ಭಂಡಾರಕೇರಿ ಮಠ,ಉಡುಪಿ





ಶ್ರೀ ಭಾಗವತಾಶ್ರಮ ಪ್ರತಿಷ್ಠಾನ,
ಶ್ರೀ ಭಂಡಾರಕೇರಿ ಮಠದಿಂದ ಪ್ರಕಾಶಿತ ಗಂಥಗಳು

ಭಗವದ್ ಬಾದರಾಯಣ ಪ್ರಣೀತಂ
ಶ್ರೀಮದ್ ಭಾಗವತ ಮಹಾಪುರಾಣಮ್ - ೧ನೆ ಸಂಪುಟ
(ಸುಲಲಿತಂ ಶ್ರೀಮದ್ ಭಾಗವತಮ್)
( ೧ ಮತು ೨ ನೆಯ ಸ್ಕಂದ)
ಬೆಲೆ:ರೂ ೨೦೦/=
ಶ್ರೀಗಳ - ಹೃದಯವಾಣಿ
ಶ್ರೀಗಳಿಂದ - ಭಾಗವತ ಹೃದಯ
ಶ್ರೀಮದ್ ಭಾಗವತ ಮಹಾಪುರಾಣಮ್ - ೨ನೆ ಸಂಪುಟ
(ಸುಲಲಿತಂ ಶ್ರೀಮದ್ ಭಾಗವತಮ್)
( ೩ ನೆಯ ಸ್ಕಂದ)
ಬೆಲೆ:ರೂ ೨೦೦/=
ಶ್ರೀಗಳ - ಹೃದಯವಾಣಿ
ಶ್ರೀಗಳಿಂದ - ತೃತೀಯಸ್ಕಂಧದ ಹೃದ್ಗತ

ಶ್ರೀಮದ್ ಭಾಗವತ ಮಹಾಪುರಾಣಮ್ - ೩ನೆ ಸಂಪುಟ
(ಸುಲಲಿತಂ ಶ್ರೀಮದ್ ಭಾಗವತಮ್)
( ೪ ನೆಯ ಸ್ಕಂದ)
ಬೆಲೆ:ರೂ ೨೦೦/=
ಶ್ರೀಗಳ - ಹೃದಯವಾಣಿ
ಶ್ರೀಗಳಿಂದ - ಚತುರ್ಥಸ್ಕಂಧದ ಹೃದ್ಗತ


ಅನುವಾದಕರು

ವಿದ್ವಾನ್ ಕೆ.ಹಯವದನ ಪುರಾಣಿಕ, ನಿವೃತ್ತ ಪ್ರಾಂಶುಪಾಲರು
ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು


ಪ್ರಕಾಶಕರು

ಶ್ರೀ ಭಾಗವತಾಶ್ರಮ ಪ್ರತಿಷ್ಠಾನ, ಶ್ರೀ ಭಂಡಾರಕೇರಿ ಮಠ,
ಗಿರಿನಗರ, ಬೆಂಗಳೂರು


ಶ್ರೀಮದ್ ಭಾಗವತ ಮಹಾಪುರಾಣಮ್ - ೧ನೆ ಸಂಪುಟದ
ಹೃದಯವಾಣಿ
ಶ್ರೀ ಮದ್ಭಾಗವತವು ಭಾಗವತಾಶ್ರಮ ಪ್ರಕಾಶನದಿಂದ ಸಂಪೂರ್ಣವಾಗಿ ಆಚಾರ್ಯರ ತಾತ್ಪರ್ಯದ ಹಿನ್ನೆಲೆಯಲ್ಲಿ ಸೊಗಸಾಗಿ ಕನ್ನಡೀಕೃತವಾಗ ಬೇಕೆಂದು ನಮ್ಮ ಹೆಬ್ಬಯಕೆಯಾಗಿತ್ತು. ಅದಕ್ಕೆ ತಕ್ಕಂತೆ ಸಮರ್ಥರಾದ ಹಯವದನ ಪುರಾಣಿಕರು ಅನುವಾದಕರಾಗಿ ನಮಗೆ ದೊರೆತಿದ್ದು ಅತೀವ ಹರ್ಷವನ್ನುಂಟು ಮಾಡಿದೆ. ತಾತ್ಪರ್ಯಾಂಶವನ್ನು ಸ್ವಲ್ಪವೂ ಬಿಡದೆ ಅವರು ಎರಡು ಸ್ಕಂದಗಳ ಅನುವಾದವನ್ನು ಹೃದಯಂಗಮವಾಗಿ ಮಾಡಿದ್ದಾರೆ. ಜೊತೆಯಲ್ಲಿ ಕೆಲವು ಅಪವ್ಯಾಖ್ಯಾನವನ್ನೂ ಸರಳವಾಗಿ ನಿರಾಕರಿಸಿದ್ದಾರೆ. ಇವರ ಮನೋಜ್ಞ ಅನುವಾದದ ಕಾರ್ಯಕ್ಕಾಗಿ ಅವರನ್ನು ಅಭಿನಂದಿಸುತ್ತಾ ವಿಶೇಷವಾಗಿ ಹರಿ-ಗುರುಗಳ ಅನುಗ್ರಹವನ್ನು ಅವರಿಗಾಗಿ ಪ್ರಾರ್ಥಿಸುತ್ತೇವೆ. ಅನುವಾದಕರು ಭಾಗವತಮಾಹಾತ್ಮ್ಯ - ಭಾಗವತ ಸಪ್ತಾಹವಿಧಿ, ಎರಡು ಸ್ಕಂಧಗಳ ಸಮಗ್ರ ಶ್ಲೋಕಗಳು ಅದರ ಅಧ್ಯಾಯಗಳ ಸಾರಾಂಶ ಹಾಗೂ ಶ್ಲೋಕಗಳ ಭಾವಾನುವಾದ ಇವೆಲ್ಲವುಗಳನ್ನು ಅನುವಾದದಲ್ಲಿ ಒದಗಿಸಿದ್ದಾರೆ. ಇಂಥ ಉಪಯುಕ್ತ ಅನುವಾದದ ಪ್ರಕಾಶನದ ವೆಚ್ಚವನ್ನು ಸಂಪೂರ್ಣವಾಗಿ ಹೊತ್ತು ಮಹಾ ಔದಾರ್ಯವನ್ನು ತೋರಿದ ಹರಿಗುರು ಭಕ್ತರೂ, ಧರ್ಮಭೂಷಣರೂ ಆದ ಕೆ. ಯಾದವಾಚಾರ್ಯ ರನ್ನು ನಾವು ಅಭಿನಂದಿಸುತ್ತೇವೆ. ನಮ್ಮ ಪರಮ ಗುರುಗಳಾದ ವಿಬುಧಪ್ರಿಯರ ನೆಚ್ಚಿನ ಶಿಷ್ಯರಾದ ಹಾಗೂ ತಮ್ಮ ಪೂಜ್ಯ ಪಿತೃಗಳಾದ ಪ್ರಕಾಂಡ ಶ್ರೀಗುರುಗುಂಡಿ ರಾಮಾಚಾರ್ಯರ ಶ್ರೇಯಸ್ಸಿಗಾಗಿ ಅವರ ಸುಪುತ್ರರಾದ ಯಾದವಾಚಾರ್ಯರು ಈ ಔದಾರ್ಯವನ್ನು ತೋರಿದ್ದಾರೆ. ಅವರಿಗೆ ಹಾಗೂ ಅವರ ಕುಟುಂಬವರ್ಗಕ್ಕೆ ಭಗವಂತನು ಆಯುರಾರೋಗ್ಯಾದಿ ಸಂಪತ್ತನ್ನಿತ್ತು ಅನುಗ್ರಹಿಸಲಿ ಎಂದು ನಮ್ಮ ಉಪಾಸ್ಯಮೂರ್ತಿಯಾದ ಶ್ರೀರಾಮಚಂದ್ರನನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಪ್ರಾರ್ಥಿಸುತ್ತೇವೆ.
ಶ್ರೀ ವಿದ್ಯೇಶತೀರ್ಥ ಶ್ರೀಪಾದರು
ಶ್ರೀ ಭಂಡಾರಕೇರಿ ಮಠ

ಭಾಗವತ ಹೃದಯ
ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಶ್ರೀ ಭಂಡಾರಕೇರಿ ಮಠ, ಉಡುಪಿ

ಕರ್ತೃವಿನ-ನಿದೋರ್ಷತ್ವ-ಸರ್ವಜ್ಞತ್ವ
        ಶ್ರೀಮದ್ಭಾಗವತವು ಪುರಾಣಗಳಲ್ಲಿ ತಿಲಕಪ್ರಾಯವಾಗಿದೆ. ಮನುಷ್ಯೋತ್ತಮರಲ್ಲಿ ಕುಳಿತು ಅಜ್ಞಾನ-ಮಿಥ್ಯಾಜ್ಞಾನರೂಪದಿಂದ ಪೀಡಿಸುತ್ತಿದ್ದ ಕಲಿಯ ಶಿರವನ್ನು ಭಗವಾನ್ ವ್ಯಾಸರು ಭಗವತ್ ಪರವಾದ ಇಂಥ ಪುರಾಣಶಸ್ತ್ರದಿಂದಲೇ ಕತ್ತರಿಸಿದರೆಂದು ಮಹಾಭಾರತತಾತ್ಪರ್ಯನಿರ್ಣಯದಲ್ಲಿ ಮಧ್ವಾಚಾರ್ಯರು ಸಾರಿದ್ದಾರೆ. ವ್ಯಾಸರು ಯಃಕಶ್ಚಿತ್ ಋಷಿಯಲ್ಲ. ಭಾಗವತವೇ '' ಪರಸ್ಯ ಪುಂಸಃ ಪರಮಾತ್ಮನಃ ಕಲಾಂ'' ಎನ್ನುವ ವಚನದಲ್ಲಿ ತಿಳಿಸಿರುವಂತೆ ಪರಮಾತ್ಮನ ಸಾಕ್ಷಾತ್ ಅವತಾರ. ವಾಸ್ತವಿಕವಾಗಿ ಅವರು 'ಅಜರು' - ನಮ್ಮಂತೆ ಭೌತಿಕ ದೇಹ ಸಂಬಂಧ ರೂಪವಾದ ಜನ್ಮ ವಿದೂರರು. ಆದರೂ -ಪ್ರಜಾತ'ರು- ಸಚ್ಚಿದಾನಂದಮಯ ರೂಪದಿಂದ ಲೋಕದಲ್ಲಿ ಪ್ರಕಟರಾದವರು.
        ''ತಸ್ಯೈವಂ ಖಿನ್ನಮಾತ್ಮಾನಂ ಮನ್ಯಮಾನಸ್ಯ ಖಿದ್ಯತಃ ' ಎನ್ನುವ ವಚನದಲ್ಲಿ ಅವರಿಗೆ ಖೇದವಾಯಿತೆಂದು ಉಲ್ಲೇಖವಿದೆ. ಆದರೆ ಇಲ್ಲಿ ಖೇದವೆಂದರೆ ದುಃಖವಲ್ಲ. 'ಖೇದೋತೃಪ್ತಿರನಲಂಬುದ್ಧಿಃ ' ಎನ್ನುವ ಅಭಿಧಾನಕ್ಕನುಸಾರವಾಗಿ ಅತೃಪ್ತಿ ಎಂಬರ್ಹವನ್ನು ಸ್ವೀಕರಸಬೇಕು. ಭಕ್ತರಿಗಾಗಿ ತಾನು ಮಾಡಿದ ಜ್ಞಾನಕಾರ್ಯ ಸಾಲದು, ಇನ್ನೂ ತಾನು ಮಾಡಬೇಕೆಂಬ ಮಹೌದಾರ್ಯವೇ ಇಲ್ಲಿ ಖೇದ ಶಬ್ದದಿಂದ ಸೂಚಿತವಾಗಿದೆ.
        ಬಾದರಾಯಣರು ತನ್ನ ಪುತ್ರರಾದ ಶುಕರು ಸನ್ಯಾಸಿಯಾಗಿ ಹೊರಟಾಗ ಪುತ್ರನ ವಿರಹವನ್ನು ತಾಳಲಾರದೆ ಪುತ್ರನನ್ನು ಕೂಗಿದರು. ಅವರು ಕಾತರತೆಗೆ ಒಳಗಾದರು ಎಂಬ ಉಲ್ಲೇಖವಿದೆ. ಆದರೆ 'ವಿರಹಕಾತರ ಆಜುಹಾವ ' ಎನ್ನುವ ಮಾತಿಗೆ ಅಸುರ ವ್ಯಾಮೋಹಕ್ಕಾಗಿ ಅವರು ವಿರಹಕಾತರತೆಯನ್ನು ತೋರಿಸಿದರೇ ವಿನಾ ಅವರಿಗೆ ಕಾತರತೆ ಉಂಟಾಗಿಲ್ಲವೆಂದು ಅರ್ಥೈಸಬೇಕು. ಏಕೆಂದರೆ ಅವರು ದ್ವೈಪಾಯನರು. ಎಂಬ ಅರ್ಥಗರ್ಭಿತವಾದ ಶಬ್ದವನ್ನು ಬಳಸುವ ಮೂಲಕ ಈ ವಿಷಯವನ್ನು ಭಾಗವತವು ಸೂಚಿಸಿದೆ.
        ಯಮುನಾದ್ವೀಪವನ್ನೇ ಜನ್ಮಸ್ಥಾನವಾಗಿ ಪಡೆದವರು ಎಂಬರ್ಥದಲ್ಲಿ ಈ ಶಬ್ದವು ತೆರೆದುಕೊಂಡರೂ ಇದಕ್ಕೆ ಇನ್ನೊಂದು ಮುಖದ ಅಂತರಾರ್ಥವನ್ನೂ ನಾವು ಅಲ್ಲಗಳೆಯುವಂತಿಲ್ಲ. 'ದ್ವೈಪರು ' ಅಂದರೆ ಶ್ರೇಷ್ಠವಾದ ಪ್ರಸಿದ್ಧಶ್ವೇತದ್ವೀಪ ನಿವಾಸಿಗಳಾದ ಮುಕ್ತರು (ದ್ವೀಪಸ್ಯ ಸಂಬಂಧಿನಃ ದ್ವೈಪಾಃ) ಅವರಿಗೆ 'ಅಯನ' ಆಶ್ರಯನಾದವನೇ ದ್ವೈಪ + ಅಯನ = ದ್ವೈಪಾಯನ. ಅಂಥ ಮುಕ್ತರಿಗೆ ಆಸರೆಯನ್ನು ನೀಡಿದ ಭಗವಾನ್ ನಾರಾಯಣಸ್ವರೂಪರಾದ ಇವರಿಗೆ ಎಲ್ಲಿಂದ ವಿರಹವೇದನೆ? ಯಾವ ಸಾಧಕರು ಶ್ವೇತದ್ವೀಪಸ್ಥಶ್ರೀಹರಿಯನ್ನು ನೋಡಿದ ಬಳಿಕ ದೋಷದೂರರಾಗಿ ಸುಖಪೂರ್ಣರಾಗಿ 'ಶ್ವೇತ' ಎಂದೆನಿಸಿಕೊಳ್ಳುತ್ತಾರೋ 'ಶುದ್ಧಃ ಶ್ವೇತಃ ಸುಖೀ ಶ್ವೇತಃ ಶ್ವೇತವರ್ಣೋಪಿ ಕಥ್ಯತೇ ' ಎನ್ನುವ ಪ್ರಮಾಣವಚನದಿಂದ ಈ ಅರ್ಥವು ಸಿದ್ಧವಾಗಿದೆ. ಅಂಥ ಮುಕ್ತರಿಗೆ ಆಶ್ರಯನಾಗಿ ದ್ವೈಪಾಯನನಾದ ಈತನಿಗೆ ದೋಷಲೇಶವನ್ನಾದರೂ ಊಹಿಸಲು ಸಾಧ್ಯವೆ ?
        ತನಗೆ ತೃಪ್ತಯಾಗಬೇಕಾದರೆ ತಾನೇನು ಮಾಡಬೇಕೆಂದು ತೋಚದೆ ಅವರು ತನ್ನಾಶ್ರಮಕ್ಕೆ ಬಂದಿರುವ ನಾರದರನ್ನು ಕೇಳಿದರೆಂದೂ ಉಲ್ಲೇಖವಿದೆ. ಇದೂ ಅಸುರವ್ಯಾಮೋಹಕ್ಕಾಗಿ ಅಜ್ಞಾನ ಪ್ರದರ್ಶನಮಾತ್ರ. ಏಕೆಂದರೆ ಅವರು ಸ್ವತಃ ಸರ್ವಜ್ಞರು. 'ಇದಂ ಭಾಗವತಂ ನಾಮ ಪುರಾಣಂ ಬಹ್ಮಸಮ್ಮಿತಂ | ಅಧೀತವಾನ್ ದ್ವಾಪರಾದೌ ಪಿತುರ್ದ್ವೈಪಾಯನಾದಹಂ' ಎನ್ನುವ ಭಾಗವತ ವಚನದಲ್ಲಿ ಉಲ್ಲೇಖಿಸಲ್ಪಟ್ಟ ಶುಕರು ಮಾತಿನಿಂದ ಅವರು ದ್ವಾಪರಯುಗದಲ್ಲಿ ಕೃಷ್ಣಾವತಾರಕ್ಕಿಂತ ಮೊದಲೇ ( ದ್ವಾಪರೇ, ಆದೌ ದ್ವಾಪರಾದೌ) ತಂದೆಯಾದ ವ್ಯಾಸರಿಂದ ವಿಸ್ತಾರವಾದ ಕೃಷ್ಣಚರಿತ್ರೆಯನ್ನೊಳಗೊಂಡು ಭಾಗವತವನ್ನು ಕೇಳಿದರೆಂದು ವೇದ್ಯವಾಗುತ್ತದೆ. ಭವಿಷ್ಯದ ಕೃಷ್ಣಾವತಾರದ ಬಗ್ಗೆ ಸ್ಪಷ್ಟ ಜ್ಞಾನದಿಂದ ಅವರು ಸ್ವತಃ ಸರ್ವಜ್ಞನಾದ ಭಗವತನೆಂದೇ ಸಿದ್ಧವಾಗುತ್ತದೆ. ಭಗವಂತನಲ್ಲದವರಿಗೆ ಭಗವಂತನ ಬಗ್ಗೆ ಭವಿಷ್ಯದ ಜ್ಞಾನವಿರಲು ಸಾಧ್ಯವೆ?

