ಸತ್ಯವಾಕ್ಯ ಎಂದರೆ ಮೀಮಾಂಸಾ ವಾಕ್ಯ
'ನಾಸ್ತಿ ನಾರಾಯಣಸಮಂ ನ ಭೂತಂ ನ
ಭವಿಷ್ಯತಿ|
ಏತೇನ ಸತ್ಯವಾಕ್ಯೇನ ಸರ್ವಾರ್ಥಾನ್ ಸಾಧಯಾಮ್ಯಹಮ್ ||'
ನಾರಾಯಣನಿಗೆ ಸರಿದೂಗುವ ವ್ಯಕ್ತಿ ಈಗ
ಇಲ್ಲ, ಹಿಂದೆ ಇರಲಿಲ್ಲ, ಮುಂದೆಂದೂ ಉಂಟಾಗುವುದೂ ಇಲ್ಲ - ಈ ಸ್ತ್ಯವಾಕ್ಯದ ಆಧಾರದಲ್ಲಿ
ಸಮಗ್ರ ಮಹಾಭಾರತದ ಪ್ರಮೇಯಗಳನ್ನು ಸಮರ್ಥಿಸುವೆನು - ಎಂಬುದಾಗಿ ಶ್ರೀ ವೇದವ್ಯಾಸರು
ಮಹಾಭಾರತದ ಆದಿಯಲ್ಲಿ ಕೈಗೊಂಡಿರುವ ಪ್ರತಿಜ್ಞೆ.
ಈ
ಪ್ರತಿಜ್ಞೆಯಲ್ಲಿಯ 'ಸ್ತ್ಯವಾಕ್ಯ್ಸ್'
ಎಂಬ ಶಬ್ದಕ್ಕೆ ಸಾಮಾನ್ಯವಾಗಿ 'ಸುಳ್ಳು ಅಲ್ಲದ ಮಾತು' ಎಂಬ ಅರ್ಥವನ್ನಷ್ಟೇ
ಇಟ್ಟುಕೊಳ್ಳಲಾಗುವುದು. ಆದರೆ ಆ ಅರ್ಥವನ್ನು ಇಟ್ಟುಕೊಂಡಲ್ಲಿ ಸರ್ವಾರ್ಥ ಸಾಧನೆಗಾಗಿ ಈ
ಮಾತನ್ನು ಬಳಸಿಕೊಳ್ಳುವೆನೆಂಬುದಕ್ಕೆ, ಅವರ ಸತ್ಯತ್ವವು ಅಷ್ಟೊಂದು
ಪ್ರಯೋಜಕವೆನಿಸಲಾರದು.
ಆದ್ದರಿಂದ
'ಸತ್ಯವಾಕ್ಯ' ಎಂದರೆ ಮೀಮಾಂಸ
ವಾಕ್ಯ- ಬ್ರಹ್ಮನಿರ್ಣಾಯಕ ಗ್ರಂಥದ ಮಾತು ಎಂಬ ಅರ್ಥವನ್ನಿಟ್ಟುಕೊಳ್ಳಬೇಕು. ಶ್ರೀ
ಮಧ್ವರು ತಲಕಾರೋಪನಿಷದ್ಭಾಷ್ಯದಲ್ಲಿ (೫-೬) ಉದಾಹರಿಸಿರುವ 'ಶಬ್ದನಿರ್ಣಯ'
ಸತ್ಯಶಬ್ದಕ್ಕೆ ಈ ಅರ್ಥದ ಔಚಿತ್ಯವನ್ನು ಸ್ಪಷ್ಟಪಡಿಸುತ್ತಿದೆ-
''ನಿರ್ಣೇಯತೇ ಯತಃ ಸಮ್ಯಗಿದಂ ಸತ್ಯಮಿತಿ
ಸ್ಫುಟಮ್ |
ಶ್ರುತಿಸ್ಮೃತ್ಯುದಿತಂ ಸರ್ವಂ ವ್ಯಕ್ತಂ ಮೀಮಾಂಸಯೈತಯಾ|
ಸತ್ಯಮಿತ್ಯುಚ್ಯತೇ ತಸ್ಮಾನ್ಮೀಮಾಂಸಾ ಬ್ರಹ್ಮನಿಶ್ಚಯಾ ||'
ಶ್ರುತಿಸ್ಮೃತಿಗಳಲ್ಲಿ
ಹೇಳಿದ್ದೆಲ್ಲವನ್ನು ಸ್ಪಷ್ಟವಾಗಿ ಚೆನ್ನಾಗಿ 'ಇದು ಸತ್ಯ' ಎಂದು ವ್ಯಕ್ತಪಡಿಸುವ
ಬ್ರಹ್ಮನಿಶ್ಚಾಯಕ ಮೀಮಾಂಸಾಶಾಸ್ತ್ರ ಆ ಕಾರಣದಿದಾಗಿಯೇ ಸತ್ಯವೆನಿಸಿದೆ.
