ಹರಿಮೇಧಾ
ಭಂಡಾರಕೇರಿ
ಮಠಾಧೀಶರಾದ ವಿದ್ಯೇಶತೀರ್ಥರ ಪೀಠಾರೋಹಣ ರಜತ ಮಹೋತ್ಸವ ಹಾಗೂ
ಸ್ವರ್ಣಜಯಂತ್ಯುತ್ಸವದ
ಸ್ಮರಣ
ಸಂಚಿಕೆ
ಬಿಡುಗಡೆಯ
ದಿನಾಂಕ : ೩೧.೧೨.೨೦೦೫
ವಿದ್ಯಾಮಾನ್ಯತೀರ್ಥರು - ಗುರುಗಳೆಂದರೆ ಇವರೆ ಗುರುಗಳು ಕಾಣೋ
- ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ, ಬೆಂಗಳೂರು
'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ,
'ತದ್ವಿಜ್ಞಾನಾರ್ಥಂ ಸ ಗುರುಮೇವ ಅಭಿಗಚ್ಛೇತ್ ' ಎಂಬ ವೇದೋಕ್ತಿಯಂತೆ, ಮಾನವಜನ್ಮದ
ಸಾರ್ಥಕತೆಗೆ, ಪರಿಪೂರ್ಣತೆಗೆ ಗುರುವಿನ ಅನುಗ್ರಹ ಅತ್ಯಗತ್ಯ. ಅಂತಹ ಗುರುಗಳು ಯಾರು?
;ಗುರುಗಳೆಂದರೆ ಇವರೆ ಗುರುಗಳು ಕಾಣೋ' ಅಂತಹ ಗುರುಪರಂಪರೆಗೆ ಗುರುತ್ವ ನೀಡುವ
ಗುರುಗಳೆಂದರೆ ಪರಮಪೂಜ್ಯ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದಂಗಳವರು.
ಜೀವನದುದ್ದಕ್ಕೂ ಮುಗ್ಧತೆ, ತೇಜಸ್ಸು, ತಪಸ್ಸು, ಓಜಸ್ಸುಗಳ ಸಂಗಮದ ರಂಗಸ್ಥಳವಾಗಿದ್ದ
ವಿದ್ಯಾಮಾನ್ಯತೀರ್ಥರು, ಜ್ಞಾನಭಕ್ತಿ ವೈರಾಗ್ಯಗಳ ಭಂಡಾರ. ಬರೀ ಭಂಡಾರವಲ್ಲ, ಭಂಡಾರದ
ಸಮುದ್ರ. ಹಾಗಾಗಿಯೇ ಅವರು ಬಹಳಷ್ಟು ದಶಕಗಳ ಕಾಲ ಭಂಡಾರಕೇರಿ ಸ್ವಾಮಿಗಳೆಂದೇ
ಪ್ರಸಿದ್ಧರು. ಋಷಿಮುನಿಗಳ ಪರಂಪರೆಯ ವಿದ್ಯಾಮಾನ್ಯರು ಯತಿಕುಲತಿಲಕರು.
ಬ್ರಾಹ್ಮಣ್ಯಕ್ಕೆ ನಿದರ್ಶನ. ಮಾನವೀಯತೆಗೆ ದೃಷ್ಟಾಂತ. ಆದರ್ಶ ಬದುಕು, ಅಮೃತಸದೃಶ
ಉಪದೇಶ, ಸದಾಚಾರದ ಸಾತ್ವಿಕ ಜೀವನ, ಆಸಿಕ ಜನಾಂಗಕ್ಕೆ ತುಂಬಿದ ಧಾರ್ಮಿಕ ಚೈತನ್ಯ, ಹಾಗೂ
ಪರಂಪರಾಗತ ಶಸ್ತ್ರಜ್ಞಾನದ ಅಗಾಧತೆಗಳಿಂದಾಗಿ ವಿದ್ಯಾಮಾನ್ಯರು ಈ ಶತಮಾನದ ವಶಿಷ್ಠರು
ಹಾಗೂ ವಿಶಿಷ್ಟರು. ಪ್ರಾಚೀನ ಋಷಿಗಳ ಸದ್ಗುಣಗಳ ಸಾಕಾರಮೂರ್ತಿ.
