ಡಾ|| ವ್ಯಾಸನಕೆರೆ ಪ್ರಭಂಜನಾಚಾರ್ಯ
ವ್ಯಾಸ ಮಧ್ವ ಸಂಶೋಧನಾ ಪ್ರತಿಷ್ಠಾನ.
ಶ್ರೀ ವಿದ್ಯೇಶತೀರ್ಥರು ಪ್ರಸ್ತುತ ಭಂಡಾರಕೇರಿ ಮಠದ
ಪೀಠಾಧಿಪತಿಗಳು. ವಿದ್ಯೆ ಹಾಗೂ ಆಶ್ರಮ ಎರಡರಲ್ಲೂ ಫಲಿಮಾರು - ಭಂಡಾರಕೇರಿ
ಉಭಯಪೀಠಗಳಿಗೆ ಅಧಿಪತಿಗಳಾಗಿದ್ದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಶಿಷ್ಯರು.
ಜಯಸಂವತ್ಸರದಲ್ಲಿ ಜನಿಸಿದ ಇವರು ಸಂಸಾರಜಯದ ಮುಖ್ಯೋಪಾಯವೆನ್ನಿಸಿದ ತತ್ತ್ವಜ್ಞಾನದಲ್ಲಿ
ಅಪಾರ ಪರಿಣಿತಿ ಪಡೆದ ಶ್ರೇಷ್ಠವಿದ್ವಾಂಸರು. ಲೌಕಿಕದಿಂದ ಸಂಪೂರ್ಣ ದೂರವಿರುವ ಕೆಲವೇ
ಯತಿಗಳಲ್ಲಿ ಅಗ್ರೇಸರು. ನಿರಂತರ ಪಾಠಪ್ರವಚನ ಇವರ ವಿಶೇಷ ಹಿರಿಮೆ. ನಾಡಿನುದ್ದಕ್ಕೂ
ಸಂಚರಿಸುತ್ತಾ ಜನರಲ್ಲಿ ತತ್ತ್ವ ಜಾಗ್ರತೆಯನ್ನು ಉಂಟು ಮಾಡಲು ಅವಿರತ ಶ್ರಮಿಸುವ
ತತ್ವಪ್ರಸಾರ ದೀಕ್ಷೆ ಇಅವರ ವೈಶಿಷ್ಟ್ಯ.
ಸ್ವತಃ ಶ್ರೇಷ್ಠವಿದ್ವಾಂಸರಾದ ಇವರು
ಪ್ರವಚನದಲ್ಲಿ ಸಿದ್ಧಹಸ್ತರು. ಗೀತೆ, ಶ್ರೀಮದ್ಭಾಗವತ, ಉಪನಿಷತ್ತು ಮೊದಲಾದ ಯಾವುದೇ
ಶಾಸ್ತ್ರದ ಬಗ್ಗೆಯೂ ಅಧಿಕಾರಯುತವಾಗಿ ಮಾತನಾಡಬಲ್ಲ ಕೆಲವೇ ಮಗನೀಯರಲ್ಲಿ ವಿಶೇಷತೆಯನ್ನು
ಸಾಧಿಸಿದವರು. ಅತ್ಯಂತ ಪ್ರೌಡಶೈಲಿಯಲ್ಲಿ ಇಅವರ ಪ್ರವಚನದಲ್ಲಿ ಸಿದ್ಧಾಂತದ ಪ್ರತಿಪಾದನೆ
ಅತ್ಯಂತ ವೈಶಿಷ್ಟ್ಯಪೂರ್ಣ ರೀತಿಯಲ್ಲಿ ಹೊರಹೊಮ್ಮುವುದು. ಯಾವುದೇ ಶಾಸ್ತ್ರವಾಕ್ಯಕ್ಕೂ
ವಾಯುಪರವಾಗಿ ಅರ್ಥ ಮಾಡುವ ಇವರ ಕೌಶಲ ಅನನ್ಯವಾದದ್ದು. ತೀರ ಸಾಮಾನ್ಯವೆನ್ನಿಸುವ
ಶ್ಲೋಕಗಳಲ್ಲೂ ಶ್ರೀಹರಿಮಹಿಮೆಯಂತೆ ವಾಯುಮಹಿಮೆಯೂ ಹೇಗೆ ಅಡಕವಾಗಿದೆ ಎಂಬುದನ್ನು
ಅತ್ಯಂತ ಶಾಸ್ತ್ರೀಯ ಹಿನ್ನೆಲೆಯಲ್ಲಿ ಮನಮುಟ್ಟುವಂತೆ ವರ್ಣಿಸುವ ಅವರ ವೈಖರಿ
ಊಹಾತೀತವಾದದ್ದು. ಶಾಸ್ತ್ರಪ್ರವೇಶ ವಿರುವವರುಗಂತೂ ಇವರ ಉಅಪನ್ಯಾಸಗಳೆಂದರೆ ಉತ್ಸವಗಳೇ.
