ಹರಿಮೇಧಾ
ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರ ಪೀಠಾರೋಹಣ ರಜತ ಮಹೋತ್ಸವ ಹಾಗೂ
ಸ್ವರ್ಣಜಯಂತ್ಯುತ್ಸವದ

ಸ್ಮರಣ ಸಂಚಿಕೆ
ಬಿಡುಗಡೆಯ ದಿನಾಂಕ  : 31.12.2005

ಅನುಗ್ರಹ ಸಂದೇಶಗಳು

ಪರ್ಯಾಯ ಅದಮಾರುಮಠಾಧೀಶರು

ಪೇಜಾವರ ಮಠಾಧೀಶರು

ಉತ್ತರಾದಿ ಮಠಾಧೀಶರು

ರಾಘವೇಂದ್ರ ಮಠಾಧೀಶರು

ಫಲಿಮಾರು ಮಠಾಧೀಶರು

ಸುಬ್ರಹ್ಮಣ್ಯ ಮಠಾಧೀಶರು


ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರ ಪೀಠಾರೋಹಣ ರಜತ ಮಹೋತ್ಸವ ಹಾಗೂ
ಸ್ವರ್ಣಜಯಂತ್ಯುತ್ಸವದ ಸಮತಿ

ಗಿರಿನಗರ  -  ಬೆಂಗಳೂರು

ಶ್ರೀ ಶ್ರೀ ವಿಶ್ವಪ್ರಿಯತೀರ್ಥ
ಶ್ರೀ ಪಾದಂಗಳವರು ಪರ್ಯಾಯ ಅದಮಾರು ಮಠ
ಶ್ರೀ ಕೃಷ್ಣಮಠ, ರಥಬೀದಿ, ಉಡುಪಿ