ವ್ಯಾಸರ ಆತ್ಮಚರಿತ್ರೆ-ಭಾಗವತ
        ಭಾಗವತವು ಶ್ರೀವ್ಯಾಸರೇ ರಚಿಸಿದ ಆತ್ಮಚರಿತ್ರೆ. ವಿವಿಧ ಅವತಾರಗಳೂ ಅವರ ಸ್ವರೂಪಭೂತಗಳಾಗಿವೆ. ಇದನ್ನೇ ''ಏತೇ ಸ್ವಾಂಶಕಲಾಃ ಪುಂಸಃ ಕೃಷ್ಣಸ್ತು ಭಗವಾನ್ ಸ್ವಯಂ'' ಎಂದು ಭಾಗವತವು ಸಾರಿದೆ. ಪೂರ್ಣನಾದ ಭಗವಂತನ ವರಾಹ-ಮತ್ಸ್ಯ ಮುಂತಾದ ಸ್ವರೂಪಾಂಶಗಳು ಸ್ವತಃ ಷಡ್ಗುಣಪೂರ್ಣನಾದ ಭಗವಾನ್ ಕೃಷ್ಣನೇ, ಅರ್ಥಾತ್ ವಾಸಿಷ್ಠ ಕೃಷ್ಣನೇ ಎಂಬರ್ಥದಲ್ಲಿ ಈ ವಚನವು ತೆರೆದುಕೊಳ್ಳುತ್ತದೆ. ವೇದವ್ಯಾಸರಿಗೆ ವೇದವನ್ನು ವಿಕರ್ಷಣ-ವಿಭಾಗ ಮಾಡಿದ್ದರಿಂದ ಕೃಷ್ಣ ಎಂಬ ಹೆಸರು ಅನ್ವರ್ಥವಾಗಿದೆ. ಭಗವಂತನು ತನ್ನನ್ನು ಯಾವ ತೆರನಾಗಿ ತಿಳಿದಿದ್ದಾನೋ ಆ ತೆರನಾಗಿ ಯಾರೂ ತಿಳಿಯಲು ಸಾಧ್ಯವಿಲ್ಲ. ಹೀಗಾಗಿ ಆತನೇ ರಚಿಸಿದ ಈ ಭಾಗವತರೂಪ ಆತ್ಮಚರಿತ್ರೆ ಅತ್ಯಂತ ಮಾನ್ಯವೆನಿಸಿದೆ.
        ವ್ಯಾಸಪ್ರಣೀತವಾದ ಈ ಭಾಗವತವನ್ನು ಪರಮವಿರಕ್ತರಾದ ರುದ್ರ ಸ್ವರೂಪಭೂತರಾದ ಶುಕರೂ ಕೇಳಿದರು. 'ಪರಿನಿಷ್ಠಿತೋಪಿ ನೈರ್ಗುಣ್ಯ ಉತ್ತಮ ಶ್ಲೋಕಲೀಲಯಾ | ಗೃಹೀತಚೇತಾ ರಾಜರ್ಷ ಆಖ್ಯಾನಂ ಯದಧೀತವಾನ್' ಎನ್ನುವ ವಚನವು ತೀಳಿಸಿರುವಂತೆ ಅವರು ತಮಗೆ ಮೋಕ್ಷ ಖಚಿತವೆಂದು ತಿಳಿದಿದ್ದರೂ ಭಗವಂತನ ಲೀಲಾಮಾಧುರ್ಯಪರವಶರಾಗಿ ಕೇಳದೆ ಸುಮ್ಮನಿರಲು ಅವರಿಂದ ಸಾದ್ಯವಾಗಲಿಲ್ಲ.

ನಿಶ್ಚಿತ ಮುಕ್ತಿಗಳಿಗೂ ಭಾಗವತ ಶ್ರವಣ-ಸಫಲ
        ಕೇವಲ ಭಗವಂತನ ಲೀಲಾ ಮಾಧುರ್ಯಕ್ಕೆ ಮನಸೋತು ಭಗವತ್ ಕಥೆಯನ್ನು ಆಲಿಸಿದ ಶುಕರಿಗೆ ಭಾಗವತಶ್ರವಣದಿಂದ ಪಾರತ್ರಿಕ ಫಲವಿಲ್ಲವೆ? ಎಂಬ ಪ್ರಶ್ನೆಯು ಇಲ್ಲಿ ಉದ್ಭವಿಸುತ್ತದೆ. ಅದಕ್ಕೆ 'ಉತ್ತಮಶ್ಲೋಕಲೀಲಯಾ' ಎಂಬ ಮಾತಿನಲ್ಲಿ ಉತ್ತರವು ಅಡಗಿದೆ. ಇಲ್ಲಿ ಉತ್ತಮಶ್ಲೋಕ ಶಬ್ದವು ಉತ್ತಮವಾದ ಕೀರ್ತಿಶಾಲಿಯಾದ ಭಗವಂತ ಎಂಬರ್ಥದಲ್ಲಿ ತೆರೆದುಕೊಂಡರೂ ಇದು ಇನ್ನೊಂದರ್ಥದಲ್ಲಿ ತೆರೆದುಕೊಳ್ಳುತ್ತದೆ. ಉತ್ತಮ-ಅತಿಶಯಿತವಾದ ಶ್ಲೋಕ-ಶಂ-ಲೋಕ = ಶ್ಲೋಕ = ಸುಖ ಮತ್ತು ಜ್ಞಾನಗಳು ಯಾವ ಲೀಲೆಯನ್ನು ಶ್ರವಣ ಮಾಡಿದ್ದರಿಂದ ಮುಕ್ತಿಯಲ್ಲಿ ಅಪರೋಕ್ಷಜ್ಞಾನಿಗಳಿಗೆ ಸಿಗುವುದೋ ಅದೇ 'ಉತ್ತಮ ಶ್ಲೋಕಲೀಲೆ' ಎನಿಸುತ್ತದೆ. (ಉತ್ತಮೌ- ಅತಿಶಯಿತೌ ಶ್ಲೋಕೌ = ಆನಂದಬೋಧೌ ಯಸ್ಯಾಃಸಾ ಉತ್ತಮ ಶ್ಲೋಕಾ, ಸಾಚಾಸೌ ಲೀಲಾ ಚ ಉತ್ತಮಶ್ಲೋಕಲೀಲಾ) 'ಶುಭಂ ಕೃತ್ಯಾ ಚ ವರ್ಧತೇ' ಎನ್ನುವ ವಚನದಲ್ಲಿ ಜ್ಞಾನೋತ್ತರದಲ್ಲಿ ಮಾಡುವ ಸತ್ಕರ್ಮಗಳಿಗೆ ಫಲ ಮೋಕ್ಷದಲ್ಲಿ ಸ್ವರೂಪಾನಂದದ ಅತಿಶಯ ಉನ್ನಾಹ (ಸ್ಪಷ್ಟ ಆನಂದದ ಅಭಿವ್ಯಕ್ತಿ) ವೆಂದು ತಿಳಿಸಲಾಗಿದೆ.
        ಶುಕರು ಬ್ರಹ್ಮಾಪರೋಕ್ಷಜ್ಞಾನಿಗಳಾದರೂ ಮುಕ್ತಿಯಲ್ಲಿ ಆನಂದದ ಉನ್ನಾಹಕ್ಕೋಸ್ಕರ ಭಗವತ್ಕಥಾ ಶ್ರವಣದಲ್ಲಿ ಪ್ರವೃತ್ತರಾದರೆಂದು ಸೂಚ್ಯವಾಗಿ -
ಋಷ್ಯುತ್ತಮಾ ದೇವಾಶ್ಚ ವಿಮುಕ್ತೌಪರಿನಿಶ್ಚಿತಾಃ |
ತಥಾಪ್ಯಧಿಕಸೌಖ್ಯಾರ್ಥಂ ಯತಂತೇ ಶುಭಕರ್ಮಸು ||
        ಎಂಬ ಪ್ರಮಾಣ ವಚನದಿಂದ ಮಧ್ವರು ತೀಳಿಸಿದ್ದಾರೆ.
        ಇಲ್ಲಿ ಉತ್ತಮಶ್ಲೋಕಹೇತುಲೀಲಾ ಉತ್ತಮಶ್ಲೋಕಲೀಲಾ ಎಂಬುದಾಗಿ ಮಧ್ಯಮಪದಲೋಪಿಸಮಾಸವನ್ನೂ ಸ್ವೀಕರಿಸಬಹುದು.
        'ಶ್ಲೋಕಂ ವಂದತಿ' ಎಂಬ ಉಪನಿಷತ್ತಿನಲ್ಲಿ ಬಂದ ಶ್ಲೋಕ ಶಬ್ದಕ್ಕೆ ಆಚಾರ್ಯರು ಭಾಷ್ಯದಲ್ಲಿ ಶಂ = ಸುಖಂ ಲೋಕಂ = ಜ್ಞಾನಂ ಚ ವಿಂದತಿ ಎಂಬುದಾಗಿ ಅರ್ಥವನ್ನು ವಿವರಿಸಿದ್ದಾರೆ. ಆದುದರಿಂದ ಶ್ಲೋಕಶಬ್ದಕ್ಕೆ ಈ ತೆರೆನಾದ ಅರ್ಥವು ಸಂಪ್ರದಾಯ ಸಿದ್ಧವಾಗಿದೆ.
ಭಾಗವತ ಶ್ರೋತೃವಾದ ಪರೀಕ್ಷತನ ಬಗ್ಗೆ ಶ್ರೀಕೃಷ್ಣ ನಿರಸ್ತ ಕುಹಕನಾದ
        ಭಗವಂತನ ವಿವಿಧ ಅವತಾರಗಳ ಕಥೆಯನ್ನು ಅದರಲ್ಲೂ ವಿಶೇಷವಾಗಿ ಶ್ರೀಕೃಷ್ಣನ ಕಥೆಗಳನ್ನು ಭಕ್ತಿ ವೈರಾಗ್ಯಸಂಪನ್ನನಾಗಿ ಹರಿಪಾದೋದಕವೆನಿಸಿದ ಮಹಾಗಂಗಾಸನ್ನಿಧಾನದಲ್ಲಿ ಋಷ್ಯಾದಿ ವೈಷ್ಣೋತ್ತಮರಿಂದ ಕೂಡಿದ ಶ್ರೀ ಭಾರ್ಗವರಾಮ-ಶ್ರೀವ್ಯಾಸಾತ್ಮಕ ಉಭಯ ಭಗವದ್ರೂಪಗಳ ಮಹಾಸನ್ನಿಧಾನದಲ್ಲಿ ನಿರಂತರ ಏಳುದಿನಗಳ ಪರ್ಯಂತ ಮಹಾಭಾಗವತರಾದ ರುದ್ರಸ್ವರೂಪಿ ಶುಕರಿಂದ ಆಲಿಸಿದ ಪರೀಕ್ಷಿತನು "ಭೇಜೇ ಖಗೇಂದ್ರಧ್ವಜಪಾದ ಮೂಲಂ" ಎನ್ನುವ ವಚನವು ತಿಳಿಸಿದಂತೆ ಶ್ರೀಹರಿಪಾದವನ್ನು ಅನಾಯಾಸವಾಗಿ ಸೇರಿ ವಿಮುಕ್ತನಾದನು. ಬ್ರಹ್ಮಶಾಪದಿಂದ ಪ್ರೇರಿತನಾದ ತಕ್ಷಕನೂ ವೇಷಾಂತರದಿಂದ ಬಂದು ಕಚ್ಚಿದರೂ ಆತನಿಗೆ ಅಪಮೃತ್ಯು ವೇದನೆ ಭಯ ದುರ್ಗತಿಗಳನ್ನು ನೀಡಲು ಸಫಲನಾಗಲಿಲ್ಲ. ಭಗವಾನ್ ಶ್ರೀಕೃಷ್ಣನು ತನ್ನ ಭಕ್ತನ ಮೇಲೆ ಹರಿಸಿದ ಕೃಪಾಮೃತದ ಪ್ರಭಾವದಿಂದ ವೇಷಾಂತರವನ್ನು ಹೊಂದಿ 'ಕುಹಕ' ನೆನಿಸಿದ ತಕ್ಷಕನಿಂದ ಯಾವ ಅನಿಷ್ಟಗಳೂ ಭಕ್ತನಿಗೆ ಬಾರದಂತೆ ಅನಿಗ್ರಹಿಸಿದನು. ಒಟ್ಟಿನಲ್ಲಿ ತಕ್ಷಕನು ಪರೀಕ್ಷಿತನ ಬಗ್ಗೆ ಘೋರವ್ದ ಶಾಪಪ್ರಭಾವವಿದ್ದರೂ ಶ್ರೀಕೃಷ್ಣನ ಪ್ರಭಾವದಿಂದ ಹತ ತೇಜಸ್ಕನಾದನು. ಆತನಿಗೆ ಅನಿಷ್ಟವನ್ನು ನೀಡಲು ವಿಫಲನಾಗಿ ನಿರಸ್ತನಾದನು
        ಈ ರೀತಿಯಾಗಿ ತಕ್ಷಕನ ಪ್ರಭಾವವನ್ನು ಪರೀಕ್ಷತನ ವಿಷಯದಲ್ಲಿ ನಿರಾಸ ಮಾಡಿದ್ದರಿಂದ ಮೊದಲನೆಯ ಪದ್ಯದಲ್ಲಿ ಭಗವಾನ್ ಶ್ರೀಕೃಷ್ಣನು ನಿರಸ್ತಕುಹಕನೆಂದು ಕೀರ್ತಿತನಾಗಿದ್ದಾನೆ. ವಿಜಯಧ್ವಜರು ಕುಹಕ ಶಬ್ದಕ್ಕೆ ವೇಷಾಂತರಲೀನನಾದ ತಕ್ಷಕ ಎಂಬರ್ಥವನ್ನೂ ಬರೆದಿದ್ದಾರೆ. ಆದುದರಿಂದ ಈ ಅರ್ಥವು ಇಲ್ಲಿ ಸಂಪ್ರದಾಯಸಿದ್ಧವಾಗಿದ್ದು ಉಚಿತವೆನಿಸಿದೆ. ತಕ್ಷಕನಿಂದ ದೇಹತ್ಯಾಗದ ಸಮಯದಲ್ಲಿ ಹರಿಯಲ್ಲಿ ಮನನೆಟ್ಟ ಪರೀಕ್ಷತನಿಗೆ ಯಾವ ಅನಿಷ್ಟಗಳೂ ಆಗಲಿಲ್ಲವೆಂದು-
ಬ್ರಹ್ಮಶಾಪೋತ್ಥಿತಾದ್ಯಸ್ತು ತಕ್ಷಕಾತ್ ಪ್ರಾಣವಿಪ್ಲವೇ |
ನ ಸಂಮುಮೋಹೋರುಭಯಾತ್ ಭಗವತ್ಯರ್ಪಿತಾಶಯಃ ||
        ಎಂಬ ವಚನವನದಲ್ಲಿ ಪ್ರತಿಪಾದಿಸಲಾಗಿದೆ.
ಶುಕರ ವೈಶಿಷ್ಯ
        ಶುಕಾಚಾರ್ಯರು, ಸರ್ವಭೂತ ಹೃದಯಂ ಎಂದು ಭಾಗವತವು ಸೂಚ್ಯವಾಗಿ ಬೋಧಿಸಿದಂತೆ ಸರ್ವ ಜೀವರ ಹೃದ್+ಅಯಂ=ಹೃದಯ - ಮನಸ್ಸಿನಲ್ಲಿ ನಿಯಾಮಕರಾಗಿ ನೆಲೆಸಿದವರು. ಅರ್ಥಾತ್ ಮನೋನಿಯಾಮಕ ರುದ್ರ ಸ್ವರೂಪಭೂತರು. 'ಅಹಂಕಾರಾತ್ಮಕೋ ರುದ್ರಃ ಶುಕೋ ದ್ವೈಪಾಯನಾತ್ಮಜಃ' ಎನ್ನುವ ಸ್ಕಾಂದ ವಚನದಿಂದ ಈ ಪ್ರಮೇಯವನ್ನು ಮಧ್ವರು ಸ್ಪಷ್ಟಪಡಿಸಿದ್ದಾರೆ.
        ಅವರ ಇನ್ನೊಂದು ಮುಖದ ವೈಶಿಷ್ಟ್ಯವನ್ನು 'ಅಪೇತಕೃತ್ಯಂ' ಎನ್ನುವ ಪದದಿಂದ ಸೂಚಿಸಲಾಗಿದೆ. ಛೇದಿಸಲು ಅರ್ಹವಾದ ( ಪರಿಹರಿಸಲು ಯೋಗ್ಯವಾದ) ಅರ್ಥಾತ್ ಪರಿಹಾರಮಾಡದೆ ಉಳಿದಿರುವ ಪರೀಕ್ಷಿತನು ಕೇಳಿದಯಾವ ಪ್ರಶ್ನೆಯೂ ಅವರಲ್ಲಿ ಇಲ್ಲ. ಎಲ್ಲಾ ಪ್ರಶ್ನೆಗಳನ್ನು ಅವರು 'ಛಿನ್ನ ಸಂಶಯ' ರೆನಿಸಿದ್ದಾರೆ. ಇದೇ ಗುರುವಿನ ದೊಡ್ಡ ಲಕ್ಷಣ 'ಅಸಂಶಯಃ ಸಂಶಯಚ್ಛಿತ್ ಗುರುರುಕ್ತೋ ಮನೀಷೀಭಿಃ' ವಾಯುದೇವರ ವಿಶೇಷ ಸನ್ನಿಧಾನ ಬಲದಿಂದ ರುದ್ರರೂಪಿ ಶುಕರು ಶಿಷ್ಯನ ಎಲ್ಲಾಪ್ರಶ್ನೆ (ಸಂಶಯ) ಗಳನ್ನು ಪರಿಹರಿಸಲು ಶಕ್ತರಾದರು.
        ಅಪೇತಕೃತ್ಯ ಎನ್ನುವ ಪದವು ಅವರ ಇನ್ನೊಂದು ಮುಖ್ಯ ವೈಶಿಷ್ಟ್ಯದಲ್ಲೂ ತೆರೆದುಕೊಳ್ಳುತ್ತದೆ.
        ಅವರು ರುದ್ರಾವತಾರ ಭೂತರಾದ ದೂರ್ವಾಸರಂತೆ ಯಾವ ಕೃತ್ಯೆಯನ್ನು ವಿಷ್ಣುಭಕ್ತರ ವಿರುದ್ಧ ಪ್ರಯೋಗಿಸಿ ವೈಷ್ಣವದ್ರೋಹ ಬಗೆದವರಲ್ಲ. ಅಥವಾ ರುದ್ರಸ್ವರೂಪರಾದ ಅಶ್ವತ್ಠಾಮಾಚಾರ್ಯರಿಗೆ ಕೃಷ್ಣನಿಗೆ ಅಪ್ರಿಯವಾಗುವ ರೀತಿಯಲ್ಲಿ ವೈಷ್ಣವನಾದ ಪರೀಕ್ಷತನು ಛೇದ್ಯನಾದಂತೆ (ಸಂಹರಿಸಲು ಯೋಗ್ಯನಾದಂತೆ) ಇವರಿಂದ ಯಾವ ವೈಷ್ಣವರೂ ಕೃಷ್ಣನಿಗೆ ಅಪ್ರಿಯವಾದ ಹಿಂಸೆಗೆ ಒಳಗಾಗಲಿಲ್ಲ. ಒಟ್ಟಿನಲ್ಲಿ ರುದ್ರನ  ಅವತಾರಭೂತರಾದ ದೂರ್ವಾಸ-ಅಶ್ವತ್ಥಾಮಾಚಾರ್ಯರು ವೈಷ್ಣವದ್ರೋಹ ಬಗೆದರೂ ಈ ಶುಕರೂಪವು ಈ ಕೆಲಸವನ್ನು ಮಾಡಿಲ್ಲ. ಇದೇ ಈ ಶುಕರೂಪದ ಇನ್ನೊಂದು ಮುಖದ ವೈಶಿಷ್ಟ. ಇದಕ್ಕೆಮುಖ್ಯಕಾರಣ ವಾಯುದೇವರ ವಿಶೇಷ ಸನ್ನಿಧಾನದ ಪ್ರಭಾವವೆಂದೇ ತಿಳಿಯಬೇಕು. ಈ ಅಂಶವನ್ನು 'ಸ್ವಮರೋತ್ತಮಾಭಂ' ಎನ್ನುವ ಪದದಿಂದ ಸೂಚ್ಯವಾಗಿ ತಿಳಿಸಲಾಗಿದೆ. ಅಮರೋತ್ತಮ ಅಂದರೆ ವಾಯುದೇವರು ಅವರ ಸು=ಶೋಭನವಾದ, ಆಭಾ=ಸನ್ನಿಧಾನ ಪ್ರಭಾವ.  ಅದನ್ನು ಹೊಂದಿದ ಶುಕರು 'ಸ್ವಮರೋತ್ತಮಾಭ' ಎಂದೆನಿಸಿದ್ದಾರೆ. ಅಪೇತಾ ಕೃತ್ಯಾ ಯಸ್ಮಾತ್ ಸಃ ಅಪೇತಕೃತ್ಯಃ= ಎಂಬುದಾಗಿ ದೂರ್ವಾಸರಲ್ಲಿದ್ದ ದೋಷವನ್ನು ನಿರಾಕರಿಸುವ ಬಗೆಯಲ್ಲಿ ಈ ಪದವು ತೆರೆದುಕೊಂಡರೆ, ಅಪೇತಃ ಕೃತ್ಯಃ (ಹಿಂಸ್ಯಃ) ಯಸ್ಮಾತ್ ಸಃ ಎಂಬುದಾಗಿ ಅಶ್ವತ್ಥಾಮಾಚಾರ್ಯರಲ್ಲಿದ್ದ ದೋಷವನ್ನು ನಿರಾಕರಿಸುವ ಬಗೆಯಲ್ಲಿ ತೆರೆದುಕೊಳ್ಳುತ್ತದೆ.
        ಕೃತಿ ಛೇದನೇ ಎಂಬ ಧಾತುವನ್ನು ಮೂಲವಾಗಿ ಸ್ವೀಕರಿಸಿದಾಗ ಮೊದಲನೆಯ ಅರ್ಥ ಹಾಗೂ ಮೂರನೆಯ ಅರ್ಥ ಸಮುಚಿತವಾಗುತ್ತದೆ. ಕಲಿಯ ಆವೇಶದಿಂದ ಕಲಿಪ್ರೀತಿಗಾಗಿ ವೈಷ್ಣವನಾದ ಪರೀಕ್ಷಿತನನ್ನು ಅಶ್ವತ್ಥಾಮರೂಪದಿಂದ ಕೃಷ್ಣನಿಗೆ ಅಪ್ರಿಯವಾಗುವಂತೆ ಸಂಹರಿಸಲುದ್ಯುಕ್ತರಾಗಿ ಮಾಡಿದ ಅಪರಾಧದ ಪರಿಮಾರ್ಜನೆಗಾಗಿಯೇ ಎಂಬಂತೆ ಅದೇ ಪರೀಕ್ಷತನಿಗೆ ರುದ್ರದೇವರು ಶುಕರೂಪದಿಂದ ಭಾಗವತಾಮೃತವನ್ನುಣಿಸಿ ಅನುಗ್ರಹಿಸಿ ಕೃಷ್ಣಾನುಗ್ರಹ ಪಾತ್ರರಾದರು.
ಬ್ರಹ್ಮರಾತ-ಶುಕ
ತ್ರೀಮೂರ್ತಿತಾರತಮ್ಯ