ಪಾಠಪ್ರವಚನಗಳಂತೆ ಲೇಖನಕಾರ್ಯವನ್ನೂ
ಅನೇಕ ದಶಕಗಳಿಂದಲೇ ಅಳವಡಿಸಿಕೊಂಡಿರುವುದು ಇವರ ಹಿರಿಮೆಯ ಮತ್ತೊಂದು ಮುಖ. ಈಗಾಗಲೇ
ಸುಮಾರು ೨೦ ಕೃತಿಗಳನ್ನು ಸಂಸ್ಕೃತ ಕನ್ನಡಗಳಲ್ಲಿ ರಚಿಸಿ ಪ್ರಕಟಿಸಿರುವರು. ಗೀತೆಗೆ
ಸಂಬಂಧಿಸಿದಂತೆ ಐದು, ಗಾಯತ್ರಿಗೆ ಸಂಬಂಧಿಸಿದಂತೆ ಐದು ಕೃತಿಗಳನ್ನು ರಚಿಸಿರುವರು.
ಸಂಸ್ಕೃತದಲ್ಲೂ ಕ್ರ್‍ಇತಿಗಳನ್ನು ರಚಿಸಿರುವುದು ಇವರ ವಿಶೇಷ. 'ಅಹಂ
ಬ್ರಹ್ಮಾಸ್ಮಿ' ಮತ್ತು 'ಭಗವಂತ ನಿರ್ಗುಣ ನಿರಾಕಾರನೇ' ಎಂಬ ಎರಡು ಕೃತಿಗಳಲ್ಲಿ
ವಿಶೇಷವಾಗಿ ಅದ್ವೈತಮತದ ನಿರ್ಗುಣನಿರಾಕಾರದ ಪ್ರಕ್ರಿಯೆಗಳನ್ನು ವಿವೇಚಿಸಿ ಅವುಗಳ
ಅಸಾರತ್ವವನ್ನು ನಿರೂಪಿಸಿರುವರು.ಅಹಂ ಬ್ರಹ್ಮಾಸಿ ಕೃತಿಯಲ್ಲಿ ಆ ಉಪನಿಷದ್ವಾಕ್ಯದ
ವಿವರಣೆಯನ್ನು ಸಾಮಾನ್ಯರಿಗೂ ತಿಳಿಯುವಂತೆ ಬಗೆ ಬಗೆಯಲ್ಲಿ ನಿರೂಪಿಸಿರುವ ಅವರ ಕೌಶಲ
ತು<ಬ ವಿಶಿಷ್ಟವಾದದ್ದು.
ಸ್ವತಃ ಪ್ರವಚನಕಾರರಾಗಿರುವ ಇವರು ನಾಡಿನ
ಚೆನ್ನೈ, ಹೈದರಾಬಾದ್, ಅನಂತಪುರ, ಕೊಯಮತ್ತೂರು, ಮೌಸೂರು, ಬೆಂಗಳೂರು ಮೊದಲಾದ
ಸ್ಥಳಗಳಲ್ಲಿ ಭಾಗವತ ಸಪ್ತಾಹ ಪ್ರವಚನಗಳನ್ನು ವರ್ಷಕ್ಕೆ ಅನೇಕ ಬಾರಿ ನಾಡಿನ ನುರಿತ
ವಿದ್ವಾಂಸರುಗಳಿಂದ ಏರ್ಪಡಿಸುವುದು ಅತ್ಯಂತ ಅನುಕರಣೀಯವಾದ ಪ್ರಸಾರಕಾರ್ಯ. ಅದರ ಫಲವಾಗಿ
ಶ್ರೀಮದ್ಭಾಗವತದ ಹಿರಿಮೆಯನ್ನು ಅರಿಯಲು ಜನಸಾಮಾನ್ಯರಿಗೂ ಆಗಿರುವ ಉಪಕಾರ ಅಪಾರ.
ಅದರಂತೆ ವಿದ್ವಾಂಸರಿಗೂ ಪುನರ್ಮನನಕ್ಕೆ ದೊರೆತಿರುವ ಅವಕಾಶವೂ ಸಹ.