''ಸತ್ಯಂ ಶಿವಂ ಸುಂದರಂ '' ಇದು ನಮ್ಮ
ತತ್ವಜ್ಞಾನದ ಅದ್ಭುತ ಚಿಂತನೆ. ಸತ್ಯ ಎಂದರೆ ದೈವ. ತೀರ್ಥ ಎಂದರೆ ಪಾವಿತ್ರ್ಯ.
ದೈವಿಕತೆ ಹಾಗೂ ಪಾವಿತ್ರ್ಯತೆಯ ಸಂಗಮವಾಗಿದ್ದ ಸತ್ಯತೀರ್ಥರ ಮಠದಲ್ಲಿ, ಆ ಪರಂಪರೆಯಲ್ಲಿ
ಪಲ್ಲವಿಸಿದ ಬ್ರಹ್ಮಕಮಲ ವಿದ್ಯಾಮಾನ್ಯತೀರ್ಥರು. ಹಾಗಾಗಿಯೇ ಮಧ್ವಾಚಾರ್ಯರ
ಬ್ರಹ್ಮಸೂತ್ರವನ್ನು ಬೆಳ್ಳಿತಗಡಿನಲ್ಲಿ ಶಾಸ್ವತ ದಾಳಲೆಯಾಗಿ ಇವರು ಬರೆಸಿಟ್ಟರು.
ಚಿನ್ನದ ತೊಟ್ಟಿಲಲ್ಲಿ ಉಡುಪಿ ಕೃಷ್ಣನನ್ನು ತೂಗಿದರು, ಚಿನ್ನದ ರಥದಲ್ಲಿ ಕೃಷ್ಣನಿಗೆ
ಐತಿಹಾಸಿಕ ಮೆರವಣಿಗೆ ಮಾಡಿದರು. ಚಿನ್ನದಂತಹ, ಅಪ್ಪಟ ಅಪರಂಜಿಯಂತಹ ಅಪೂರ್ವ
ಶಿಷ್ಯರತ್ನಗಳನ್ನು ಸಮಾಜಕ್ಕೆ ನೀಡಿದರು.
ದೇವತೋಷಣ, ಪಂಡಿತ ಪೋಷಣ, ನಾನಾ ಜನ
ಶುಶ್ರೂಷೆ, ಶಾಸ್ತ್ರಸಂರಕ್ಷಣೆಗಳಲ್ಲೇ ಬದುಕನ್ನು ಕೂಡಿದ ವಿದ್ಯಾಮಾನ್ಯರು
ದರ್ಶನಮಾತ್ರದಿಂದಲೇ ನಮ್ಮನ್ನು ಉದ್ಧಾರ ಮಾಡಬಲ್ಲ ಸಾಧುಗಳು. ''ದರ್ಶನಾದೇವ ಸಾಧವಃ ''
ಭಾರತದ ಪ್ರಥಮ ರಾಷ್ಟ್ರಪತಿ ಆಬು ರಾಜೇಂದ್ರ ಪ್ರಸಾದರೂ, ರಾಷ್ಟ್ರಪತಿ ಡಾ||
ರಾಧಾಕೃಷ್ಣನ್ ಹಾಗೂ ಅನೇಕ ರಾಜ್ಯಪಾಲರುಗಳು ಇವರ ಪರಮ ಭಕ್ತರಾಗಿದ್ದರು.