        ಜಗದ್ಗುರು ಸ್ಥಾನದಲ್ಲಿ ವಿರಾಜಮಾನರಾದ ಬ್ರಹ್ಮದೇವರನ್ನು ಒಮ್ಮೆ ಜ್ಞಾನಾರ್ಥಿಗಳಾಗಿ ಮುನಿಗಳು ಗುರುವನ್ನು ಕರುಣಿಸಲು ಪ್ರಾರ್ಥಿಸಿದರು. ಆಗ ಚತುರ್ಮುಖ ಬ್ರಹ್ಮದೇವರಿಂದ ಶುಕರು ಬಾಲರಾಗಿದ್ದರೂ ಜ್ಞಾನ ವೃದ್ಧರಾದುದರಿಂದ ಋಷಿಗಳಿಗೆ ತತ್ತ್ವದ ಉಪದೇಶದ ಸಲುವಾಗಿ ಗುರುರೂಪದಲ್ಲಿ ಪ್ರದಾನ ಮಾಡಲ್ಪಟ್ಟರು. ಆದುದರಿಂದ ವ್ಯಾಸಪುತ್ರರಾದ ಅವರಿಗೆ 'ಬ್ರಹ್ಮರಾತ' (ಬ್ರಹ್ಮನಿಂದ ದತ್ತರು) ಎಂಬ ಹೆಸರು ಪ್ರಾಪ್ತವಾಯಿತು.
ಬಾಲೋಪಿ ಸ ಗುರುತ್ವೇನ ಮುನಿಭ್ಯೋ ಬ್ರಹ್ಮಣೋ ಯತಃ|
ದತ್ತೋತಃ ಬ್ರಹ್ಮರಾತೇತಿ ನಾಮ ವೈಯಾಸಕೇರಭೂತ್ ||
        ಎನ್ನುವ ಮಾತಿನಿಂದ ಈ ವಿಷಯವು ವೇದ್ಯವಾಗುತ್ತದೆ.
        ಎಲ್ಲಾ ಮುನಿಗಳಿಗೆ 'ಜ್ಞಾನಂ ಮಹೇಶ್ವರಾದಿಚ್ಛೇತ್' ಎಂದು ಭಾಗವತವು ಸೂಚಿಸಿದಂತೆ ಅಪೇಕ್ಷಣೀಯವಾದ (ಶಿವನಿಂದ ಜ್ಞಾನವನ್ನು ಪಡೆಯಬೇಕೆಂದು ಭಾಗವತದ ಶಾಸನ) ಜ್ಞಾನವನ್ನು ರುದ್ರರುಪಿ ಶುಕರು ಅನುಗ್ರಹಿಸಿ 'ಮುನಿಗುರು' (ಗುರುಂ ಮುನೀನಾಂ) ವೆಂದು ಪ್ರಸಿದ್ಧಿ ಪಡೆದರು. ಬ್ರಹ್ಮನಿಂದ ರುದ್ರರೂಪರಾದ ಶುಕರು ಜ್ಞಾನಕಾರ್ಯದಲ್ಲಿ ನಿಯೋಜಿತರಾದುದರಿಂದ ನಿಯೋಜಕರಾದ ಬ್ರಹ್ಮನು ಶ್ರೇಷ್ಠನು. ಅವನಿಂದ ನಿಯೋಜಿತರಾದ ಶುಕರು (ರುದ್ರನು) ಅವರಿಗಿಂತ ನಿಕೃಷ್ಟರು. ಅವನನ್ನೂ ಜಗದ್ಗುರು ಸ್ಥಾನದಲ್ಲಿ ನಿಯೋಜಿಸಿದವನು ಶ್ರೀ ಹರಿ. 'ಜಗದ್ಗುರುತ್ವ ಮಾದಿಷ್ಟಂ ಮಯಾ ತೇ ಕಮಲೋದ್ಭವ' ಎಂಬ ಮಾತಿನಿಂದ ಈ ವಿಷಯ ಸಿದ್ಧವಾಗಿದೆ. ಇದಲ್ಲದೆ ಭಾಗವತದಲ್ಲಿ ತಿಳಿಸಿದಂತೆ ಆತನನ್ನು ಸೃಜಿಸಿ ಸೃಷ್ಟಿಕಾರ್ಯದಲ್ಲಿ ತೊಡಗಿಸಿದವನೂ ಶ್ರೀಹರಿ. ಆದುದರಿಂದ ನಿಯೋಜಿತರಾದ ಬ್ರಹ್ಮನಿಗಿಂತಲೂ ಆತನನ್ನು ಸೃಷ್ಟಾದಿಕಾರ್ಯದಲ್ಲಿ ನಿಯೋಜಿಸಿದ ಶ್ರೀಹರಿ ಉತ್ತಮನು- ಸರ್ವೋತ್ತಮನು ಎಂಬುದು ಸಿದ್ಧವಾಯಿತು.
        ತ್ರಿವಿಕ್ರಮರೂಪಿ ಪರಮಾತ್ಮನ ಪಾದವನ್ನು ತೊಳೆದವನು ಬ್ರಹ್ಮದೇವನು. ಪಾದಪ್ರಕ್ಷಾಲನ ಜಲವಾದ ಗಂಗೆಯನ್ನು ಶಿರಸ್ಸಿನಲ್ಲಿ ಧರಿಸಿ ಶಿವನು ಶಿವನಾದನು (ಪವಿತ್ರನೂ ಮಂಗಳ ಸ್ವರೂಪನೂ ಆದನು) ಪಾದ ತೊಳೆಸಿಕೊಂಡವನು ಶ್ರ್?ಇಹರಿ. ಇದರಿಂದ ಪಾದ ತೊಳೆಸಿಕೊಂಡ ಶ್ರೀಹರಿ ಸರ್ವೋತ್ತಮನು. ಪಾದ ಪ್ರಕ್ಷಾಲನೆ ಮಾಡಿದ ಪೂಜಕನಾದ ಬ್ರಹ್ಮನು ಜೀವೋತ್ತಮನು ಆತನು ಒದಗಿಸಿದ ಪಾದಪ್ರಕ್ಷಾಲನ ಜಲವನ್ನು ಧಾರಣಮಾಡಿ ಪವಿತ್ರನಾದ ಶಿವನು ನಂತರ ಸ್ಥಾನದಲ್ಲಿ ಇರುತ್ತಾನೆಂದು ಲೌಕಿಕ ನ್ಯಾಯದಿಂದಲೂ ಸಾಬೀತಾಗುತ್ತದೆ. ೧-೧೮-೨೧ ಶ್ಲೋಕವು ವಿಷ್ಣು-ಬ್ರಹ್ಮ-ರುದ್ರರ ಸ್ಥಾನ-ಮಾನವನ್ನು ಹಿಂದೆ ತಿಳಿಸಿದಂತೆ ಸೂಚ್ಯವಾಗಿ ಪ್ರತಿಪಾದಿಸಿದೆ.
ಶಿವ-ಬ್ರಹ್ಮರ ಪಾರತಂತ್ರ್ಯ
        ಪ್ರಥಮ ಸ್ಕಂದದಲ್ಲಿ ವರ್ಣಿಸಿದಂತೆ ರುದ್ರರೂಪಿಯಾದ ಅಶ್ವತ್ಥಾಮಾಚಾರ್ಯರು ಗರ್ಭಸ್ಥನಾದ ಪರೀಕ್ಷತನನ್ನು ಸಂಹರಿಸಲು ಪ್ರಬಲವಾದ ಬ್ರಹ್ಮಶಿರೋಸ್ತ್ರವನ್ನು ಪ್ರಯೀಗಿಸಿದರೂ ಸಫಲರಾಗಲಿಲ್ಲ. ಏಕೆಂದರೆ ಆ ಹತ್ಯೆ ಭಗವಂತನ ಸಂಕಲ್ಪಕ್ಕೆ ವಿರುದ್ಧವಾಗಿತ್ತು. ಹರಿಯ ಅನುಗ್ರಹದಿಂದ ದೂರರಾದ ಶಿವರೂಪಿ ಅಶ್ವತ್ಥಾಮರು ಪ್ರಬಲ ಬ್ರಹ್ಮಶಿರೋಸ್ತ್ರದಿಂದ ಶಿಶಿವನ್ನೇ ಕೊಲ್ಲಲು ಸಮರ್ಥರಾಗಲಿಲ್ಲ. ಹೀಗಿರುವಾಗ ಭಗವಂತನ ಅನುಗ್ರಹವಿಲ್ಲದೆ ಅವರು ಸ್ವತಂತ್ರರಾಗಿ ಸಮಗ್ರ ಜಗತ್ತನ್ನು ಮೂಲರೂಪದಲ್ಲಿ ಸಂಹರಿಸಲು ಸಫಲರಾಗುವರೆ?
        ಸೃಷ್ಟಿಕಾರ್ಯದಲ್ಲಿ ತಾನು ಸ್ವತಂತ್ರನಲ್ಲ. ಭಗವಂತನ ಮಾಯ್ರ್ಯಿಂದ ಮೋಹಿತವಾದ ಬುದ್ಧಿಯಿಂದ ಕೆಲವರು ತನಗಿಂತ ಉತ್ತಮನಾದ ಶ್ರೀಹರಿಯನ್ನು ಕಾಣದೆ ತನ್ನನ್ನೇ ಜಗದ್ಗುರು ಅರ್ಥಾತ್ ಸ್ವತಂತ್ರನಾಗಿ ಜಗತ್ತಿನ ಜನಕನೆಂದು ಭಾವಿಸುತ್ತಾರೆ. ೨-೫-೧೦ - ೨-೫-೧೨. ತಾನು ಭಗವಂತನಿಂದ ರೇರಿತನಾಗಿ ಸೃಷ್ಟಿಕಾರ್ಯವನ್ನು ಮಾಡುತ್ತೇನೆ. ರುದ್ರನು ಭಗವಂತನ ಅಧೀನನಾಗಿಯೇ ಈ ಜಗತ್ತನ್ನು ಸಂಹರಿಸುತ್ತಾನೆ. ೨-೬-೩೧ ಎಂಬುದಾಗಿ ಸ್ವಯಂ ಜಗದ್ಗುರುವಾದ ಬ್ರಹ್ಮದೇವರೇ ಪುತ್ರರಾದ ನಾರದರ ಹಿತೈಷಿಯಾಗಿ ತನ್ನ ರುದ್ರನ ಪಾರಮ್ಯವನ್ನು ನಿರಾಕರಿಸಿ ತಮ್ಮಿಬ್ಬರ ಸೃಷ್ಟಾದಿ ಕಾರ್ಯದಲ್ಲಿ ಪಾರತಂತ್ರ್ಯವನ್ನು ಸ್ಪಷ್ಟಪಡಿಸಿದ್ದಾರೆ.
ಶುಕಶ್ರುತ ಶ್ರೀಕೃಷ್ಣನು ನಿರಸ್ತಕುಹಕ ಕಾಮಾದಿದೋಷದೂರನು
        ಕಲಿಮಲವನ್ನು ಶ್ರವಣಮಾತ್ರದಿಂದ ತೊಳೆಯುವ ಶ್ರೀಕೃಷ್ಣನ ವಿಶೇಷಚರಿತ್ರೆಯನ್ನು ವಿಶದವಾಗಿ ಬಣ್ಣಿಸಲು ಪ್ರವೃತ್ತವಾದ ಶ್ರೀಮದ್ಭಾಗವತವು ಕೃಷ್ಣನನ್ನು ನಿರಸ್ತಕುಹಕ ಎಂದು ಮಂಗಲಪದ್ಯದಲ್ಲಿ ವರ್ಣಿಸಿದೆ. ಇಲ್ಲಿ ಕುಹಕ ಶಬ್ದದ ಅರ್ಥ ಮನೋವಿಕಾರವನ್ನುಂಟುಮಾಡುವ ಸ್ತ್ರೀಯರ ವಿಲಾಸಗಳೆಂದು. ಇವುಗಳನ್ನು ಭಗವಾನ್ ಶ್ರೀಕೃಷ್ಣನು ನಿರಾಸಮ್ಡಿದ್ದಾನೆ - ಅರ್ಥಾತ್ ವಿಫಲಗೊಳಿಸಿದ್ದಾನೆ. ಸಾಮೂಹಿಕವಗಿ ಸ್ತ್ರೀಯರ ಹಾವ-ಭಾವಗಳು, ಮಹಾಭಾರತ ಯುದ್ಧವನ್ನು ಮುಗಿಸಿ
ಎಷ್ಟೋ ತಿಂಗಳು ಕಳೆದಬಳಿಕ ದ್ವಾರಕೆಯನ್ನು ತಲುಪಿದ ಶ್ರೀಕೃಷ್ಣನನ್ನೂ ಸ್ವಲ್ಪವೂ ವಿಚಲಿತಗೊಳಿಸಲಿಲ್ಲ. ಅದಕ್ಕೆಂದೇ ಆತ 'ಅನಾದಿಬ್ರಹ್ಮಚಾರಿ' ಎಂದು ಖ್ಯಾತನಾಗಿದ್ದಾನೆ.
ಯಸ್ಯೇಂದ್ರಿಯಂ ಪ್ರಮಥಿತುಂ ಕುಹಕೈರ್ನ ಶೇಕುಃ (೧-೧೦-೭೩)
        ಎನ್ನುವ ಭಾಗವತದ ಸೂಕ್ತಿಯಿಂದ ಈ ವಿಷಯವು ಸ್ಪಷ್ಟವಾಗುತ್ತದೆ.
        ತಿಳಿಗೇಡಿಗಳು ಮಾತ್ರ ಶ್ರೀಕೃಷ್ಣನನ್ನು 'ಸ್ತ್ರೈಣ'=ಸ್ತ್ರೀಲೋಲುಪನೆಂದು ಭಾವಿಸಿದರು. ಎಂಬುದಾಗಿ ಗೋಪಿಯರ ಜೊತೆಗೆ ರಾಸಕ್ರೀಡೆ ಆಡಿದ ಶ್ರೀಕೃಷ್ಣನನ್ನೇ 'ತಂ ಮೇನಿರೇ ಖಲಾ ಮೂಢಾಸ್ತ್ರೈಣಂ ಚಾನುವ್ರತಂ ಹರೇಃ' ಎಂಬ ವಚನದಿಂದ ಕಾಮಾದಿ ದೂರನೆಂದು ಚಿತ್ರಿಸಿದೆ. ಶ್ರೀಕೃಷ್ಣನು ಕಾಮಾದಿದೋಷ ಕಲಂಕಿತನಾಗಿದ್ದರೆ ಪರಮವಿರಕ್ತರಾದ ಶುಕಮುನಿಗಳು ಆತನ ಚರಿತ್ರೆಯನ್ನು ಕೇಳಲು ಹಾಗೂ ಹೇಳಲು ಹೇಗೆ ಪ್ರವೃತ್ತರಾದಾರು?
ಗಾಯತ್ರಿ ಪ್ರತಿಪಾದ್ಯ-ಶ್ರೀಕೃಷ್ಣನು
        ಗಾಯತ್ರಿಮಂತ್ರದಲ್ಲಿ ಭರ್ಗ ಶಬ್ದವು ಅಡಕವಾಗಿದೆ. ಇದರರ್ಥ ಪಾಲನೆ-ಪೋಷಣೆ ಮಾಡುವವನು ಹಾಗೂ ಗಮನ ಮಾಡುವವನು - ಭಕ್ತರ ಪೋಷಣೆಗಾಗಿ ಭಕ್ತರಿದ್ದಲ್ಲಿಗೆ ಧಾವಿಸುವವನು ಎಂದು ತಾತ್ಪರ್ಯ. ಶ್ರೀಕೃಷ್ಣನು ಉತ್ತರಾಗರ್ಭಸ್ಥನಾದ ಶಿಶುವಾದ ಪರೀಕ್ಷಿತನನ್ನು ಅಶ್ವತ್ಥಾಮಾಚಾರ್ಯರ ಅಮೋಘ ಬ್ರಹ್ಮಶಿರೋಸ್ತ್ರದಿಂದ ಪಾಲಿಸಲು ಉತ್ತರೆಯ ಗರ್ಭಕ್ಕೆ ಧಾವಿಸಿ ಬಂದನು ಮತ್ತು ತನ್ನ ಗದೆಯನ್ನು ಬೀಸುತ್ತಾ ಅತ್ರೆತೇಜಸ್ಸನ್ನು ಶಾಂತಗೊಳಿಸಿ ಪರೀಕ್ಷತನನ್ನು ಹತ್ತು ತಿಂಗಳ ತನಕ ಸಂರಕ್ಷಿಸಿದನೆಂದು ೧-೧೧-೧೦ ನೇ ಶ್ಲೋಕವು ಬಣ್ಣಿಸಿದೆ. ಈ ಘಟನೆಯಿಂದ ಭರ್ಗ ಶಬ್ದವಾಚ್ಯನು ಶ್ರೀಕೃಷ್ಣನೆಂದು ಸಿದ್ಧವಾಯಿತು.
        ಯಾರು ಗರ್ಭದಲ್ಲಿರುವಾಗ ಸಂರಕ್ಷಿಸುವನೋ ಆತನೇ ಎಲ್ಲಾ ಜಗತ್ತಿನ ರಕ್ಷಕನೆಂದು ತಿಳಿಯಬೇಕು - 'ಸ ರಕ್ಷಿತಾ ರಕ್ಷತಿ ಯೋ ಹಿ ಗರ್ಭೇ' ಶ್ರೀಕೃಷ್ಣನೇ ಗರ್ಭಸ್ಥಶಿಶುವನ್ನು ಸಂರಕ್ಷಿಸುವ ಮೂಲಕ ತಾನೇ ಜಗದ್ರಕ್ಷಕನಾದ ಭರ್ಗ ಎಂದು ತಿಳಿಸಿದ್ದಾನೆ.
ಗಾಯತ್ರಿ ಪ್ರತಿಪಾದ್ಯ - ಬುದ್ಧಿಪ್ರೇರಕ ಶ್ರೀಹರಿ
        ಪದ್ಮಾಸನಸ್ಥನಾದ ಬ್ರಹ್ಮನು ಜಗತ್ತನ್ನು ಸೃಷ್ಟಿಮಾಡಬೇಕೆಂದು ಬಯಸಿದರೂ ಅದಕ್ಕೆ ಉಪಯುಕ್ತವಾದ ದೃಷ್ಟಿಯನ್ನು ಪಡೆಯಲು ವಿಫಲನಾದನು. ತನ್ನ ಭಗವದಧೀನತೆಯನ್ನು ತೋರಿಸುವ ಸಲುವಾಗಿ ಇಲ್ಲಿಬ್ರಹ್ಮನು ಅಜ್ಞಾನ ಪ್ರದರ್ಶನ ಮಾಡಿದನು. ಬಳಿಕ ಪರಮಾತ್ಮನಿಂದ ತಪ ತಪವೆಂದು ಪ್ರಚೋದಿತವಾದ ಬುದ್ಧಿಯಿಂದ ತಪೋಗೈದು ಭಗವಂತನನ್ನು ಸಾಕ್ಷಾತ್ಕರಿಸಿಕೊಂಡನು. ಆತನ ಅನುಗ್ರಹದಿಂದ ಸೃಷ್ಟಿಕಾರ್ಯದಲ್ಲಿ ಯಶಸ್ವಿಯಾದನು. ಜೀವೋತ್ತಮನಾದ ಚತುರ್ಮುಖನಿಗೆ ಕರ್ತವ್ಯಬುದ್ಧಿಯನ್ನು ಶ್ರೀಹರಿಯು ಪ್ರೇರಿಸಿದನೆಂದು ೨-೯-೬ ನೇ ಶ್ಲೋಕದಲ್ಲಿ ಉಲ್ಲೇಖಿಸಿದ ಭಾಗವತವು ಅವನಿಂದ ನಿಕೃಷ್ಟರಾದ ಎಲ್ಲಾ ಜೀವರಿಗೂ ಶ್ರೀಹರಿಯೇ ಬುದ್ಧಿಪ್ರೇರಕನಾಗಿ ಗಾಯತ್ರಿ ಪ್ರತಿಪಾದ್ಯನೆಂದು ಸೂಚ್ಯವಾಗಿ ತಿಳಿಸಿದೆ. ಈ ದೃಷ್ಟಿಯಲ್ಲಿಯೇ ಭಾಗವತವನ್ನು 'ಗಾಯತ್ರೀಭಾಷ್ಯರೂಪೋಸೌ' ಎಂದು ಬಣ್ಣಿಸಲಾಗಿದೆ.
ಭಗವಂತನ ಕರ್ತೃತ್ವ-ಭ್ರಾಂತಿ ಕಲ್ಪಿತವಲ್ಲ
        'ನ ಚಾಸ್ಯ ಜನ್ಮಕರ್ಮಾಣಿ ಪರಸ್ಯ ನ ವಿಧೀಯತೇ' - ಭಗವಂತನಿಗೆ ಜನ್ಮಕರ್ಮಗಳಿಲ್ಲವೆಂಬುದಾಗಿ ಜ್ಞಾನಿಗಳಿಂದ ನ ವಿಧೀಯತೇ=ಶಾಸ್ತ್ರ ವಿರುದ್ಧವಾಗಿ ಚಿಂತಿಸಲ್ಪಡುವುದಿಲ್ಲವೆನ್ನುತ್ತದೆ ಭಾಗವತ. ಹಾಗೆ ಉಪಾಸನೆ ಮಾಡಿದರೆ ಶಸ್ತ್ರವಿರುದ್ಧ ಉಪಾಸನೆ ಎನಿಸುತ್ತದೆ-
ನಾವಿದ್ಯಮಾನಂ ಬ್ರುವತೇ ವೇದಾ ಧ್ಯಾತುರ್ನ ವೈದಿಕಾಃ |
ಅವಿದ್ಯಮಾನಂ ಧ್ಯಾಯಂತೋ ಯಾಂತಿ ಸರ್ವೇಧರಂ ತಮಃ ||
        ಎಂಬ ಶಾಸ್ತ್ರವಚನವು, ಮಿಥ್ಯಾಭೂತವಾದ ಕರ್ತೃತ್ವಾದಿಗಳನ್ನು ಉಪಾಸನೆಗಾಗಿ ಎಲ್ಲಿಯೂ ಶಾಸ್ತ್ರ ಹೇಳುವುದಿಲ್ಲವೆಂದೂ, ಅಂಥ ಉಪಾಸನೆಯಿಂದ ಅನರ್ಥವೇ ಹೊರತು ಫಲವಿಲ್ಲವೆಂದೂ ಘೋಷಿಸಿದೆ. ಆದುದರಿಂದ ಶಾಸ್ತ್ರದಲ್ಲಿ ಭಗವಂತನನ್ನು 'ನಿಷ್ಕ್ರಿಯಂ' ಕ್ರಿಯಾಶೂನ್ಯನೆಂದು ಹೇಳಿದರೂ ನಮ್ಮಂತೆಯೇ ಲೇಪಕಾರಕ ಪ್ರಾಕೃತ ಕರ್ತೃತ್ವವಿಲ್ಲವೆಂಬ ಅಭಿಪ್ರಾಯವನ್ನು ಆ ನಿಷೇಧದ ಮಾತಿಗೆ ಸ್ವೀಕರಿಸಬೇಕು.
        'ಕರ್ತೃತ್ವಂ ಪ್ರತಿಷೇಧಾರ್ಥಂ ಮಾಯಯಾ ಆರೋಪಿತಂ ಹಿ ತತ್' ಎನುವ ಭಾಗವತ ವಚನವು 'ನೇಹ ನಾನಾಸ್ತಿ ಕಿಂಚನ' ಎನ್ನುವಲ್ಲಿ ಕರ್ತೃತ್ವಾದಿಗಳನ್ನು, ಅಜ್ಞಾನದಿಂದ ಕಲ್ಪ್ತವಾದುದರಿಂದ ನಿಷೇಧಿಸುವ ಸಲುವಾಗಿ 'ತತ್ತೇಜೋ ಅಸೃಜತ' ಮುಂತಾದ ಕಡೆಗಳಲ್ಲಿ ಮಿಥ್ಯಾಭೂತವಾದ ಕರ್ತೃತ್ವವನ್ನು ಉಲ್ಲೇಖಿಸಲಾಗಿದೆ ಎಂಬುದಾಗಿ ಪ್ರತಿಪಾದಿಸಿದೆ ತಾನೆ? ಎಂಬುದಾಗಿ ಇಲ್ಲಿ ಸಂದೇಹಕ್ಕೊಳಪಡಬಾರದು. ಈ ಭಾಗವತ ಮಾತಿಗೆ ಅರ್ಥವೇ ಬೇರೆಯಾಗಿದೆ.
        ಇಲ್ಲಿ ಮಾಯಾ ಶಬ್ದದ ಅರ್ಥ ಭಗವಂತನ ಇಚ್ಛೆ. ಆರೋಪಿತ ಶಬ್ದದ ಅರ್ಥ ಏರಿಸಲ್ಪಟ್ಟಿದ್ದು. ಪ್ರತಿಷೇಧ ಶಬ್ದದ ಅರ್ಥ ಸಂಸಾರದ ಪರಿಹಾರ. ಬಗವಂತನು ಸಜ್ಜೀವರ ಸಂಸಾರವನ್ನು ಪರಿಹರಿಸುವ ಸಲುವಗಿಯೇ ಭಕ್ತರಿಗೆ ಶ್ರವಣಾದಿಗಳಿಂದ ತಾರಕವೆನಿಸಿದ ಜಗತ್ ಸೃಷ್ಟ್ಯಾದಿ ಕರ್ತೃತ್ವವನ್ನು ತನ್ನ ಮೇಲೆ ಅನುಕಂಪದಿಂದಲೇ ಹೊರಿಸಿಕೊಂಡಿದ್ದಾನೆ ಎಂಬುದು ಈ ವಚನದ ತಾತ್ಪರ್ಯ ಭಗವಂತನ ಜನ್ಮ-ಕರ್ಮಗಳು ಶ್ರವಣಾದಿಗಳಿಂದ ಜ್ಞಾತವಾದಾಗ ಅವುಗಳು ಜನ್ಮ-ಮರಣರೂಪಸಂಸಾರ ಚಕ್ರದಿಂದ ನಮ್ಮನ್ನು ವಿಮುಕ್ತಗೊಳಿಸುತ್ತದೆ. ಸಂಸಾರ ನಿರಾಸಕಗಳಾಗುತ್ತವೆ ಎಂಬುದಾಗಿ ಭಗವಂತನು 'ಜನ್ಮಕರ್ಮಚ ಮೇ ದಿವ್ಯಂ ಯೋ ಮಾಂ ವೇತ್ತಿತತ್ತ್ವತಃ | ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋರ್ಜುನ' ಎಂಬ ಮಾತಿನಲ್ಲಿ ಸ್ಪಷ್ಟಪಡಿಸಿದ್ದಾನೆ. ಆದುದರಿಂದ 'ಪ್ರತಿಷೇಧಾಯ ಬಂದಸ್ಯ ಜೀವಸ್ಯ ಪರಮೇಶಿತುಃ' ಎನ್ನುವ ವಚನದಿಂದ ವರ್ಣಿತವಾದ ಅರ್ಥವು ಗೀತಾಸಂವಾದದಿಂದ ಸಂಪನ್ನವಾಗಿದ್ದು ಸಮುಚಿತವೆನಿಸುತ್ತದೆ. ಇಂಥ ಮೂಲರೂಪ ಅವತಾರರೂಪಗಳ ವಿವಿಧ ವಿಚಿತ್ರ ಲೀಲಾಕತೃತ್ವವನ್ನು ಶ್ರವಣ-ಸ್ಮರಣಕೀರ್ತನಗಳಿಂದ ಸಜ್ಜನರು ಮುಕ್ತಿಪಡೆಯಲೆಂದೇ ಭಾಗವತದಲ್ಲಿ ಭಗವಾನ್ ವ್ಯಾಸರು ಬಣ್ಣಿಸಿದ್ದಾರೆ.
        ಇಂಥ ಭಾಗವತ ರೂಪ ಫಲವನ್ನು ನಮಗಾಗಿ ವೇದ ಕಲ್ಪ ವೃಕ್ಷದಿಂದ ಉದುರಿಸಿದ್ದಾರೆ. ಅದನ್ನು ಭಕ್ತರು ಸವಿದರೆ 'ಅಹೋ ಮೇ ಮಹತೀ ತೃಪ್ತಿಃ ಪಶ್ಯತೋ ಭವೇತ್' ಎನ್ನುವ ಮಾತಿನಲ್ಲಿ ಅವರು ಅಂಥವರನ್ನು ನೋಡಿ ತನಗೆ ಬಹಳ ಪ್ರೀತಿಯಾಗುತ್ತದೆ ಎಂಬುದನ್ನು ಉದ್ಗರಿಸಿದ್ದಾರೆ.
        ವ್ಯಾಸರ ಉದ್ಗಾರಕ್ಕೆ ತಕ್ಕಂತೆ ನಾವೆಲ್ಲರೂ ನಡೆದುಕೊಂಡು ಕೃತಾರ್ಥರಾಗೋಣ.