    ಉಪಕಾರವು ಬದುಕಿನ ಮುಖ್ಯ ಲಕ್ಷಣ. ಕೇವಲ ತಿನ್ನುವುದು, ತಿರುಗುವುದು, ಮಲಗುವುದು, ಈ ರೀತಿ ಇರುವುದಕ್ಕೆ ಬದುಕಿರುವುದು ಎಂದು ಹೆಸರಲ್ಲ. ಕನಿಷ್ಠ ಪಕ್ಷ ಇನ್ನೊಬ್ಬರಿಗೆ ಉಪಕಾರವನ್ನಾದರೂ ಮಾಡಬೇಕು. ಹಾಗಿದ್ದರೇನೇ ಆತನ ಬದುಕು ಸಾರ್ಥಕ. ಬದಕು ನೂರಕ್ಕೆ ನೂರು ಸಾರ್ಥಕ ವಾಗಬೇಕಿದ್ದರೆ ದೇವರನ್ನು ತಿಳಿಯಲೇಬೇಕು.
    ನಮ್ಮ ಭಂಡಾರಕೇರಿ ಶ್ರೀಗಳವರು ಪ್ರತಿಯೊಬ್ಬರ ಜೀವನವನ್ನು ನೂರಕ್ಕೆನೂರು ಸಾರ್ಥಕವನ್ನಾಗಿ ಮಾಡುವ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅಂದರೆ ಹಗಲೂ ರಾತ್ರಿ ,ಆಹಾರ ನಿದ್ರಾದಿಗಳನ್ನು ಕಮ್ಮಿ ಮಾಡಿ, ಸಂಚಾರಮಾಡುತ್ತಾ ಜನರನ್ನು ಆಧ್ಯಾತ್ಮದ ಕಡೆಗೆ ತಿರುಗಿಸುತ್ತಿದ್ದಾರೆ. ಬತ್ತಿಯು ತನ್ನನ್ನು ಸವಿಸಿಕೊಂಡು ಜನರಿಗೆ ಬೆಳಕನ್ನು ಕೊಡುವಂತೆ, ಗಂಗಾನದಿಯಲ್ಲಿ ನೀರು ತೆಗೆದಂತೆ ಬರುವಂತೆ ಶ್ರೀಗಳವರಲ್ಲಿ ಶಾಸ್ತ್ರದ ಹೊಸ ವಿಷಯಗಳು ಬರುತ್ತಿರುತ್ತವೆ.
    ಒಂದು ಕಾಲದಲ್ಲಿ ಬಾರ್ಕೂರು, ರಾಜರ ಭೌತಿಕ ಸಂಪತ್ತುಗಳ ಸಂಗ್ರಹ ಸ್ಥಾನವಾಗಿತ್ತಂತೆ. ಆದ್ದರಿಂದ ಆ ಊರಿಗೆ ಭಂಡಾರಕೇರಿ ಎಂದಾಯಿತು, ಭಂಡಾರ ಅಂದರೆ ಸಂಪತ್ತು. ಕೇರಿ ಅಂದರೆ ಸಂಗ್ರಹ ತಾಣ. ಆದರೆ ಅದು ಈಗ ಜ್ಞಾನ ಸಂಪತ್ತಿನ ತಾಣವಾಗಿದೆ. ಶ್ರೀ ವಿದ್ಯಾಮಾನ್ಯ ತೀರ್ಥರಿಂದ ಈ ರೀತಿ ಆಯಿತು. ಆಗಿನಕಾಲದಲ್ಲಿ ಸ್ಥಾಯಿಯಾದ ಭಂಡಾರಕೇರಿ ಆಗಿದ್ದರೆ ಶ್ರೀ ವಿದ್ಯಾಮಾನ್ಯತೀರ್ಥರು ಹಾಗೂ ಶ್ರೀ ವಿದ್ಯೇಶತೀರ್ಥರು ಸಂಚಾರಿಯಾದ ಭಂಡಾರಗಳು.
ಇಂತಹ ವಿದ್ಯೇಶತೀರ್ಥರ ೫೦ ರ ವರ್ಧಂತಿ ಹಾಗೂ ಪೀಠಾರೋಹಣದ ೨೫ ವರ್ಷಗಳ ಕಾರ್ಯಕ್ರಮವನ್ನು ನಿಜವಾಗಿಯೂ ಮಾಡಬೇಕು. ಬಹಳ ಔಚಿತ್ಯಪೂರ್ಣ. ಇಂತಹ ಶ್ರೀಗಳವರ ಸಹಪಾಠಿಗಳು ನಾವಾಗಿದ್ದೆವು ಎನ್ನುವುದು ನಮಗೆ ಹೆಮ್ಮೆಯ ವಿಷಯ.
    ಶ್ರೀಗಳವರು ಆರೋಗ್ಯವಂತರಾಗಿ ನೂರುಕಾಲ ಬಾಳಲಿ ಎಂದು ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ನಮ್ಮ ಪ್ರಾರ್ಥನೆ.
ಶ್ರೀ ಶ್ರೀ ವಿಶ್ವಪ್ರಿಯತೀರ್ಥಸ್ವಾಮೀಜಿ
 ಪರ್ಯಾಯ ಶ್ರೀಅದಮಾರುಮಠ,
ಶ್ರೀ ಕೃಷ್ಣಮಠ, ರಥಬೀದಿ, ಉಡುಪಿ