ಅರವತ್ತು ವರ್ಷಗಳ ನಿರಂತರ ಯಾರು
ಸ್ವಾಧ್ಯಾಯ ಪ್ರವಚನಗಳಲ್ಲಿ ಬದುಕನ್ನು ನಡೆಸಿದ್ದಾರೆಯೋ ಅವರೇ ತಪಸ್ವಿಗಳು. ''ಯಾರು
ಅನನ್ಯಚಿತ್ತರಾಗಿ ನನ್ನನ್ನೇ ಚಿಂತಿಸುತ್ತಾ, ಸೇವಿಸುವರೋ ಅವರ ಯೋಗಕ್ಷೇಮ ನಾನು
ನೋಡಿಕೊಳ್ಳುತ್ತೇನೆ'' ಎಂದ ಕೃಷ್ಣ. ಇವರ ಕೃಷ್ಣಪ್ರೇಮಕ್ಕೆ ಮೆಚ್ಚಿ, ಅವರಿಂದ ತಾನು
ಪೂಜೆ ಮಾಡಿಸಿ ಕೊಳ್ಳಬೇಕೆಂದು ಮನಸ್ಸು ಮಾಡಿದ. ಹಾಗಾಗಿ ಭಂಡಾರಿಕೇರಿ ಮಠಾಧೀಶ
ವಿದ್ಯಾಮಾನ್ಯ್ ತೀರ್ಥರನ್ನು ಫಲಿಮಾರು ಮಠಾಧೀಶರನ್ನಾಗಿ ಮಾಡಿದ. ಸೇವಾಭಾಗ್ಯ ನೀಡಿದ.
ಅವರ ಸಾಧನೆಯನ್ನು ನೋಡಿದ.
ಅಖಂಡ ಬ್ರಹ್ಮಚರ್ಯ, ಪ್ರಶಾಂತ
ಮುಖಮುದ್ರೆ, ಕೃಷ್ಣಸೇವಾಕಾತುರ, ಉತ್ತಮ ತತ್ವಜ್ಞಾನದ ಪ್ರಸರಣದಲ್ಲಿ ದೂಕ್ಷೆ, ಸರಳತೆ,
ಸೌಜನ್ಯ, ಶಿಷ್ಯವಾತ್ಸಲ್ಯ, ಇಂತಹ ಬೆಳಕು ಬೆಳದಿಂಗಳೇ ವಿದ್ಯಾಮಾನ್ಯರು. ಜೀವನನಶ್ವರ,
ಭಗವಂತ ಶಾಶ್ವತ ಎನ್ನುತ್ತಿದ್ದ ವಿದ್ಯಾಮಾನ್ಯರು ಬುಧಜನರಲ್ಲಿ ವಿಶೇಷವೆನಿಸಿದ್ದ
ವಿಬುಧಪ್ರಿಯ ತೀರ್ಥರ ಶಿಷ್ಯರು. ವಿಬುಧಪ್ರಿಯರು ತಮ್ಮ ಇಳಿವಯಸ್ಸಿನಲ್ಲಿ
ಘಟಿಕಾಚಲದಲ್ಲಿ ನರಸಿಂಹ ಪ್ರಾಣದೇವರ ಸನ್ನಿಧಾನದಲ್ಲಿ ಇದ್ದುಕೊಂಡು ದೇವರ ನೈವೇದ್ಯದ
ಹಾಲನ್ನು ಮಾತ್ರ ಸ್ವೀಕರಿಸುತ್ತಾ ವೈರಾಗ್ಯಕ್ಕೆ ಭಾಷ್ಯವೆನಿಸಿದ್ದರು. ಇಅವರ ಬೃಂದಾವನ
ಘಟಿಕಾಚಲದಲ್ಲಿದ್ದು, ವಿದ್ಯಾಮಾನ್ಯರು ಆ ಬೃಂದಾವನ ಸನ್ನಿಧಾನದಲ್ಲಿ ಅನನ್ಯ ಸೇವಾ
ಮಾಡಿದ ಮಹಾನುಭಾವರು. ಇಮ್ಮೆ ಅವರ ಗುರುಗಳ ಆರಾಧನಾ ಸಂದರ್ಭ, ನಾನು ನನ್ನ ಪತ್ನಿ
ರಾಜಲಕ್ಷ್ಮಿ ಹಾಗೂ ಕುಟುಂಬದಕೆಲವರು ಘಟಿಕಾಚಲಕ್ಕೆ ಹೋಗಿದ್ದೆವು. ಬಹಳಷ್ಟು
ಜನರಿಲ್ಲದಿದ್ದರಿಂದ, ನಾವು ಪೂಜ್ಯ್ ಸ್ವಾಮೀಜಿಯವರೊಡನೆ ಸಾವಕಾಶವಾಗಿ ಕುಳಿತು ರಾತ್ರಿ
ಬಹುಹೊತ್ತಿನವರೆಗೂ ಮಾತನಾಡುತ್ತಿದ್ದೆವು. ಅದೊಂದು ಚಿರಸ್ಮರಣೀಯ ಅನುಭವ. ನನಗೆ
ನೆನಪಿರುವಷ್ಟು ಮಾತ್ರ, ವಿದ್ಯಾಮಾನ್ಯ್ರ ಅದ್ಭುತ ವಿಚಾರಧಾರೆಯನ್ನು ಅತಿ
ಸಂಕ್ಷಿಪ್ತವಾಗಿ ಇಲ್ಲಿ ಕೆಲವೇ ಸಾಲಿಗಳಲ್ಲಿ ವಿನಮ್ರವಾಗಿ ಹೇಳಬಯಸುತ್ತೇನೆ.