೧-೫-೨೦೦೪
                                                                                                                                                            
ಶ್ರೀ ವಿದ್ಯೇಶತೀರ್ಥ ಶ್ರೀಪಾದರು
ಶ್ರೀ ಭಂಡಾರಕೇರಿ ಮಠ
ಉಡುಪಿ


ಹೃದಯವಾಣಿ
ಶ್ರೀ ಮದ್ಭಾಗವತದ ತೃತೀಯಸ್ಕಂಧದ ಸುಲಲಿತ ಅನುವಾದದ ಪ್ರಕಾಶನಕಾರ್ಯವು 'ಶ್ರೀಭಾಗವತಾಶ್ರಮ ಪ್ರಕಾಶನ' ದಿಂದ ಇದೀಗ ನಡೆದು ಜಿಜ್ಞಾಸುಗಳ ಕೈಗೆ ತಲುಪಿಸುತ್ತಿದ್ದೇವೆ. ಈ ಹಿಂದೆ ಪ್ರಥಮ-ದ್ವಿತೀಯಸ್ಕಂಧಗಳ ಅನುವಾದದ ಪ್ರಕಾಶನಕಾರ್ಯವು ಇದೇ ಪ್ರಕಾಶನ ಸಂಸ್ಥೆಯಿಂದ ನಡೆದಿದೆ. ವಿದ್ವಾನ್ ಹಯವದನ ಪುರಾಣಿಕರು ಚೆನ್ನಾಗಿ ಅನುವಾದಕಾರ್ಯವನ್ನು  ಮಾಡಿದ್ದಾರೆ. ಅವರನ್ನು ಈ ಕಾರ್ಯಕ್ಕಾಗಿ  ಅಭಿನಂದಿಸತ್ತಿದ್ದೇವೆ. ಹಿಂದಿನ ಪ್ರಕಾಶನ ಹಾಗೂ ಈಗಿನ ಪ್ರಕಾಶನಕಾರ್ಯದ ಸಂಪೂರ್ಣವೆಚ್ಚವನ್ನು ಶ್ರೀ ಕೆ. ಯಾದವಾಚಾರ್ಯರು ನೀಡಿ ಮಹೌದಾರ್ಯವನ್ನು ತೋರಿದ್ದಾರೆ. ತಮ್ಮ ತೀರ್ಥರೂಪರಾದ ವಿದ್ವಾನ್ ಶ್ರೀ ಗುರುಗುಂಡಿ ರಾಮಾಚಾರ್ಯರ ಸ್ಮಾರಕವಾಗಿ ಪ್ರಕಾಶನದ ಸೇವೆಯನ್ನು ಸಲ್ಲಿಸಿದ ಆಚಾರ್ಯರನ್ನು ಅಭಿನಂದಿಸುತ್ತಾ ಅವರಿಗೆ ಹಾಗೂ ಅವರ ಧರ್ಮಪತ್ನಿಗೆ ವಿಶೇಷ ಆಯುರಾರೋಗ್ಯಸಂಪತ್ತನ್ನು ಭಗವಂತನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇವೆ.
ಶ್ರೀ ವಿದ್ಯೇಶತೀರ್ಥ ಶ್ರೀಪಾದರು
ಶ್ರೀ ಭಂಡಾರಕೇರಿ ಮಠ

ತೃತೀಯಸ್ಕಂಧದ ಹೃದ್ಗತ
- ಶ್ರೀವಿದ್ಯೇಶತೀರ್ಥರು, ಭಂಡಾರಕೇರಿ ಮಠ.