ಶ್ರೀ ಶ್ರೀ ವಿಶ್ವೇಶತೀರ್ಥರು
ಶ್ರೀ ಪೇಜಾವರ ಅಧೋಕ್ಷಜಮಠ
ಜಗದ್ಗುರು ಶ್ರೀಮಧ್ವಾಚಾರ್ಯರ ಸಂಸ್ಥಾನ,
ಉಡುಪಿ ೫೭೬೧೦೧, ಕರ್ನಾಟಕ
೧೪.೧೨.೨೦೦೫, ಬೆಂಗಳೂರು.
    ಶ್ರೀ ಭಂಡಾರಕೇರಿ ಮಠಾದೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರ ಪೀಠಾರೋಹಣದ ರಜತ ಮಹೋತ್ಸವದ ಸಂಭ್ರಮದಲ್ಲಿ ನಾವಿದ್ದೇವೆ.  ಶ್ರೀ ವಿದ್ಯೇಶತೀರ್ಥರು ಪೂರ್ಣಪ್ರಜ್ಞ ವಿದ್ಯಾಪೀಠವೆನ್ನುವ ಕ್ಷೀರ  ಸಮುದ್ರದಿಂದ ಉದಯಿಸಿದ ನಿಷ್ಕಳಂಕ ಪೂರ್ಣಚಂದ್ರಮರಾಗಿದ್ದಾರೆ. ಅವರು ತಮ್ಮ ಪರಿಶುದ್ಧ ಸನ್ಯಾಸ ಜೀವನ,  ತಪಸ್ಸು,  ಆಚಾರನಿಷ್ಠೆ ನಿರಂತರ ಅಧ್ಯಯನ,  ಪಾಠಪ್ರವಚನ ಮತ್ತು ಜ್ಞಾನಪ್ರಸಾರದಲ್ಲಿ ತೋರಿದ ಕಳಿಕಳಿಯಿಂದ ಎಲ್ಲರ ಪ್ರೀತಿ-ಗೌರವಗಳಿಗೆ ಪಾತ್ರರಾಗಿದ್ದಾರೆ. ಭಾಗವತದ ಗಂಗೆಯನ್ನು ಪ್ರತಿಭವನದಲ್ಲಿ ಹರಿಸಿದ ಭಗೀರಥರವರು. ಸ್ವಾರ್ಥದ ಲವಲೇಶವೂ ಇಲ್ಲದೆ ಜ್ಞಾನಪ್ರಸಾರ ಮತ್ತು ವಿದ್ವಾಂಸರ ಪೋಷಣೆಗಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡ ತ್ಯಾಗಜೀವಿಗಳೆಂದು ಇವರನ್ನು ಕರೆಯಬಹುದು. ಆಚಾರ್ಯರ ಸರ್ವಮೂಲದ ಹಿನ್ನೆಲೆಯಲ್ಲಿ ಭಾಗವತ ಮೊದಲಾದ ಗ್ರಂಥಗಳಿಗೆ ಹೊಸ ಹೊಸ ಅರ್ಥಗಳನ್ನು ಹುಡುಕುವ ಇವರ ಜಾಣ್ಮೆ ವಿದ್ವಾಂಸರು ತಲೆದೂಗಬೇಕು. ಇಂತಹ ಆದರ್ಶಯತಿಗಳು ರಜತಮಹೋತ್ಸವ ಸಮಾರಂಭವು ಅರ್ಥಪೂರ್ಣವಾಗಿ ವೈಭವದಿಂದ ನಡೆಯಲೆಂದು ಹಾರೈಸುತ್ತೇವೆ.
ಇಂತೀ ನಾರಾಯಣ ಸ್ಮರಣೆಗಳು
ಶ್ರೀ ಶ್ರೀ ವಿಶ್ವೇಶತೀರ್ಥರು
ಶ್ರೀ ಪೇಜಾವರ ಅಧೋಕ್ಷಜಮಠ
ಶ್ರೀ ದಿಗ್ವಿಜಯರಾಮೋ ವಿಜಯತೇ
ಶ್ರೀ ಮಜ್ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ
ಪರಮಹಂಸ ಪರಿವ್ರಾಜಕಾಚಾರ್ಯರಾದ ಉತ್ತರಾದಿಮಠಾಧೀಶರಾದ
ಶ್ರೀ ಸತ್ಯಾತ್ಮ ತೀರ್ಥ ಶ್ರೀ ಪಾದಂಗಳವರು