೧.
ಅವರ ದೃಷ್ಟಿಯಲ್ಲಿ ''ಸತ್ಸಂಗ'' ದಿಂದ ಸಾಧನವಾಗುತ್ತದೆ. ಸತ್ಸಂಅಗವೆಂದರೆ
ಸಾಧು-ಸಜ್ಜನರ ಸಮಾಗಮ. ಅವರಿಂದ ಹರಿಯ ಹಿರಿಯ ವಿಚಾರಗಳನ್ನು, ವಾಯುದೇವರ,
ದೇವಾನುದೇವತೆಗಳ ಪರಿ ಪರಿ ವಿಚಾರಗಳನ್ನು ಸರಿಯಾಗಿ ತಿಳಿಯುವುದು. ಅದನ್ನು ಸದಾ ಮನನ
ಮಾಡುವುದು. ಹಾಗೆ ಮಾಡುತ್ತಾ ಮಾಡುತ್ತಾ ಚಿತ್ತ, ಬುದ್ಧಿ, ವಿವೇಕಗಳ ಸಂಸ್ಕರಣ,
ಸಂಸ್ಕಾರ. ಪರಮಾತ್ಮ ಧ್ಯೇಯವಸ್ತುವಾಗುವುದೇ ಈ ಸತ್ಸಂಗದ ಫಲ.
೨. ಸದಾ ಕೃಷ್ಣನನ್ನು
ಸ್ಮರಿಸುತ್ತಿರಿ. ಇಂತಹ ಕಲಿಗಾಲದಲ್ಲಿಯೂ ಆರು ಲಕ್ಷ ಸಲ ಯಾರು ಶ್ರದ್ಧಾನಿಷ್ಠೆಗಳಿಂದ
ಕೃಷ್ಣ ಮಂತ್ರ ಜಪಿಸುತ್ತಾರೋ ಅಂತಹವರು ಅಂದುಕೊಂಡದ್ದು ಆಗುತ್ತದೆ. ಅವರ ಅನಿಷ್ಟ ತೊಲಗಿ
ಅಭೀಷ್ಟಗಳು ಸಿದ್ಧಿಸುತ್ತವೆ.
೩. ಪರಮಾತ್ಮ ಇದ್ದಾನೋ, ಇಲ್ಲವೋ ಎಂಬ
ಸಂಶಯಬೇಡ. ಅವನು ಸರ್ವಕಾಲಗಳಲ್ಲಿ ಇದ್ದಾನೆ. ಸರ್ವಸ್ವಾಮಿಯಾಗಿ, ಸರ್ವಪ್ರೇರಕನಾಗಿ,
ಸರ್ವಶಕ್ತನಾಗಿ ಇದ್ದೇ ಇದ್ದಾನೆ ಎಂಬ ದೃಡಜ್ಞಾನ ಬರಬೇಕು. ಆಗಲೇ ಭಕ್ತಿ
ಸಿದ್ಧಿಸುತ್ತದೆ. ನಮ್ಮ ಕಣ್ಣು ಕಿವಿ ಮನಸ್ಸುಗಳು ಅವನತ್ತ ಸರಿದರೆ, ಅವನ ಅನುಗ್ರಹದ
ಕರುಣೆಯ ಕಿರಣ ನಮ್ಮತ್ತ ಸರಿಯುತ್ತದೆ.
