ಶ್ರೀ
ನಾರಾಯಣ ಅವತಾರನಾದ ಶ್ರೀಕೃಷ್ಣನು ಪರದೇವತೆಯು ಇದು ಸತ್ಯ. ಇದು
ಸತ್ಯ. ಇದು
ಸತ್ಯ. ಈ
ತತ್ವಜ್ಞಾನವನ್ನು ದೃಢಪಡಿಸಿಕೊಳ್ಳು. ಶ್ರೀ ನಾರಾಯಣ ಸ್ವರೂಪ ಶ್ರೀ ಕೃಷ್ಣನನ್ನು
ಸ್ಮರಿಸು. ಭಜಿಸು, ನಮಿಸು, ಶರಣೆನ್ನು. ಶ್ರೀ ಕೃಷ್ಣ ವಿಗ್ರಹವನ್ನು ನೋಡು. ಅವನ
ಕಥೆಗಳನ್ನು ಕೇಳು. ಶ್ರೀ ಕೃಷ್ಣನ ಪಾದ ತುಳಸಿಯನ್ನು ಆಘ್ರಾಣಿಸು. ಅವನ
ಪಾದಸ್ಪರ್ಶವನ್ನು ಮಾಡು. ಅವನಿಗೆ ಸಮರ್ಪಿತವಾದ ಹವಿಷ್ಯಾನ್ನವನ್ನು ಭುಂಜಿಸು. ಶ್ರೀ
ಕೃಷ್ಣ ಮಂದಿರಕ್ಕೆ ಹೋಗು. ಪರೋಪಕಾರವನ್ನು ಮಾಡು. ಮೊರೆ
ಹೊಂದುವಜನರನ್ನು ರಕ್ಷಿಸು.
ಸತ್ಯ ಪ್ರಿಯ ಮತ್ಥು ಹಿತನುಡಿಗಳನ್ನು ಆಡು. ಅರ್ಥಿಗಳು ಅಪೇಕ್ಷಿಸುವ ವಸ್ತುಗಳನ್ನು
ಕೊಡು. ಸಜ್ಜನರ ಸಂಸರ್ಗವನ್ನು ಮಾಡು. ಭೂತದಯೆ ಉಳ್ಳವನಾಗು. ಮಾತಾಪಿತೃ ಭಕ್ತಿಮಾನ್
ಆಗು. ದೊಡ್ಡವರಲ್ಲಿ ಗೌರವ ಬುದ್ಧಿಯುಳ್ಳವನಾಗು. ಶ್ರೀ ಕೃಷ್ಣನಲ್ಲಿ ಪರಮಭಕ್ತರಾಗಿ
ಜ್ಞಾನಿಗಳೂ ಆಗಿ ಇರುವವರನ್ನೇ ಗುರುಗಳನ್ನಾಗಿ ಸ್ವೀಕರಿಸು. ಹೆಂಡತಿ ಮಕ್ಕಳಿಗೆ
ಹಿತೋಪದೇಶವನ್ನು ಮಾಡುತ್ತಾಇರು. ಗೋವುಗಳನ್ನು ರಕ್ಷಿಸು. ಬಹು ಸಜ್ಜನರ ಪಕ್ಷವನ್ನು
ಸ್ವೀಕರಿಸು. ದೇಶಸೇವೆಯನ್ನು ದೇವರ ಸೇವೆ ಎಂಬ ಭಾವನೆಯಿಂದ ಮಾಡುತ್ತಿರು.
ಸತ್ಸಿಂದ್ದಾಂತ ವಿರುದ್ಧ ವಾದಗಳನ್ನು ಖಂಡಿಸು. ಕಾಮ, ಕ್ರೋಧ, ಲೋಭಗಳನ್ನು ಬಿಡು.
ದೇವರಲ್ಲಿ ದೇವರ ಅನುಗ್ರಹ ಮಾತ್ರವನ್ನು ಕೇಳು. ತನ್ನಿಂದ ಇತರರಿಗೆ ನೋವು ಆಗದಂತೆ
ಜಾಗರೂಕನಾಗಿರು. ಯಾವ ಪ್ರಾಣಿಯನ್ನೂ ಹಿಂಸಿಸಬೇಡ. ಸುರಾಪಾನ ಮೊದಲಾದ ದುಶ್ಚಟಗಳನ್ನು
ಬಿಡು. ಧನಪ್ರಾಪ್ತಿಗಾಗಿ ನೀಚಕೆಲಸವನ್ನು ಮಾಡಬಾರದು. ಅತಿಥಿ
ಸತ್ಕಾರವನ್ನು ಮಾಡು. ಜಲ, ಅನ್ನ, ಔಷಧಗಳ ದಾನವನ್ನು, ಪಾತ್ರಾಪಾತ್ರ ವಿಚಾರವನ್ನು
ಮಾಡದೆ ಮಾಡು. ಸ್ವರ್ಣ-ಗೋ-ಜ್ಞಾನದಾನಗಳನ್ನು ಸತ್ಪಾತ್ರಕ್ಕೇನೇ ಮಾಡು. ಸಂಸ್ಕೃತ
ಭಾಷೆಯನ್ನು ಕಲಿಯುವವನಾಗು. ಗೀತಾ ವಿಷ್ಣುಸಹಸ್ರನಾಮ ಪಾಠವನ್ನು ಬಿಡಬೇಡ. ರಾಮಾಯಣ,
ಬಾರತ, ಭಾಗವತಗಳನ್ನು ಕೇಳುತ್ತಾ ಇರು. ದುರ್ಲಬವಾದ ಮನುಷ್ಯ ಜನ್ಮವನ್ನು ವ್ಯರ್ಥ
ಮಾಡಿಕೊಳ್ಳಬೇಡ.
ಶ್ರೀ ಶ್ರೀ ವಿದ್ಯಾಮಾನ್ಯ ಶ್ರೀಪಾದರು