ಆದ್ದರಿಂದ
ವಿಷ್ಣು ಅಸದೃಶನಾದವನೆಂಬ
ಮಾತು ಮೀಮಾಂಸಾಶಾಸ್ತ್ರದಿಂದ ಸಿದ್ಧವಾದದ್ದು. ನಿರ್ಣಾಯಕವಾದ
ಮೀಮಾಂಸಾಶಾಸ್ತ್ರಕ್ಕನುಗುಣವಾಗಿ ನಿರ್ಣೇಯ ಶಾಸ್ತ್ರದ ಪ್ರಮೇಯಗಳೆನ್ನೆಲ್ಲ
ಹೊಂದಿಸಬೇಕಾದುದರಿಂದ ನಿರ್ಣಾಯಕ ಶಾಸ್ತ್ರದ ನಾರಾಯಣ ಅಸದೃಶತ್ವದ ಮಾತಿನ ಆಧಾರದಲ್ಲಿ
ಮಹಾಭಾರತದ ಪ್ರಮೇಯಗಳನ್ನೆಲ್ಲ ಸಾಧಿಸುವುದು ಅಂದರೆ ಕೂಡಿಸುವುದು ಅತ್ಯಂತ ಸಮುಚಿತ.
(ಉಡುಪಿ ಭಂಡಾರಕೇರಿ ಮಠದಲ್ಲಿ ನಡೆದ
ಸಭೆಯಲ್ಲಿ)
ಸುರುಗುರು-ವೇದವ್ಯಾಸರು
'ನಾರಾಯಣಂ
ಸುರುಗುರುಂ......' ಎಂಬುದಾಗಿ ಮಹಾಭಾರತದ ಮೊದಲ ಮಂಗಲ ವಾಕ್ಯದಲ್ಲಿ ನಾರಾಯಣನನ್ನು
'ಸುರುಗುರು' ವನ್ನಾಗಿ ದೇವತೆಗಳಿಗೆ ಗುರುವನ್ನಾಗಿ ಸ್ತುತಿಸಲಾಗಿದೆ.
ಕೃಷ್ಣಾವತಾರದ ಸಂದರ್ಭದಲ್ಲಿ ವಾಯುದೇವನೇ ಮುಂತಾದ
ಸುರರು
ಭೀಮಸೇನ ಇತ್ಯಾದಿ ವ್ಯಕ್ತಿಗಳಾಗಿ ಅವತರಿಸಿದ್ದು, ಅವರಿಗೆ ನಾರಾಯಣನು ಕೃಷ್ಣರೂಪದಲ್ಲೂ,
ಪರಶುರಾಮ ರೂಪದಲ್ಲೂ, ವೇದವ್ಯಾಸರೂಪದಲ್ಲೂ ಬೇರೆ ಬೇರೆ ಸಂದರ್ಭದಲ್ಲಿ ಉಪದೇಶ ನೀಡಿಗುರು
ಎನಿಸಿರುವನು.
