ಕೃತೇ ಪಾಪೇ ಅನುತಾಪೋವೈ ಯಸ್ಯ ಪುಂಸಃ ಪ್ರಜಾಯತೇ |
ಪ್ರಾಯಶ್ಚಿತ್ತಂ ತು ತಸ್ಯೋಕ್ತಂ ಹರಿ ಸಂಸ್ಮರಣಂ ಪರಂ ||
ಭಗವಂತನು ನಿರಂತರವಾಗಿ ನಿಮ್ಮಿಂದ ಚಿಂತಿತನಾದರೆ, ಪ್ರಸನ್ನನಾಗಿ ನಮಗೆ , ಮನಸ್ಸಿನ
ಚಿಂತಿತ ಫಲವನ್ನು ಅನುಗ್ರಹಿಸುತ್ತಾನೆ. ಆದುದರಿಂದ ಭಗವಂತನು, ಭಕ್ತರು ಮಾಡುವ ಅನೇಕ
ಸೇವೆಗಳಲ್ಲಿ, ತನ್ನ ಬಗೆಗಿನ ಚಿಂತೆ-ಸ್ಮರಣೆಗೆ ಪ್ರಾಧಾನ್ಯವನ್ನು ನೀಡುತ್ತಾನೆ.
ಅದಕ್ಕೆಂದೇ ಆತ ''ಚಿಂತಾಮಯ'' ಚಿಂತಾಪ್ರಧಾನ ಎನಿಸಿದ್ದಾನೆ. ಒಂದು ವಿಶೇಷ ಜಾತಿಯ
ಕೀಟವು, ತನಗೆ ಆಹಾರವನ್ನು ನೀಡಿ ಉಪಕಾರ ಮಾಡಿದ ಪೇಶಸ್ಕಾರಿ ಎಂಬ ಕೀಟ ವಿಶೇಷವನ್ನು
ಸ್ನೇಹದಿಂದ ನಿರಂತರ ಸ್ಮರಿಸಿ ಪೇಶಸ್ಕಾರಿ ಕೀಟಕ್ಕೆ ಸದೃಶವಾದ ರೂಪವನ್ನೇ ಪಡೆಯುತ್ತದೆ.
ಆದೇ ತೆರನಾಗಿ ಜೀವಾತ್ಮನೂ ಭಗವಂತನು ಮಾಡಿದ ಉಪಕಾರ ಹಾಗೂ ಆತನ ಮಹಾತ್ಮ್ಯಗಳ ಅರಿವಿನ
ಹಿನ್ನೆಲೆಯಲ್ಲಿ ಸ್ನೇಹದಿಂದ ಆತನನ್ನು ಸ್ಮರಿಸಿದರೆ ಸ್ಮರಿಸಿದ ಜೀವಾತ್ಮನೂ ಭಗವಂತನಿಗೆ
ಸದೃಶವಾದ ಜ್ಞಾನಾನಂದಾಕಾರವನ್ನೇ ಪಡೆಯಬಲ್ಲನು. ಒಟ್ಟಿನಲ್ಲಿ ಸ್ಮರಣೆಗೆ ಇಷ್ಟು
ಮಹತ್ವವಿರುವುದರಿಂದಲೇ ಭಗವಾನ್ ಶ್ರೀಕೃಷ್ಣನು ತನ್ನ ಸ್ಮರಣೆಯನ್ನು ವಿಧಾನ ಮಾಡಿದ್ದಾನೆ.