        ಶ್ರೀಮದ್ಭಾಗವತದ ಸಪ್ತಮಸ್ಕಂಧದಲ್ಲಿ ಪ್ರಹ್ಲಾದನು,
ತತ್ ಸಾಧು ಮನ್ಯೇಸುರವರ್ಯ ದೇಹಿನಾಂ
ಸದಾ ಸಮುದ್ವಿಗ್ನಯಾಮಸದ್ಗ್ರಹಾತ್ |
ಹಿತ್ವಾತ್ಮಪಾತಂ ಗೃಹಮಂಧಕೂಪಂ
ವನಂ ಗತೋ ಯದ್ಧರಿಮಾಶ್ರಯೇತ ||
        ಎನ್ನುವ  ನುಡಿಯಲ್ಲಿ 'ಆತ್ಮ ಪತನಕ್ಕೆ ವಿಷಯ ವ್ಯಾಮೋಹದಿಂದ ಅಂಧರಾದ ದುಷ್ಟಜನರಿಂದ ತುಂಬಿದ ಗೃಹವನ್ನು ಪರಿತ್ಯಜಿಸಿ, ವೈರಾಗ್ಯದಿಂದ 'ವನ' ಎನಿಸಿದ ಪವಿತ್ರತೀರ್ಥವನ್ನು ಹೊಂದಬೇಕು. ಅಲ್ಲಿಯೂ 'ವನ' (ಭಜನೀಯ) ಎನಿಸಿದ ಸಜ್ಜನಸಂಘವನ್ನು ಹೊಂದಿ, ಅದರಿಂದ 'ವನ' (ಜೀವನಂ ಭುವನಂ ವನಂ - ಜಲ) ಎನಿಸಿದ, ಭವಸಂತಾಪವನ್ನು ನೀಗಿಸುವ ಹರಿಕಥಾಗಂಗಾಜಲವನ್ನು ಹೊಂದಿ ಹರಿಯನ್ನು ಸ್ವಿಸಬೇಕು.' ಎಂದು ಸಜ್ಜನರಿಗೆ ಹಿತೋಪದೇಶವನ್ನು ಮಾಡಿದ್ದಾನೆ.
        ಇದೇ ಸಜ್ಜನರು ಸೇವಿಸಬೇಕಾದ ಸಾಧುಮಾರ್ಗವೆಣ್ದು ಪ್ರತಿಪಾದಿಸಿದ್ದಾನೆ. ಇಂಥ ಸಾಧುಭಾಗವತಮಾರ್ಗವನ್ನು ಹಿಡಿದ ಸಜ್ಜನರೂಪದಲ್ಲಿ ವಿದುರನನ್ನು ತೃತೀಯಸ್ಕಂಧವು ನಿದರ್ಶನವಾಗಿ ಚಿತ್ರಿಸಿದೆ.
        ದುಷ್ಟದುರ್ಯೋಧನಾದಿಗಳಿಂದ ತುಂಬಿ, ಅಂಧಕೂಪದಂತಿರುವ ಹಸ್ತಿನಾಪುರದ ಗೃಹವನ್ನು ತ್ಯಜಿಸಿ, ಆತ ವೈರಾಗ್ಯದಿಂದ 'ವನ' (ತೀರ್ಥ)ವೆನಿಸಿದ ಪ್ರಭಾಸ, ಯಮುನಾ, ಗಂಗಾಮುಂತಾದ ಪವಿತ್ರಕ್ಷೇತ್ರಗಳನ್ನು ಹೊಂದಿದನು. ಅಲ್ಲಿ 'ವನ' ಎನಿಸಿದ (ಸಜ್ಜನಸಂಘ) ಬ್ರಾಹ್ಮಣರು, ಉದ್ಧವ ಹಾಗೂಮೈತ್ರೇಯರನ್ನು ಸಂದರ್ಶಿಸಿದನು. ಆ ಮಹಾತ್ಮರಿಂದ ಭಾಗವತಗಂಗಾಜಲವನ್ನು ಸ್ವೀಕರಿಸಿ ಹರಿಯನ್ನು ಸೇವಿಸಿ ಎಲ್ಲರಿಗೂ ಮಾದರಿಯಾದನು. ಧರ್ಮಾಭಿಮಾನಿಯಾದ ಯಮನ ಅವತಾರಭೂತನಾದ ವಿದುರನು ಲೋಕಶಿಕ್ಷಣದ ದೃಷ್ಟಿಯಿಂದ ತೋರಿದ ಈ ಭಾಗವತಧರ್ಮವು ಸರ್ವಸುಜನರಿಗೂ ಅನುಕರಣೀಯವಾಗಿದೆ.
ತೃತೀಯಸ್ಕಂಧದಲ್ಲಿ ಭಾಗವತತಾತ್ಪರ್ಯದ ಮಹತ್ತ್ವಪೂರ್ಣಪಾತ್ರ
        ೧. ವಿರಕ್ತನಾಗಿ ತೀರ್ಥಯಾತ್ರೆಗೆ ತೆರಳಿದ ವಿದುರನು ಪ್ರಭಾಸಕ್ಷ್ತ್ರದಲ್ಲಿ ಯಾದವರ ವಿನಾಶದ ವಾರ್ತೆಯನ್ನು ಕೇಳಿದನೆಂದು (೩.೧.೨೧) ಶ್ಲೋಕದಲ್ಲಿ ಉಲ್ಲೇಖವಿದೆ. ಆದರೆ ಇದಕ್ಕೆ ವಿರುದ್ಧವಾಗಿ (೩.೪.೨) ಶ್ಲೋಕದಲ್ಲಿ ಉದ್ಧವನಿಂದ ಯಮುನಾತೀರದಲ್ಲಿ ಯಾದವರ ವಿನಾಶ (ಶಪ) ವನ್ನು ಕೇಳಿದನೆಂದು ಉಲ್ಲೇಖವಿದೆ.
    ಈ ವಿರೋಧಾಭಾಸವನ್ನು ಆಚಾರ್ಯಮಧ್ವರು -
ವಿದುರಸ್ತು ಪ್ರಭಾಸಸ್ಥಃ ಶಾಪಂ ಸಂಕ್ಷೇಪತೋಶೄಣೋತ್ |
ಯದೂನಾಂ ವಿಸ್ತರಾತ್ ಪಶ್ಚಾದುದ್ಧವಾದ್ ಯಮುನಾಮನು |
        ಎಂಬ ಸ್ಕಾಂದವನ್ನು ಉದಾಹರಿಸಿ ಪರಿಹರಿಸಿದ್ದಾರೆ.
        ವಿದುರನು ಬ್ರಾಹ್ಮಣರ ಮುಖದಿಂದ ಯಾದವರ ವಿನಾಶ (ಶಪ) ವನ್ನು ಸಂಕ್ಷಿಪ್ತವಾಗಿ ಕೇಳಿದನು. ಅದನ್ನು ಮತ್ತೆ ವಿಸ್ತಾರವಾಗಿ ಯಮುನಾತೀರದಲ್ಲಿ ಉದ್ಧವನಿಂದ ಕೇಳಿದನು. ಸಂಕ್ಷೇಪ-ವಿಸ್ತಾರಪ್ರಭೇದವ್ಯವಸ್ಥೆಯನ್ನು ಸ್ವೀಕರಿಸಿದಾಗ ಯಾವ ವಿರೋಧಕ್ಕೂ ಅವಕಾಶವಿಲ್ಲ. ಇದು ಆಚಾರ್ಯಮಧ್ವರ ಭಾಗವತತಾತ್ಪರ್ಯದ ನಿರ್ಣಾಯಕಪಾತ್ರ.
        ೨. ವಿದುರನು ತೀರ್ಥಯಾತ್ರೆಗೈಯ್ಯುವ ಕಾಲದಲ್ಲಿ ಯಾದವರ ವಿನಾಶವನ್ನು ಕೇಳಿದನೆಂದು ಪೂರ್ವೋಕ್ತಶ್ಲೋಕದಲ್ಲಿ ಉಲ್ಲೇಖವಿದೆ. ಆದರೆ (೨.೧.೨೦) ಶ್ಲೋಕದಲ್ಲಿ ವಿದುರನು ಪ್ರಭಾಸಕ್ಕೆ ಬಂದಾಗ ಧರ್ಮರಾಜನು ಶ್ರೀಕೃಷ್ಣನ ಅನುಗ್ರಹದಿಂದ ರಾಜ್ಯಭಾರಮಾಡುತ್ತಿದ್ದಾನೆಂದು ಉಲ್ಲೇಖವಿದೆ. ಏವಂಚ ಶ್ರೀಕೃಷ್ಣನಿರುವಾಗ ಯಾದವರ ವಿನಾಶ ಎಲ್ಲಿಂದ? ಏಕೆಂದರೆ (೩.೩.೩) ಶ್ಲೋಕದಲ್ಲಿ ಯಾದವರ ವಿನಾಶದ ಬಳಿಕ ಪರಂಧಾಮಕ್ಕೆ ತೆರಳಲು ಶ್ರೀಕೃಷ್ಣನು ಸನ್ನದ್ಧನಾದನೆಂದು ಉಲ್ಲೇಖವಿದೆ ತಾನೆ> ಭಾರತವೂ ಇದೇ ಅಭಿಪ್ರಾಯಕ್ಕೆ ಬಂದಿದೆ ತಾನೆ? ಈ ವಿರೋಧವನ್ನು ಆಚಾರ್ಯಮಧ್ವರು ಸಮರ್ಪಕವಾಗಿಯೇ ಪರಿಹರಿಸಿದ್ದಾರೆ.
        'ತತ್ರಾಥ ಶುಶ್ರಾವ ಸುಹೃದ್ವಿನಷ್ಟಿಂ' ಎಂಬ ಮಾತಿಗೆ ಭಾರತ-ಭಾಗವತದ ಪೂರ್ವಾಪರ ವಚನಗಾಳಿಗೆ ವಿರೋಧ ಬಾರದಂತೆ 'ಸುಹೃದ್ವಿನಷ್ಟಿ ಯದುಕುಲವಿನಷ್ಟಿ ಏಷ್ಯಾಂ' ಎಂದು ವ್ಯಾಖ್ಯಾನಿಸಿದ್ದಾರೆ. ಈ ವ್ಯಾಖ್ಯಾನದಿಂದ ಆಚಾರ್ಯರು ತಾವು ಪ್ರಥಮಸ್ಕಂಧದ ತಾತ್ಪರ್ಯದಲ್ಲಿ ಉದಾಹರಿಸಿದ ಪಾದ್ಮಪುರಾಣದ ವಚನಕ್ಕನುಸಾರವಾಗಿ ೩೬ ವರ್ಷಗಳ ಬಳಿಕ ಆಗಲಿರುವ ಯಾದವರ ವ್ನಾಶದ ವಾರ್ತೆಯನ್ನು ಕೇಳಿದನೆಂದುಅರ್ಥವನ್ನು ಸ್ವೀಕರಿಸಿ ವಿರೋಧದಸಂದೇಹವನ್ನು ದೂರಮಾಡಿದ್ದಾರೆ.
೩.ಆಧಿ-ಮನಸ್ಸು, ವ್ಯಥೆಯಲ್ಲ
        'ಯಮಭ್ಯಷಿಂಚಚ್ಛತಪತ್ರನೇತ್ರೋ ನೃಪಾಸನಾಧಿಂ ಪರಿಹೃತ್ಯ ದೂರಾತ್'  (೩.೧.೨೯)
        ಎಂಬ ವಚನದಲ್ಲಿ ಮೇಲ್ನೋಟಕ್ಕೆ ಶ್ರೀಕೃಷ್ಣನು ತನಗೆ ಸಿಂಹಾಸನ ಸಿಗಲಿಲ್ಲವೆಂಬ ಮಾನಸಿಕ ವಥೆ (ಕೊರಗು) ಯನ್ನು ಬಿಟ್ಟು ಉಗ್ರಸೇನನಿಗೆ ಪಟ್ಟಾಭಿಷೇಕ ಮಾಡಿದನೆಂದು ಅರ್ಥ ಪ್ರತಿಭಾಸವಾಗುತ್ತದೆ. ಆದರೆ ಪೂರ್ಣಕಾಮನಾದ ಶ್ರೀಕೃಶಾಹ್ಣನಿಗೆ 'ನಿರನಿಷ್ಟೋ ನಿರವದ್ಯಃ' ಎಂದು ಶ್ರುತಿಯು ಸಾರುತ್ತಿರುವಾಗ ಮಾನಸಿಕವ್ಯಥೆಗೆ ಪ್ರಸಕ್ತಿಯೇ ಇಲ್ಲ ತಾನೆ? ಹೀಗಿರುವಾಗ ಅದರ ನಿಷೇಧವು ಅಪ್ರಸ್ತುತವಾಗಿವುದಿಲ್ಲವೆ? ಎನ್ನುವ ಪ್ರಶ್ನೆಯು ಉದ್ಭವಿಸುತ್ತದೆ.
        ಇಲ್ಲಿಯೂ ಆಚಾರ್ಯಮಧ್ವರು 'ಆಧಿ' ಶಬ್ದಕ್ಕೆ ಅಪೂರ್ವ ಅಭಿಧಾನವನ್ನು ಉದಾಹರಿಸಿ ಅಪೂರ್ವ ಅರ್ಥವನ್ನು ಹೇಳಿ ಆಕ್ಷೇಪವನ್ನು ದೂರ ಮಾಡಿದ್ದಾರೆ.
        ಇಲ್ಲಿ 'ಆಧಿ' ಎಂದರೆ ಮನಸ್ಸು. ಮಾನಸಿಕವ್ಯಥೆಯಲ್ಲ - 'ಆಧಿ ರ್ಮನೋ ವರೂಥಂ ಚ ಆತ್ಮಾ ಸ್ವಮಿತ ಚೋಚ್ಯತೇ' ಏವಂಚ ಪೂರ್ಣಕಾಮನಾದ ಭಕ್ತವತ್ಸಲ ಶ್ರೀಕೃಷ್ಣನು ರಾಜಾಸನವು ತನಗೆ ಸಿಗಲಿ ಎಂಬ ಮನಸ್ಸನ್ನು ಮಾಡದೆ ಉಗ್ರಸೇನನಿಗೆ ಪಟ್ಟಾಭಿಷೇಕ ಮಾಡಿದನೆಂದು ಭಗವಂತನ ಔದಾರ್ಯವನ್ನೇ ಈ ಮಾತು ಸೂಚಿಸುತ್ತದೆ. ಕೊರಗನ್ನಲ್ಲ. ಮಧ್ವರು ತೋರಿಸಿದ ಈ ಅರ್ಥಕ್ಕೆ ಪೂರ್ಕವಾಗಿ ಶ್ರೀಕೃಷ್ಣನನ್ನು ಭಾಗವತವು 'ಶತಪತ್ರನೇತ್ರ' ಎಂಬ ಶಬ್ದದಿಂದ ಉಲ್ಲೇಖಿಸಿದೆ. ಕಮಲಾಕ್ಷನೆಂದು ಈ ಪದದ ಸರಳಾರ್ಥ. ಆದರೆ ಅಧ್ಯಾತ್ಮಾರ್ಥ, 'ಲೋಕಕಮಲಕ್ಕೆ ನೇತಾರ' ಎಂದು ಏವಂ ಚ ಲೋಕಕಮಲಕ್ಕೆ ನಾಯಕನಾದ ಶ್ರೀಕೃಷ್ಣನಿಗೆ ಕ್ಷುಲ್ಲಕಮಧುರಾನಾಯಕತ್ವ ಸಿಗಲಿಲ್ಲವೆಂದು ಮಾನಸಿಕ ವ್ಯಥೆಗೆ ಅವಕಾಶವೆಲ್ಲಿ? ಎಂಬ ಧ್ವನಿಯು ಇಲ್ಲಿ ಅಡಗಿದೆ.
೪. ಶ್ರೀಕೃಷ್ಣನಿಗೆ ವೈರಾಗ್ಯದ ಉತ್ಪತ್ತಿ?
        'ಗೃಹಮೇಧೇಷು ಯೋಗೇಷು ವಿರಾಗಃ ಸಮಜಾಯತ' (೩.೩.೨೨)
        ಬಹುಕಾಲದ ವರೆಗೆ ಗೃಹಸ್ಥಭೋಗವನ್ನು ಅನುಭವಿಸಿದ ಬಳಿಕ ಶ್ರೀಕೃಷ್ಣನಿಗೆ ಭೋಗಸಾಧನಗಳಲ್ಲಿ ವೈರಾಗ್ಯವು ಒಂಟಾಯಿತೆಂದು ಉಲ್ಲೇಖವಿದೆ. ವೈರಾಗ್ಯದ ಉತ್ಪತ್ತಿಯು 'ಭಗವಾನ್' ಎನಿಸಿದ ಶ್ರೀಕೃಷ್ಣನಿಗೆ ಸರ್ವಥಾ ಸಮಂಜಸ ವಾಗುವುದಿಲ್ಲ. ವೈರಾಗ್ಯವನ್ನೊಳಗೊಂಡ ಆರುಗುಣಗಳಿಂದ ಸರ್ವದಾ ಪೂರ್ಣನಾದುದರಿಂದ ಶ್ರೀಕೃಷ್ಣನಿಗೆ 'ಭಗವಾ' ಎಂಬ ನಾಮವು ಕೀರ್ತಿತವಾಗಿದೆ. ಆದುದರಿಂದ ವೈರಾಗ್ಯದ ಉತ್ಪತ್ತಿಯ ಮಾತು ಅಸಂಗತ. ಈ ಅಸಂಗತಿಯನ್ನು ಆಚಾರ್ಯರು ಪರಿಹರಿಸಿದ್ದಾರೆ. ಭಗವಂತನಿಗೆ ವೈರಾಗ್ಯವು ಸರ್ವದಾ ಇದ್ದರೂ ವೃದ್ಧಾಪ್ಯದಲ್ಲಾದರೂ ವೈರಾಗ್ಯವನ್ನು ತಾಳಬೇಕೆಂದು ಲೋಕಶಿಕ್ಷಣ ನೀಡುವ ಉದ್ದೇಶದಿಂದ ಭಗವಾನ್ ಶ್ರೀಕೃಷ್ಣನು ಅಂತಿಮಕಾಲದಲ್ಲಿ ವೈರಾಗ್ಯ ಪ್ರದರ್ಶನವನ್ನು ಮಾಡಿದನೆಂದು ಅರ್ಥೈಸಬೇಕು.

