ಹರಿಮೇಧಾ
ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರ ಪೀಠಾರೋಹಣ ರಜತ ಮಹೋತ್ಸವ ಹಾಗೂ
ಸ್ವರ್ಣಜಯಂತ್ಯುತ್ಸವದ
ಸ್ಮರಣ ಸಂಚಿಕೆ
ಬಿಡುಗಡೆಯ ದಿನಾಂಕ  : ೩೧.೧೨.೨೦೦೫

ಶ್ರೀ ಮಧ್ವಾಚಾರ್ಯರ ಉದಾರದೃಷ್ಠಿ 

-ಹರಿದಾಸಭಟ್
ಪ್ರಾಂಶುಪಾಲರು, ಪೂರ್ಣಪ್ರಜ್ಞ ವಿದ್ಯಾಪೀಠ ಸಂಸ್ಕೃತ ಕಾಲೇಜು,
ಬೆಂಗಳೂರು.೨೮
        ಭಾರತೀಯ ದರ್ಶನಗಳಿಗೂ ಪಾಶ್ಚಾತ್ಯ ದರ್ಶನಗಳಿಗೂ ಒಂದು ಮಹತ್ವಪೂರ್ಣವಾದ ವ್ಯತ್ಯಾಸ ಇದೆ. ಪಾಶ್ಚಾತ್ಯ ದರ್ಶನಗಳು ಹೆಚ್ಚು ಮುಕ್ತವಾದವುಗಳು. ಅವುಗಳನ್ನು ಯಾರೂ ಅರಿತುಕೊಳ್ಳಬಹುದು; ಅನುಸರಿಸಬಹುದು. ಅದಕ್ಕೆ ಜಾತಿಯ ಅಡ್ಡಗೋಡೆ ಇಲ್ಲ. ಲಿಂಗದ ತಡೆ ಇಲ್ಲ. ಅಷ್ಟೇ ಅಲ್ಲ, ಅವುಗಳನ್ನು ಹೇಗೂ ಓದಬಹುದು. ಆಚಾರ ನಿಯಮದ ಅಗತ್ಯವಿಲ್ಲ. ವೇಷಭೂಷಣಗಳ ನಿರ್ಬಂಧವಿಲ್ಲ. ಎಲ್ಲಿ ಹೇಗೆ ಬೇಕಾದರೂ ಆ ತತ್ತ್ವ ಸಿದ್ಧಾಂತಗಳನ್ನು ಅರಗಿಸಿಕೊಂಡು ಸಿದ್ಧಿಯನ್ನು ಪಡೆಯಬಹುದು.
        ಆದರೆ, ಭಾರತೀಯ ದರ್ಶನಗಳು ಹಾಗಲ್ಲ. ಅದನ್ನು ಅರಗಿಸಿಕೊಳ್ಳಲು ಜಾತಿ ನಿಯಮವಿದೆ. ನಿರ್ಧಿಷ್ಟ ಗುಂಪಿಗೆ ಸೇರಿದವನಿಗೆ ಮಾತ್ರ್ ಅದು ಮೀಸಲು. ಅದರಂತೆ, ಗಂಡುಜಾತಿಗೆ ಮಾತ್ರ ಅದ್ಗಿಕಾರ. ಹೆಂಗಸರು ತತ್ತ್ವಜ್ಞಾನಕ್ಕೆ ಅರ್ಹರಲ್ಲ. ಆಳವಾದ ತತ್ತ್ವಜ್ಞಾನದ ಪಾಂಡಿತ್ಯವನ್ನು ಗಳಿಸಿಕೊಂಡಿದ್ದರೂ ವಿಶಿಷ್ಟ ಆಚಾರಗಳನ್ನು ರೂಢಿಸಿಕೊಳ್ಳದಿದ್ದರೆ ತತ್ತ್ವಜ್ಞಾನವು ಫಲಿಸುವುದಿಲ್ಲ. ಹೀಗೆ ಹತ್ತಾರು ನಿಯಮ-ನಿರ್ಬಂಧಗಳು ಸಾಮಾನ್ಯ ಜನರನ್ನು ತತ್ತ್ವಜ್ಞಾನ ಪ್ರಪಂಚದಿಂದ ದೂರವಾಗಿಸಿದೆ. ಇದರಿಂದಾಗಿ ತತ್ತ್ವಜ್ಞಾನದಲ್ಲಿ ಅರ್ಹತೆ ಇದ್ದವರು ಅದಕ್ಕೆ ಅರ್ಹವಾದ ನೀತಿ-ನಿಯಮಗಳನ್ನು ಉಲ್ಲಂಘಿಸತೊಡಗಿದಾಗ ಅರ್ಹತೆ ಇಲ್ಲದ ವರ್ಗಕ್ಕೆ ಸಹಜವಾಗಿ ನಮಗೇಕೆ ಅದು ದಕ್ಕಬಾರದು ಎನಿಸತೊಡಗಿತು. ಮೇಲಿನ ವರ್ಗವು ನಡತೆಯಲ್ಲಿ ಶೂನ್ಯವಾಗಿ ಜಾತಿಯಿಂದ ಮಾತ್ರ ಮಾನ್ಯತೆಯನ್ನು ಗಳಸಿದಾಗ ಕೆಳಗಿನ ವರ್ಗ ''ನಾವೇನು ಕಮ್ಮಿ'' ಎಂದು ಭಾವಿಸುವಂತಾಯಿತು. ಮೋಕ್ಷ ಬೇಕು, ದೇವರು ಬೇಕು ಎನ್ನುವ ಆಕಾಂಕ್ಷೆ ಮೂಲಭೂತವಾಗಿ ಇದೆಯೋ ಇಲ್ಲವೋ ಆದರೂ ಅದರಿಂದಾಗಿ ಒಂದು ವರ್ಗಕ್ಕೆ ಮನ್ನಣೆ ಬರುವುದಾದಲ್ಲಿ 'ನಮಗೂ ಅದುಬೇಕು ಅದನ್ನು ಕೊಡದಿದ್ದರೆ ಪಕ್ಷಪಾತ ಮಾಡಿದಂತೆ' ಎಂದು ಮತ್ತೋಂದು ವರ್ಗಕ್ಕೆ ಎನಿಸಿತು. ಬರಬರುತ್ತಾ ಇದು ವರ್ಗದ್ವೇಷದ ಬೀಜವನ್ನು ಬಿತ್ತಿತು. ಹೀಗಾಗಿ ಶಾಂತಿಗೆ ಕಾರಣವಾಗಬೇಕಾದ ತತ್ತ್ವಜ್ಞಾನ ಕ್ರಾಂತಿಗೆ ಕಾರಣವಾಯಿತು.
        ಮೇಲಿನ ವಿಷಯದಲ್ಲಿ ಕೆಲವಂಶ ಸರಿಯಾದುದೇ. ಪಾಶ್ಚಾತ್ಯ ದರ್ಶನಗಳು ಉದುಚಿದ ಪರಿಸರ-ವಾತಾವರಣಗಳಿಗೂ ಭಾರತೀಯ ದರ್ಶನಗಳು ಉದಿಸಿ ಸಂದರ್ಭಕ್ಕೂ ಅಂತರವಿದೆ. ಭಾರತೀಯ ದರ್ಶನಕಾರರು ಪ್ರಶಾಂತ ಕಾಡಿನ ವಾತಾವರಣದಲ್ಲಿದ್ದವರು. ಆಹಾರ ವಿಹಾರಗಳಲ್ಲಿ ಸಂಯಮವನ್ನು ಕಾಪಾಡಿಕೊಂಡವರು. ಸರ್ವಸ್ವವನ್ನು ತ್ಯಾಗ ಮಾಡಿ ನಿರಂತರ ಧ್ಯಾನದಲ್ಲಿಮುಳಗಿದ್ದವರು. ಪಾಶ್ಚಾತ್ಯ ದರ್ಶನಕಾರರು, ಸಮಾಜದಲ್ಲಿ ಇದ್ದು ಅದರ ಸುಧಾರಣೆಗೆ ಯತ್ನಿಸಿದವರು. ಪಾರಲೌಕಿಕ ದೃಷ್ಟಿಗಿಂತಲೂ ಲೌಕಿಕ ದೃಷ್ಟಿ ಅವರಿಗೆ ಮುಖ್ಯವಾಗಿತ್ತು. ಆದ್ದರಿಂದ ಅವರ ವಿಚಾರಕ್ಕೆ ಆಚಾರವು ಪೂರಕವಾಗಿ ಬರಲಿಲ್ಲ. ಅಹಿಂಸೆ, ಸತ್ಯ, ಪಾಣದಯೆ ಮುಂತಾದುವುಗಳಿಗೆ ಸಿಕ್ಕಿ ಒತ್ತು ಆಚಾರ, ಧ್ಯಾನ, ತಪಸ್ಸು, ಪೂಜೆಗಳಿಗೆ ಸಿಗಲಿಲ್ಲ. ಹೀಗೆ ಪರಿಸರದ ವೈಷಮ್ಯದಿಂದ ಮತ್ತು ಕಾಲದ ಅಂತರದಿಂದ ಪಾಶ್ಚಾತ್ಯದರ್ಶನಗಳಿಗೂ ಭಾರತೀಯ ದರ್ಶನಗಳ್ಗೂ ಮುಖ್ಯವಾದ ವ್ಯತ್ಯಾಸಗಳು ಬಂದವು. ಭಾರತೀಯ ತತ್ತ್ವಜ್ಞಾನಕ್ಕೆ ಜಾತಿ-ಲಿಂಗಗಳ ಕಟ್ಟುನಿಟ್ಟಿನ ಬೇಲಿಯು ಶ್ರೀಮಧ್ವಾಚಾರ್ಯರ ಕಾಲದವರೆಗೆ ಇತ್ತು ಎನ್ನುವುದು ನಿಜ. ಶ್ರೀ ಮಧ್ವಾಚಾರ್ಯರು ಅದರ ನಿರ್ಬಂಧವನ್ನು ಸಡಿಲಗೊಳಿಸಿದರು. ತತ್ತ್ವಜ್ಞಾನಕ್ಕೆ ಇದ್ದ ಜಾತಿ-ಲಿಂಗಗಳ ನಿರ್ಬಂಧವನ್ನು ತತ್ತ್ವಜ್ಞಾನದ ಆಕರಕ್ಕೆ ಶ್ರೀ ಮಧ್ವಾಚಾರ್ಯರು ಸೀಮಿತಗೊಳಿಸಿದರು. ಅಂದರೆ ತತ್ತ್ವಜ್ಞಾನದಲ್ಲಿ ಎಲ್ಲರಿಗೂ ಅಧಿಕಾರವಿದೆ. ಆ ತತ್ತ್ವಜ್ಞಾನವನ್ನು ಪಡೆದುಕೊಳ್ಳಬಹುದಾದ ಆಕರ ಮಾತ್ರಬೇರೆ ಬೇರೆಯವರಿಗೆ ಬೇರೆ ಬೇರೆಯಾದುದು. ತ್ರೈವರ್ಣಿಕರು ವೇದದಿಂದ ತತ್ತ್ವಜ್ಞಾನವನ್ನು ಪಡೆಯಬಹ್ದಾದರೆ ಇತರರು ಇತಿಹಾಸ ಪುರಾಣಗಳಿಂದ ಅದೇ ತತ್ತ್ವಜ್ಞಾನವನ್ನು ಗಳಿಸಿಕೊಳ್ಳಬಹುದು. ಏಕೆಂದರೆ, ವೇದಾಧ್ಯಯನಕ್ಕೆ ವಿಶಿಷ್ಟವಾದ ಸಂಸ್ಕಾರದ ಅಗತ್ಯವಿದೆ. ಅದನ್ನು ಅಳವಡಿಸಿಕೊಂಡವರಿಗೆ ಮಾತ್ರ ವೇದವು ಫಲ ನೀಡುತ್ತದೆ. ಆ ಅರ್ಹತೆಗಳಿಸಿಕೊಳ್ಳದೆ ವೇದವನ್ನು ಅಧ್ಯಯನ ಮಾಡಿದರೆ ವೇದದ ಅರ್ಥ ತಿಳಿಯಬಹುದು. ಎಂ.ಎ. ಡಾಕ್ಟರೇಟ್ ಪದವಿಗಳನ್ನು ಗಳಿಸಬಹುದು. ಆದರೆ, ಪಾರಲೌಕಿಕ ಫಲ ಅದರಿಂದ ಲಭಿಸದು. ಆದ್ದರಿಂದ ವೇದೌ ಕೆಲವರಿಗೆ ಮಾತ್ರ ಸಫಲವಾಗುತ್ತದೆ.