೨. ಮದ್ಧಕ್ತೋಭವ- ನನ್ನ ಬಗೆಗಿನ
ಮಹಾತ್ಮ್ಯೆ ಅರಿವಿನ ಹಿನ್ನೆಲೆಯಲ್ಲಿ ಸ್ವ-ಸ್ವಕೀಯ ಎಲ್ಲಾ ಪದಾರ್ಥಗಳಿಗಿಂತಲೂ
ಬಹುಪಟ್ಟು ಅಧಿಕವಾದ ಶುದ್ಧ-ಸುದೃಢವಾದ ಪ್ರೇಮ ಪ್ರವಾಹವನ್ನು ಹರಿಸು. ಈ ವಿಧದ ಪ್ರೇಮ
ಪ್ರವಾಹವೇ ನಿಜವಾದ ಭಕ್ತಿ. ಈ ಭಕ್ತಿಯ ಹಿನ್ನೆಲೆಯಲ್ಲಿ ನಮ್ಮಲ್ಲಿ ಭಗವಂತನ ಸ್ಮರಣೆ
ಇರಬೇಕು ವಿನಃ ದ್ವೇಷ-ಭಯ ಮುಂತಾದ ದುರ್ಭಾವನೆಗಳ ಹಿನ್ನೆಲೆಯಲ್ಲಿ ಅಲ್ಲ. ಈ
ಪ್ರಮೇಯವನ್ನು ಸೂಚಿಸುವ ಸಲುವಾಗಿಯೇ ಸ್ಮರಣೆಯ ವಿಧಾನದ ಬೆನ್ನಿನಲ್ಲೇ ಗೀತಾಚಾರ್ಯನು
ಬಕ್ತಿಯನ್ನು ವಿಧಾನ ಮಾಡಿದ್ದಾನೆ. ಜರಾಸಂಧ-ಸಾಲ್ವ ಕಂಸ ಮುಂತಾದ ದುಷ್ಟರಂತೆ ದ್ವೇಷ-ಭಯ
ಮುಂತಾದ ದುರ್ಭಾವನೆಗಳಿಂದ ಪ್ರೇರಿತಳಾಗಿ ನಾವು ಮಾಡುವ ಹರಿಸ್ಮರಣೆ ಸರ್ವಥಾ ತಾರಕವಲ್ಲ,
ಮಾರಕವೇ ಸರಿ.
ಸ್ವಭಾವತಃ ಸಾತ್ತ್ವಿಕರಾದ
ಶಿಶುಪಾಲ-ದಂತವಕ್ರಾದಿಗಳು, ''ವೈರೇಣ ಧೂತ ಪಾಪ್ಮಾನಸ್ತ ಮಾಪುರನುಚಿಂತಯಾ'' ಎಂಬ
ಭಾಗವತೋಕ್ತಿಯು ಸ್ಪಷ್ಟಪಡಿಸಿದಂತೆ ಅಂತಿಮ ಕಾಲದಲ್ಲಿ ಸುದರ್ಶನ ಚಕ್ರಸ್ಪರ್ಶದ
ಪ್ರಭಾವದಿಂದ ಜಾಗೃತಗೊಂಡ ಸ್ವಾಭಾವಿಕ ಭಕ್ತಿಯ ಹಿನ್ನೆಲೆಯಲ್ಲಿ ಮಾಡಿದ ಚಿಂತನರೂಪ
ಅನುಚಿಂತನದಿಂದಲೇ ಮಹಾಕಾರಣವಾದ ಭಗವಂತನ ಪ್ರಸಾದದಿಂದ ಆತನನ್ನು ಸೇರಿದರೆಂದು
ತಿಳಿಯಬೇಕು. ಅಸುರ ಪ್ರಭಾವದಿಂದ ಮಾಡಿದ ದ್ವೇಷದ ಪಾಪವನ್ನು ಈ ಅನುಚಿಂತನದಿಂದ
ತೊಳೆದುಕೊಂಡಿದ್ದರಿಂದಲೇ ಅವರು ಮುಕ್ತರಾದರು.
೩. ಮದ್ಯಾಜೀ- ನಿನಗೆ ವಿಹಿತವಾದ
ವರ್ಣಾಶ್ರಮೋಚಿತ ಕರ್ಮದಿಂದ ನನ್ನನ್ನೇ ಆರಾಧಿಸು. ಇದರಿಂದಲೇ ನಿನಗೆ ಶ್ರೇಯಸ್ಸು
''ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವದಂತಿ ಮಾನವಃ''
ಭಕ್ತಿಯಿಲ್ಲದೆ ಇತರ ಕರ್ಮಾನುಷ್ಠಾನ
ಮಾಡಿದರೂ ವ್ಯರ್ಥ. ಭಕ್ತಿಯೇ ಪ್ರಧಾನ. ಆದುದರಿಂದ ಕರ್ಮಾನು ಷ್ಠಾನ ಏಕೆ? ಎಂದು
ಪ್ರಶ್ನಿಸುವವರಿಗೆ ಕೃಷ್ಣ ನೀಡಿದ ಉತ್ತರವಿದು.