೪. ಜಗತ್ತಿನಲ್ಲೆಲ್ಲಾನೆಲೆ, ವಸತಿ,
ಆಶ್ರಯವಿದ್ದರೂ ಭಾರತದ ಸ್ಥಾನ ಅದು ಬೇರೆಯೇ. ಒಂದು ಮನೆಯಲ್ಲಿ ಅಡುಗೆ ಮನೆ, ಸ್ನಾನದ
ಮನೆ, ಶಯನದ ಕೋಣೆ, ಉಗ್ರಾಣ, ಹಿತ್ತಲು ಮುಂತಾದ ಭಾಗಗಳಿದ್ದಂತೆ ದೇವರಮನೆಯೂ ಇರುತ್ತದೆ.
ಪರಮಾತ್ಮ ಇಡೀ ಬ್ರಹ್ಮಾಂಡವನ್ನು ಮನೆಯನ್ನಾಗಿ ಮಾಡಿ, ಅದರಲ್ಲಿ ಭಾರತವನ್ನು ದೇವರ
ಮನೆಯನ್ನಾಗಿಸಿದ್ದಾನೆ. ಸಹಸ್ರಸಹಸ್ರ ವರ್ಷಗಳಿಂದ ಋಷಿಮುನಿಗಳು, ತಪಸ್ವಿಗಳು,
ನಿಸ್ವಾರ್ಥವಾಗಿ, ಲೌಕಿಕಾಪೇಕ್ಷೆಯಿಲ್ಲದೆ, ಹರಿಚರಣಸ್ಮರಣಗಂಗಾಸಂಗಿಗಳಾಗಿರುವ ದೇಶ
ಭಾರತ. ಇಲ್ಲಿ ಗಂಗೆಯಲ್ಲಿ ದೇವರನ್ನು ಅಶ್ವತ್ಥ ವೃಕ್ಷದಲ್ಲಿ ದೇವರನ್ನು, ಗಾಳಿಯಲ್ಲಿ,
ಬೆಂಕಿಯಲ್ಲಿ, ಸೂರ್ಯಕಿರಣದಲ್ಲಿ, ಮಾತಿನಲ್ಲಿ, ಹೃದಯದಲ್ಲಿ, ಸಂಬಂಧಗಳಲ್ಲಿ,
ಮಕ್ಕಳಲ್ಲಿ ದೇವರನ್ನು ಕಾಣುವ ಸಂಸ್ಕಾರ ವ್ಯಾಪಕವಾಗಿದೆ. ಹಾಗಾಗಿ ಉಳಿದ
ಭೋಗಭೂಮಿಗಳಿಗಿಂತ, ದೌವಿಕವಾದ, ಧಾರ್ಮಿಕವಾದ ಈ ಧರ್ಮಭೂಮಿಶ್ರೇಷ್ಠ.
೫. ಧರ್ಮ ಎಂಬುದು ಮೌಢ್ಯವಲ್ಲ. ಕುರುಡು
ನಂಬಿಕೆಯಲ್ಲ. ಸಹಸ್ರಾರು ವರ್ಷಗಳ ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಂದಿರುವ ಸದಾಚಾರ
ಸದ್ವಿಚಾರಗಳ ಅನುಭವ-ಅನುಭಾವ. ಈ ಧರ್ಮವನ್ನು ರಕ್ಷಿಸುವವರನ್ನು ಧರ್ಮ ರಕ್ಷಿಸುತ್ತದೆ.
ಇದರಿಂದ ಲೌಕಿಕ ಯಶಸ್ಸು, ಆಧ್ಯಾತ್ಮಿಕ ಶ್ರೇಯಸ್ಸು ಎರಡೂ ಲಭ್ಯ.
೬. ರಾಘವೇಂದ್ರಸ್ವಾಮಿಗಳು ಮಹಾಮಹಿಮರು.