ಮುಖ್ತ ಅವಕಾಶ :
        ಶ್ರೀ ಮಧ್ವಾಚರ್ಯರು ಪರಮಾತ್ಮನ ಅಪರೋಕ್ಷಜ್ಞಾನಕ್ಕೆ ಕಾರಣವಾದ ತತ್ತ್ವಜ್ಞಾನವನ್ನು ಸ್ತ್ರೀ-ಶೂದ್ರಾದಿಗಳೂ ಗಳಿಸಿಕೊಳ್ಳಬಹುದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಭಗವದ್ಗೀತಾ ಭಾಷ್ಯದಲ್ಲಿ ಶ್ರೀ ವೇದವ್ಯಾಸರು ರಚಿಸಿದ ಮಹಾಭಾರತದ ಉದ್ದೇಶವನ್ನು ನಿರೂಪಿಸುವ ಸಂದರ್ಭದಲ್ಲಿ ಆಚಾರ್ಯರ ಮಾತು ಹೀಗಿದೆ - ''ವೇದ-ಅನಧಿಕಾರಿಣಾಂ ಸ್ತ್ರೀ ಶೂದ್ರಾದಿನಾಂ ಧರ್ಮ - ಜ್ಞಾನದ್ವಾರಾ ಮೋಕ್ಷೊಭವೇತ್ ಇತಿ ಮಹಾಭಾರತದ ಸಂಹಿತಾಂ ಅಚೀಕ್ಲೃಪತ್ '' ಇದರ ಅರ್ಥ - ''ವೇದದಲ್ಲಿ ಅಧಿಕಾರ ಇಲ್ಲದ ಸ್ತ್ರೀಯರಿಗೆ ಶೂದ್ರಾದಿಗಳಿಗೆ ತತ್ತ್ವಜ್ಞಾನ ಬಂದು ಮೋಕ್ಷವಾಗಲಿ ಎಂಬ ಉದ್ದೇಶಾದಿಂದ ಶ್ರೀ ವೇದವ್ಯಾಸರು ಮಹಾಭಾರತವನ್ನು ರಚಿಸಿದರು'' ಎಂದು. ಇಲ್ಲಿ ಸ್ತ್ರೀಯರಿಗೂ ತ್ರೈವರ್ಣೀಕೇತರರಿಗೂ ತತ್ತ್ವಜ್ಞಾನವು ಲಭಿಸುತ್ತದೆ. ಅವರೂ ಅದನ್ನು ಗಳಿಸಿಕೊಳ್ಳಬಹುದು ಎಂದು ಆಚಾರ್ಯರು ಸ್ಫುಟವಾಗಿ ತಿಳಿಸಿದ್ದಾರೆ.
        ಅದರಂತೆ, ಭಗವದ್ಗೀತೆಯ 'ನ ಯಂ ಹಿ ನ ವ್ಯಥಯಂತ್ಯೇತೇ ಪುರುಷಂ ಪುರುಷರ್ಷಭ' (೨-೧೫)
        ಎಂಬ ಶ್ಲೋಕದಲ್ಲಿ 'ವಿಷಯಾಭಿ ಮಾನವನ್ನು ತ್ಯಾಗ ಮಾಡಿದ ಪುರುಷನು' ಮೋಕ್ಷದ ಅರ್ಹತೆಯನ್ನು ಪಡೆಯುತ್ತಾನೆ. ಎನ್ನಲಾಗಿದೆ. ಈ ಶ್ಲೋಕದಲ್ಲಿ 'ಪುರುಷ' ಶಬ್ದದ ಪ್ರಯೋಗ ಇರುವುದರಿಂದ ಗಂಡುಜಾತಿಗೆ ಮಾತ್ರ ಮೊಕ್ಷ ಯೊಗ್ಯತೆ ಎಂದು ತಿಳಿಯುತ್ತದೆ. ಆದರೆ ಮಧ್ವಾಚಾರ್ಯರು ಹಾಗೆ ಅರ್ಥ ಮಾಡಿಲ್ಲ. 'ಪುರುಷ' ಎಂದರೆ ದೇಹದ ಅರಿವನ್ನು ಪಡೆದವನು. ಅರ್ಥಾತ್ ಮಲಗಿರದೆ ಎಚ್ಚರದಲ್ಲಿರುವವರು (ಪುರಿಷಯಮೇವಸಂತಂ) ಎಂಬ ಅರ್ಥವನ್ನು ಮಾಡಿರುತ್ತಾರೆ. ಅದಕ್ಕೆ ಕಾರಣವನ್ನು ಶ್ರೀ ಜಯತೀರ್ಥರು ಹೀಗೆ ಕೊಟ್ಟಿರುತ್ತಾರೆ. ''ಸ್ತ್ರೀಣಾಮಪಿ ಏವಂ ವಿಧಾನಾಂ ಮೊಕ್ಷ ದರ್ಶನಾತ್ '', '' ಸಾಧಕರಾದ ಸ್ತ್ರೀಯರಿಗೂ ಮೊಕ್ಷವು ದೊರಕುವುದರಿಂದ ಗೀತೆಯ ಪುರುಷ ಶಬ್ದಕ್ಕೆ ಇದೇ ಅರ್ಥವನ್ನು ಮಾಡುವುದು ಉಚಿತ'' ಎಂದು ಅರ್ಥ.