ಶ್ರೀಮದ್ಭಾಗವತಾಶ್ರಮ ಪ್ರತಿಷ್ಠಾನ
ಶ್ರೀಗಳದ್ದೇ ಆದ ವಿಶಿಷ್ಟಸಂಸ್ಥೆ. ೧೯೯೦ ರಲ್ಲಿ ತಮ್ಮ ಪೂಜ್ಯ ಗುರುವರ್ಯರ
ನೇತೃತ್ವದಲ್ಲಿ ಸ್ಥಾಪಿಸಿದ ಈ ಸಂಸ್ಥೆ ಶ್ರೀಮದ್ಭಾಗವತದ ಹಿರಿಮೆ, ಗರಿಮೆಗಳನ್ನು
ಬಗೆಬಗೆಯಲ್ಲಿ ನಿರೂಪಿಸುವ ಒಂದು ಅಪೂರ್ವ ತತ್ವಪ್ರಸಾರ ಕೇಂದ್ರವಾಗಿ ರೂಪಗೊಂಡಿದೆ.
ಶ್ರೀ ವೇದವ್ಯಾಸಜಯಂತಿಯ ಆಚರಣೆಗೆ
ಶ್ರೀಗಳ ಅದ್ಭುತವಾದ ವಾರ್ಷಿಕ ಕಾರ್ಯಕ್ರಮ. ಹಲವಾರು ವರ್ಷಗಳಿಂದ ಪ್ರತಿವರ್ಷ ನಾಡಿನ
ವಿವಿಧ ಪ್ರಮುಖ ಸ್ಥಳಗಳಲ್ಲಿ ಒಂದು ಸಪ್ತಾಹಕಾಲ ಶ್ರೀ ವೇದವ್ಯಾಸ ಜಯಂತ್ಸುತ್ಸವವನ್ನು
ಅತ್ಯಂತ ವೈಭವದಿಂದ ಆಚರಿಸುತ್ತಾ ಬಂದಿರುವರು. ಬಗೆಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು
ನಡೆದು ಸಮಾಜದ ಎಲ್ಲ ಬಗೆಯ ಜನರಿಗೂ ವೇದವ್ಯಾಸರ ಹಿರಿಮೆ ತಿಳಿಯುವಂತೆ ಮಾಡುವರು.
ಇತ್ತೀಚಿನ ದಿನಗಳಲ್ಲಿ ಇಷ್ಟು ವೈಭವದಿಂದ ವೇದವ್ಯಾಸಜಯಂತಿಯನ್ನು ಆಚರಿಸಿದ ಮತ್ತೊಂದು
ಉಲ್ಲೇಖ ಕಂಡುಬರುವುದಿಲ್ಲ. ಶ್ರೀ ವೇದವ್ಯಾಸರು ಹಾಗೂ ಅವರ ಶ್ರೀಮದ್ಭಾಗವತಗಳ ಬಗ್ಗೆ
ಶ್ರೀಗಳವರ ಪ್ರಸಾರದೀಕ್ಷೆ ಅತ್ಯಂತ ಅಪೂರ್ವವಾದುದು.
ವೇದವ್ಯಾಸ ಜಯಂತಿಯೊಂದಿಗೆ ಅವರು
ಪ್ರತಿವರ್ಷ ನಡೆಸುವ ಮತ್ತೋದು ಕಾರ್ಯ ಅವರ ಪ್?ಪೂಜ್ಯ ಗುರುವರ್ಯರು ಪ್ರಾರಂಭಿಸಿದ್ದ
ಶ್ರೀಮಧ್ವರಾದ್ಧಾಂತಸಂವರ್ಧಕ ಸಭೆಯ ನಿರ್ವಹಣೆ. ಅವರು ಗುರುವರ್ಯರೇ ಅದರ ಸುವರ್ಣ
ಜಯಂತಿಯನ್ನು ಉಡುಪಿ ಕ್ಷೇತ್ರದಲ್ಲಿ ನೆರವೇರಿಸಿದ್ದರು. ಅದೀಗ ೬೦ ವಸಂತಗಳನ್ನು ಪೂರೈಸಿ
ಮುಂದುವರೆದಿದೆ. ಅನೇಕ ಗ್ರಂಥಗಳ ಪ್ರಕಾಶನವೂ ಆ ಸಂಸ್ಥೆಯ ಮೂಲಕ ನಡೆಯುತ್ತಾ ಬಂದಿದೆ.