ಅಗಮ್ಯಮಹಿಮರು. ಅವರ ಮಹಿಮೆ ನಮ್ಮ ಅನುಭಾವಕ್ಕೂ ಬಂದಿದೆ. ಒಮ್ಮೆ ದೆಹಲಿ ವಿಮಾನ
ನಿಲ್ದಾಣದಲ್ಲಿ ಒಬ್ಬ ಸರದಾರ್ ಜೀ ನಾವು ವಿಮಾನದಲ್ಲಿ ಬೆಂಗಳೂರಿಗೆ ಹೊರಟಿದ್ದಾಗ, ನಮ್ಮ
ದೇವರ ಪೆಟ್ಟಿಗೆಯನ್ನು ತಾನು ಮುಟ್ಟಿ ಪರೀಕ್ಷೆಗೆ ಒಳಪಡಿಸುತ್ತೇವೆಂದು ಹಟ ಹಿಡಿದ.
ಬ್ರಾಹ್ಮಣಮಹಾಸಭಾದ ಸಮ್ಮೇಳನ ಉದ್ಘಾಟನೆಗೆ ಅಂದು ಸಂಜೆಯೇ ಬೆಂಗಳೂರಿಗೆ ಬರಬೇಕಿತ್ತು.
ಮಧ್ಯಾಹ್ನ ದೆಹಲಿಯಲ್ಲಿ ಶ್ರೀ ಕೃಷ್ಣ ಪ್ರತಿಷ್ಠೆ, ರಾಯರ ಬೃಂದಾವನ ಪ್ರತಿಷ್ಠೆ ಮುಗಿಸಿ
ಹೊರಟಿದ್ದೆವು. ಆ ಸರದಾರ್ ಜೀ ದೇವರ ಪೆಟ್ಟಿಗೆ ಪರೀಕ್ಷೇಗೆ ಒಳಪಡುವವರೆಗೂ ವಿಮಾನದೊಳಗೆ
ಹೋಗಲು ಬಿಡುವುದಿಲ್ಲವೆಂದು ಪಟ್ಟು ಹಿಡಿದ. ಸಮಯವಾಯಿತು. ವಿಮಾನದ ಬಾಗಿಲೂ ಮುಚ್ಚಿ
ಹೊರಡುವ ಸಿದ್ಧತೆಯಾಗಿತ್ತು. ನಾವು ರಾಘವೇಂದ್ರರ ಸ್ಮರಣೆ ಮಾಡಿದೆವು. ಮಂತ್ರಾಲಯದ
ಬೃಂದಾವನ ದೊಳಗಿನಿಂದ ರಾಯರು ಕಾಣಿಸಿದಂತಾಯಿತು. ಅಭಯಹಸ್ತ ತೋರಿ ಹಸನ್ಮುಖರಾಗಿ
ಗೋಚರಿಸಿದರು. ಒಂದೇ ಕ್ಷಣ, ಒಬ್ಬ ಅಧಿಕಾರಿಣಿ ಹೊರಗಿನಿಂದ ಕಾರಿಳಿದು ಬಂದು ಆ ಸರದಾರ್
ಜೀಯನ್ನು 'ಈ ಸ್ವಾಮಿ ಯಾರು ಯಾಕೆ ಹೀಗೆ ನಿಂತಿದ್ದಾರೆ' ಎಂದು ಕೇಳಿದಳು. ನಮ್ಮ
ದೇವರಪೆಟ್ಟಿಗೆಯನ್ನು ಅವನ ತಪಾಸಣೆಗೆ ಕೊಟ್ಟಿಲ್ಲದ್ದರಿಂದ ನಮ್ಮನ್ನು ಒಳಗೆ ಬಿಟ್ಟಿಲ್ಲ
ಎಂದು ಅವನು ಉತ್ತರುಸಿದ. ತಕ್ಷಣ ಕ್ರಿಯಾಶೀಲಳಾದ ಆಕೆ ದೂರವಾಣಿಯಲ್ಲಿ ವಿಮಾನ ಹೊರಡದಂತೆ
ಸೂಚನೆ ನೀಡಿ, ವಿಮಾನದ ಬಾಗಿಲು ತೆಗೆಸಿ, ನಮ್ಮ ಕ್ಷಮಾಯಾಚನೆ ಹೊರಡದಂತೆ ಸೂಚನೆ ನೀಡಿ,
ವಿಮಾನದ ಬಾಗಿಲು ತೆಗಿಸಿ, ನಮ್ಮ ಕ್ಷಮಾ ಯಾಚನೆ ಮಾಡಿ, ಭಕ್ತಿ ಗೌರವದಿಂದ ತಾನೇ
ವಿಮಾನದೊಳಗೆ ನಮ್ಮನ್ನು ಕರೆತಂದು ವಿಶೇಷ ವ್ಯವಸ್ಥೆ ಮಾಡಿ ಕಳುಹಿಸಿಕೊಟ್ಟರು.