        ಹೀಗೆ ಮಾಧ್ವ ದರ್ಶನದಲ್ಲಿ ತತ್ತ್ವಜ್ಞಾನದ ಅರ್ಹತೆ ಮುಕ್ತವಾದುದು. ಆದರೆ ಆ ತತ್ತ್ವಜ್ಞಾನವನ್ನು ಕೊಡುವ ಆಕರ ಗ್ರಂಥ ಕೆಲವರಿಗೆ ವೇದ, ಮತ್ತೆ ಕೆಲವರಿಗೆ ಇತಿಹಾಸ-ಪುರಾಣಗಳು. ಇದು ಮಾಧ್ವದರ್ಶನದ ಒಂದು ಅಪೀರ್ವ ಕೊಡುಗೆ.
        ಎಲ್ಲರೂ ಸಮಾನ - ಮಾಧ್ವ ಸಿದ್ಧಾಂತದಲ್ಲಿ 'ತಾರತಮ್ಯ' ಪ್ರಮುಖವಾದ ಒಂದು ತತ್ತ್ವ. ತೋರಿಕೆಗೆ ಇದೊಂದು ಸಾಮಾಜಿಕ ವ್ಯವಸ್ಥೆಗೆ ಪೂರಕವಲ್ಲದ ಸಿದ್ಧಾಂಅತ ಎನಿಸುತ್ತದೆ. ಆದರೆ, ತಾರತಮ್ಯವು ಉಪಾಸನೆಗೆ ಸಂಬಂಧಿಸಿರುವ ವಿಷಯ. ದೇವತೆಗಳಿಗೆ ಮಾಡುವ ಪೂಜಾಕ್ರಮಕ್ಕೆ ತಾರತಮ್ಯ ಜ್ಞಾನ ಬೇಕು. ಅದು ಬಿಟ್ಟು ಸಮಾಜದಲ್ಲಿ ಜಾತಿ ಪ್ರಯುಕ್ತವಾದ ಮೇಲುಕೀಳುಗಳು ತಾರತಮ್ಯ ಎಂದು ಭ್ರಮಿಸಬಾರದು. ಅದಕ್ಕೆ ಹೆಚ್ಚು ಮಹತ್ವವನ್ನು ಶ್ರೀ ಮಧ್ವಾಚಾರ್ಯರು ನೀಡಿದಂತಿಲ್ಲ. ಗೀತಾ ಭಾಷ್ಯದಲ್ಲಿ (೬.೬) ಆಚಾರ್ಯರ ಉಲ್ಲೇಖ ಹೀಗಿದೆ -
ಸ್ವತಃ ಸರ್ವೇಪಿ ಚಿದ್ರೂಪಾಃ ಸರ್ವದೋಷವಿವರ್ಜಿತಾಃ |
ಜೀವಾಸ್ತೇಷಾಂತು ಯೇ ದೋಷಾಃ ತೇ ಉಪಧಿಕೃತಾ ಮತಾಃ |
ಸಮಾ ಏವಂ ಅತಃ ಸರ್ವೇ ವೈಷಮ್ಯಂ ಭ್ರಾಂತಿ ಸಂಭವಮ್ ||
        ''ಮೂಲಭೂತವಾಗಿ  ಎಲ್ಲ ಜೀವರೂ ದೋಷವುಲ್ಲದವರು, ಜ್ಞಾನ ಸ್ವರೂಪರು. ಅವರಲ್ಲಿ ಕಾಣುವ ದೋಷಗಳು, ದೌರ್ಬಲ್ಯಗಳು ದೇಹ ನಿಮಿತ್ತವಾದವುಗಳು. ಆದ್ದರಿಂದ ಎಲ್ಲ ಜೀವರೂ ಮಊಲತಃ ಸಮಾನರು, ವೈಷಮ್ಯ ಕೇವಲ ಭ್ರಾಂತಿ. "
