ಹರಿಮೇಧಾ
ಭಂಡಾರಕೇರಿ
ಮಠಾಧೀಶರಾದ ವಿದ್ಯೇಶತೀರ್ಥರ ಪೀಠಾರೋಹಣ ರಜತ ಮಹೋತ್ಸವ ಹಾಗೂ
ಸ್ವರ್ಣಜಯಂತ್ಯುತ್ಸವದ
ಸ್ಮರಣ ಸಂಚಿಕೆ
ಬಿಡುಗಡೆಯ
ದಿನಾಂಕ : ೩೧.೧೨.೨೦೦೫
ನಿವೇದನೆ
ಆಚಾರ್ಯ
ಮಧ್ವರ ಕಾಲದಿಂದಲೂ ಸಹ ಭಂಡಾರಕೇರಿ ಮಠದ ಸಂಸ್ಥಾನ ತನ್ನದೇ ಆದ ವೈಶಿಷ್ಟ್ಯ ಹಾಗೂ
ವೈಭವಗಳನ್ನು ಹೊಂದಿದೆ. ಆಚಾರ್ಯ ಮಧ್ವರು ಆದೇಶಿಸಿದಂತೆ ಯತ್ಯಾಶ್ರಮದ ಪ್ರಮುಖ
ಕರ್ತವ್ಯವು ವಿಷ್ಣು ಸರ್ವೋತ್ತಮತ್ವವನ್ನು ಎಲ್ಲಾ ಪ್ರಕಾರಗಳಲ್ಲಿ ಪ್ರತಿಪಾದಿಸುವುದು
ಹಾಗೂ ಪ್ರಸರಿಸುವುದು ಧ್ಯೇಯವಾಗಿದೆ.
''ವಿಷ್ಣೋ ಸ್ಸರ್ವೋತ್ತಮತ್ವಂ ಚ ಸರ್ವದಾ ಪ್ರತಿಪಾದಯ ''
ಈ ನಿಟ್ಟಿನಲ್ಲಿ ಭಂಡಾರಕೇರಿಮಠವು ಸಾಧಕರ - ತಪಸ್ವಿಗಳ ನಿಜವಾದ
ಭಂಡಾರವೇ ಆಗಿದೆ. ಭಕ್ತಿ-ಜ್ಞಾನ-ವಿರಕ್ತಿಗಳ ಭಂಡಾರ ಎನಿಸಿದ ಮಹಾನ್ ಯೋಫ್ಗಿಗಳು ಇಲ್ಲಿ
ಪೀಠವನ್ನಲಂಕರಿಸಿದ್ದಾರೆ. ಸತ್ಯತೀರ್ಥರು ಇಡೀ ಭಾಷ್ಯವನ್ನೇ ಸಮಗ್ರವಾಗಿ ಕೈಯಲ್ಲಿ
ಬರೆದು ದಾಖಲಿಸಿದ ಸಾಹಸಕ್ಕೆ ಸಾಕ್ಷಿಯಾದಂತೆ, ಮಧ್ವರು ಹಿಮಾಲಯದ ಶಿಖರಗಳನ್ನು
ಹಾರುತ್ತಾ ಬದರಿಗೆ ತೆರಳುವಾಗ ಸತ್ಯತೀರ್ಥರು ಅವರ ಹಿಂದೆಯೇ ಕೆಲಕಾಲ ತೆರಳಿದರು. ಹೀಗೆ
ಜ್ಞಾನಕಾರ್ಯದ ಸಾಹಸದಲ್ಲೂ - ಗುರುಭಕ್ತಿಯ ಧ್ಯೇಯದಲ್ಲೂ - ಅಷ್ಟೇ ಏಕೆ? ಸತ್ಯತೀರ್ಥರು
ಮೂರು ಬಾರಿ ಐತರೇಯ ಶಾಖಾಗಳ ಅರ್ಥಗಳನ್ನೆಲ್ಲಾ ಕೇಳಿ ಮನನ ಮಾಡಿದ ಮಹಿಮರು. ಹೀಗೆ
ಅರ್ಥಾನುಸಂಧಾನ - ಶ್ರವಣ -ಗುರುಭಕ್ತಿಪಾಲನಾ - ಗ್ರಂಥಸಂರಕ್ಷಣಾ ಎವೆಲ್ಲತರಲ್ಲೂ
ಸತ್ಯತೀರ್ಥರಿಗೆ ಸರಿಸಾಟಿಯಾಗಿ ನಿಲ್ಲುವವರಾರು?