ಇದಲ್ಲದೆ, ಪಾಂಡವರಿಗೆ ಶ್ರೀವೇದವ್ಯಾಸರು
ಪಾಂಡವರಿಗೆ ಭಗವಂತನ
ಸ್ವಾತಂತ್ರ್ಯದ, ಪ್ರಕೃತ್ಯಾದಿಗಳ ಅಸ್ವಾಂತಂತ್ರ್ಯದ ಪ್ರಾತ್ಯಕ್ಷಿಕೆಯನ್ನು ಆಗಾಗ್ಗೆ
ಹಲವಾರು ಬಾರಿ ನೀಡಿ ಆ ತತ್ತ್ವವನ್ನು ಮನವರಿಕೆ ಮಾಡಿಸಿದ ಪರಮಗುರುಗಳು. ಯುಧಿಷ್ಠಿರನ
ಎದುರು 'ಪೌರುಷವಾದ' ವನ್ನು ಮಂಡಿಸುತ್ತಿದ್ದ ಭೀಮಸೇನ ಈ ಪ್ರಮೇಯವನ್ನು ಹೀಗೆ
ಪ್ರಸ್ತುತಪಡಿಸುವನು-
ಬ್ರಹ್ಮಾದೀನಾಂ ಪ್ರಕೃತೇಸ್ತದ್ವಶತ್ವಂ
ದೃಷ್ಠಂ
ಹಿ ನೋ ಬಹುಧಾ ವ್ಯಾಸದೇಹೇ |
ಪಾರಾಶರ್ಯೋ
ದಿವ್ಯದೃಷ್ಟಿಂ ಪ್ರದಾಯ
ಸ್ವಾತಂತ್ರ್ಯಂ
ನೋ ದರ್ಶಯಾಮಾಸ ಲೋಕೇ ||
ಶ್ರೀ ವೇದವ್ಯಾಸರು ನಮಗೆ ಅನೇಕ ಬಾರಿ
ದಿವ್ಯದೃಷ್ಟಿಯನ್ನು ನೀಡಿ
ತಮ್ಮದೇಹದಲ್ಲಿ ಚಿತ್ ಪ್ರಕೃತಿಗೂ ಚತುರ್ಮುಖಾದಿಗಳಿಗೂ ಭಗವದಧೀನತ್ವವನ್ನೂ ಭಗವಂತನ
ಸ್ವಾತಂತ್ರ್ಯವನ್ನೂ ತೋರಿಸಿಕೊಟ್ಟಿರುವರು - ಎಂಬ ಭೀಮಸೇನನ ಈ ಮಾತು ಪ್ರಮುಖ ಪ್ರಮೇಯದ
'ಸ್ವತಂತ್ರೋ ಭಗವಾನ್ ವಿಷ್ಣುಃ ಅಸ್ವತಂತ್ರಂ ದ್ವಿಧೇತರತ್' - ಎಂಬುದರ ವಿಷಯದಲ್ಲಿ
ಪಾಂಡವರ ಪಾಲಿಗೆ ಶ್ರೀವೇದವ್ಯಾಸರು ಹೇಗೆ ಗುರುಗಳಾಗಿರುವರೆಂಬುದನ್ನು ಉದ್ಘೋಷಿಸಬಲ್ಲದು.
(ಫಲಿಮಾರು ಸ್ವಾಮಿಗಳ
ಪರ್ಯಾಯಾವಧಿಯಲ್ಲಿ ಶ್ರೀಕೃಷ್ಣ ಮಠದಲ್ಲಿ ನೀಡಿದ ಪ್ರವಚನ)
ಶ್ರೀ ವಿದ್ಯೇಶತೀರ್ಥರ ಕೃಷಿಯ ಫಸಲು
ಭಂಡರ ಕೇರಿಮಠದ ಅಧಿಪತಿಗಳಾದ ಶ್ರೀ
ವಿದ್ಯೇಶತೀರ್ಥರು ಶ್ರೀಮಧ್ವರ ಸರ್ವಮೂಲ ಗ್ರಂಥಗಳನ್ನು ಹ್ರ್‍ಗೆ
ಅರಗಿಸಿಕೊಂಡಿರುವರೆಂಬುದಕ್ಕೆ ಇವು ದೃಷ್ಟಾಂತಗಳು. ಸರ್ವಮೂಲ ಗ್ರಂಥಗಳ ಬಗ್ಗೆ
ಶ್ರೀಪಾದರು ನಡೆಸಿರುವ, ನಡೆಸುತ್ತಿರುವ 'ವಿಶಿಷ್ಟ ಕೃಷಿ' ಯ ಫಸಲುಗಳು ಇವು.
ಶ್ರೀಮಧ್ವರು ತತ್ವಜ್ಞಾನದ ಮೂಲಗಳಾದ 'ಸರ್ವ ಮೂಲ
ಗ್ರಂಥ'
ಗಳನ್ನು ನಮಗೆ ಧಾರೆಯೆರೆದು ಕೊಟ್ಟಿರುವುದು ಅವುಗಳ ಸಂದೇಶಗಳನ್ನು ಜೀವನದಲ್ಲಿ
ಅಳವಡಿಸಿಕೊಳ್ಳುವುದರ ಜೊತೆಗೆ ಆ ಗ್ರಂಥಗಳನ್ನು ಬೆಳಸಬೇಕು - ಎಂಬ ಉದ್ದೇಶದಿಂದ.