ವಿಧಿ-ನಿಷೇಧಗಳನ್ನು ಮಾಡುವ
ಶ್ರುತಿ-ಸ್ಮೃತಿಗಳು ಭಗವಂತನ ಆಜ್ಞೆಗಳಾಗಿವೆ. ಅವುಗಳನ್ನು ಮೀರಿ ಮನಬಂದಂತೆ ನಡೆಯುವವನು
ಹೇಗೆ ನಿಜವಾದ ಭಕ್ತನಾಗಬಲ್ಲನು ?
''ಆಜ್ಞಾಛೇದೀ ಮಮದ್ವೇಷೀ'' ಎನ್ನುವುದು
ಭಗವಂತನ ಉದ್ಗಾರವಲ್ಲವೆ? ಪೂಜೆಗೆ ಪೂರಕವಾದ ಭಕ್ತಿಯನ್ನೇ ನಾವು ಇಲ್ಲಿ ಸ್ವೀಕರಿಸಬೇಕು.
ಅದಕ್ಕೆ ವಿರೋಧಿಯಾದ ಇತರರು ವ್ಯಾಖ್ಯಾನಿಸಿದ ಭಕ್ತಿಯನ್ನಲ್ಲವೆಂದು ಸೂಚಿಸುವ ಸಲುವಾಗಿ
ಭಕ್ತಿ ವಿಧಾನ ಮಾಡಿದ ಬೆನ್ನಿನಲ್ಲಿ ಶ್ರೀಕೃಷ್ಣನು ತನ್ನ ಪೂಜೆಯನ್ನು ವಿಧಾನ
ಮಾಡಿದ್ದಾನೆ.
ಕೆಲವರು ''ಸ್ವ ಸ್ವರೂಪಾನು ಸಂಧಾನಂ
ಭಕ್ತಿ ರಿತ್ಯಭಿಧೀಯತೇ'' ಎಂಬುದಾಗಿ ಭಕ್ತಿಯನ್ನು ವ್ಯಾಖ್ಯಾನಿಸಿದ್ದಾರೆ. ಜೀವಾತ್ಮನು
ವಸ್ತುತಃ ನಿರ್ಗುಣ-ನಿರಾಕಾರ ಶುದ್ಧ ಬ್ರಹ್ಮಚೈತನ್ಯ ಸ್ವರೂಪನು. ಈ ಅರಿವೇ ಭಕ್ತಿ
ಎಂಬುದು ಇವರ ಆಶಯವಾಗಿದೆ. ಆದರೆ ಈ ತೆರನಾದ ಅರಿವಿನ ಹಿನ್ನೆಲೆಯಲ್ಲಿ ತನಗಿಂತ
ಭಗವಂತನಲ್ಲಿ ಯಾವುದೇ ವಿಧವಾದ ಮಹಾತ್ಮೆಯ ಅನುಸಂಧಾನಕ್ಕೂ ಅವಕಾಶವಿಲ್ಲದಿರುವುದರಿಂದ
ಹೇಗೆ ಆತನನ್ನು ಪೂಜಿಸಲು ಸಾಧ್ಯ?