ಹೀಗೆ ಸತ್ಸಂಪ್ರದಾಯಸಂರಕ್ಷಣೆ-ತತ್ವ ಪ್ರಸರಣೆಗಳಲಿ
ಹೆಸರುವಾಸಿಯಾದ ಮಠ ಜ್ಞಾನಭಂಡಾರಿಗಳಾದ ವಿರಕ್ತ ಶಿಖಾಮಣಿಗಳಾದ ವಿದ್ಯಾಮಾನ್ಯತೀರ್ಥರಿಂದ
ಇನ್ನೂ ವಿಶೇಷವಾಗಿ ಕಂಗೊಳಿಸಿತು. ವಿದ್ಯಾಮಾನ್ಯತೀರ್ಥರ ನೆಚ್ಚಿನ ಶಿಷ್ಯರಾಗಿ ಆ ಪೀಠದ
ಹಿರಿಮೆ ಎತ್ತಿ ಹಿಡಿದ ಭಾಗ್ಯ ವಿದ್ಯೇಶತೀರ್ಥರದ್ದಾಗಿದೆ.
ವಿದ್ಯಾಮಾನ್ಯತೀರ್ಥರ ಉತ್ತುಂಗಕೀರ್ತಿ ಶಿಖರದ ಮುಂದೆ ಯಾರ
ಎತ್ತರವೂ ಸಹ ಕುಬ್ಜ ಎನಿಸೀತು ! ಪ್ರಗಲ್ಭ ಪಾಂಡಿತ್ಯ - ಅತಿಯಾದ ಧಾರಾಳತನ, ಕಠಿಣ
ತಪಶ್ಚರ್ಯ - ಸಾಕೆನಿಸದ ಸಂಚಾರ - ಅಚಲವಾದ ತತ್ವನಿಷ್ಠೆ - ಇಷ್ಟೆಲ್ಲದರೊಂದಿಗೆ ಮಗುವಿನ
ಮುಗ್ಧತೆ ಇವು ಎಲ್ಲರ ಮನೆಮಾತಾಗಿದೆ. ಮುಂದೆ ಪೀಠಕ್ಕೆ ಬರುವವರು ಯಾರೇ ಆದರೂ ಆ
ತೇಜೋಮೂರ್ತಿಯ ಪ್ರಭಾವದಿಂದ ಗರಬಡಿದಂತವರಾಗಿ ಸಮಾಜದಲ್ಲಿ ಅಷ್ಟಕ್ಕಷ್ಟೇ ಎನಿಸಬೇಕಿತ್ತು.
ಆದರೆ ಸತ್ಯತೀರ್ಥರ ಪೀಠದ ಮಹಿಮೆ, ಪಾಡಿತ್ಯದ ಹಿನ್ನೆಲೆ, ಪ್ರಾಮಾಣಿಕ ಬದುಕಿನ
ಗುರಿ, ಸಾಧಿಸುವ ಛಲ, ನೈಜ ವಿರಕ್ತಿ - ಪಾಠ ಪ್ರವಚನಗಳ ಬದುಕು, ನಿಸ್ಸೀಮ ತಪಶ್ಚರ್ಯ -
ನೌಷ್ಠುರ ಬ್ರಹ್ಮಚರ್ಯ ಇವೆಲ್ಲದರೊಂದಿಗೆ ಸರಳ ನೇರ ಜೀವನ ಇವುಗಳಿಂದ ಗುರುಗಳ ಮಹಿಮೆಗೆ
ಕುಂದು ತರದೆ ಅದನ್ನು ಎತ್ತಿ ಹಿಡಿದ ಕೀರ್ತಿ ವಿದ್ಯೇಶತೀರ್ಥರಿಗೆ ಸಂದಿದೆ. ಅವರ
ಗುರುಭಕ್ತಿ - ರಾಮನ ಅನುಗ್ರಹ ಇದರ ಹಿಂದಿದೆ.