ತತ್ವಜ್ಞಾನವನ್ನು ಬೆಳೆಸುವುದೆಂದರೆ, ಸರ್ವ
ಮೂಲಗ್ರಂಥಗಳ ಪಾಠ
ಪ್ರವಚನ ನಡೆಸಿ, ಅವುಗಳ ಸಂದೇಶಗಳನ್ನು ಪ್ರಚುರಪಡಿಸುವುದು. ಅವುಗಳಿಗೆ ಟೀಕೆಟಿಪ್ಪಣಿ
ಬರೆದು ಅವುಗಳ ಅರ್ಥವಾಗದ ಅಥವಾ ವಿಪರೀತಾರ್ಥವನ್ನು ನೀಡುವ ಮಾತುಗಳ ನಿಜವಾದ
ತಾತ್ಪರ್ಯವನ್ನು ಸ್ಪಷ್ಟಪಡಿಸುವುದು ಹಾಗೂ ಅಪಾರ್ಥದ ಹಿನ್ನೆಲೆಯಲ್ಲಿ ಬರುವ ಆಕ್ಷೇಪ,
ಸಂದೇಹಗಳನ್ನು ಪರಿಹರಿಸುವುದು. ಇವುಗಳ ಜೊತೆಗೆ ವೇದಾದಿ ಮೂಲಗ್ರಂಥಗಳ ಕೆಲವು
ಮಾತುಗಳಿಗೆ, ವಿಚಾರಗಳಿಗೆ ಸಂಬಂಧಿಸಿದಂತೆ ನೀಡಲಾದ ಸರ್ವಮೂಲದ ಸಂದೇಶಗಳನ್ನು ಉಳಿದ
ಮಾತುಗಳಿಗೂ, ವಿಚಾರಗಳಿಗೂ ಅನ್ವಯಿಸಿ, ಶಾಸ್ತ್ರೀಯವಾದ, ಪ್ರಾಮಾಣಿಕವಾದ ಅರ್ಥವನ್ನು
ಹೊರಡಿಸುವುದೂ ತತ್ವಜ್ಞಾನದ, ಸರ್ವಮೂಲದ ಬೆಳವಣಿಗೆ ಎನಿಸಬಲ್ಲದು. ಯಾಕೆಂದರೆ ಈ
ಪ್ರಕ್ರಿಯೆಯಿಂದಾಗಿ ಜಿಜ್ಞಾಸುಗಳಿಗೆ ಸರ್ವಮೂಲದ ಸಂದೇಶಗಳ ಆಧಾರದಲ್ಲಿ ಮಹಾಭಾರತಾದಿ
ಮೂಲಗ್ರಂಥಗಳ ಹೊಸ ಹೊಸ ಅರ್ಥವನ್ನು ಸವಿಯಲು, ಆ ಮೂಲಕ ಸರ್ವಮೂಲದ ಸಂದೇಶಗಳ ಅನುಸಂಧಾನ
ನಡೆಸಲು ಸೌಕರ್ಯವಾಗುವುದು.
ಸರ್ವಮೂಲದ ವಿಶಿಷ್ಟ ಕೃಷಿಕಾರ್ಯ:
ಈ ನಿಟ್ಟಿನಲ್ಲಿ ಸರ್ವಮೂಲಗ್ರಂಥಗಳ
ವಿಶಿಷ್ಟವಾದ ಕೃಶಿಕಾರ್ಯ ನಡೆಸುತ್ತಿರುವವರು ಶ್ರೀ ಶ್ರೀ ವಿದ್ಯೇಶತೀರ್ಥರು.
ಅವರ
ಪ್ರವಚನಗಳ ವೈಶಿಷ್ಟವೇ ಇದು.
ಶ್ರೀಪಾದರು ಯಾವುದೇ ಚಿಕ್ಕಪುಟ್ಟ ಘಟನೆಗೆ ಸಂಬಂಧಿಸುವ ಪ್ರವಚನವೇ ಆಗಿರಲಿ ಅದರಲ್ಲಿ
ಸರ್ವಮೂಲದ ಸಂದೇಶದ ಅಡಿಯಲ್ಲಿ ಯಾವುದಾದರೊಂದು ಶಸ್ತ್ರದ ಮಾತಿಗೆ ವಿಶಿಷ್ಟ ಅರ್ಥವನ್ನು
ಹೊರಡಿಸುವ ಕೃಷಿಕಾರ್ಯ ನಡೆದೇ ಇರುತ್ತದೆ. ದೊಡ್ಡ ದೊಡ್ಡ ಸಭೆ, ಸಮಾರಂಭ,
ಸಮ್ಮೇಳನಗಳಲ್ಲಿಯೂ ಕಮ್ಮಿ ಎಂದರೆ ಆರೇಳು ಸರ್ವಮೂಲದ ಸಂದೇಶಗಳ ಆಧಾರದಲ್ಲಿ ಈ ಬಗೆಯ
ಅಡುಗೆಯನ್ನು ಮಾಡಿ ಬಡಿಸದೆ ಇರುವುದಿಲ್ಲ.