ಇಂಥ ಭಕ್ತಿಯು ಪೂಜೆಗೆ ಪೂರಕವಾಗಿರದೇ
ಮಾರಕವೇ ಆಗಿದೆ. ಒಟ್ಟಿನಲ್ಲಿ ಭಕ್ತಿಯ ವಿಧಾನದ ಬೆನ್ನಿನಲ್ಲೆ ಪೂಜೆಯನ್ನೂ ವಿಧಾನ
ಮಾಡಿದ ಶ್ರೀಕೃಷ್ಣನ ಉದ್ದೇಶ - ಭಕ್ತಿ - ಪೂಜೆಗಳು ಎಲ್ಲಾ ವೈರುಧ್ಯಗಳಿಂದ
ವಿಮುಕ್ತವಾಗಿ ನಮ್ಮಲ್ಲಿ ಸಮಾವೇಶಗೊಳ್ಳಬೇಕು ಎಂದು. ಆದುದರಿಂದ ಪೂಜೆಗೆ ಪೂರಕವಾಗಬಲ್ಲ
ಮಹಾತ್ಮ್ಯೆ ಜ್ಞಾನಪೂರ್ವಕವಾದ ನಿರಂತರ ಶುದ್ಧ ಪ್ರೇಮ ಪ್ರಾವಾಹವೇ ಭಕ್ತಿ. ಇದನ್ನೇ
ಸಾಧನ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ನಿರ್ಧರಿಸಬಹುದು.
೪. ಮಾಂ ನಮಸ್ಕರು- ನನ್ನನ್ನೇ ವಂದಿಸು- ಸ್ತುತಿಸು- ವಿಚಾರ
ಮಾಡು. ಭಗವಂತನಿಗೆ ನಾವು ಸಲ್ಲಿಸುವ ಏಕೈಕ ಸಾಷ್ಟಾಂಗ ಭಕ್ತಿಯಿಂದ ನಮಸ್ಕಾರವೂ ಹತ್ತು
ಅಶಮೇಧ ಯಾಗಗಳ ಪುಣ್ಯವನ್ನು ಸಂಪಾದಿಸಿ ಕೊಡಲು ಸಮರ್ಥವಾಗಿದೆ- 'ಏಕೋಪಿಕೃಷ್ಣ ಸಕೃತ್
ಪ್ರಣಾಮೋ ದಶಾಶ್ವಮೇಧಾವಭೃಥೇನ ತುಲ್ಯಃ ||'
ನಾವು ಮಾಡುವ ಎಲ್ಲಾ
ಪುಣ್ಯಕರ್ಮಗಳಲ್ಲಿರುವ ಲೋಪದೋಷಗಳು ನಾಮತ್ರಯವನ್ನು ಜಪಿಸುತ್ತಾ ಕೃಷ್ಣನಿಗೆ ಸಲ್ಲಿಸುವ
ಭಕ್ತಿ ಪ್ರಣಾಮದಿಂದ ಪರಿಹಾರವಾಗಿತ್ತವೆ. ಅದಕ್ಕೆಂದೇ ಶ್ರೀಕೃಷ್ಣನು ಗೋಪಿಕಾಸ್ತ್ರೀಯರು
ವ್ರತಾಂಗ ಸ್ನಾನವನ್ನು ಯಮುನೆಯಲ್ಲಿ ನಗ್ನರಾಗಿ ಮಾಡಿ ಸಂಪಾದಿಸಿದ ದೇವತಾಪಚಾರರೂಪ
ದೋಷವನ್ನು ಸ್ವವಂದನರೂಪ ಪ್ರಾಯಶ್ಚಿತ್ತವನ್ನು ಅದರಿಂದ ಮಾಡಿಸಿ ಪರಿಹರಿಸಿದ್ದಾನೆ.
ದೋಷವನ್ನು ಅಳಿಸಿ ವ್ರತಫಲವಾಗಿ ಪತಿರೂಪದಲ್ಲಿ ತನ್ನ ಪ್ರಾಪ್ತಿಯಾಗುವಂತೆ
ಅನುಗ್ರಹಿಸಿದ್ದಾನೆ.
