ಅನುಸಂಧಾನದ ಮಹಾಪೂರವನ್ನು ಸುರಿಸಬಲ್ಲ 'ಪ್ರೀಣಯಾಮೋ ವಾಸುದೇವಂ....'
- ಶ್ರೀ ಸಗ್ರೀ ರಾಘವೇಂದ್ರ ಉಪಾದ್ಯಾಯ, ಉಡುಪಿ
ದ್ವಾರಕೆಯಿಂದ
ತಮ್ಮ ಸೇವೆಯನ್ನು ಸ್ವೀಕರಿಸುವುದಕ್ಕಾಗಿಯೇ ಚಿತ್ತೈಸಿದ ಶ್ರೀಕೃಷ್ಣನ ದಿವ್ಯ
ವಿಗ್ರಹವನ್ನು ಹೊತ್ತುಕೊಂಡು ಸಮುದ್ರದ ದಡದಿಂದ (ಮಲ್ಪೆಯಿಂದ) ಉಡುಪಿಯತ್ತ
ಪಯಣಿಸುತ್ತಿದ್ದಾಗ ಶ್ರೀಮಧ್ವ ಗುರುಗಳ ದರ್ಶನಕ್ಕೆ ಗೋಚರಿಸಿದವುಗಳೆಂದು
ಪ್ರಸಿದ್ಧವಾದವು. ದ್ವಾದಶಸ್ತೋತ್ರಗಳು. ಆದುದರಿಂದಲೇ ಅವು ಮಂತ್ರತುಲ್ಯವಾದವು.
ಮಂತ್ರಗಳಿಂದ ಹೇಗೋ ಹಾಗೆ ಅವುಗಳ ಮಾತುಗಳಿಂದಲೂ ಅನುಸಂಧಾನಕ್ಕೆ ಪೋಷಕವಾಗಿ ಬೇರೆ ಬೇರೆ
ಅರ್ಥಗಳನ್ನು ಹೊರಡಿಸಬಹುದು.
ಪ್ರೀಣಯಾಮೋ ವಾಸುದೇವಂ.....
ಈ ವಿಚಾರ ಉತ್ತಮ ದೃಷ್ಟಾಂತ '
ವಂದಿತಾಶೇಷ.....' ಇತ್ಯಾದಿಯಾಗಿ ಪ್ರಾರಂಭವಾಗುವ ಎಂಟನೇ ದ್ವಾದಶಸ್ತೋತ್ರದ ಪಲ್ಲವಿಯ
ರೂಪದಲ್ಲಿರುವ 'ಪ್ರೀಣಯಾಮೋ ವಾಸುದೇವಂ ದೇವತಾ ಮಂಡಲಾಖಂಡಮಂಡಾನಮ್' ಎನ್ನುವ ಮಾತು
ಸಾಮಾನ್ಯವಾಗಿ ಎಲ್ಲರ ಬಾಯಿಯಲ್ಲೂ ಗುನುಗುನಿಸುತ್ತಿರುವ ಈ ಮಾತಿನಿಂದ ನಮ್ಮ ಸಾಧನೆಯ
ಅನೇಕ ಮುಖಗಳಿಗೆ ಸಂಬಂಧ ಪಡುವಂತೆ ಅನುಸಂಧಾನವನ್ನು ತಂದುಕೊಳ್ಳಬಹುದು.