ಸರ್ವದಾ ವಿರಕ್ತಃ ಸನ್ ಭಾಸಯೀತ ವಿರಾಗಿವತ್ |
ಕಾದಾಚಿತ್ಕಃ ಕುತಸ್ತಸ್ಯ ಲೋಕಶಿಕ್ಷಾರ್ಥಮಿಷ್ಯತೇ ||

        ಎಂಬ ಪಾದ್ಮಪುರಾಣದ ಮಾತನ್ನು ಪ್ರಮಾಣೀಕರಿಸಿ ಈ ಅರ್ಥವನ್ನು ಸಮರ್ಥಿಸಿದ್ದಾರೆ.

೫. ಭವಿಷ್ಯವನ್ನೂ ಭೂತವಾಗಿ ಚಿತ್ರಿಸಬಹುದೆ?
ಅನ್ನಂ ಚೋರುರಸಂ ತೇಭ್ಯೋ ದತ್ತ್ವಾ ಭಗವದರ್ಪಣಂ'
ಗೋವಿಪ್ರಾರ್ಥಾಸವಃ ಶೂರಾಃ ಪ್ರಣೇಮುರ್ಭುವಿ ಮೂರ್ಧಭಿಃ || (೩.೩.೨೯)
        ಈ ಶ್ಲೋಕದಲ್ಲಿ ಪ್ರಭಾಸಕ್ಷೇತ್ರಕ್ಕೆ ತೆರಳಿದ ಯಾದವರು ಬ್ರಾಹ್ಮಣರಿಗೆ ಬೆಳ್ಳಿ, ಬಂಗಾರ, ಹಾಸಿಗೆ ಹಾಗೂ ಷಡ್ರಸಾನ್ನವನ್ನು ದಾನ ಮಾಡಿ ಸಾಷ್ಟಾಂಗ ನಮಸ್ಕಾರ ಮಾಡಿದರೆಂದು ಉದ್ಧವನು ವಿದುರನಿಗೆ ಹೇಳಿದನೆಂದು ಉಲ್ಲೇಖವಿದೆ. ಆದರೆ ವಿದುರನ ಜೀವಿತಕಾಲದಲ್ಲಿ ಪ್ರಭಾಸಕ್ಕೆ ಯಾದವರು ತೆರಳಲಿಲ್ಲ. ೩೬ ವರ್ಷಗಳ ಬಳಕ ಅಲ್ಲಿಗೆ ತೆರಳಿ ದಾನ ಮಾಡಿ ಮದಿರಮತ್ತರಾಗಿ ಪರಸ್ಪರ ಹೊಡೆದುಕೊಂಡು ಸಾಯುತ್ತಾರೆಂದು ಭಾರತದ ಅಭಿಮತ. ಹೀಗಿರುವಾಗ ಭವಿಷ್ಯತ್ಕಾಲೀನವಾದ ಈ ಘಟನೆಯನ್ನು ಭೂತಕಾಲೀನವಾಗಿ ಚಿತ್ರಿಸಿದ್ದು ಸರಿಯೆ? ಎಂಬ ಪ್ರಶ್ನೆ ಬರುತ್ತದೆ. ಇದಕ್ಕೆ ಸರಿ ಎಂದೇ ಆಚಾಯರು ಉತ್ತರುಸಿದ್ದಾರೆ.
ಏಷ್ಯಚ್ಚನಿಶ್ಚಿತಂ ಯತ್ತದತೀತ್ವೇನ ಭಣ್ಯತೇ |
ಚಕ್ರವತ್ ಪರಿವೃತ್ತೇರ್ವಾ ದುಷ್ಟಾನಾಂ ಮೊಹನಾಯ ವಾ ||
        ಎಂಬ ನಾರದವಚನವನ್ನು ಉದಾಹರಿಸಿ. ಭವಿಷ್ಯಕಾಲೀನ ಘಟನೆಯನ್ನು ದುಷ್ಟರನ್ನು ಭ್ರಾಂತರನ್ನಾಗಿಸುವ ಸಲುವಾಗಿ, ಯಾದವರ ಪ್ರಭಾಸಯಾತ್ರೆ, ದಾನ, ಹೊಡೆದಾಟ, ಸಾವು ಇವುಗಳೆಲ್ಲವೂ ಚಕ್ರದಂತೆ ಪುನಃಪುನಃ ಆವೃತ್ತಿಯನ್ನು ಕಾಣುವುದರಿಂದ ಅತೀತಕಲ್ಪದ ಘಟನೆಯ ವಿವಕ್ಷೆಯಿಂದ ಮತ್ತು ಭವಿಷ್ಯಕಾಲೀನಘಟನೆಯೂ ಖಚಿತವೆಂದು ವಿವಕ್ಷೆಯಿಂದ ಭೂತಕಾಲೀನವಾಗಿ ಜ್ಞಾನಿಗಳು ಚಿತ್ರಿಸುತ್ತಾರೆ.
೬.ಭಗವಂತನಿಂದ ಭೌತಿಕಶರೀರತ್ಯಾಗ?
        'ತ್ತ್ಯಾಜ ಆಕೃತಿಂ ತ್ರ್ಯಧೀಶಃ' ಎನ್ನುವ ಭಾಗವತವಚನದಲ್ಲಿ ಭಗವಾನ್ ಶ್ರೀಕೃಷ್ಣನು ತನ್ನ ದೇಹವನ್ನು ತ್ಯಾಗಮಾಡಿದನೆಂದು ಉಲ್ಲೇಖವಿದೆ. ಭಗವಂತನಿಗೆ ಜೀವರಿಗಿರುವಂತೆ ಜಡಭೌತಿಕದೇಹವಿಲ್ಲ. ಹೀಗಿರುವಾಗ ಅದರ ತ್ಯಾಗದ ಮಾತು ಅಸಂಗತವೆಂದು ಆಕ್ಷೇಪ ಬರುತ್ತದೆ.
        ಇದಕ್ಕೆ ಆಚಾರ್ಯ ಮಧ್ವರು 'ಶರೀರಮಾಕೃತಿರ್ದೇಹಃ ಕುಃ ಪೃಥ್ವೀ ಚ ಮಹೀ ತಥಾ' ಎನ್ನುವ ಅಭಿಧಾನವನ್ನು ಉದಾಹರಿಸಿ, ಆಕೃತಿಶಬ್ದಕ್ಕೆ ಭೂಮಿ ಎಂಬರ್ಥವನ್ನು ತೋರಿಸಿ ಭೂತ್ಯಾಗವೇ ಆಕೃತಿತ್ಯಾಗವೆಂದು ಸಂಗತಾರ್ಥವನ್ನು ಸಮರ್ತಿಸುವ ಮೂಲಕ ಸಮಾಧಾನವನ್ನು ನೀಡಿದ್ದಾರೆ.
        'ಯಸ್ಯ ಪೃಥೀವೀಶರೀರಂ', 'ವಿಷ್ಣೋಃ ಕಳೇಬರತ್ಯಾಗೋ ಭೂತ್ಯಾಗಾನ್ಯೋ ನ ವಿದ್ಯತೇ' ಇತ್ಯಾದಿ ಪ್ರಮಾಣಗಳಿಂದಲೂ ಈ ಅರ್ಥವನ್ನು ಸಮರ್ಥಿಸಬಹುದು. ಭಗವಂತನಿಗೆ ಪ್ರಾಕೃತದೇಹಸಂಬಂಧಜ್ಞಾನವು ಭಗವಂತನ ಅವಜ್ಞೆ ಎಂದು ಗುರುತಿಸಲಾಗಿದೆ.
        ಇದಲ್ಲದೆ
'ಯೋ ವೇತ್ತಿ ಪ್ರಾಕೃತಂ ದೇಹಂ ಕೃಷ್ಣಸ್ಯ ಪರಮಾತ್ಮನಃ |
ಸ ಸರ್ವಸ್ಮಾತ್ ಬಹಿಷ್ಕಾರ್ಯಃ ಶ್ರೌತಸ್ಮಾರ್ತವಿಧಾನತಃ ||
        ಎನ್ನುವ ಮಾತು ಭಗವಂತನಿಗೆ ಪ್ರಾಕೃತಶರೀರದ ಸಂಬಂಧವನ್ನು ತಿಳಿದವನು ಸರ್ವವೈದಿಕ ಸ್ಮೃತ್ಯುಕ್ತ ಕರ್ಮಗಳಿಂದ ಭ್ರಷ್ಟನಾಗುತ್ತಾನೆಂದು ಆತನನ್ನು ನಿಂದಿಸಲಾಗಿದೆ. ಆದುದರಿಂದ ಭಗವದಜ್ಞೆ, ಸರ್ವಕರ್ಮಗಳಿಂದ ಪಾತಿತ್ಯ ಮುಂತಾದ ಅನಿಷ್ಟಫಲಗಳಲ್ಲಿ ಪರ್ಯವಸಾನಗೊಳ್ಳುವ ಪ್ರಸಿದ್ಧಾರ್ಥವನ್ನು ಆಕೃತಿತ್ಯಾಗಶಬ್ದಕ್ಕೆ ಸ್ವೀಕರಿಸಬಾರದು. ಭಾಗವತವೇ ಈ ಅಭಿಪ್ರಾಯವನ್ನೇ ಪುಷ್ಟೀಕರಿಸುತ್ತಾ 'ರಾಜನ್ ತನುಭೃಜ್ಜನನಾಪ್ಯಯೇಹಾಂ ಮಾಯಾವಿಡಂಬನಮವೈಹಿ ಯಥಾ ನಟಸ್ಯ' ಎಂಬ ಮಾತಿನಲ್ಲಿ ಭಗವಂತನ ಶರೀರಪರಿಗ್ರಹ - ವ್ಯಾಧನ ಬಾಣದ ಹೊಡೆತವನ್ನು ನಿಮಿತ್ತವಾಗಿಸಿಕೊಂಡು ಶರೀರತ್ಯಾಗವು ಜನವಿಡಂಬನೆ ಮಾತ್ರ ಅವುಗಳು ವಾಸ್ತವಿಕವಾಗಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಜರಾವ್ಯಾಧನ ಬಾಣ ತಾಗಿದಾಗ ಭಗವಂತನೇ ಪ್ರಾಕೃತಶರೀರವನ್ನು ತತ್ಕಾಲದಲ್ಲಿ ಸೃಷ್ಟಿಸಿ ತ್ಯಾಗಮಾಡಿದನೆಂದು ತಿಳಿಯಬೇಕು.
'ಮಾಯಯಾ ಮೃತಕಂ ದೇಹಂ ತದಾ ಸೃಷ್ಟ್ವಾ ಪ್ರದರ್ಶಯೇತ್ |
ಕುತೋ ಹಿ ಮೃತಕಂ ತಸ್ಯ ಮೃತ್ಯಭಾವಾತ್ ಪರಾತ್ಮನಃ ||
        ಎಂಬ ವಚನವೂ ಈ ಅಭಿಪ್ರಾಯವನ್ನು ಪ್ರಾಮಾಣಿಕವೆಂದು ಸಮರ್ಥಿಸಿದೆ.
೭. ಮಿಥ್ಯಾವಚನವೂ ಗುಣಸಂಪಾದಕವಾದರೆ ದೋಷವಲ್ಲ
        ವಿದುರನು ತನಗೆ ತತ್ವದ ಬಗ್ಗೆ ಸಂಶಯವಿದೆ. ತತ್ವನಿಶ್ಚಯವಿಲ್ಲ. ನಿಮ್ಮ (ಮೈತ್ರೇಯ೦) ಚರಣಾರವಿಂದಗಳ ಸೇವೆಯಿಂದ ಅದನ್ನು ಪರಿಹರಸಿ ಕೊಳ್ಳುವೆನೆಂದು ವಿನಮ್ರವಾಗಿ ನುಡಿದಿದ್ದಾನೆ-
'ತಾಂ ಚಾಪಿ ಯುಷ್ಮಚ್ಚರಣಾರವಿಂದಸೇವಯಾಹಂ ಪರಾಣುದೇ'
ದ್ರೋಣದ್ರೌಣಿಕೃಪಾಃ ಪಾರ್ಥಾ ಭೀಷ್ಮೋ ವಿದುರಸಂಜಯೌ |
ಯೇಚಾನ್ಯೇ ತತ್ರ ದೇವಾಂಶಾಃ ಸಮ್ಯಕತ್ವಾಪರೋಕ್ಷಿಣಃ'
        ಎಂಬುದಾಗಿ ಸ್ಕಾಂದವು ವಿದುರನಿಗೆ ತತ್ವಜ್ಞಾನವಿದೆಯೆಂದು ಸಾರುತ್ತಿರುವಾಗ ಯಮಾಂಶಸಂಭೂತನಾದ ವಿದುರನು ತನಗೆ ಜ್ಞಾನವಿಲ್ಲವೆಂದು ನುಡಿದಿರುವುದು ಸುಳ್ಳಲ್ಲವೆ? ಈ ಮಿಥ್ಯಾವಚನವು ವಿದುರನಿಗೆ ಶೋಭಿಸುವುದೆ? ಎಂಬ ಪ್ರಶ್ನೆಗೆ ಆಚಾರ್ಯಮಧ್ವರು ಸಮಾಧಾನವನ್ನು ನೀಡಿದ್ದಾರೆ. ವಿದುರನು ಜ್ಞಾನಿಯಾಗಿದ್ದರೂ ಲೋಕಕ್ಕೆ ತತ್ವಜ್ಞಾನವನ್ನು ಮೈತ್ರೇಯರ ಮುಖೇನ ತಲುಪಿಸುವ ಉದಾತ್ತಉದ್ದೇಶದಿಂದ ಪ್ರಶ್ನಿಸಿದ್ದಾನೆ. ಪ್ರಶ್ನೆ ಮಾಡದಿದ್ದರೆ ಉತ್ತರವನ್ನೂ ಹೇಳಬಾರದು ತಾನೆ? - 'ನಾಪೃಷ್ಟಃ ಕಸ್ಯಚಿದ್ ಬ್ರೂಯಾತ್' ಪ್ರಶ್ನೆ ಮಾಡುವಾಗ ತತ್ವನಿಶ್ಚಯರೂಪಗುಣದ ಅಭಾವವನ್ನು ವಿನಯೋಕ್ತಿರೂಪದಿಂದ ಹೇಳಬೇಕು. ಸುಳ್ಳು ಹೇಳಿದ್ದರಿಂದ ಲೋಕಕ್ಕೆ ತತ್ವನಿಶ್ಚಯರೂಪಪ್ರಯೋಜನ ತನಗೂ ಕೇಳಿದ ತತ್ವದ ನಿಶ್ಚಯ ಬಗ್ಗೆ ದಾರ್ಢ್ಯ ಉಂಟಾಗುತ್ತದೆ. ಏವಂಚ ಸ್ವ - ಪರಗುಣ ಸಂಪಾದಕವಾದ ಈ ಸುಳ್ಳು ವಿದುರನಿಗೆ ಭೂಷಣವೇ ವಿನಾ ದೂಷಣವಲ್ಲ.
        ಈ ವಿಷಯದ ಬಗ್ಗೆ
'ಆತ್ಮನಸ್ತು ಗುಣಾಭಾವಂ ವದತೋ ನತ್ವಸತ್ಯತಾ|
ಅಪೃಷ್ಟಸ್ಯ ದರ್ಮಾರ್ಥಂ ಚ ಗುಣಾಯೈವ ಭವತ್ಯಪಿ'
        ಎಂಬ ವಚನವೇ ಪ್ರಮಾಣವಗಿದೆ. 'ಸತಾಂ ಹಿತಂ ಸತ್ಯಂ' ಇಲ್ಲಿ ಸಜ್ಜನರಿಗೆ ಹಿತವಾದ ಜ್ಞಾನಲಾಭವಾಗುವುದರಿಂದ ತಾನು ಜ್ಞಾನಿಯಲ್ಲವೆನ್ನುವ ವಿದುರನ ಮಾತು ಸತ್ಯವೇ, ಅಸತ್ಯವಲ್ಲವೆಂದು ವಚನದ ಆಶಯವಾಗಿದೆ.
೮.ಪ್ರಸಿದ್ಧಕಥನವು ವ್ಯರ್ಥವಲ್ಲ
ಗೌರಜಃ ಮಹಿಷಃ ಕೃಷ್ಣಃ ಸೂಕರೂ ಗವಯೋ ರುರುಃ |
ದ್ವಿಶಫಾಃ ಪಶವಶ್ಚೈತೇ ಆವಿರುಷ್ಟ್ರಶ್ಚ ಸತ್ತಮ ||
        ಇಲ್ಲಿ ಗೋ,ಆಡು, ಕೋಣ, ಕೃಷ್ಣಮೃಗ, ಹಂದಿ ಮೊದಲಾದ ಪಶುಗಳು ಎರಡುಗೊರಸುಗಳಿಂದ ಸಂಪನ್ನವಾಗಿವೆ ಎಂದೂ ಎಲ್ಲರಿಗೂ ತಿಳಿದ ವಿಷಯವನ್ನೇ ಹೇಳಲಾಗಿದೆ. ಶಾಸ್ತ್ರಕ್ಕೆ ಅಪೂರ್ವಾರ್ಥವು ಆವಶ್ಯಕ. ಹೀಗಿರುವಾಗ ಪ್ರಸಿದ್ಧಾರ್ಥದ ಕಥನದಿಂದ ಶಾಸ್ತ್ರವು ನಿರರ್ಥಕವೆನಿಸುವುದಿಲ್ಲವೆ? ಎಂಬ ಪ್ರಶ್ನೆಗೆ ಆಚಾರ್ಯಮಧ್ವರು ಸಮಾಧಾನವನ್ನು ಸಾರ್ಥಕ್ಯವನ್ನು ಸಮರ್ಥಿಸುವ ಪ್ರಮಾಣವಚನಗಳ ಉಲ್ಲೇಖದ ಮುಲಕ ನೀಡಿದ್ದಾರೆ.
        ತಿಳಿಯದಿರುವ  ಅಪೂರ್ವ ಅರ್ಥವನು ತಿಳಿಸುವ ಉದ್ದೇಶ, ಹಾಗೂ ತಿಳಿದ ವಿಷಯವಾಗಿದ್ದರೂ ಅದರ ಸ್ಮರಣೆಯನ್ನುಂಟುಮಾಡುವ ಉದ್ದೇಶದಿಂದ ಶಾಸ್ತ್ರದ ಮಾತುಗಳು ಹೊರಟಿವೆ. ಪ್ರಕೃತದಲ್ಲಿ ಭಗವಂತನಿಂದ ಸೃಷ್ಟಿಗೊಳಪಡುವ ಗೋಮೊದಲಾದ ಪಶುಗಳನು, ಹಾಗೂ ಅದರೊಳಗಿರುವ ಭಗವಂತನ ರೂಪಗಳನ್ನು 'ದ್ವಿಶಫ' (ಎರಡುಗೊರಸುಗಳಿಂದ ಸಂಪನ್ನ) ರೂಪದಲ್ಲಿ ಸ್ಮರಿಸಬೇಕು. ಅದರಿಂದ ಭವರೋಗಪರಿಹಾರವಾಗಬಲ್ಲುದು ಎಂಬ ಉದ್ದೇಶದಿಂದ ಪ್ರಸಿದ್ಧವಾದ ವಿಷಯವನ್ನು ಹೇಳಿದ್ದಾರೆ -
'ಉಚ್ಯತೇ ಸುಪ್ರಸಿದ್ಧಂ ಚ ಸ್ಮರಣಾರ್ಥಂ ಚ ಕುತ್ರಚಿತ್ |
ಅಪ್ರಸಿದ್ಧಜ್ಞಾಪನಾರ್ಥಂ ಚ ದ್ವಿಧಾ ಶಾಸ್ತ್ರವಚಃ ಸ್ಮೃತಮ್ ||