೭. ಇನ್ನೊಮ್ಮೆ ಉತ್ತರಭಾರತದಲ್ಲಿ
ಚಾತುರ್ಮಾಸ್ಯ. ಕಾಶಿ ಗೋಪಾಲಾಚಾರ್ಯರ ಆಮಂತ್ರಣದ ಮೇರೆಗೆ ಸೀಮೋಲ್ಲಂಘನದ ನೆಪದಲ್ಲಿ
ಕಾಶಿಯತ್ತ ಪ್ರಯಾಣ. ದೂರ ಪ್ರಯಾಣವಾದ್ದರಿಂದ ನಡುಬಿಡರವನ್ನು ಧನಬಾದ್ ನಲ್ಲಿ
ಮಾಡಿದ್ದರು. ಅಲ್ಲಿಯ ಕಲ್ಯಾಣಮಂದಿರವೊಂದರಲ್ಲಿ ಪೂಜಾ, ಭಿಕ್ಷಾಕಾರ್ಯಕ್ರಮದಲ್ಲಿ ಪೂಜಾ
ಸಮಯಕ್ಕೆ ಸ್ಥಳೀಯರನೇಕರು ಬಂದಿದ್ದರು. ಅದರಲ್ಲಿ ಒಬ್ಬ ಕೈಗಾರಿಕೋದ್ಯಮಿಯ ಪತ್ನಿ ತನಗೆ
ಬಿಳುಪು ರೋಗ ತಗುಲಿರುವುದಾಗಿ ತಿಳಿಸಿ, ನೀವು ಸಿದ್ಧಿ ಪುರಷರೆಂದು ಇವರೆಲ್ಲಾ
ಹೇಳಿದ್ದಾರೆ. ನನ್ನ ದೇಹವೆಲ್ಲಾ ಬಿಳಿಯಾಗಿ ನನ್ನ ಜೀವನ ಹಾಳಾಗುವುದು. ನಾನು ಯೋಚನೆಯೂ
ಮಾಡಲಾಗದಂತಹ ಘೋರ. ಹಾಗೇನಾದರೂ ಆದರೆ ನಾನು ಸಾಯ್ವುದೇ ನಿಶ್ಚಿತ. ನನ್ನ ಈ ರೋಗ
ನಿವಾರಿಸಿ, ನನ್ನಿ ಸಂಸಾರ, ಜೀವನ ಉಳಿಸಿ ಎಂದು ಅನನ್ಯ ಶರಣಾಗಿ ಪ್ರಾರ್ಥಿಸಿದರು. ನಮಗೆ
ಅಂತಹ ಯಾವ ಸಿದ್ಧಿಗಳೂ ಇಲ್ಲ. ನಾವು ಎಲ್ಲರಂತೆಯೇ ಸಾಮಾನ್ಯರು ಎಂದು ಎಷ್ಟು ತಿಳಿಸಿದರೂ
ಆಕೆ ಬಿಡಲಿಲ್ಲ. ಕಡೆಗೆ ಆಕೆಯ ಸಮಾಧಾನಕ್ಕಾಗಿ, ನಾವು ರಾಘವೇಂದ್ರಸ್ವಾಮಿಗಳ ಮೃತ್ತಿಕೆ,
ನಮ್ಮಲ್ಲಿದ್ದುದನ್ನು ಆಕೆಯ ಕೈಗೆ ನೀಡಿ, ಅದನ್ನು ಪ್ರತಿನಿತ್ಯ ತೀರ್ಥ ಮಾಡಿ
ಭಕ್ತಿಯಿಂದ ಸ್ವೀಕರಿಸಲು ಹೇಳಿದೆವು. ಹಾಗೆಯೇ ''ಪೂಜ್ಯಾಯ ರಾಘವೇಂದ್ರಾಯ''
