಪಿತೃ-ಮಾತೃಭಕ್ತಿ ಭಾತೃಸೌಹಾರ್ದ, ಶತ್ರುಪರವಾದ ವಾತ್ಸಲ್ಯ, ಪ್ರಜಾವಾತ್ಸಲ್ಯ, ತ್ಯಾಗ, ಔದಾರ್ಯ, ಏಕಪತ್ನೀವ್ರತ, ಅಪವಾದಭೀರುತ್ವ, ಸಾರ್ಥಕಕ್ರೋಧ, ಸಾರ್ಥಕಪ್ರಸಾದ, ಸೂನೃತವಾಕ್ ಸಂಪತ್ತು ಮುಂತಾದ ಗುಣಗಳು ಯಾರಿಗೆ ಸಂಪಾದನೀಯಗಳಲ್ಲ?
ಶ್ರೀರಾಮಚಂದ್ರನು ತನ್ನ ನಿಜಜೀವನದಲ್ಲಿ ಇವುಗಳನ್ನು ತೋರಿಸುವ ಮೂಲಕ ಪ್ರತಿಯೊಬ್ಬನಿಗೂ ''ದಾರಿದೀಪ'' ಎನಿಸಿದ್ದಾನೆ. ಪ್ರತಿಯೊಬ್ಬನನ್ನೂ ಸನ್ಮಾರ್ಗದಲ್ಲಿ ನಡೆಯಲು ಪ್ರೇರಿಸುತ್ತಾನೆ.
ರಾಮವತ್ ವರ್ತಿತವ್ಯಂ - ರಾಮನಂತೆ ನಡೆದುಕೊಳ್ಳಬೇಕೆಂದು ನಮ್ಮನ್ನು ಜಾಗೃತಗೊಳಿಸಿತ್ತಿದ್ದಾನೆ. ಈ ಅಂಶವನ್ನು ''ಧಿಯೋ ಯೋನಃ ಪ್ರಚೋದಯಾತ್ '' ಎನ್ನುವ ಗಾಯತ್ರೀಮಂತ್ರದ ಭಾಗವು ಎತ್ತಿ ತೋರಿಸುತ್ತದೆ.
ಯಃ = ಯಾವ ಶ್ರೀರಾಮಚಂದ್ರನು, ನಃ = ನಮ್ಮ, ಧಿಯಃ = ಸನ್ಮಾರ್ಗದಲ್ಲಿ ಸಾಗಲು ಉಪಯುಕ್ತಗಳಾದ ಬುದ್ಧಿಗಳನ್ನು, ಪ್ರಚೋದಯಾತ್ = ಚೆನ್ನಾಗಿ ಪ್ರೇರಿಸುತ್ತಾನೆ, ಎಂದು .
ಭಗವಾನ್ ಶ್ರೀರಾಮಚಂದ್ರನ ಮರ್ಯಾದಾಪುರುಷೋತ್ತಮತ್ವದ ಹಿನ್ನೆಲೆಯಲ್ಲಿ ಈ ಅರ್ಥವನ್ನು ಈ ಮಂತ್ರ್ಭಾಗದಿಂದ ಅನುಸಂಧಾನ ಮಾಡಿದ್ದಾಯಿತು.
ಈ ಮಂತ್ರದ ಭಾಗಕ್ಕೆ ಇನ್ನೊಂದು ಮುಖದ ವಿವರಣೆಯನ್ನೂ ನೀಡಬಹುದು.
ಈ ವಿವರಣೆ ಶ್ರೀರಾಮಚಂದ್ರನ ಶಾಸ್ತ್ರೋಕ್ತವಾದ ಧ್ಯೇಯರೂಪಕ್ಕೆ ಅನುಗುಣವಾಗಿದೆ.
ಶ್ರೀರಾಮಚಂದ್ರನು ಬಲಗೈಯಲ್ಲಿ ಜ್ಞಾನಮುದ್ರೆ ಹಾಗೂ ಶ್ರವನ್ನು ಧರಿಸಿ, ಉತ್ಕೃಷ್ಟವಾಣಿಗಳಿಂದ ಹನುಮಂತ ಮುಂತಾದ ಶ್ರೇಷ್ಠಭಕ್ತರಿಗೆ ತನ್ನ ಸ್ವರೂಪಜ್ಞಾನದ ಉದ್ದೀಪನವನ್ನು ಮಾಡುತ್ತಿದ್ದಾನೆ ಎಂಬುದಾಗಿ ತಂತ್ರಸಾರಸಂಗ್ರಹದಲ್ಲಿ ಶ್ರೀಮಧ್ವಾಚಾರ್ಯರು ಶ್ರೀರಾಮನ ಧ್ಯೇಯರೂಪವನ್ನು ವಿವರಿಸಿದ್ದಾರೆ -
ಜ್ಞಾನಂ ಶರಂ ಚ ದಧತಂ ಪ್ರಿಯಯಾ ಸಮೇತಂ |
ಸ್ವಾತ್ಮ ಸ್ವರೂಪಮಮಿತಂ ಹನುಮನ್ಮುಖೇಷು ಸಂದರ್ಶಯಂತಂ
ಅಜಿತಂ ಸ್ಮರತ ಉರುಗೀರ್ಭಿಃ ||
ಈ ಆಶಯವೇ ನಿರ್ದಿಷ್ಟ ಗಾಯತ್ರಿಮಂತ್ರದ ಭಾಗದಿಂದ ವೇದ್ಯವಾಗುತ್ತದೆ.