ಸರ್ವ ವರ್ಣಾಶ್ರಮಿಗಳು ವರ್ಣಾಶ್ರಮ
ಬಾಹ್ಯರಿಗೂ ಮಾಡಬಹುದಾದ ಏಕೈಕ ಸರ್ವಧರ್ಮ - ಶ್ರೀಭಗವದ್ವಂದನೆ. ಹಿಂದೆ ವಿಧಾನ ಮಾಡಿದ
ತನ್ನ ಪೂಜೆಯೂ ವಂದನಕ್ಕೆ ಅನುಕೂಲವಾಗಿರಬೇಕೇ ವಿನಾ ಅದಕ್ಕೆ ಪ್ರತಿಕೂಲವಲ್ಲ ಎನ್ನುವ
ಆಶಯದಿಂದಲೇ ಶ್ರೀಕೃಷ್ಣನು ಪೂಜೆಯ ವಿಧಾನದ ಬೆನ್ನಿನಲ್ಲೇ ಸ್ವವಂದನವನ್ನೂ ವಿಧಾನ
ಮಾಡಿದ್ದಾನೆ. ಕೆಲವರು ''ಸಮತ್ವ ಮಾರಾಧನ ಮಚ್ಯುತಸ್ಯ'' ಎಂಬ ಪುರಾಣ ವಚನವನ್ನು ಅಪಾರ್ಥ
ಮಾಡಿಕೊಂಡು ಎಲ್ಲಾ ಜೀವಾತ್ಮರೂ ಪರಬ್ರಹ್ಮ ಸ್ವರೂಪರು ಎಂಬೀ ಸಮತ್ವ ದೃಷ್ಟಿಯೇ ಭಗವಂತನ
ಆರಾಧನೆ ಎಂದು ವ್ಯಾಖ್ಯಾನಿಸಿದ್ದಾರೆ. ಆದರೆ ಈ ತೆರನಾದ ಆರಾಧನೆಯನ್ನು ಇಲ್ಲಿ
ಸ್ವೀಕರಿಸಿದರೆ ಭಗವಂತನನ್ನು ಸರ್ವಥಾ ವಂದಿಸಲು ಸಾಧ್ಯವಿಲ್ಲ.
ಈ ತೆರನಾದ ಸಮತ್ವ ದೃಷ್ಟಿಯ
ಹಿನ್ನೆಲೆಯಲ್ಲಿ ನಮಸ್ಕಾರ ಮಾಡಲು ಅವಶ್ಯಕವಾದ ಭಗವಂತನ ಬಗೆಗಿನ ಗೌರವ ಭಾವವನ್ನು ಹೇಗೆ
ಹೊಂದಲು ಸಾಧ್ಯ? ವಿಷಯದಿಂದ ಜೀವರಲ್ಲೂ ಭಗವಂತನು ನಿರ್ದೋಷ ಗುಣಪೂರ್ಣನಾಗಿ ಏಕರೂಪದಲ್ಲಿ
ನೆಲೆಸಿದ್ದಾನೆ ಎಂಬುದಾಗಿ ಭಗವಂತನ ಏಕರೂಪತಾ ದೃಷ್ಟಿಯೇ ಪುರಾಣದಲ್ಲಿ ಉಲ್ಲೇಖಿಸಲ್ಪಟ್ಟ
ಸಮತ್ವ ದೃಷ್ಟಿ. ಎದುವೇ ಅಲ್ಲಿ ಉಲ್ಲೇಖಿಸಲ್ಪಟ್ಟ ಭಗವಂತನ ಆರಾಧನೆ. ಭಾಗವತದಲ್ಲಿ
ಋಷಭದೇವನು ತಿಳಿಸಿದ ''ವಿವಿಕ್ತ ದೃಷ್ಟಿಸ್ತ ದುತಾರ್ಹಣಂ ಮೇ'' ಜೀವ-ಪರಮಾರ್ಮರು ಭೇದ
ದೃಷ್ಟಿಯೂ ಭಗವಂತನಿಗೆ ಪ್ರಿಯವಾದ ಆರಾಧನೆ. ಈ ದ್ವಿವಿಧ ಆರಾಧನೆಗಳೂ ಶ್ರೀಕೃಷ್ಣನು
ಅಂತಿಮದಲ್ಲಿ ವಿಧಾನ ಮಾಡಿದ ನಮಸ್ಕಾರಕ್ಕೆ ಅನುಕೂಲವಾಗಿದೆ. ಆದುದರಿಂದ ಈ ತೆರನಾದ
ಆರಾಧನೆಗಳನ್ನೆ ಶ್ರೀಕೃಷ್ಣನು ''ಮದ್ಯಾಜೀ'' ಎನ್ನುವ ವಚನದಲ್ಲಿ ಉಲ್ಲೇಖಿಸಿದ್ದಾನೆ.
ಇಲ್ಲಿ ಉಲ್ಲೇಖಿಸಲ್ಪಟ್ಟ ನಮಸ್ಕಾರವೆಂದರೆ ಪ್ರಸಿದ್ಧವಾದ ಕೇವಲ ವಂದನವಲ್ಲ. ಹರಿಯ
ಸ್ತುತಿಯೂ- ಆತನ ಬಗೆಗಿನ ವಿಚಾರವೂ ವಂದನ ವಿಶೇಷವೇ ಆಗಿದೆ.
ಭಗವಂತನ ಬಗೆಗಿನ ಗೌರವ ಭಾವದಿಂದ
ವಿನಮ್ರವಾದ ಮನೋವೃತ್ತಿಯೇ ''ವಂದನ'' ವೆನಿಸುತ್ತದೆ. ಭಗವಂತನ ಶ್ರವಣ-ಮನನ ರೂಪ
ಜಿಜ್ಞಾಸೆಯನ್ನು ಕೈಗೊಳ್ಳುವಾಗಲೂ ಈ ತೆರನಾದ ಮನೋವೃತ್ತಿಯು ಜಾಗೃತವಾಗಿರುತ್ತದೆ.
ಆದುದರಿಂದಲೇ ಶ್ರೀ ಜಯತೀರ್ಥರು ''ಜಿಜ್ಞಾಸಾಪಿ ವಂದನ ವಿಶೇಷ ಏವ'' ಎನ್ನುವ ಮಾತಿನಲ್ಲಿ
ಈ ಆಶಯವನ್ನೇ ವ್ಯಕ್ತಪಡಿಸಿದ್ದಾರೆ. ಈ ತೆರನಾದ ವಂದನವನ್ನು ಭಗವಂತನು ಅಂತಿಮದಲ್ಲಿ
ವಿಧಾನ ಮಾಡಿದ್ದಾನೆ. ಈ ಮೂಲಕ ತನ್ನ ಬಗೆಗಿನ ವಿಚಾರರೂಪ ವಂದನಕ್ಕೆ ಒತ್ತು ಕೊಟ್ಟು
ಅದನ್ನು ಅನುಷ್ಟಾನ ಮಾಡಲು ಆದೇಶಿಸಿದ್ದಾನೆ.
''ಸ್ವಾಧ್ಯಾಯ-ಪ್ರವಚನೇ ಏವೇತಿ ನಾಕೋ
ಮೌದ್ಗಲ್ಯ ತದಿತಪಸ್ತದ್ಧಿತಪ'' ಎನ್ನುವ ಉಪನಿಷತ್ತಿನ ಉದ್ಗಾರ ತಾನೆ?
ಅಧ್ಯಯನ-ಅಧ್ಯಾಪನಗಳಿಂದ ಭಗವಂತನ ಬಗೆಗಿನ ವಿಚಾರವೇ ಮಹಾತಪಸ್ಸು. ಈ ತಪಸ್ಸಿನಲ್ಲಿ
ಭಗವಂತನ ಬಗೆಗಿನ ಏಕಾಗ್ರತೆಯನ್ನು ಸಂಪಾದಿಸುವಷ್ಟು ಇತರ ಸಾಧನಾನುಷ್ಠಾನ ಕಾಲದಲ್ಲಿ
ಸಂಪಾದಿಸಲು ಸಾಧ್ಯವಿಲ್ಲ. ಅದಕ್ಕೆಂದೇ ಭಗವಾನ್ ಶ್ರೀಕೃಷ್ಣನು ಉದ್ದವ ಗೀತೆಯಲ್ಲಿ
''ಜಿಜ್ಞಾಸಾಯಾಂ ಸಂಪ್ರವೃತ್ತೋ ನಾದ್ರೀಯೇತ ಕರ್ಮಚೋದನಾಂ'' ಎಂದು ವಂದನ ರೂಪವಾದ
ಜಿಜ್ಞಾಸೆಗೆ ಮಹತ್ವವನ್ನು ನೀಡಿದ್ದಾರೆ. ಇಲ್ಲಿಯೂ ಅಂತಿಮದಲ್ಲಿ ಅವನ್ನು ವಿಧಾನ ಮಾಡಿ
ಅದರ ಪರಮೋಚ್ಛ ಸ್ಥಾನವನ್ನು ಸೂಚಿಸಿದ್ದಾನೆ ಎನ್ನಬಹುದು.