ತತ್ತದಾಕಾರ ಸಂಯುಕ್ತಾನ್ ಸೃಜ್ಯಾನ್ ಸ್ರಷ್ಟಾರಮೇವ ಚ |
ಯಃ ಸದಾ ಸಂಸ್ಮರೇದ್ಯೋಗೀ ನ ಸ ಭೂಯೋಭಿಜಾಯತೇ ||
        ಎಂಬ ಪ್ರಮಾಣನುಡಿಗಳು ಮೇಲಿನ ವಿಚಾರವನ್ನು ಸಮರ್ಥಿಸುತ್ತವೆ.
೯. ಬ್ರಹ್ಮಾಂಡ ಎಷ್ಟು?
ಲಕ್ಷ್ಯಂತೇಂತರ್ಗತಾಶ್ಚಾನ್ಯೇ ಕೋಟಿಶೋ ಹ್ಯಂಡರಾಶಯಃ |
        ಎಂಬ ಭಾಗವತವಚನದಲ್ಲಿ ಕೋಟಿಬ್ರಹ್ಮಾಂಡಗಳು ಕಾಣುತ್ತವೆ ಎಂದು ಹೇಳಿದೆ.
        ಆದರೆ ಒಂದು ಕಲ್ಪದಲ್ಲಿ ಕೋಟಿಬ್ರಹ್ಮಾಂಡಗಳಿಲ್ಲ, ಒಂದೇ ಬ್ರಹ್ಮಾಂಡ ಇರುತ್ತದೆ. ಎಂಬ ವಿಷಯವನ್ನು ಆಚಾರ್ಯಮಧ್ವರು 'ಬೃಹದಂಡಮಭೂದೇಕಂ' ಎಂಬ ಭಾರತವಚನದ ಉಲ್ಲೇಖದಿಂದ ಖಚಿತಪಡಿಸಿದ್ದಾರೆ. ಹಾಗಾದರೆ ಬ್ರಹ್ಮಾಂಡಬಹುತ್ವವನ್ನು ಸಾರುವ ಪೂರ್ವೋಕ್ತಭಾಗವತವಚನವನ್ನು ಹೇಗೆ ಸ್ವೀಕರಿಸಬೇಕು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಶ್ನೆಗೆ ಮಧ್ವರು ನೀಡಿದ ಸಮಾಧಾನ ಹೀಗಿದೆ -
        ಬ್ರಹ್ಮಾಂಡ ಏಕವಾದರೂ ಅದಕ್ಕೆ ಆಶ್ರಯವನ್ನು ನೀಡಿದ ಭಗವಂತನ ರೂಪಗಳು ಬಹಳವಾಗಿವೆ. ಆದುದರಿಂದ ಆಶ್ರಯಬಹುತ್ವವಿವಕ್ಷೆಯಿಂದ ಬ್ರಹ್ಮಾಂಡಬಹುತ್ವವ್ಯವಹಾರವು ಕಂಡು ಬರುತ್ತದೆ. ಅಥವಾ ವರ್ತಮಾನ ಕಾಲೀನಬ್ರಹ್ಮಾಂಡಜೊತೆಯಲ್ಲಿ ಭೂತ - ಭವಿಷ್ಯತ್ - ಕಾಲೀನ ಬ್ರಹ್ಮಾಂಡಗಳನ್ನು ಸೇರಿಸಿ ಪರಿಗಣಿಸಿದಾಗ ಬ್ರಹ್ಮಾಂಡಬಹುತ್ವಲಾಭ ವಾಗುವುದು ಕಲ್ಪಾಂತರ ಬ್ರಹ್ಮಾಂಡಗಳನ್ನೂ ಸ್ವೀಕರಿಸಿ ಬ್ರಹ್ಮಾಂಡಬಹುತ್ವ ವ್ಯವಹಾರವು ಪುರಾಣದಲ್ಲಿ ಕಂಡು ಬರುತ್ತದೆ. ಅಥವಾ ಒಂದೇ ಬ್ರಹ್ಮಾಂಡವನ್ನು ಶ್ರೀಹರಿಯು ತನ್ನ ಅಚಿಂತ್ಯಾದ್ಭುತಸಾಮರ್ಥ್ಯದಿಂದ ಬಹುರೂಪಗಳಿಂದ ತನ್ನ ರೋಮಕೂಪಗಳಲ್ಲಿ ತೋರಿಸುವುದರಿಂದ ಬಹುತ್ವವ್ಯವಹಾರವನ್ನು ಪುರಾಣದಲ್ಲಿ ನಾವು ಕಾಣುತ್ತೇವೆ.
        ಈ ತೆರನಾದ ಅನೇಕ ಅಬಿಪ್ರಾಯಗಳ ಹಿನ್ನೆಲೆಯಲ್ಲಿ ಬ್ರಹ್ಮಾಂಡಬಹುತ್ವ ವ್ಯವಹಾರವನ್ನು ಸಮರ್ಥಿಸುವ ಪ್ರಮಾಣಗಳ ಉಲ್ಲೇಖವನ್ನು ಅಚಾರ್ಯರು ಮಾಡಿದ್ದಾರೆ -
ಶರೀರಾಣಾಂ ಬಹುತ್ತ್ವೇನ ಅತೀತಾನಾಗತೈಸ್ತಥಾ |
ಅಸ್ಯೈವ ದೇವಕಾಯೇಷು ಪ್ರತಿಪ್ರತಿದರ್ಶನಾತ್ ||
ವಿಷ್ಣುಸಾಮರ್ಥ್ಯತೋಂಡಾನಾಂ ಬಹುತ್ವಂ ನಾನ್ಯಥಾ ಕ್ವಚಿತ್ |
ಏಕಮಂಡಂ ಬಹುತ್ತ್ವೇನ ಪ್ರತ್ಯೇಕರೋಮಕೂಪಗಮ್ |
ಬ್ರಹ್ಮಾಪಶ್ಯತ್ ತಥಾತ್ಮಾನಂ ಹರೇಸ್ತೇಷು ಪೃಥಕ್ ಪೃಥಕ್ ||
೧೦. ಜಯವಿಜಯರ ಶಪದ ಮೂಲಕಾರಣವೇನು?
        ಸರ್ವಾಂತರ್ಯಾಮಿಯಾದ ಭಗವಂತನ ರೂಪ ಹಾಗೂ ವೈಕುಂಠಸ್ಥಭಗವದ್ರೂಪಗಳಲ್ಲಿ  ಅನ್ಯೋನ್ಯವಾಗಿ ಭೇದವಿಲ್ಲ. ಸರ್ವಾಂತರ್ಯಾಮಿಯದ ಭಗವಂತನಾದರೂ ಸ್ವಪ್ರತಿಕೂಲಚೇಷ್ಟೇಯನ್ನು ಜೀವನಿಗೆ ಪ್ರೇರಿಸಿ ಆತನಿಂದ ತನಗೆ ಭಯವನ್ನೂ ಹುಟ್ಟಿಸಿ ಕೊಳ್ಳುವ ಅವಿವೇಕದ ಕಾರ್ಯವನ್ನು ಮಾಡಲಾರ. ಏವಂಚ ಸರ್ವಾಂತರ್ಯಾಮಿಗೆ ಭಯವಿಲ್ಲವೆಂದ ಮೇಲೆ ಆ ರೂಪದಿಂದ ಅಭ್ನ್ನವಾದವೈಕುಂಠಸ್ಥರೂಪಕ್ಕೆ ನಮ್ಮ ಪ್ರತಿಕೂಲಚೇಷ್ಟೆಯಿಂದ ಭಯವಿರಲು ಸಾಧ್ಯವೆ? ಹೀಗಿದ್ದರೂ ನೀವು ಈ ರೂಪಗಳಲ್ಲಿ ಭೇದವನ್ನು ಭಾವಿಸಿ ವೈಕುಂಠಸ್ಥಭಗವದ್ರೂಪಕ್ಕೆ ನಮ್ಮಿಂದ (ಸನಕಾದಿಗಳಿಂದ) ಪ್ರತಿಕೂಲಚೇಷ್ಟೆಯಿಂದ ಭಯವಾದೀತೆಂದು ಭ್ರಮಿಸಿ ನಮ್ಮನ್ನು (ಸನಕಾದಿ) ತಡೆದಿರುವಿರಿ.
        ನೀವು ಹೊಂದಿದ ಭೇದಭಾವನೆ ಹಾಗೂ ತನ್ನಿಮಿತ್ತಭಗವಂತನಲ್ಲಿ ಆಪತ್ತಿನ ಭಯಭಾವನೆಗೆ ತಕ್ಕ ಶಿಕ್ಷೆಯನ್ನು ನೀವು ಹೊಂದಬೇಕು. ಆದುದರಿಂದ ನೀವು ಅಸುರಾವೇಶವುಳ್ಳ ಮೂರು ದೇಹಗಳನ್ನು ಪಡೆಯಿರಿ. ಈ ದೇಹಗಳು ನಿಮಗೆ ಇಷ್ಟವಲ್ಲದ ಭಗವಂತನ ದ್ವೇಷಕ್ಕೆ ಸಾಧನಗಳಾಗಿ ನಿಮಗೆ ಶತ್ರುಗಳೆಂದು ತಿಳಿಯಿರಿ. ಹೀಗೆ ಜಯವಿಜಯರು ಹೊಂದಿದ ಭೇದ - ಭಯಭಾವನೆಗಳನ್ನು ನಿಮಿತ್ತವಾಗಿ ಸ್ವೀಕರಿಸಿ ಸನಕಾದಿಗಳು ಅವರಿಗೆ ಶಾಪವಿತ್ತರೆಂದು ಈ ಕೆಳಗಿನ ಭಾಗವತದ ಮಾತು ಸ್ಪಷ್ಟಪಡಿಸಿದೆ -
ತದ್ವಾ  ಅಮುಷ್ಯ ಪರಮಸ್ಯ ವಿಕುಂಹಭರ್ತುಃ
ಕರ್ತುಂ ನ ಯುಕ್ತಮಿತಿ ಧೀಮಹಿಮಂದಧೀಭ್ಯಾಮ್ |
ಲೋಕಾನಿತೋ ವ್ರಜತಮಂತರಭಾವದೃಷ್ಟ್ಯಾ
ಪಾಪೀಯಸಸ್ತ್ರಯ ಇಮೇ ರಿಪುವೋಸ್ಯ ಯತ್ರ್ ||
        ಭಗವಂತನಲ್ಲಿ ಭೇದಭಾವನೆಯನ್ನು ಹೊಂದಿದವನು ಸರ್ವತ್ರ ಭಯವನ್ನು ಹೊಂದಿ ಸತ್ತನಂತರ ತಮಸ್ಸನ್ನೂ ಹೊಂದುವನು. ಆದುದರಿಂದ ಸರ್ವಥಾ ಭಗವದ್ರೂಪಗಳಲ್ಲಿ ಭೇದವನ್ನು ಭಾವಿಸಿ ಗುಣ - ದೋಷತಾರತಮ್ಯದ ಭ್ರಮೆಯನ್ನು ಹೊಂದಬಾರದು ಎನ್ನುವ ಎಚ್ಚರಿಕೆಯನ್ನು ನೀಡುವ ಪ್ರಮಾಣವನ್ನೂ ಮಧ್ವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ -
ಸರ್ವೋದರಗತಂ ಬ್ರಹ್ಮಯೇ ಭೇದೇನ ವಿಚಕ್ಷತೇ |
ಸರ್ವತ್ರಾಪಿ ಭಯಂ ತೇಷಾಂ ಮೃತಾನಾಂ ತಮ ಏವ ಚ ||
೧೧. ಭಗವಂತನ ರೂಪವು ಭ್ರಾಂತಿಕಲ್ಪಿತವೆ?
        ಭಗವತದ ೩.೧೬.೪೨ ನೇ ಶ್ಲೋಕದಲ್ಲಿ 'ಸ್ವಾನಾಂ ಧಿಯಾ ವಿರಚಿತಂ ಬಹುಸೌಭಗಾಢ್ಯಂ ' ಎಂಬ ವಚನವನ್ನು ಅವಲೋಕಿಸಿದಾಗ ಸೌಂದರ್ಯಾದಿ ಗುಣಗಳಿಂದ ಸಂಪನ್ನನಾದ ಭಗವಂತನ ಶರೀರವು 'ಬುದ್ಧಿಯಿಂದ ವಿರಚಿತ - ಕಲ್ಪಿತ, ವಾಸ್ತವಿಕವಲ್ಲವೆಂದು ಮೇಲ್ನೋಟಕ್ಕೆ ಪ್ರತಿಭಾಸವಾಗುತ್ತದೆ. ಈ ಉಲ್ಲೇಖದಿಂದ ಭಗವಂತನು ವಾಸ್ತವಿಕವಾಗಿ ನಿರಾಕಾರನೇ ಸರಿ ಎಂಬ ನಿರ್ಣಯಕ್ಕೆ ನಾವು ಬದ್ಧರಾಗುವ ಅಪಾಯವಿದೆ. ಈ ಅಪಾಯವನ್ನು ರಚನೆಯ ದ್ವೈಇಧ್ಯವನ್ನು ಸಾರುವ ಪ್ರಮಾಣವಚನದ ಉಲ್ಲೇಖದಿಂದ ನಧ್ವರು ದೂರಮಾಡಿ ಮಹೋಪಕಾರಮಾಡಿದ್ದಾರೆ -
ಅವಿದ್ಯಮಾನ ಕರಣಂ ವಿದ್ಯಮಾನಸ್ಮೃತಿಸ್ತಥಾ |
ಉಭಯಂ ರಚನಂ ಪ್ರೋಕ್ತಂ ಪೂರ್ವಸಿದ್ಧೇಷು ತು ಸ್ಮೃತಿಃ ||
        ಎಂಬ ಪ್ರಮಾಣದ ಉಲ್ಲೇಖದ ಮೂಲಕ ಇಲ್ಲದಿರುವ ವಸ್ತುವಿನ ನಿರ್ಮಾಣ್, ಹಾಗೂ ಇದ್ದವಸ್ತುವಿನ ಸ್ಮರಣೆ ಎಂಬುದಾಗಿ ರಚನೆ ಎರಡು ವಿಧವಾಗಿದೆ ಎಂದು ತಿಳಿಸಿದ ಅವರು ಭಗವಂತನ ಶರೀರವು ಅನಾದಿನಿತ್ಯವಾದುದರಿಂದ ಬುದ್ಧಿಯಿಂದ ಅದರ ರಚನೆ ಎಂದರೆ ಧ್ಯಾನವೆಂದೇ ತಿಳಿಯಬೇಕು. ಆದುದರಿಂದ ಬುದ್ಧಿಯಿಂದ ಇಲ್ಲದ ಭಗವದ್ರೂಪದ ಕಲ್ಪನೆ ಎಂಬ ಭ್ರಮೆಗೆ ಅವಕಾಶವಿಲ್ಲ ಎಂದು ಸಾರಿದ್ದಾರೆ.
೧೨. ಹಿರಣ್ಯಾಕ್ಷನು ಧರ್ಮಸಂರಕ್ಷಕನೆ?
        ಭಗವಾನ್ ವರಾಹನ ಕೈಯಿಂದ ಗದೆಯು ಕೆಳಗೆ ಜಾರಿಬಿದ್ದಾಗ, ನಿರಾಯುಧನ ಮೇಲೆ ಸಾಯುಧನಾಗಿ ಆಯುಧಪ್ರಯೋಗಿಸುವುದು ಧರ್ಮವಲ್ಲವೆಂದು ತಿಳಿದ ಹಿರಣ್ಯಾಕ್ಷನು ಯುದ್ಧರ್ಧವನ್ನು ಗೌರವಿಸಿ ಸುಮ್ಮನೆ ನಿಂತು ಬಿಟ್ಟನು. ಆಗ ವರಾಹನೂ ಅವನು ಪಾಲಿಸಿದ ಧರ್ಮವನ್ನು ಮಾನ್ಯ ಮಾಡಿದನೆಂದು (೩.೨೦.೪-೫) ಶ್ಲೋಕಗಳಲ್ಲಿ  ಉಲ್ಲೇಖವಿದೆ.
        ಇದು ಹೇಗೆ ಸಮಂಜಸವೆನಿಸುತ್ತದೆ?
        ಹರಿಭಕ್ತನಲ್ಲದವನು ಧರ್ಮಮಾಡಿದರೂ ಪಾಪವೆನಿಸುತ್ತದೆ ಎಂದು ಶಾಸ್ತ್ರವು ಸಾರುತ್ತಿದೆ.  ಹೀಗಿರುವಾಗ ಹಿರಣ್ಯಾಕ್ಷನು ಪಾಲಿಸಿದ ಯುದ್ಧಧರ್ಮವನ್ನು ಭಗವಂತನೂ ಮಾನ್ಯ್ಮಾಡಿದನೆಂದು ಹೇಳುವುದು ಸಮಂಜಸವೆ? ಈ ಪ್ರಶ್ನೆಗೆ ಧರ್ಮದ್ವಿಮುಖತೆಯನ್ನು ತೋರಿಸುವ ಪ್ರಮಾಣವನ್ನು ಉಲ್ಲೇಖಿಸಿ ಸಮಾಧನವನ್ನು ಮಧ್ವರು ನೀಡಿದ್ದಾರೆ -
ಧರ್ಮಃ ಸತ್ಯಮಿತಿಪ್ರೋಕ್ತೋ ಧರ್ಮಶ್ಚಾಪಿ ಹರೇ ಪ್ರಿಯಃ |
ಶಾಸ್ತ್ರವಿಹಿತವಾಗಿ 'ಸತ್ಯ' ವೆನಿಸಿದ್ದು ಒಂದು ಬಗೆಯಧರ್ಮವಾದರೆ ಹರಿಪ್ರೀತಿಕರವಾದದ್ದು ಇನ್ನೊಂದು ಮುಖದ ಧರ್ಮ. ಅವುಗಳಲ್ಲಿ ಭಕ್ತನಲ್ಲದ ಹಿರಣ್ಯಾಕ್ಷನು ಪಾಲಿಸಿದ, ಹರಿಯು ಗೌರವಿಸಿದ ಧರ್ಮ, ಶಾಸ್ತ್ರವಿಹಿತವಾದ ಎರಡನೇ ದರ್ಜೆಯು ಧರ್ಮವೇ ವಿನಾ ಹರಿಪ್ರೀತಿಕರವಾದ ಭಾಗವತಧರ್ಮವಲ್ಲ. ಅಭಕ್ತನಲ್ಲಿ 'ಸತ್ಯ' ವೆನಿಸಿದ ಧರ್ಮವನ್ನು ಒಪ್ಪಿದರೆ ಯಾವ ಶಾಸ್ತ್ರದ ವಿರೋಧವೂ ಇಲ್ಲ ತಾನೆ?
೧೩. ಅಧಿಕಾರಸ್ಥ ದೇವತೆಗಳಿಗೆ ಅಧಿಕಾರಕಾಮನೆ ದೋಷವೆ?
        (೩.೧೦.೩೯) ಶ್ಲೋಕದಲ್ಲಿ ಚತುರ್ಮುಖನು ಲೋಕಾಧಿಪತ್ಯದ ಕಾಮನೆಯಿಂದ ಭಗ್ವಂತನನ್ನು ಸ್ತೋತ್ರದಿಂದ ಸಂತೋಷಪಡಿಸಿದನೆಂದು ಉಲ್ಲೇಖವಿದೆ. 'ಋಜು'ಗಳಾದ ಅವರು ಹರಿಪ್ರೀತಿ - ಭಗವದ್ಭಕ್ತಿ - ಜ್ಞಾನರೂಪಫಲಗಳನ್ನು ಬಿಟ್ಟು ಬೇರೇನನ್ನೂ ಬಯಸುವುದಿಲ್ಲವೆಂದು ಶಾಸ್ತ್ರವು ಸಾರುತ್ತಿದೆ ತಾನೆ? ಹೀಗಿರುವಾಗ ಲೋಕಾಧಿಪತ್ಯದ ಕಾಮನೆಯ ಬ್ರಹ್ಮನ ಋಜುತ್ವ (ಶುದ್ಧಭಾಗವತಧರ್ಮಪರಾಯಣತೆ) ಕ್ಕೆ ಭಂಗವನ್ನುಂಟು ಮಾಡುವುದಿಲ್ಲವೆ? ಎಂಬ ಪ್ರಶ್ನೆಗೆ ಮಧ್ವರು ಉತ್ತರವನ್ನು ಕೆಳಗೆ ಕಾಣುವ ಪ್ರಮಾಣಗಳ ಉಲ್ಲೇಖದ ಮೂಲಕ ನೀಡಿದ್ದಾರೆ -
ಆಧಿಕಾರಿಕದೇವಾನಾಂ ಸ್ವಾಧಿಕಾರಾಭಿಕಾಮನಮ್ |
ಭವತಿ ಪ್ರೀತಯೇ ವಿಷ್ಣೋಕ್ತ್ಯಾದೇರಪಿ ಯತ್ ಸದಾ ||
        ಅಧಿಕಾರಸ್ಥದೇವತೆಗಳು, ಹೇಗೆ ಹರಿಭಕ್ತ್ಯಾದಿಗಳನ್ನು ಬಯಸಿದರೆ ಆತನಿಗೆ ಪ್ರಿಯವಾಗುವುದೋ ಹಾಗೆ ಯೋಗ್ಯ ಅಧಿಕಾರವನ್ನು ಬಯಸಿದರೂ ಹರಿಗೆ ಪ್ರೀತಿ ಆಗುವುದು. ಆದುದರಿಂದ ಹರಿಪ್ರೀತಿಗೆ ಪೂರಕವಾಗಿ ಅಧಿಕಾರವನ್ನು ಬಯಸಿದ್ಧರಿಂದ ಅವರ ಋಜುತ್ವಕ್ಕೆ ಅದರಿಂದ ಹಾನಿಯಿಲ್ಲ.
೧೪. ಕಪಿಲನಿಂದ ಪರಶುಕ್ಲನ ಹಿರಿಮೆಯ ಗಾನ
        ಉಪನಿಷತ್ತುಗಳಲ್ಲಿ ಬ್ರಹ್ಮಾದಿಜೀವರ ಶರೀರಗಳ ಪತನವು ಮುಖ್ಯಪ್ರಾಣನ ನಿರ್ಗಮನದಿಂದ, ಉತ್ಥಾನವು ಆತನ ಪುನಃ ಪ್ರವೇಶದಿಂದ ಆಯಿತೆಂದು ವರ್ಣಿಸಿ ಶರೀರೋತ್ಥಾಪಕತ್ವದಿಂದ ಜೀವೋತ್ತಮನೆಂದು ನಿರ್ಣಯಿಸಲ್ಪಟ್ಟ ಆತ 'ಉಕ್ಠ' ನೆಂದು ಖ್ಯಾತನಾಗಿದ್ದಾನೆ.
        ಭಾಗವತದಲ್ಲೂ ಕಪಿಲನು ದೇವಹೂತಿಯನ್ನು ಕುರಿತು ಈ ವಿಷಯದ ಬಗ್ಗೆ ಬೆಳಕನ್ನು ಚೆಲ್ಲಿದ್ದಾನೆ. ನೀರಿನಲ್ಲಿ ಬಿದ್ದ ಬ್ರಹ್ಮದೇವರ ದೇಹವನ್ನು ರುದ್ರಾದಿದೇವತೆಗಳು ಒಳಗೆ ಪ್ರವೇಶಿಸಿ ಏಳಿಸಲು ಸಮರ್ಥರಾಗಲಿಲ್ಲ. ಯಾವಾಗ ಬ್ರಹ್ಮಾಂತರ್ಯಾಮಿಯಾದ ಕ್ಷೇತ್ರಜ್ಞನೆನಿಸಿದ ಶ್ರೀಹರಿಯು ಚಿತ್ತಾಭಿಮಾನಿಬ್ರಹ್ಮ-ವಾಯುರಿಂದೊಡಗೂಡಿ ದೇಹದೊಳಗೆ ಪ್ರವೇಶಿಸಿದನೋ ಆಗ ಬ್ರಹ್ಮದೇವರ ದೇಹವು ಎದ್ದು ನಿಂತಿತು ಎಂದು ಉಪದೇಶಿಸಿದ್ದಾನೆ -
ಚಿತ್ತೇನ ಹೃದಯಂ ಚೈತ್ಯಃ ಕ್ಷೇತ್ರಜ್ಞಃ ಪ್ರಾವಿಶದ್ ಯದಾ |
ವಿರಾಟ್ ತದೈವ ಪುರುಷಃ ಸಲಿಲಾದುದತಿಷ್ಠತ ||
        ಇಲ್ಲಿ ಚಿತ್ತ ಶಬ್ದದಿಂದ 'ಚಿತ್ತಾಭಿಮಾನೀ ಬ್ರಹ್ಮೈವ' ಎಂಬ ಪ್ರಮಾಣಾನುಸಾರವಾಗಿ ಬ್ರಹ್ಮನನ್ನು ಹಾಗೂ 'ಪ್ರಾಣಃ ಸೂತ್ರಂ ಮಹಾನ್ ಬ್ರಹ್ಮ ಚಿತ್ತಂ ವಾಯುರ್ಬಲಂ ಧೃತಿಃ' ಎಂಬ ಪ್ರಮಾಣಾನುಸಾರವಾಗಿ ಮುಖ್ಯಪ್ರಾಣನನ್ನೂ ಸ್ವೀಕರಿಸಬೇಕು. ಹರಿಯು ಸ್ವತಂತ್ರವಾಗಿ ಶರೀರವನ್ನು ಎಬ್ಬಿಸಲು ಸಮರ್ಥನು. ಚಿತ್ತಾಭಿಮಾನಿಗಳು ಹರಿಪ್ರಸಾದದಿಂದಲೇ ಎಬ್ಬಿಸಲು ಸಮರ್ಥರು. ಸ್ವತಂತ್ರವಾಗಿ ಸಮರ್ಥರಲ್ಲ ಎಂಬ ಪ್ರಮೇಯರಹಸ್ಯವು ಅಪ್ರಾಧಾನ್ಯಸೂಚಕವಾದ 'ಚಿತ್ತೇನ' ಎಂಬ ತೃತಿಯಾವಿಭಕ್ತಿಯಿಂದ ಸೂಚಿತವಾಗುತ್ತದೆ.
೧೫. ಜೀವೇಶ್ವರಭೇದದರ್ಶನದಿಂದ ಭಯವಿಲ್ಲ
        ಸರ್ವಸಂಹಾರಶಕ್ತಿಯಾಗಿ 'ಕಾಲ' ಎನಿಸಿದ ಭಗವಂತನಿಂದ 'ಯತೋ ಭಿನ್ನದೃಶಾಂ ಭಯಂ' ಎಂಬ ವಚನದಲ್ಲಿ ಜೀವೇಶ್ವರಭೇದಜ್ಞಾನಿಗಳಿಗೆ ಭಯ ಉಂಟಾಗುತ್ತದೆ ಎಂಬ ಅರ್ಥವು ಮೇಲ್ನೋಟಕ್ಕೆ ತೋರುತ್ತದೆ. ಆದರೆ ಈ ಅರ್ಥದಲ್ಲಿ ಕಪಿಲನು ಈ ಮಾತನ್ನು ಆಡಲಿಲ್ಲ. ಏಕೆಂದರೆ ಆತನೇ ಮುಂದೆ ತನ್ನ ತಾಯಿಯನ್ನು ಕುರಿತು 'ಭೇದದೃಷ್ಟ್ಯಾಭಿಮಾನೇನ' ಮುಂತಾದ ಉಪದೇಶವಚನಗಳಲ್ಲಿ ಜೀವೇಶ್ವರಭೇದಜ್ಞಾನವು ಚತುರ್ಮುಖಾದಿಗಳ ಮುಕ್ತಿಗೆ ಸಾಧನವಾಗಿದೆ ಎಂದು ಸ್ಪಷ್ಟ ಪಡಿಸಿದ್ದಾನೆ. ಹೀಗಾಗಿ ತನ್ನ ಮಾತಿಗೆ ವಿರುದ್ಧವಾಗಿ ಭೇದಜ್ಞಾನವು ಭಯಜನಕವೆಂದು ಹೇಳಿ ವ್ಯಾಹತಭಾಷಿ ಆಗಲು ಬಯಸುವನೆ?
        ಇಲ್ಲಿ 'ಭಿನ್ನದೃಶಾಂ' ಎಂಬ ಮಾತಿಗೆ ಭಗವಂತನಿಗಿಂತ ಮಹಾಅಲ್ಪಜ್ಞಾನವುಳ್ಳವರಿಗೆ ಭಯವನ್ನು ಭಗವಂತನು ಹುಟ್ಟಿಸುತ್ತಾನೆಂದು ಅರ್ಥೈಸಬೇಕು.
        ಭಿನ್ನಮಲ್ಪಂ ವಿಜಾನೀಯಾದಭಿನ್ನಂ ಪೂರ್ಣಮಿಷ್ಯತೇ' ಎಂಬ ಶಬ್ದನಿರ್ಣಯವಚನದಲ್ಲಿ ಭಿನ್ನಶಬ್ದಕ್ಕೆ 'ಅಲ್ಪ' ಅರ್ಥವನ್ನೂ ತೋರಿಸಲಾಗಿದೆ. ಆದುದರಿಂದ ಜೀವೇಶ್ವರಭೇದಜ್ಞಾನಿಗೆ ಭಗವಂತನು ಭಯವನ್ನು ಹೇಳಲಿಲ್ಲ. 'ಭಿನ್ನ' ಎಂಬ ಶಬ್ದಕ್ಕೆ ಅಲ್ಪ ಎಂಬರ್ಥವೂ ಇರುವುದರಿಂದ. 'ವಿದ್ಯಾ ಆತ್ಮನಿ ಭಿದಾ ಭೋದಃ' ಎಂಬ ಶ್ರೀಕೃಷ್ಣನ ಮಾತಿಗೆ ಆತ್ಮ (ತನ್ನಲ್ಲಿ) (ಜೀವನದಲ್ಲಿ) ಅಲ್ಪತ್ವದ ಜ್ಞಾನವೂ ವಿದ್ಯೆ. ಎನಿಸುತ್ತದೆ ಎಂದು ಸೂಚಿತವಾಯಿತು.
೧೬. ಕಪಿಲಾವತಾರದ ರಹಸ್ಯ
'ಕರ್ದಮವೀರ್ಯಮಾಪನ್ನೊ ಜಜ್ಞೇ ಅಗ್ನಿರಿವ ದಾರುಣಿ' ಎಂಬ ವಚನದಲ್ಲಿ ಕಪಿಲನು ಕರ್ದಮವೀರ್ಯವನ್ನು ಹೊಂದಿ ದೇವಹೂತಿಯಲ್ಲಿ ಜನಿಸಿದನೆಂದು ಹೇಳಲಾಗಿದೆ. ಭಗವಂತನಿಗೆ ವೀರ್ಯದಿಂದ ಉತ್ಪನ್ನವಾದ ಜಡದೇಹವಿಲ್ಲ. ಆದುದರಿಂದ ಕರ್ದಮವೀರ್ಯವನ್ನು ಹೊಂದಿ ಮಾತೃದೇಹವನ್ನೂ ಪ್ರವೇಶಿಸಿದ ಭಗವಂತನು ಆ ವೀರ್ಯವನ್ನು ನಾಶಪಡಿಸಿ ತನ್ನದೇ ಜ್ಞಾನಾನಂದಮಯ ರೂಪದಿಂದ ಪ್ರಕಟನಾಗುತ್ತಾನೆ ಎಂಬುದು ಅವತಾರರಹಸ್ಯ -
ನಾವತಾರೇಷು ಹೇರೇರ್ದೇಹಃ ಶುಕ್ಲಾದಿಸಂಭವಃ |
ತಥಾಪಿ ಶುಕ್ಲಸಂಸ್ಥಃ ಮಾತೃದೇಹಂ ಪ್ರವಿಶ್ಯತಿ ||