ಇಂದು ಮಠಕ್ಕೆ ಅನೇಕ ಶಾಖೆಗಳಾಗಿವೆ. ಹತ್ತಾರು ಪ್ರಕಟಣೆಗಳು ಹೊರಬಂದಿವೆ.
ನೂರಾರು ವಿದ್ಯಾಭ್ಯಾಸಿಗಳಿಗೆ ಸಾಕಷ್ಟು ಜ್ಞಾನ ಸಂದಿದೆ. ಸಾವಿರಾರು ರೂಗಳು
ವಿದ್ವಾಂಸರಿಗೆ ಸಂದಿವೆ. ಲಕ್ಷಾಂತರ ಬೆಲೆಯ ಕಟ್ಟಡಗಳು ಎದ್ದಿವೆ. ಕರ್ನಾಟಕದಲೆಲ್ಲೆಡೆ
ಜಿಜ್ಞಾಸುಗಳ ದಾಹ ತಣಿಸಿವೆ.
ಮಠದ ಅಭಿಮಾನಿಗಳಿಗೆ ಕೊರತ್ಯಿಲ್ಲ. ಶ್ರೀಗಳ ಶ್ರದ್ಧಾವೈಭವಕ್ಕೆ ಕುಂದು ಇಲ್ಲ.
ಆದರೂ ಇಂದೂ ಸಹ ನೆಲದ ಮೇಲೆ ಚಾಪೆಯಮೇಲೆ ಮಲಗುವ ಅವರ ಸನ್ನಿಷ್ಠೆ - ಮಗುವಿನಂತಹ
ಮುಗ್ಧತೆ, ಅನ್ನಿಸಿದ್ದನ್ನು ನೇರ ನುಡಿಯುವ ನಿಷ್ಕಪಟತೆ ಮಾಯವಾಗಿಲ್ಲ.
ಇಂದು ಮಾಧ್ವ ತತ್ವಜ್ಞಾನದ ಸುವರ್ಣಯುಗದಲ್ಲಿ ನಾವಿದ್ದೇವೆ.
ಇಂತಹ ಸಂದರ್ಭದಲ್ಲಿ ಶ್ರೀಗಳವರ ವೇದಾಂತ ಪೀಠಾರೋಹಣದ ರಜತೋತ್ಸವ ಸಮಾರಂಭ ಹಾಗೂ
ಶ್ರೀಗಳವರ ಸುವರ್ಣ ಜಯಂತ್ಯುತ್ಸವ ಆಚರಿಸುವ ಭಾಗ್ಯ ಮಾಧ್ವರಿಗೆ ಲಭಿಸಿರುವುದು ಯೋಗವೇ
ಆಗಿದೆ.
ಇದನ್ನು ತಿಳಿದ ಸಾಧಕರ ಮನ ಗರಿಬಿಚ್ಚಿ ನವಿಲಿನಂತಾಯಿತು
ಅಭಿಮಾನಿಗಳು ಒಟ್ಟುಗೂಡಿ ಇತಿಮಿತಿಯಲ್ಲಿ ಸಮಿತಿಯ ರಚನೆಯಾಯಿತು.
ಇದಕ್ಕೆ ಎದುರಾದ ಮೊದಲ ವಿರೋಧವೆಂದರೆ ಅದು ಒಬ್ಬ ಸ್ವಾಮಿಗಳಿಂದ.