ಯ = ಯಾವ ರಾಮನು, ನಃ = ನಮ್ಮ, ಅರ್ಥಾತ್ ಹನುಮಂತ ಮುಂತಾದ ಸಾತ್ವಿಕ ಜೀವರ, ಧಿಯಃ = ತನ್ನ ಸ್ವರೂಪದ ಬಗೆಗಿನ ಜ್ಞಾನಗಳನ್ನು, ಪ್ರಚೋದಯಾತ್ = ಸದ್ವಾಣಿಯ ಮೂಲಕ ಉದ್ದೀಪನಗೋಳಿಸುತ್ತಾನೆ ಎಂದು.  
ಈ ಮಂತ್ರದ ಭಾಗವು ಇನ್ನೊಂದು ರಹಸ್ಯಪ್ರಮೇಯದ ಮೇಲೂ ಬೆಳಕನ್ನು ಚೆಲ್ಲುತ್ತದೆ.
ಶ್ರೀರಾಮಚಂದ್ರನ ಬಕ್ತಾಗ್ರೇಸರನೂ, ಚಿರಂಜೀವಿಯೂ ಆದ ಆಂಜನೇಯನು ಇಂದಿಗೂ ಸಮಸ್ತವೈಷ್ಣವಕ್ಷೇತ್ರಗಳಲ್ಲಿ ಹರಿಸೇವೆಯನ್ನು ಮಾಡುವ ಸಲುವಾಗಿ ಮೂರುಕೋಟಿ ರೂಪಗಳನ್ನು ಧರಿಸಿ ನೆಲೆಸಿದ್ದಾನೆ. ಅಲ್ಲಿರತಕ್ಕ ದೇವತೆಗಳಿಗೆ ಈ ಆಂಜನೇಯನ ರೂಪಗಳು ದೃಶ್ಯವಾಗಿಯೂ ಜನಸಾಮಾನ್ಯರಿಗೆ ಅದೃಶ್ಯಗಳಾಗಿಯೂ ಇವೆ. ಹರಿಯಿಂದ ಪ್ರೇರಿತನಾಗಿ ಮೂರುಕೋಟಿ ರೂಪಗಳಿಂದ ನೆಲೆಸಿದ ಆಂಜನೇಯನು ರಾಮಕಥಾಗೋಷ್ಠಿಯಲ್ಲಿ ಮಗ್ನರಾದ ಸಜ್ಜನರ ರಕ್ಷಣೆಗೋಸ್ಕರವೂ ಅಲ್ಲಿ ನೆಲೆಸಿದ್ದಾನೆ ಎಂಬ ರಹಸ್ಯಾಂಶವನ್ನು ಶ್ರೀವಾದಿರಾಜ ಶ್ರೀಮಚ್ಚರಣರು ತಮ್ಮ ಭಾವಪ್ರಕಾಶಿಕಾಟೀಕೆ (   ಭಾರತತಾತ್ಪರ್ಯನಿರ್ಣಯ) ಯಲ್ಲಿ ವಿವರಿಸಿದ್ದಾರೆ. ಆಂಜನೇಯನಿಗೆ ಮೂರುಕೋಟಿರೂಪಗಳು ಪ್ರಮಾಣದಿಂದ ಸಾಬೀತಾಗಿದೆ -
ತ್ರಿಕೋಟಿಮೂರ್ತಿಸಂಯುಕ್ತಸ್ತ್ರೇತಾಯಾಂ ರಾಕ್ಷಸಾಂತಕಃ |
ಹನೂಮಾನಿತಿ ವಿಖ್ಯಾತೋ ರಾಮಕಾರ್ಯಧುರಂಧರಃ |
ತ್ರಿಕೋಟಿರೂಪಃ ಪವನಶ್ಚ ಮೇ ಸುತಃ ||
ಯಃ = ಯಾವ ರಾಮನು, ನಃ = ರಾಮಕಥಾಗೋಷ್ಠಿಯಲ್ಲಿ ನಿರತರಾದ ನಮಗೋಸ್ಕರ (ಸಜ್ಜನರಿಗೋಸ್ಕರ) ( ಇಲ್ಲಿ ''ನಃ'' ಎಂಬ ಶ್ಬ್ದವು ಅಸ್ಮಚ್ಛಬ್ದದ ಚತುರ್ಥೀವಿಭಕ್ತಿ ಬಹುವಚನ) ಧಿಯಃ = ಮಹಾಬುದ್ಧಿವಂತನಾದುದರಿಂದ ವೈದಿಕ ಸಾಹಿತ್ಯದಲ್ಲಿ ''ಧೀ'' ಶ್ಬ್ದದ ಪರ್ಯಾಯವಾದ ''ಮತಿ'' ಶಬ್ದದಿಂದ ಕೀರ್ತಿತನಾದ, ವೈಷ್ಣವಕ್ಷೇತ್ರಗಳಲ್ಲಿ ತ್ರಿಕೋಟಿರೂಪಗಳಿಂದ ಸನ್ನಿಹಿತನಾದ ಆಂಜನೇಯನನ್ನು (ಇಲ್ಲಿ ರೂಪಬಹುತ್ವದ ದೃಷ್ಟಿಯಲ್ಲಿ ಆಂಜನೇಯನೊಬ್ಬನಾದರೂ ಆತನಲ್ಲಿ ''ಧಿಯಃ'' ಎಂಬುದಾಗಿ ಬಹುವಚನವನ್ನು ಪ್ರಯೋಗಿಸಲಾಗಿದೆ ಎಂದು ತಿಳಿಯಬೇಕು), ಪ್ರಚೋದಯಾತ್ = ರಕ್ಷಣೆ, ಅನುಗ್ರಹ ಮುಂತಾದ ಸತ್ಕಾರ್ಯಗಳಲ್ಲಿ ಪ್ರೇರಿಸುತ್ತಾನೆ, ಮತ್ತು ಅಕ್ಷಕುಮಾರಾದಿ ಸಂಹಾರ - ಗಂಧಮಾದನಪರ್ವತ ಆಹರಣಾದಿ ಕಾರ್ಯಗಳಲ್ಲಿ ಪ್ರೇರಿಸುತ್ತಾನೆ ಎಂದು - ಇಲ್ಲಿ ಅನ್ವಯಾರ್ಥವನ್ನು ಚಿಂತಿಸಬೇಕು.
ಒಟ್ಟಿನಲ್ಲಿ ''ಧಿಯೋ ಯೋನಃ ಪ್ರಚೋದಯಾತ್'' ಎಂಬ ಮಂತ್ರಭಾಗವನ್ನು ಮೂರುಮುಖಗಳಲ್ಲಿ ಅನುಸಂಧಾನ ಮಾಡಿದ್ದಾಯಿತು. ಇನ್ನೊಂದು ಮುಖದಿಂದಲೂ ಈ ಮಂತ್ರಭಾಗವನ್ನು ಪರಿಶೀಲಿಸಬಹುದು.
ಶ್ರೀರಾಮಚಂದ್ರನು ತಾನು ಪರಂಧಾಮಕ್ಕೆ ತೆರಳುವ ಸಂದರ್ಭದಲ್ಲಿ ಸಾತ್ವಿಕಜೀವರ ಮೇಲೆ ಕರುಣಾರಸಾಮೃತವನ್ನು ಹರಿಸಿ ಮೋಕ್ಷವನ್ನು ಬಯಸುವವರೆಲ್ಲಾರೂ ನನ್ನ ಜೊತೆಗೆ ಬನ್ನಿರಿ, ನಾನು ನಿಮಗೆ ಮೋಕ್ಷಸಂಪತ್ತನ್ನು ನೀಡುತ್ತೇನೆಂದು ದೂತರ ಮೂಲಕ ಡಂಗುರ ಸಾರಿದನು. ಆಗ ಆತನಿಂದ ಪ್ರೇರಿತರಾಗಿ ಪುಷ್ಕಲ ಸಾಧನಸಂಪನ್ನರಾದ ರಾಮತತ್ತ್ವದ ಸಾಕ್ಷಾತ್ಕಾರವನ್ನು ಪಡೆದ ತೃಣಾದಿ ಸುಜೀವರೆಲ್ಲರೂ ರಾಮನನ್ನು ಸೇರಿಕೊಂಡು ಆತನ ಜೊತೆಯಲ್ಲಿ ಹೋಗಿ ಮುಕ್ತಿಯನ್ನು ಪಡೆದರು. ಈ ಮುಖ್ಯಾಂಶವನ್ನೂ ಈ ಮಂತ್ರಭಾಗವು ಸಾರುತ್ತಿದೆ -
ಯಃ=ಯಾವ ರಾಮನು, ಧಿಯಃ= ಧ್ಯಾನೋಪಲಕ್ಷಿತ ಸಕಲ ಸಾಧನಸಂಪನ್ನರಾದ, ನಃ= ನಮ್ಮನ್ನು (ಸಜ್ಜೀವರಾದ ತೃಣಾದಿಜೀವರನ್ನು) ಪ್ರಚೋದಯಾತ್= ಆತನ ಜೊತೆಯಲ್ಲಿ ಪರಂಧಾಮಕ್ಕೆ ತೆರಳಲು ಪ್ರೇರಿಸುತ್ತಾನೆ, ಎಂದು-ಇಲ್ಲಿ ಧ್ಯಾಯಂತೀತಿ (ಧ್ಯಾನ ಮಾಡುತ್ತಾರೆ) ಧಿಯಃ= ಎಂದು ನಿರ್ವಚನ.
ಮುಂದುವರೆಯಿವುದು