೧. ಮುಕ್ತಿದಾತೃವಿನ ಅನುಸಂಧಾನ
'.....ಪರಮಸ್ಸ ತು ವಾಸುದೇವ ನಾಮಾ ಬಭೂವ
ನಿಜಮುಕ್ತಿ ಪದ ಪ್ರದಾತಾ' - ಎಂದು ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ (೧-೬)
ತಿಳಿಸಿರುವಂತೆ ಭಗವಂತನ ವಾಸುದೇವರೂಪದ ಪ್ರಾದುರ್ಭಾವವಾದದ್ದೇ ಯೋಗ್ಯ ಅಧಿಕಾರಿಗಳಿಗೆ
ಮೋಕ್ಷವನ್ನು ಅನುಗ್ರಹಿಸುವುದಕ್ಕಾಗಿ. ಆದುದರಿಂದ ಸಾಧಕರು ತಾವು ಯಾವುದೋ ಸಾಧನೆಯನ್ನು
ನಡೆಸಿದರೂ ಅದರ ಪರಮಲಕ್ಷ್ಯವನ್ನಾಗಿ ಮೋಕ್ಷವನ್ನೇ ಇಟ್ಟುಕೊಳ್ಳಬೇಕಾದುದರಿಂದ ತಮ್ಮ
ಮೂಲಕ ಯಾವುದೇ ಸಾಧನೆ ನಡೆಯಲಿ ಅದನ್ನು ಮೋಕ್ಷದಾತೃ ವಾಸುದೇವನ ಹೆಸರನ್ನು ಉಲ್ಲೇಖಿಸಿ,
ಅವನ ಪ್ರೀತಿಗಾಗಿ, ಅವನ ಪ್ರೀತಿಗೆ ಪಾತ್ರನಾಗಿ ಅವನಿಂದ ಅನುಗ್ರಹಿಸಲ್ಪಡುವ ಮೋಕ್ಷ
ಪುರುಷಾರ್ಥಕ್ಕಾಗಿ ನಡೆಸುತ್ತಿದ್ದೇನೆ ಎಂಬ ಅನುಸಂಧಾನಕ್ಕೆ ಪೂರಕವಾಗಿ 'ಪ್ರೀಣಯಾಮೋ
ವಾಸುದೇವಂ ದೇವತಾಮಂಡಲಾಖಂಡಮಂಡಾನಮ್' ಎಂದು ಸ್ತುತಿಸುತ್ತಿರಬೇಕು.
೨. ನಿರ್ಮಲಾಂತಃಕರಣದಲ್ಲಿರುವವನ ಅನುಸಂಧಾನ
'ಸಾತ್ತ್ವಂ ಪಾವೃತಃ.....' ಎಂದು
ಭಾಗವತದಲ್ಲಿ (೪-೩-೨೩) ರುದ್ರದೇವರು ತಿಳಿಸುವಂತೆ ಪ್ರತಿಯೊಬ್ಬ ಸಾತ್ವಿಕನ
ನಿರ್ಮಲಾಂತಃಕರಣವೇ ವಸುದೇವ ಎನಿಸಿದ್ದು, ಅದರಲ್ಲಿ ವಿಶೇಷವಾಗಿ
ಅಭಿವ್ಯಕ್ತನಾಗಿರುವುದರಿಂದಲೇ ಭಗವಂತನು 'ವಾಸುದೇವ; - ಎನಿಸಿವನು. ಅಂದರೆ
ನಿರ್ಮಲಾಂತಃಕರಣದಲ್ಲಿ ಕಾಣಿಸಿಕೊಳ್ಳುವವನು ವಾಸುದೇವ.
ಯಾವುದೇ ಸಾಧನೆ ನಮ್ಮ ಮೂಲಕ ನಡೆಯುವಾಗ,
ಆ ಸಾಧನೆಗೆ ಪ್ರೇರಕನಾಗಿ ನಮ್ಮ ಅಂತಃಕರಣದಲ್ಲಿ ವಿಶೇಷವಾಗಿ ಅಭಿವ್ಯಕ್ತನಾಗಿ ನಮ್ಮ
ಮೂಲಕ ಆ ಸಾಧನೆಯನ್ನು ನಡೆಸುತ್ತಿರುವನೆಂಬ ಅನುಸಂಧನದೊಂದಿಗೆ ; ಪ್ರೀಣಯಾಮೋ
ವಾಸುದೇವಂ.....' ಎಂದು ಸ್ತುತಿಸಬೇಕು.