ಕ್ಯಾಂಪ: ಹೈದರಾಬಾದ್                                                                                                                                 ದಿ. ೧೬. ೧೨. ೨೦೦೫
    ಇವರು ವಿದ್ಯೇಶತೀರ್ಥರ ರಜತಪೀಠಾರೋಹಣ ಹಾಗೂ ಸುವರ್ಣಜಯಂತಿಯ ಸಮಾರಂಭಕ್ಕಾಗಿ ಕಳುಹಿಸಿದ ಅನುಗ್ರಹ ಸಂದೇಶ !
    ತಮ್ಮ ಸತತವಾದ ಭಾಗವತ ಉಪಾಸನೆ ಹಾಗೂ ಮನೆ ಮನೆಗಳಿಗೆ ಭಾಗವತದ ಸಂದೇಶ ಮತ್ತು ವಿದ್ವಾಂಸರುಗಳಿಂದ ವಿಶೇಷವಾಗಿ ಪ್ರವಚನ ಮಾಡಿಸುವುದು ಇವೇ ಮೊದಲಾದ ಶ್ರೀಮದ್ ಭಾಗವತದ ಹಾಗೂ ಮಧ್ವಸಿದ್ಧಾಂತದ ಪ್ರಚಾರಕಾರ್ಯಗಳಿಂದ ಮಾಧ್ವ ಸಮಾಜದಲ್ಲಿ ವಿಶೇಷ ಖ್ಯಾತಿಯನ್ನು ಪಡೆದ ಭಂಡಾರಿಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು ಐವತ್ತನೆ ವರ್ಷದ ವರ್ಧಂತಿಯನ್ನು ವೇದಾಂತ ಪೀಠಾರೋಹಣ ರಜತೋತ್ಸವವನ್ನು ಆಚರಿಸುತ್ತಿರುವುದು ನಮ್ಮೆಲ್ಲರಿಗೂ ವಿಶೇಷವಾಗಿ ಸಂತೋಷದಾಯಕವಾಗಿದೆ. ನಮ್ಮ ಪರಮೇಷ್ಠಿ ಗುರುಗಳಾದ ಶ್ರೀಮತ್ ಸತ್ಯಧ್ಯಾನತೀರ್ಥ ಗುರುಗಳ ವಿದ್ಯಾಶಿಷ್ಯರಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದಂಗಳವರ ಶಿಷ್ಯರಾದ  ಕಾರಣ ವಿದ್ಯೇಶತೀರ್ಥ ಶ್ರೀಪಾದಂಗಳವರಿಗೂ ನಮಗೂ ಘನಿಷ್ಠವಾದ ಆತ್ಮೀಯವಾದ ವಿದ್ಯಾಬಾಂಧವ್ಯವೂ ಇದೆ ಎನ್ನುವುದನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ. ಇದರಂತೆ ನೂರು ವರ್ಷದ ವರ್ಧಂತಿಯೂ ಜರಗುವಂತೆ ನಮ್ಮ ಉಪಾಸ್ಯಮೂರ್ತಿಯಾದ ಶ್ರೀಮೂಲರಾಮ ದಿಗ್ವಿಜಯರಾಮ ವೇದವ್ಯಾಸದೇವರಲ್ಲಿ ಪ್ರಾರ್ಥಿಸುತ್ತೇವೆ.

ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು
ಉತ್ತರಾದಿ ಮಠಾಧೀಶರು

ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಪದವಾಕ್ಯಪ್ರಮಾಣ ಪಾರಾವಾರಪಾರಂಗತ
ಸರ್ವತಂತ್ರಸ್ವತಂತ್ರ ಶ್ರೀಮದ್ವೈಷ್ಣವಸಿದ್ಧಾಂತಪ್ರತಿಷ್ಠಾಪನಾಚಾರ್ಯ
ಶ್ರೀಮನ್ಮೂಲರಘುಪತಿವೇದವ್ಯಾಸದೇವದಿವ್ಯಶ್ರೀಪಾದಪದ್ಮಾರಾಧಕ
ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನಧೀಶ್ವರರಾದ
ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ
ವೇದಾಂತಸಾಮ್ರಾಜ್ಯದಿಗ್ವಿಜಯವಿದ್ಯಾಸಿಂಹಾಸನಾಧೀಶ್ವರಾದ
ಶ್ರೀಮತ್ಸುಯಮೀಂದ್ರತೀರ್ಥ ಶ್ರೀಪಾದಂಗಳವರ ಕರಕಮಲಸಂಜಾತರಾದ
ಶ್ರೀಮತ್ಸುಜಯೀಂದ್ರತೀರ್ಥ ಶ್ರೀಪಾದಂಗಳವರ ವರಕುಮಾರಕರಾದ
ಶ್ರೀಮತ್ಸುಶಮೀಂದ್ರತೀರ್ಥ ಶ್ರೀಪಾದಂಗಳವರು
ಮಾಡುವ ನಾರಾಯಣ ಸ್ಮರಣೆಗಳು
    ನಮಗೆ ಪ್ರೀತ್ಯಾಸ್ಪದರಾದ ಭಂಡಾರಕೇರಿಮಠಾಧೀಶರ ಅಭಿಮಾನಿವರ್ಗದವರಿಗೆ ಮಾಡುವ ನಾರಾಯಣಸ್ಮರಣೆಗಳು. ನಾವು ಗುರುದೇವತಾನುಗ್ರಹ ಬಲದಿಂದ ಸ್ನಾನ, ಜಪ, ತಪ, ದೇವಪೂಜಾ, ಪಾಠ-ಪ್ರವಚನ, ಸಿದ್ಧಾಂತಸ್ಥಾಪನಾದಿ ಕಾರ್ಯಾನುಷ್ಠಾನನಿರತರಾಗಿ ನಿಮಗೆ ಶ್ರೇಯೋಭಿವೃದ್ಧ್ಯರ್ಥವಾಗಿ ಶ್ರೀಮನ್ಮೂಲರಘಿಪತಿ ವೇದವ್ಯಾಸರ ಪ್ರಾರ್ಥನೆ ಮಾಡುತ್ತಾ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ ಸನ್ನಿಧಾನವಾದ ಮಂತ್ರಾಲಯ ಕ್ಷೇತ್ರದಲ್ಲಿ ಪರಿಣಾಮದಲ್ಲಿದ್ದೇವೆ.
    ಪ್ರಕೃತ, ಭಂಡಾರಕೇರಿ ಮಠಾದೀಶರು ೫೦ನೇ ವರ್ದಂತಿ ಹಾಗೂ ಸನ್ಯಾಸ ಸ್ವೀಕರಿಸಿ ೨೫ ಸಂವತ್ಸರಗಳನ್ನು ಕಂಡಿರುವ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರನ್ನು ಬೆಂಗಳೂರಿನ ನಾಗರಿಕರೆಲ್ಲರೂ ಸೇರಿ ಸನ್ಮಾನಿಸುತ್ತಿರುವುದು ನಮಗೆ ಅತೀವ ಸಂತೋಷವನ್ನುಂಟುಮಾಡಿದೆ. ಶ್ರೀ ವಿದ್ಯೇಶತೀರ್ಥರು, ಶ್ರೀವಿದ್ಯಾಮಾನ್ಯತೀರ್ಥರಲ್ಲಿ ವಿದ್ಯಾಭ್ಯಾಸ ಮಾಡಿ ಮಧ್ವಸಿದ್ಧಾಂತ ಪ್ರಚಾರವನ್ನು ಮಾಡುತ್ತಾ, ಯುವಕರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತಿರುವುದಷ್ಟೇ ಅಲ್ಲದೆ, ಭಾರತದೇಶಾದ್ಯಂತ ಭಾಗವತ ಪ್ರವಚನಗಳನ್ನು ನೆರವೇರಿಸುತ್ತಾ, ತಮ್ಮ ಸಾರ್ಥಕ ಸಂನ್ಯಾಸ ಜೀವನವನ್ನು ಸಾಗಿಸುತ್ತಿದ್ದಾರೆ. ಇಡೀ ಭಾರತದಲ್ಲೇ ವ್ಯಾಕರಣಶಾಸ್ತ್ರದಲ್ಲಿ ಕೇವಲ ಕೆಲವೇ ಪಂಡಿತರುಗಳಲ್ಲಿ ಇವರು ಅಗ್ರಮಾನ್ಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಶ್ರೀಪಾದಂಗಳವರ ೫೦ ನೇ ಜನ್ಮದಿನೋತ್ಸವ ಹಾಗೂ ಸಂನ್ಯಾಸ ಸ್ವೀಕಾರಮಾಡಿ ೨೫ ವರ್ಷಗಳು ಸಂದ ಎರಡೂ ಕಾರ್ಯಕ್ರಮಗಳು ತುಂಗಾ ಮತ್ತು ಭದ್ರಾ ನದಿಗಳ ಸಂಗಮದಂತೆ ಒಟ್ಟಿಗೇ ಕೂಡಿ ಬಂದಿರುವುದು ಅವರ ಶಿಷ್ಯರೆಲ್ಲರಿಗೂ ಆನಂದವನ್ನುಂಟು ಮಾಡಿದೆ. ಈ ತುಂಗಾಭದ್ರಾ ಸಂಗಮಗಳ ಪ್ರವಾಹಗಳ ಸಂಭ್ರಮದಲ್ಲಿ ಸಕಲರೂ ಮಿಂದು ಭಗವದನುಗ್ರಹವನ್ನು ಸಂಪಾದಿಸುವಂತಾಗಲಿ. ಈ ಕಾರ್ಯಕ್ರಮದ ಸಂಸ್ಮರಣಾರ್ಥ ಹೊರಬರುತ್ತಿರುವ ಸ್ಮರಣ ಸಂಚಿಕೆಯು ಅಂದವಾಗಿ ಮೂಡಿಬಂದು ಅಂಧಕಾರವನ್ನು ನೀಗಿಸಿ, ದಿವ್ಯಜ್ಞಾನಜ್ಯೋತಿಯನ್ನು ನೀಡುವಂತಾಗಲಿ ಹಾಗೂ ಶ್ರೀವಿದ್ಯೇಶತೀರ್ಥಶ್ರೀಪಾದಂಗಳವರು ಶತಮಾನೋತ್ಸವವನ್ನು ಆಚರಿಸುಕೊಳ್ಳುವಂತಾಗಲಿ ಎಂದು ನಮ್ಮ ಉಪಾಸ್ಯಮೂರ್ತಿಯಾದ ಶ್ರೀಮೂಲರಘುಪತಿ ವೇದವ್ಯಾಸ ದೇವರಲ್ಲಿ ತಥಾ ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರಲ್ಲಿ ಪ್ರಾರ್ಥಿಸುತ್ತೇವೆ.
ಇತಿ ನಾರಾಯಣ ಸ್ಮರಣೆಗಳು  
ಶ್ರೀಮತ್ಸುಶಮೀಂದ್ರತೀರ್ಥ ಶ್ರೀಪಾದಂಗಳವರು