ಇನ್ನೂ ಆಶ್ಚರ್ಯವೆಂದರೆ ಅವರು ಬೇರಾರೂ ಆಗಿರದೆ ಸ್ವತಃ ಸನ್ಮಾನ್ಯರಾದ ಪ್ರಸ್ತುತ
ಪೀಠಾದಿಪತಿಗಳಾದ ಶ್ರೀ ವಿದ್ಯೇಶತೀರ್ಥರೇ ಆಗಿದ್ದರು. ಆಗ ಸ್ವಾಮಿಗಳನ್ನು ಕಂಡು ಈ
ಸಮಾರಂಭ ಭಂಡಾರಕೇರಿ ಮಠದ ಮಹಿಮೆಯ ಪ್ರಸಾರಕ್ಕೆ ಮೀಸಲಾಗಿರುತ್ತದೆ. ರಾಮಚಂದ್ರನು ತಮ್ಮ
ಪೂಜೆಯನ್ನು ಇಪ್ಪತ್ತೈದು ವರ್ಷಗಳಷ್ಟು ನಡೆಸಿಕೊಂಡದಕ್ಕೆ ಸ್ಮರಣೀಯ
ಸಮಾರಂಭವಾಗಿರುತ್ತದೆ ಎಂದ ಮೇಲೆ ವಿರಕ್ತಿಯ ಭಂಡಾರವಾದ ಭಂಡಾರಕೇರಿ ಶ್ರೀಗಳು
ಸುಮ್ಮನಾದರು.
ಸಮಿತಿಯ ಸಮಾರಂಭದ ಉತ್ಸಾಹ ಗಗನಕ್ಕೆ ಏರಲು ಕಾರಣೀಭೂತರಾದವರೇ
ವಿಶ್ವಯತಿಕುಲವಂದ್ಯರಾದ ಶ್ರೀ ವಿಶ್ವೇಶತೀರ್ಥರು. ಅವರು ಇದು ತಮ್ಮ ಸಂಸ್ಥೆಯ
ಆವರಣದಲ್ಲೇ ಜರುಗಲೆಂಬ ಔದಾರ್ಯ - ವಾತ್ಸಲ್ಯದ ಷರತ್ತು ಒಡ್ಡಿ ನಮ್ಮನ್ನು
ಮೂಕವಿಸ್ಮಿತರನ್ನಾಗಿಸಿದರು.
ಅವರು ಶಿಷ್ಯರಾದ ವಿದ್ಯೇಶತೀರ್ಥರ ಬಗೆಗೆ ನೀಡಿರುವ ''ವಿಶ್ವೇಶತೀರ್ಥ ಪ್ರಶಸ್ತಿಃ '' ಎಂಬ ಹೆಮ್ಮೆಯ ಒಕ್ಕಣೆ ಅವರ ಹೃದಯ ವೈಶಾಲ್ಯದ ಕನ್ನಡಿ. ಅವರಿಗೆ ನಾವು ಸಾಷ್ಠಾಂಗ ನಮಸ್ಕಾರಗಳನ್ನರ್ಪಿಸುವೆವು.
''ಹರಿಮೇಧಾಸ್ತು ಸಂನ್ಯಾಸಃ '' ಎಂಬ ಮಧ್ವರ ನಿಡಿ
ಸಂನ್ಯಾಸವನ್ನು ಹರಿಮೇಧಾ ಎಂದು ಹೆಸರಿಸಿದೆ. ಹರಿಯ ಬಳಿಯ ಬುದ್ಧಿಯನ್ನು ಹರಿಸುವ
ವಾಯುದೇವರ ವಿಶಿಷ್ಟ ನಾಮವೂ ಇದಾಗಿದೆ. ಹೀಗಾಗಿ ಸಾಧನೆಯ ನೈಜ ಮಾಪಕವಾದ ಈ ದೃಷ್ಟಿ ಇಡೀ
ಸಮಾಜವನ್ನು ಆ ನಿಟ್ಟಿನಲ್ಲಿ ಒಯ್ಯಲೆಂದು ಮನಗಂಡು ಸಂಚಿಕೆಗೆ ಹರಿಮೇಧಾ ಎಂದು
ಹೆಸರಿಸಲಾಗಿದೆ.