೩. ಶ್ರೀ ಮಧ್ವರ ಸಂಪರ್ಕದ ಅನುಸಂಧಾನ
ಶ್ರೀಮಧ್ವರ ಪೂರ್ವಾಶ್ರಮದ ವಾಸುದೇವ ಎಂಬ
ಹೆಸರಿನ ಔಚಿತ್ಯವನ್ನು ಮಧ್ವ್ ವಿಜಯದಲ್ಲಿ (೨-೨೯) ಸಮರ್ಥಿಸುತ್ತಾ' ಜ್ಞಾನಾರ್ಥಮೇವ
ಯದಭೂದ ಸುದೇವ ಏಷಃ.....' ಎಂಬ ಮಾತಿನಲ್ಲಿ ಜ್ಞಾನ ಪ್ರಚಾರಕ್ಕಾಗಿ ಬಂದ 'ಅನು' ಪ್ರಾಣ
ದೇವನೇ 'ವಾಸು' - ಎಂದು ಸೂತಿತವಾಗುವುದು. ಅಂದರೆ ದೇವರ ಸರಿಯಾದ ಮಾಹಿತಿಯನ್ನು ನೀಡಲು
ಬಂದ ಪ್ರಾಣದೇವರ ಶ್ರೀಮಧ್ವರೂಪವು ' ವಾಸು' ಎನಿಸುವುದು. ಅಂತಹ ಶ್ರೀಮಧ್ವರಿಂದ
ಬೆಳಗಿಸಲ್ಪಟ್ಟ ಭಗವಂತ (ವಾಸುನಾ ದೀವ್ಯತೇ ದೀಪ್ಯತೇ ಇತಿ ವಾಸುದೇವಃ) ನೇ ವಾಸುದೇವ.
ಅಂದರೆ ಶ್ರೀಮಧ್ವರು ತಮ್ಮ ಸರ್ವಮೂಲ ಗ್ರಂಥಗಳಿಂದ ಪ್ರತಿಷ್ಠಾಪಿಸಲ್ಪಟ್ಟ
ವ್ಯಕ್ತಿತ್ವವುಳ್ಳ ಭಗವಂತನೇ ವಾಸುದೇವ. ಅಂತಹ ವಾಸುದೇವನ ಅನುಸಂಧಾನದೊಂದಿಗೆ
'ಮಧ್ವಾಂತರ್ಗತ ಲಕ್ಷ್ಮೀನಾರಾಯಣ' ಎನ್ನುವಂತೆ, ಶ್ರೀ ಮಧ್ವರ ಸ್ಮರಣೆಗೆ ಪೋಷಕವಾಗಿ
ಯಾವುದೇ ಸಾಧನೆ ನಡೆದಾಗ ' ಪ್ರೀಣಯಾಮೋ ವಾಸುದೇವಂ.....' ಎಂದು ಸ್ತುತಿಸಬೇಕು.
೪. ಉಡುಪಿ ಶ್ರೀಕೃಷ್ಣನ ಅನುಸಂಧಾನ
'ಸಿದ್ಧಿ ವಿಘ್ನ ಮುಖದೋಷಭೇಷಜಂ.....'