ಶ್ರೀ ವಿದ್ಯಾಧೀಶ ತೀರ್ಥರು
ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್
ಫಲಿಮಾರು ಮಠ, ಉಡುಪಿ
    ಶ್ರೀ ವಿದ್ಯೇಶ ತೀರ್ಥರು ಐದು ದಶಕಗಳಲ್ಲಿ ನಮ್ಮ ಮಾಧ್ವ ಸಮಾಜಕ್ಕೆ ದಶಪ್ರಮತಿಗಳ ಸರ್ವಮೂಲವನ್ನು ಬಿಡಿಸಿ ಈ ಯುಗವನ್ನು ಸುವರ್ಣಮಯವಾಗಿಸಿದ್ದಾರೆ. ಹಾಗಾಗಿ ಶ್ರೀ ವಿದ್ಯೇಶ ತೀರ್ಥರ ಐವತ್ತರ ಹುಟ್ಟುಹಬ್ಬ ಅವರಿಗೆ ಮಾತ್ರ ಸುವರ್ಣೋತ್ಸವವಲ್ಲ ಸಮಗ್ರ ಮಾಧ್ವ ಸಮಾಜಕ್ಕೇನೆ ನಿಜವಾದ ಸುವರ್ಣೋತ್ಸವ. ಗೀತೆಯಲ್ಲಿ ಭಗವಂತ "ಮೋಘಂ ಪಾರ್ಥ ಸ ಜೀವತಿ" ಎಂದು ಅಪ್ಪಣೆ ಕೊಡಿಸಿದಂತ ಇಂದ್ರಿಯಾರಾಮದ ನಮ್ಮ ಜೀವನ ಮೋಘವಾಗಬಾರದು. ಘೋರ ತಪಸ್ಸಿನ ಅಮೋಘ ಜೀವನವಾಗಬೇಕು. "ವಾಚಿಕೋ ಮಾನಸೋ ಯಜ್ಞೋ ನ್ಯಾಸಿನಾಂ ತು ವಿಶೇಷತಃ" ಎಂದು ನಾರದೀಯ ಪುರಾಣ ಹೇಳುವಂತೆ ಸನ್ಯಾಸಿಗಳಿಗೆ ವಾಚಿಕ, ಮಾನಸ ಯಜ್ಞವೇ ನಿಜವಾದ ಘೋರ ತಪಸ್ಸು. ನಿರಂತರ ಚಿಂತನ-ಮಂಥನಗಳ ಮಾನಸ ಯಜ್ಞ ಪಾಠ-ಪ್ರವಚನಗಳ ವಾಚಿಕ ಯಜ್ಞಕ್ಕಿಂತ ಇವುಗಳಿಗಿಂತ ಇನ್ನೊಂದು ತಪಸ್ಸು ಸನ್ಯಾಸಿಗಳಿಗಿಲ್ಲ. ಈ ಪವಿತ್ರವಾದ ಘೋರ ತಪಸ್ಸು ಭಂಡಾರಕೇರಿ ಮಠಾಧೀಶರಿಗೆ ನೀರಲ್ಲಿರುವ ಮೀನಿಗೆ ಈಜಿನಂತೆ ಸಹಜ ಸಿದ್ಧವಾದದ್ದು. ಪಾಠ-ಪ್ರವಚನಕ್ಕಾಗಿ ವಿದ್ವಾಂಸರ ಪೋಷಣೆಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟವರು. ನಿಶಿತವಾದ ಮತಿ, ಹರಿತವಾದ ಲೇಖನಗಳಿಂದ ಶಾಸ್ತ್ರದ ಸಾರವನ್ನೇ ನಮ್ಮ ಬಿಡುಭಾಢೆಯಲ್ಲಿ ಜನತೆಗೆ ಮುಟ್ಟಿಸಿದ್ದಾರೆ. ನಮ್ಮ ಗುರುಗಳಂತೆ ಒಂದು ಶ್ಲೋಕಕ್ಕೆ ಹತ್ತಾರು ರೀತಿಯಲ್ಲಿ ವಿಶ್ಲೇಷಣೆ ಮಾಡುವುದು ಅವರ ಕುಶಾಗ್ರಮಿತಗೆ ಒಂದು ಸುಂದರ ನಿದರ್ಶನ. ಐವತ್ತು ವರ್ಷದ ನಿಜವಾದ ಯುವಕ ಶ್ರೀವಿದ್ಯೇಶತೀರ್ಥರು. ಶರೀರದ ಯೌವನ ಬೇರೆ, ಮಾನಸ  ಯೌವನ ಬೇರೆ. "ಯುವಾಸ್ಯಾತ್ ಸಾಧು ಯುವಾ ಅಧ್ಯಾಯಕಃ". ಯಾರು ನಿರಂತರ ಅಧ್ಯಯನ ಶೀಲನೋ ಅವನು ನಿಜವಾದ ಯುವಕ. ಯುವಕನಾಗಿದ್ದರೂ ಅಧ್ಯಯನ-ಅಧ್ಯಾಪನ ನಡೆಸದಿದ್ದರೆ ಅವನು ಮುದುಕನೇ ಸರಿ. ಶ್ರೀಪಾದರ ಈ ಸುವರ್ಣ ಮಹೋತ್ಸವದ ನಿಜವಾದ ಸುವರ್ಣ ವೃಷ್ಟಿ ನಿರಂತರ ಸುರಿಯಲಿ. ಸುವರ್ಣಬಾಲೆ ಸತತ ಹರಿಯಲಿ. ಶ್ರೀಪಾದರ ಸುವರ್ಣ ಬಾಳು ಸದಾ ಮೆರೆಯಲಿ. ಇದೇ ನಮ್ಮೆಲ್ಲರ ಹರಕೆ. ಇದೇ ಹರಿ-ಗುರುಗಳಲ್ಲಿ ನಮ್ಮೆಲ್ಲರ ಕೋರಿಕೆ.
    ಸಪ್ರೇಮ ನಾರಾಯಣ ಸ್ಮರಣೆಗಳು
ಶ್ರೀ ವಿದ್ಯಾಧೀಶ ತೀರ್ಥರು
ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್
ಫಲಿಮಾರು ಮಠ, ಉಡುಪಿ


ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥಸ್ವಾಮೀಜಿ
ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ,
ಶ್ರೀ ಸಂಪುಟನರಸಿಂಹಸ್ವಾಮಿ,
ಸುಬ್ರಹ್ಮಣ್ಯ ಮಠ
 ಸುಬ್ರಹ್ಮಣ್ಯ - ೫೭೪೨೩೮, ದಕ್ಷಿಣ ಕನ್ನಡ
೧೪.೧೨.೨೦೦೫
    ಸುಬ್ರಹ್ಮಣ್ಯ  ಮಠಾಧೀಶರು ಆದ ಶ್ರೀ ವಿದ್ಯಾಪ್ರಸನ್ನತೀರ್ಥರು ಇವರು ವಿದ್ಯೇಶತೀರ್ಥರ ರಜತಪೀಠಾರೋಹಣದ ಸಂದರ್ಭದಲ್ಲಿ ಕಳುಹಿಸಿದ ಅನುಗ್ರಹ ಸಂದೇಶ !
    ವಿದ್ಯೇಶತೀರ್ಥ ಶ್ರೀಪಾದಂಗಳವರು ಶ್ರೀ ಭಂಡಾರಿಕೇರಿ ಮಠ ಇವರ ಸಂನ್ಯಾಸದೀಕ್ಷೆಯ ೨೫ನೇ ವರ್ಷದ ಆಚರಣೆ ಮತ್ತು ೫೦ನೇ ವರ್ಧಂತೋತ್ಸವದ ಆಚರಣೆ ಬೆಂಗಳೂರಿನಲ್ಲಿ ಈ ತಿಂಗಳ ಕೊನೆಯದಿನಾಂಕದಂದು ನಡೆಯುತ್ತಿರುವ ವಿಚಾರ ತಿಳಿದು ತುಂಬಾ ಸಂತೋಷವಾಯಿತು.
    ಪೂಜ್ಯರಾದ ಶ್ರೀಗಳ ಜೀವನದ ಇಷ್ಟು ಅವಧಿಯೂ ಸಾರ್ಥಕವಾದದ್ದು. ಬಾಲ್ಯದಿಂದಲೂ ಶ್ರೀಗಳು ನಿತ್ಯಾನುಷ್ಠಾನದಲ್ಲೂ ಅಧ್ಯಯನದಲ್ಲೂ ತುಂಬಾ ನಿಷ್ಠಾವಂತರು. ಆಶ್ರಮದ ತರುವಾಯ ಅವರ ಅನುಷ್ಠಾನಾಧ್ಯಯನಾದಿಗಳು ಇನ್ನಷ್ಟು ತೀವ್ರವಾಯಿತು. ಅಗಾಧ ಪಾಂಡಿತ್ಯ, ತಪಸ್ಸು ಇತ್ಯಾದಿಗಳಿಂದ ಅವರು ಮಾಡಿದ ಸಾಧನೆ ಅಪಾರ.
    ಶಾಸ್ತ್ರಗಳಲ್ಲಿ ಒಂದೊಂದು ಪದಕ್ಕೂ ಅವರು ನೀಡುವ ಅನೇಕಾರ್ಥಗಳು ಅಪೂರ್ವವಾದವುಗಳು. ವಿಶಿಷ್ಟವಾದವುಗಳು. ಭಾಗವತ ಪುರಾಣವನ್ನು ಮನೆಮನೆಗೂ ತಲುಪಿಸುವ ಅವರ ಪ್ರಯತ್ನ ವೇದವ್ಯಾಸರಿಗೆ ಅತ್ಯಂತ ಪ್ರೀತುಕರವಾದ ಸೇವೆ.
    ಈ ಸಂದರ್ಭದಲ್ಲಿ ಸನ್ಯಾಸ ಸ್ವೀಕಾರದ ಬೆಳ್ಳಿ ಮಹೋತ್ಸವವನ್ನು ಮತ್ತು ಜನ್ಮಾನಂತರದ ೫೦ ನೇ ವರ್ಧಂತ್ಸುತ್ಸವವನ್ನು ಆಚರಿಸುವುದು ಅತ್ಯಂತ ಪ್ರಸ್ತುತ. ಸಮಿತಿಯವರ ಪ್ರಯತ್ನ ಸಾರ್ಥಕವಾಗಲಿ. ಶ್ರೀಗಳಿಗೆ ದೀರ್ಘಾಯುರಾರೋಗ್ಯ ಭಾಗ್ಯವನ್ನು ಪ್ರಾರ್ಥಿಸುತ್ತೇವೆ.
ಇತಿ ನಾರಾಯಣ ಸ್ಮರಣೆಗಳು
ವಿದ್ಯಾಪ್ರಸನ್ನತೀರ್ಥರು
ಸುಬ್ರಹ್ಮಣ್ಯಮಠ