ಮೇಲೆ
ಮೇಲಿನ ಸಂದೇಶಗಳನ್ನು,
ವಿಚಾರಗಳನ್ನು ಮೆಚ್ಚಿಕೊಳ್ಳುವ ಜನಸಾಮಾನ್ಯರಿಗೆ ಶ್ರೀಪಾದರ ಈ ಪ್ರಕ್ರಿಯೆ ಅಷ್ಟೊಂದು
ಹಿಡಿಸದಿದ್ದರೂ, ಸರ್ವಮೂಲದ ಸಂದೇಶಗಳನ್ನು 'ಆತ್ಮಸಾತ್' ಮಾಡಿಕೊಂಡಿರುವ
ಅಧಿಕಾರಿಗಳಿಗಂತೂ ಷಡ್ರಸೂಪೇತ ಭಕ್ಷಭೋಜ್ಯಗಳ ಔತಣ. ಶ್ರೀಪಾದರ ಪ್ರವಚನವನ್ನು
ಗಂಭೀರವಾಗಿ ಧ್ಯಾನಿಸಿದರೆ ಅನುಸಂಧಾನಕ್ಕೆ ಸಾಕಷ್ಟು ಪುಷ್ಟಿಯನ್ನು ಪಡೆಯಬಹುದಾಗಿದೆ.
ಮೂಲದ ವಿಶಿಷ್ಟ ಕೃಷಿ:
ಶ್ರೀಪಾದರು ತಮ್ಮ ಐವತ್ತು ವರ್ಷಗಳಲ್ಲಿಯ
ಮೂವತ್ತು
ವರ್ಷಗಳಿಗಿಂತಲೂ ಅಧಿಕ ಅವಧಿಯಲ್ಲಿ ಪಾಠ ಪ್ರವಚನಗಳ ಮೂಲಕ, ಲೇಖನಗಳ ಮೂಲಕ, ಗ್ರಂಥರಚನೆಯ
ಮೂಲಕ ನಡೆಸಿರುವ ಸರ್ವಮೂಲದ ಈ ಬಗೆಯ ವಿಶಿಷ್ಟ ಕೃಷಿಯ ಕಾರ್ಯವನ್ನು ದಾಖಲುಗೊಳಿಸುವ ;
ಸರ್ವಮೂಲದ ಕೃಷಿಕಾರ್ಯ' ಎಂದೇ ಶೀರ್ಷಿಕೆ ಹೊತ್ತ ನೂರಕ್ಕಿಂತಲೂ ಕಮ್ಮಿಯಿಲ್ಲದಷ್ಟು
ಶ್ರೀಪಾದರ ಈ ಬಗೆಯ ಸಂದೇಶಗಳನ್ನು ಕ್ರೂಢೀಕರಿಸುವ ಕೃತಿಯೊಂದನ್ನು ರಚಿಸಬೇಕೆಂದು
ಸಂಕಲ್ಪಿಸಿದ್ದೇನೆ. ಶ್ರೀಪಾದರ ಐವತ್ತನೇ ವರ್ಷದ ಈ ಸಮಾರಂಭದ ಸುದ್ದಿಸ್ವಲ್ಪ ಮೊದಲೇ
ತಿಳಿದಿದ್ದರೆ ಈ ಸಂದರ್ಭದಲ್ಲೇ ಅದನ್ನು ರೂಪಿಸಿ ಅರ್ಪಿಸಲು ಯತ್ನಿಸುತ್ತಿದ್ದೆ. ಆದರೆ
ಸ್ವಲ್ಪ ತಡವಾಗಿ ತಿಳಿದ ಪ್ರಯುಕ್ತ ಈ ಸಂದರ್ಭದಲ್ಲಿ ಆಗದಿದ್ದರೂ ಈ ಸಮಾರಂಭ
ಪ್ರಯುಕ್ತವಾಗಿ ಆದಷ್ಟು ಬೇಗ ಸಿದ್ಧಪಡಿಸಬೇಕೆಂದಿರುವೆ. ಶ್ರೀಪಾದರ ಅಂತರ್ಯಾಮಿ
ರಾಮಚಂದ್ರಾಭಿನ್ನ ಶ್ರೀವೇದವ್ಯಾಸರು ಆ ಕೆಲಸವನ್ನು ನನ್ನಿಂದ ನಡೆಸಲೆಂದು
ಪ್ರಾರ್ಥಿಸುತ್ತಿದ್ದೇನೆ.