ಎಂದು ಮಧ್ವ ವಿಜಯದಲ್ಲಿ (೯-೪೦) ಉಲ್ಲೇಖಗೊಂಡಂತೆ ಉಡುಪಿ ಶ್ರೀಕೃಷ್ಣ ಮೋಕ್ಷ ಸಾಧಕರ
ವಿಘ್ನಾದಿದೋಷಪರಿಹಾರಕನಾಗಿ ಶ್ರೀ ಮಧ್ವರಿಂದ ಪ್ರತಿಷ್ಠಿತನಾಗಿರುವವನು. ನಮ್ಮ ಮೂಲಕ
ಯಾವುದೇ ಸಾಧನೆ ನಡೆದಾಗ ಅದು ಮೋಕ್ಷಕ್ಕೆ ಪೂರಕವಾಗಿ ನಡೆಯಲೆಂಬ ಭಾವನೆಯಿಂದ ಉಡುಪಿ
ಶ್ರೀಕೃಷ್ಣನನ್ನು ವಿಶೇಷವಾಗಿ ನೆನೆಯುತ್ತಿರಬೇಕು. ಹಿಂದೆ ತೋರಿಸಿದಂತೆ ವಾಸು ಎಂದರೆ
ಜ್ಞಾನದ ಸ್ಥಾಪನೆಗಾಗಿ ಬಂದ ಅಸುವಿನ ಅವತಾರರಾದ ಶ್ರೀಮಧ್ವರು. ಅವರಿಂದ ವಿಶೇಷವಾಗಿ
ಸ್ತುತಿಸಲ್ಪಡುವ ( ವಾಸುನಾ ದೀವ್ಯತೇ ಸ್ತೂಯತೇ ಇತಿ ವಾಸುದೇವಃ) ಉಡುಪಿ ಶ್ರೀಕೃಷ್ಣನೇ
ವಾಸಿದೇವ. ಈ ಅನುಸಂಧಾನದೊಂದಿಗೆ ನಮ್ಮ ಮೂಲಕ ನಡೆಯುಅವ ಪ್ರತಿಯೊಂದು ಸಾಧನೆಯನ್ನೂ
ಉಡುಪಿ ಶ್ರೀಕೃಷ್ಣನಿಗೆ ಅರ್ಪಿಸುವ ಅನುಸಂಧಾನಕ್ಕೆ ಪೋಷಕವಾಗಿ ' ಪ್ರೀಣಯಾಮೋ
ವಾಸುದೇವಂ.....' - ಎಂದು ಸ್ತುತಿಸುತ್ತಿರಬೇಕು.
೫. 'ದೇವತಾಮಂಡಲಾಖಂಡಮಂಡನ' ದ ಅನುಸಂಧಾನ
ಪ್ರತಿಯೊಬ್ಬ ದೇವತೆಯ, ಪೂಜ್ಯ
ವ್ಯಕ್ತಿಗಳ ಅಂತರ್ಯಾಮಿಯಾಗಿರುವ ಭಗವಂತನಿಗೇ ಎಲ್ಲ ದೇವತೆಗಳ, ಪೂಜ್ಯರ ಗೌರವಾದರಗಳು
ಮಿಖ್ಯವಾಗಿ ಸಲ್ಲಬೇಕಾದದ್ದು. 'ಪ್ರಾಜ್ಞೈಃ ಪರಸ್ಮೈ ಪುರುಷಾಯ ಚೇತಸಾ ಗುಹಾಶಯಾಯೈವ ನ
ದೇಹಮಾನಿನೇ' - ಎಂದು ಶ್ರೀ ರುದ್ರದೇವರು ಜ್ಞಾನಿಗಳ ಈ ಬಗೆಯ ನಡೆತೆಯನ್ನು
ಉಲ್ಲೇಖಿಸಿರುವುರು. ಅಂದರೆ ಯಾವುದೇ ದೇವತೆಯಾಗಲೀ, ಗುರು ಮುಂತಾದ ಪೂಜ್ಯರಿಗಾಗಲಿ
ಗೌರವಾದರಗಳನ್ನು ಸಲ್ಲಿಸುವಾಗ, ಅಂತಹ ಗೌರವಾದರಕ್ಕೆ ಪಾತ್ರವಾಗ ಬಲ್ಲ ಅವರ
ವ್ಯಕ್ತಿತ್ವವನ್ನು ಬೆಳಗಿಸುವವನು ಅವರ ಅಂತರ್ಯಾಮಿಯಾದ ಭಗವಂತನೆಂಬ ಅನುಸಂಧಾನ ಇರಬೇಕು.