ವಿದ್ವಾಂಸರಿಗೆ ವಿಶಿಷ್ಟರೀತಿಯ
ಪುರಸ್ಕಾರ ಶ್ರೀಗಳ ಮತ್ತೊಂದು ಅದ್ಭುತ ಸಾಧನೆ. ಪ್ರತಿವರ್ಷ ವೇದವ್ಯಾಸ ಜಯಂತಿಯ
ಶುಭಸಂದರ್ಭದಲ್ಲಿ ಬಹುಸಂಖ್ಯೆಯ ವಿದ್ವಾಂಸರಿಗೆ ಮುಕ್ತ ಹಸ್ತದಿಂದ ಸಂಭಾವನೆ
ನೀಡುವುದರೊಂದಿಗೆ ಇಬ್ಬರು ಶ್ರೇಷ್ಠವಿದ್ವಾಂಸರಿಗೆ ೨೫ ಸಹಸ್ರ ರೂಪಾಯಿಗಳ ಶ್ರೇಷ್ಠ
ಪುರಸ್ಕಾರವನ್ನು ನೀಡುವರು. ಒಂದು 'ವಿದ್ಯಾಮಾನ್ಯ್ ವಿಜ್ಞಾನ ಭಾಸ್ಕರ' ಎಂಬ
ಪ್ರಶಸ್ತಿಯಾದರೆ, ಮತ್ತೊಂದು 'ಭಂಡಾರಿಕೇರಿ ರಾಜಹಂಸ' ಎಂದು. ಅದರೊಂದಿಗೆ ಬೆಂಗಳೂರಿನ
ಪುಣ್ಯಧಾಮದ ಪ್ರಾಯೋಜಕತ್ವದಲ್ಲಿ ೧೦ ಸಹಸ್ರ ರೂಪಾಯಿಗಳ ಮತ್ತೊಂದು ಪ್ರಶಸ್ತಿಯನ್ನು
ಅವರು ಪ್ರತಿವರ್ಷವೂ ನೀಡುವರು. ಸುಮಾರು ೬೦ ವಿದ್ವಾಂಸರಿಗೆ ಪ್ರತಿಯೊಬ್ಬರಿಗೂ ೧೦
ಸಹಸ್ರ ರೂಪಾಯಿಗಳಷ್ಟು ಭಾರೀ ಸಂಭಾವನೆಯನ್ನು ನೀಡಿ ತಮ್ಮ ವಿದ್ವತ್ಪಕ್ಷಪಾತವನ್ನು
ಮೆರೆದಿರುವರು. ಒಟ್ಟಾಗಿ ಅವರು ವಿದ್ವತ್ಪುರಸ್ಕಾರಗಳಲ್ಲಿ ಒಂದು ಹೊಸ ಪ್ರಾಂತಿಯನ್ನೇ
ಮಾಡಿರುವರು ಎಂದರೆ ಅತಿಶಯೋಕ್ತಿಯಲ್ಲ.
ಅದರಂತೆ ವಿದ್ಯಾರ್ಥಿಗಳಿಗೂ ಸೂಕ್ತ
ರೀತಿಯಲ್ಲಿ ಪ್ರೋತ್ಸಾಹವನ್ನು ಕಾಲಕಾಲಕ್ಕೆ ನೀಡುತ್ತಲೇ ಬಂದಿರುವರು. ಬೆಂಗಳೂರಿನ
ಭಾಗವತನಿಕೇತ, ಉಡುಪಿಯಲ್ಲಿ ವಿದ್ಯಾಮಾನ್ಯ ವಿಜ್ಞಾನಭವನ ಮೊದಲಾದ ವಿಶಾಲ ಸಭಾಭವನಗಳು
ಸಮಾಜಕ್ಕೆ ಅವರ ಕೊಡುಗೆ. ಭಂಡರಕೇರಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶ್ರೀ
ಸುರೊತ್ತಮತೀರ್ಥರ ವೃಂದಾವನವನ್ನು ಜೀರ್ಣೋದ್ಧಾರ ಮಾಡಿಸಿ ಮಂಟಪವನ್ನು
ಶಿಲಾಮಯವನ್ನಾಗಿಸಿರುವರು. ಶ್ರೀ ಸುರೋತ್ತಮ ತೀರ್ಥರು ಶ್ರೀವಾದಿರಾಜಸ್ವಾಮಿಗಳ
ಪೂರ್ವಾಶ್ರಮದ ಸಾಕ್ಷಾತ್ ಅನುಜರು. ಅವರ ಯುಕ್ತಿಮಲ್ಲಿಕಾ ಗ್ರಂಥಕ್ಕೆ ಭಾವ್ಯವಿಲಾಸಿನಿ
ಎಂಬ ಅಪೂರ್ವ ವ್ಯಾಖ್ಯಾನವನ್ನು ರಚಿಸಿರುವ ಮಹನೀಯರು. ಅವರ ವೃಂದಾವನದ
ಜೀರ್ಣೋದ್ಧಾರಕಾರ್ಯದ ಮೂಲಕ ಅವರು ಶ್ರೀವಾದಿರಾಜಸ್ವಾಮಿಗಳ ವಿಶೇಷ ಸೇವೆಯನ್ನು
ಮಾಡಿದಂತಾಗಿದೆ. ಅದರಂತೆ ಅಲ್ಲಿ ತಮ್ಮ ಪೂಜ್ಯ ಗುರುವರ್ಯರಾದ ಶ್ರೀವಿದ್ಯಾಮಾನ್ಯತೀರ್ಥ
ಶ್ರೀಪಾದರ ಮೃತ್ತಿಕಾ ವೃಂದಾವನವನ್ನು ಸ್ಥಾಪಿಸಿರುವರು.
ಸಂಗ್ರಹವಾಗಿ ಹೇಳುವುದಾದಲ್ಲಿ
ಶ್ರೀವಿದ್ಯೇಶತೀರ್ಥರು ಪ್ರಾತಃಸ್ಮರಣೀಯರೂ, ಅವರ ಗುರುವರ್ಯರೂ ಆದ ಶ್ರೀ
ವಿದ್ಯಾಮಾನ್ಯತೀರ್ಥ ಶ್ರೀಪಾದರ ಪ್ರತಿಬಿಂಬದಂತೆ ಕಂಗೊಳಿಸುವ ಪುಣ್ಯಮೂರ್ತಿಗಳು.
ಅವರ ಸಿದ್ಧಾಂತದದೀಕ್ಷೆ ಸದಾಚಾರನಿಷ್ಠೆಗಳಂತೂ ವರ್ಣನಾತೀತ.
ಇಂತಹ ಮಹನೀಯರು ಈಗ ಯತ್ಯಾಶ್ರಮವನ್ನು
ಸ್ವೀಕರಿಸಿ ಇಪ್ಪತ್ತೈದು ವರ್‍ಷಗಳು ಪೂರೈಸಿವೆ ಎಂದರೆ ಅವರ ಯತ್ಯಾಶ್ರಮ ಸ್ವೀಕಾರದ
ರಜತಮಹೋತ್ಸವ ವರ್ಷವಿದು. ಅದರಂತೆ ಅವರೀಗ ತಮ್ಮ ಜೀವನದ ಐವತ್ತು ವಸಂತಗಳನ್ನು
ಪೂರೈಸಿರುವ ಸುವರ್ಣವರ್ಧಂತಿಯ ಸಂಭ್ರಮ. ಅದರಂತೆ ಅವರು ನಿರ್ವಹಿಸುತ್ತಿರುವ ಸಭೆಗೆ ೬೨
ವರ್ಷಗಳನ್ನು ಪೂರೈಸಿರುವ ಸಂಭ್ರಮ. ಅವರು ಆಚರಿಸುತ್ತಿರುವ ವೇದವ್ಯಾಸ ಜಯಂತಿ
ಉತ್ಸವಕ್ಕೆ ದಶಮಾನೋತ್ಸವದ ಸಂಭ್ರಮ. ಅವರು ನೀಡುತ್ತಿರುವ ಬಗೆಬಗೆಯ ಪ್ರಶಸ್ತಿಗಳಿಗೆ
ಪಂಚವಾರ್ಷಿಕ ಸಂಭ್ರಮ. ಇವೆಲ್ಲಾ ಒಟ್ಟಾಗಿ ಶ್ರೀಗಳವರ ವಿಶೇಷವಾದ ಸಾಧನೆಗೆ ದ್ಯೋತಕ. ಈ
ಎಲ್ಲ ಉತ್ಸವಗಳ ಆಚರಣೆ ಭಕ್ತರ ಪಾಲಿನ ಪರಮಸಂಭ್ರಮ. ಈ ಶುಭಸಂದರ್ಭದಲ್ಲಿ ಅವರಿಗೆ
ಭಕ್ತಿಪೂರ್ವಕವಾದ ಪ್ರಣಾಮಾಂಜಲಿ.