ಸ್ತೋತ್ರವನ್ನು ಹಿಂದಿ ಭಾಷೆಯಲ್ಲಿ ಬರೆಸಿಕೊಟ್ಟು ಪ್ರತಿನಿತ್ಯ ೧೦೮ ಬಾರಿ ಅದನ್ನು
ಜಪಿಸಲು ಸೂಚಿಸಿದೆವು. ಆದಾದ ಮೇಲೆಯೇ ಅವರು ನಮ್ಮನ್ನು ಅಲ್ಲಿಂದ ಬಿಟ್ಟದ್ದು. ಇದಾದ
ಮೇಲೆ ನಾವು ಕಾಶಿಗೆ ಹೋಗಿ,ಅನೇಕ ದಿನಗಳು ಅಲ್ಲಿ ತಂಗಿದ್ದು, ಸಭಾ ಉತ್ಸವಾದಿಗಳನ್ನು
ಮುಗಿಸಿ ಮತ್ತೆ ಧನಬಾದಿನ ಮೂಲಕವೇ ಹಿಂತಿರುಗಿದೆವು. ಈ ಬಾರಿ ನಾವು ಬಂದಾಗ
ಅದ್ದೂರಿಸ್ವಾಗತ, ಅಭೂತಪೂರ್ವಸ್ವಾಗತ. ಇದೇನು ಆಶ್ಚರ್ಯ ಎಂದು ವಿಚಾರಿಸಿದೆವು. ಆ ಭಾಗದ
ಎಲ್ಲ ಉದ್ಯಮಿಗಳು ಮಹಾವೈಭವದಿಂದ ನಮ್ಮನ್ನು ಬಾಮಾಡಿಕೊಂಡರು.ಆನಂದಭಾಷ್ಪ ತುಂಬಿ ಆ
ಹೆಣ್ಣು ಮಗಳು ಬಂದು ತನಗೆ ಬಂದಿದ್ದ ಬಿಳುಪು ರೋಗ ಸಂಪೂರ್ಣ ನಿವಾರಣೆಯಾಗಿದೆಯೆಂದು
ಹೇಳಿ ಅಲ್ಲಿದ್ದವರಿಗೆಲ್ಲಾ ನಾವೇ ರಾಘವೇಂದ್ರಸ್ವಾಮಿಗಳೆಂದು, ಹೇಳತೊಡಗಿದರು. ನಾವು
ರಾಘವೇಂದ್ರಸ್ವಾಮಿಗಳಲ್ಲ ಎಂದು ಎಷ್ಟು ಹೇಳಿದರೂ ಆಕೆ ಒಪ್ಪಲಿಲ್ಲ. ಕಡೆಗೆ
ರಾಘವೇಂದ್ರಸ್ವಾಮಿಗಳ ಚಿತ್ರ ತೋರಿಸಿ, ಅವರ ಅನುಗ್ರಹ ಎಷ್ಟು ಪ್ರಬಲ ಎಂದರೆ ಅದರ ಫಲವೇ
ನಿನ್ನ ರೋಗನಿವಾರಣೆ. ಮನಶ್ಯಾಂತಿ ಎಂದು ಹೇಳಿದೆವು. ರಾಘವೇಂದ್ರರು ಪರಮದಯಾಸಮುದ್ರರು.
ನಮ್ಮನ್ನು ಹರಸಿ ಅನುಗ್ರಹಿಸಿದ್ದಾರೆ.
(ವಿದ್ಯಾಮಾನ್ಯರ ವಿಚಾರಧಾರೆ)
೨.