        ರಾಗ-ದ್ವೇಷಗಳಿಂದ ಕೆಲವರು ದುಷ್ಟರೂ ಔದಾರ್ಯಾದಿ ಗುಣಗಳಿಂದ ಕೆಲವರು ಸಜ್ಜನರೂ ಆಗಿರುತ್ತಾರೆ. ಈ ರಾಗದ್ವೇಷಗಳು ಅಂತಃಕರಣದ ದೌರ್ಬಲ್ಯಗಳು. ಜೀವನ ಸ್ವರೂಪಭೂತವಾದ ಗುಣಗಳಲ್ಲಿ ಅಂತಃಕರಣದ ಸಂಬಂಧ ಕಳಚಿದಾಗ ಇಂತಹ ದುರ್ಗಣಗಳೂ ಕಳಚಿ ಹೊಗುತ್ತವೆ. ಆದ್ದರಿಂದ ವ್ಯವಹಾರದಲ್ಲಿ ತೋರುವ ದುರ್ಗುಣಗಳನ್ನೇ ಆತ್ಮನಿಗೆ ಅಂಟಿಸಬಾರದು. ಆದ್ದರಿಂದಲೇ ಸಾಮಾಜಿಕ ವ್ಯವಸ್ಥೆಯಲ್ಲಿ ಗೌರವಾದರಹಳಿಗೆ ಅರ್ಹತೆಯನ್ನು ಆಚಾರ್ಯರು ದೈಹಿಕವಾದ ಜಾತಿವ್ಯವಸ್ಥೆಯಿಂದ ನಿರ್ಧರಿಸಿಕೊಡಲಿಲ್ಲ. ಆತ್ಮನಿಗೆ ಸಂಬಂಧಿಸಿದ ಶಮಾದಿ ಗುಣಗಳೇ ಬ್ರಾಹ್ಮಣ್ಯಕ್ಕೆ ಮುಖ್ಯವಾದುದು. ದೈಹಿಕವಾದ, ಜನ್ಮಾಧಾರಿತವಾದ ಬ್ರಾಹ್ಮಣ್ಯ ಗೌಣ ಎಂದು ಅವರು ಪರಿಗಣಿಸಿದ್ದಾರೆ.
ಆದರಸ್ತತ್ರ ಕರ್ತವ್ಯಃ ಯತ್ರ್ ಭಕ್ತಿಃ ಹರೇರ್ವರಾ ||
        ಯಾರಲ್ಲಿ ಭಗವದ್ ಭಕ್ತಿ-ಶ್ರದ್ಧೆಗಳು ಅಧಿಕವಾಗಿರುತ್ತೋ ಅಂತಹವನಿಗೆ ಗೌರವವನ್ನು ಸಲ್ಲಿಸಬೇಕು' ಇದು ಶ್ರೀ ಮಧ್ವಾಚಾರ್ಯರ ಸಂದೇಶ. ಹೀಗೆ ಆಧ್ಯಾತ್ಮಿಕ್ ಮೌಲ್ಯಗಳಿಗೆ ಪ್ರಾಮುಖ್ಯತೆಯನ್ನು ನೀಡಿ ಜಾತಿವ್ಯವಸ್ಥೆ ಎರಡನೆಯ ಸ್ಥಾನವನ್ನು ನೀಡಿದ ಮತಸ್ಥಾಪಕರು ಶ್ರೀ ಮಧ್ವಾಚಾರ್ಯರು. ಆಚಾರ್ಯರ ಈ ವಿಶಲ ದೃಷ್ಟಿಯನ್ನು ಬೆಳೆಸಿಕೊಂಡು ಸಂಕುಚಿತಭಾವನಯಿಂದ ಹೊರಬರುವುದು. ಇಂದಿನ ಮಹ್ವ ಸಮಾಜದ ಕರ್ತವ್ಯವಾಗಿದೆ. ಆದರೆ ಈ ಉದಾರ ದೃಷ್ಟಿಯಿಂದ ಎರಡೂ ಮೌಲ್ಯಗಳು ಕುಸಿಯುವತ್ತ ಸಾದಂತೆ ಎಚ್ಚರವಹಿಸಬೇಕು.