ಪರಮಪೂಜ್ಯ ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು, ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥರು, ಪರಮ ಪೂಜ್ಯರಾದ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು, ಪಲಿಮಾರುಮಠಾಧೀಶ ರಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು, ರಾಘವೇಂದ್ರ ಮಠಾಧೀಶರಾದ ಶ್ರೀ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರು, ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು, ನಮ್ಮನ್ನು ಹರಿಸಿ ಸ್ಮರಣ ಸಂಚಿಕೆಗೆ ಮುನ್ನಡಿಯನ್ನಿತ್ತು ಅನುಗ್ರಹಿಸಿದ್ದಾರೆ. ಅವರೆಲ್ಲರಿಗೂ ಸಾಷ್ಠಾಂಗ ನಮಸ್ಕಾರಗಳು.
ಹೀಗೆಯೇ ವಿದ್ವಾಂಸರುಗಳು ತಮ್ಮ ಸಾಧನೆಯ ಸಮಯದಲ್ಲೂ ಬಿಡುವು ಮಾಡಿಕೊಂಡು
ಲೇಖನಗಳನ್ನಿತ್ತು ಸಂಚಿಕೆ ಮೈ-ಕೈ ತುಂಬಿಕೊಂಡು ತಲೆಗೆ ಅಲಂಕಾರವೂ ಆಗುವಂತೆ
ಮಾಡಿದ್ದಾರೆ. ಆಮಹನೀಯರೆಲ್ಲರಿಗೂ ವಂದನೆಗಳು.
ಇದನ್ನು ಹೊರತರುವಲ್ಲಿ ಚಿತ್ರಗಳನ್ನು ಒಮ್ಮನದಿಂದ ಮೂಡಿಸಿದ ಶೇಷಗಿರಿ ಇವರನ್ನೂ
- ಸಂಚಿಕೆ ಮುದ್ರಿಸಿದ ವಿಶ್ವಾಸ್ ಪ್ರಿಂಟ್ಸ್ ಬಳಗದವರನ್ನು - ಆರ್ಥಿಕ ಭಾಗದಿಂದ
ಹಿಡಿದು ಅರ್ಥಪೂರ್ಣ ಸಮಾರಂಭದ ಸಾರ್ಥಕ್ಯ ಸಮಾಪ್ತಿಯವರೆಗೂ ಶ್ರಮಿಸಿದ ಸಮಿತಿಯ ಸಕಲ
ಸದಸ್ಯರಿಗೂ - ಸಹಕಾರಿಗಳಿಗೂ ನಮ್ಮ ಅಭಿನಂದನೆಗಳು. ಶ್ರೀ ಪಾದಂಗಳವರ ಮುಂದಿನ
ಸಮಾರಂಭಗಳನ್ನು ಆಚರಿಸುವ ಭಾಗ್ಯ ನಮಗಿರಲೆಂಬ ಅಂತರಗಂಗೆ ಈಗಾಗಲೇ ಚಿಮ್ಮುತ್ತಿದೆ.
ನಮ್ಮೆಲ್ಲರಿಗೂ ವಿದ್ಯೇಶತೀರ್ಥರ ಆಶೀರ್ವಾದ ಹಾಗೂ ರಾಮಚಂದ್ರದೇವರ ಅನುಗ್ರಹ ನಿರಂತರ
ಇರಲೆಂದು ಮಾತ್ರ ಬಯಸುವ,
ಡಾ || ಎನ್. ವೆಂಕಟೇಶಾಚಾರ್ಯರು
(ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರ
ವೆದಾಂತ ಪೀಠಾರೋಹಣ ರಜತೋತ್ಸವ ಹಾಗೂ
ಸುವರ್ಣ ಜಯಂತ್ಸುತ್ಸವ ಸಮಿತಿಯ ಪರವಾಗಿ)
ಗಿರಿನಗರ - ಬೆಂಗಳೂರು