ಭಗವಂತನು ನಮಗೆ ಜನ್ಮ ಜನ್ಮಗಳಲ್ಲೂ ಸಾಧನ
ಶರೀರಾದಿ ಸಂಪತ್ತನ್ನು ಅನುಗ್ರಹಿಸಿ ನಮ್ಮನ್ನು ಹಂತಹಂತವಾಗಿ ಉದ್ಧರಿಸುತ್ತಿದ್ದಾನೆ.
ಆತನ ಈ ಮಹೋಪಕಾರವನ್ನು ನೆನೆದು ಕೃತಜ್ಞತಾದೃಷ್ಟಿಯಿಂದ ''ಭೂಯಿಷ್ಠಾಂತೇ ನಮ ಉಕ್ತಿಂ
ವಿಧೇಮ'' ಎಂದು ಉದ್ಗರಿಸುವುದು ಕೃತಜ್ಞ ಭಕ್ತನ ಮುಖ್ಯ ಕರ್ತವ್ಯ. ಭಗವಂತನು ಮಾಡಿದ
ಮಹೋಪಕಾರಕ್ಕೆ ಸಾಧಕ ಜೀವನು ಭಗವಂತನಿಗೆ ಇನ್ನೇನು ಮಾಡಲು ಶಕ್ತನು? ಅಂತಿಮದಲ್ಲಿ
ವಂದನವನ್ನು ಸಲ್ಲಿಸಿ ಕೃತಜ್ಞನಾಗಲಿ ಎನ್ನುವ ದೃಷ್ಟಿಯಿಂದ ಅಂತಿಮದಲ್ಲಿ
ವಂದನಾನುಷ್ಠಾನವನ್ನು ವಿಧಾನ ಮಾಡಿದ್ದಾನೆ.
ಈ ಸಾಧನ ಸೋಪಾನಗಳನ್ನು ಏರಿದರೆ
ಸದ್ಗುಣ-ಸ್ವರೂಪಿಯಾದ ಸರ್ವೋತ್ತಮನಾಗಿ, ಮುಕ್ತರಿಗೆ ಆನಂದಜ್ಞಾನಪ್ರದನಾಗಿ ಸಕಲ
ಸುಜೀವಾತ್ಮರಿಗೂ ಹಿತರೂಪವಾಗಿ ''ಸತ್ಯ'' ಎನಿಸಿದ ತನ್ನನ್ನು ಖಂಡಿತವಾಗಿ ಸೇರುವನು.
ಇದು ನನ್ನ ಅಮೋಘವಾದ ಪ್ರತಿಜ್ಞೆ ಎಂದು ಭಗವಂತನು ಸ್ಪಷ್ಟಪಡಿಸಿದ್ದಾನೆ ''ಮಾಮೈವೇಷ್ಯಸಿ
ಸತ್ಯಂತೇ ಪ್ರತಿಜಾನೇ ಪ್ರಿಯೋಸಿ ಮೇ''.
ಗೀತಾಚಾರ್ಯನ ಈ ಪ್ರತಿಜ್ಞಾ ವಚನವು
ಎಲ್ಲಾ ಸುಜನರಿಗೂ ಸಾಧನ ಪಥದಲ್ಲಿ ಮುನ್ನೆಡೆಯಲು ಪ್ರೇರಕವಾಗಲಿ. ಮಾರ್ಗದರ್ಶಿಯಾಗಲಿ
ಎಂದು ಹಾರೈಸುತ್ತೇವೆ.