ಭಗವಂತನ ' ವಾಸಿದೇವ ನಾಮದಿಂದ ಈ ಅನುಸಂಧಾನ ತಂದುಕೊಳ್ಳಬಹುದು'. 'ವಸು' - ಎಂಬ ಶಬ್ದ
ದೇವತಾಸಾಮಾನ್ಯವಾಚಕವಾಗಿಯೂ ಇದೆ ಎಂದು ಶ್ರೀ ಮಧ್ವರು ತಿಳಿಸಿರುವರು. ಆದ್ದರಿಂದ
ವಸುಗಳ, ದೇವತೆಗಳ ಸಮೂಹ ವಾಸು (ವಸೂನಾಮಿದಂ ಜಾತಂ ವಾಸು) 'ತಾದೃಶಂ ವಾಸು ದೇವಯತಿ
ಅಂತರ್ಯಾಮೀ ಭೂತ್ವಾ ದೀಪಯತೀತಿ ವಾಸುದೇವಃ' (ದಿವ ದೀಪ್ತೌ) ಎಂಬ ನಿರ್ವಚನ ಪ್ರಕಾರ
ದೇವತೆಗಳ ಹಾಗೂ ಪೂಜ್ಯತ್ವದಲ್ಲಿ ದೇವತೆಗಳಿಗೆ ಸಮಾನರಾದ್ ಗುರು, ತಂದೆ, ತಾಯಿ
ಇತ್ಯಾದಿಗಳ ವ್ಯಕ್ತಿತ್ವವನ್ನು ಬೆಳಗಿಸುವ ಅವರ ಅಂತರ್ಯಾಮೀ ಭಗವಂತನೇ ವಾಸುದೇವ ಎಂಬ
ಅನುಸಂಧಾನದಿಂದ 'ಪ್ರೀಣಯಾಮೋ ವಾಸುದೇವಂ ದೇವತಾ ಮಂಡಲಾಖಂಡ ಮಂದಾನಮ್' ಎಂದು
ಸ್ತುತಿಸುತ್ತಿರಬೇಕು. ದೇವತ್ಗಳ ಸಮೂಹಕ್ಕೆ ಮುಖ್ಯವಾದ ಅಲಂಕಾರ ಎಂಬ ಅರ್ಥದ
'ದೇವತಾಮಂಡಲಾಖಂಡಮಂಡಾನಮ್' - ಎಂಬ ವಿಶೇಷಣ ವಾಸುದೇವನಾಮದ ಈ ಅನುಸಂಧಾನಕ್ಕೆ
ಪೋಷಕವೆನಿಸಬಲ್ಲದು.
ವಾಸುದೇವನಾಮಕ್ಕೆ ಈ ರೀತಿಯಾಗಿ ದೇವತೆಗಳ
ಗಡಣವನ್ನು ಬೆಳಗಿಸುವವನೆಂಬ ಅರ್ಥ ಹೊರಡಿಸಿದಲ್ಲಿ, ಆ ರೀತಿಯಾಗಿ ಬೆಳಗಿಸಿ, ಅವರು
ಇಂದ್ರಿಯವೇ ಮುಂತಾದ ತತ್ತ್ವಭಿಮಾನಿಗಳಾಗಿ ನಮಗೆ ಉಪಕರಿಸುತ್ತಿರುವಂತೆ
ಪ್ರೇರಿಸುವವನೆಂಬ ಅರ್ಥದ ಧ್ವನಿಯೂ ಹೊರಟು ಆ ಮೂಲಕ 'ಪ್ರೀಣಯಾಮೋ ವಾಸುದೇವಂ....' ಎಂಬ
ಮಂತ್ರದಿಂದ ತತ್ತ್ವಾಭಿಮಾನಿಗಳ ಅನುಸಂಧಾನವನ್ನು ತಂದುಕೊಂಡಂತಾಗಬಲ್ಲದು.
ಅನುಸಂಧಾನದ ಜಾಗೃತಿಗೆ ವಿನಿಯೋಗ
ಹೀಗೆ ' ಪ್ರೀಣಯಾಮೋ ವಾಸುದೇವಂ....'
ಎಂಬ ಮಾತನ್ನು ನಮ್ಮ ಸಾಧನಾನುಷ್ಠಾನಕ್ಕೆ ಬೇರೆ ಬೇರೆ ಬಗೆಯಾದ ಪೋಷಕವಾಗುವಂತೆ ಭಗವಂತನ
ಅನುಸಂಧಾನವನ್ನು ಜಾಗೃತಗೊಳಿಸಲು ಮಂತ್ರವನ್ನಾಗಿ ವಿನಿಯೋಗಿಸಿಕೊಳ್ಳಬಹುದು.