ವಿಲಾಪ್ಯ ಶುಕ್ಲಂ ತತ್ರೈವ ಕೇವಲಜ್ಞಾನರೂಪಕಃ |
ಉದೇತಿ ಭಗವಾನ್ ವಿಷ್ಣುಃ ಕಾಲೇ ಲೋಕಂ ವಿಮೋಹಯನ್ |
೧೭. ಅವತಾರದ ಉದ್ದೇಶ
ತ್ವಂ ದೇಹತಂತ್ರಃ ಪ್ರಶಮಾಯ ಪಾಪ್ಮನಾಂ
ನಿದೇಶಭಾಜಾಂ ಚ ವಿಭೋ ವಿಭೂತಯೇ |
ಯಥಾವತಾರಾಸ್ತವಸೂಕರಾದಯ -
ಸ್ತಥಾಯಮಪ್ಯಾತ್ಮಪಥೋಪಲಬ್ಧಯೇ ||
        ದೇಹಪ್ರಕಾಶರೂಪನೆನಿಸಿ 'ದೇಹತಂತ್ರ' ಎನಿಸಿದ ಸ್ರ್ವತ್ರವ್ಯಾಪಕನಾದ ಭಗವಂತನೇ ನಿನ್ನ ಅವತಾರವು ಪಾಪಿಗಳ ಸಂಹಾರ ಹಾಗೂ ಆದೇಶಪಾಲಿಸುವ ಬ್ರಹ್ಮಾದಿದೇವತೆಗಳ ಜ್ಞಾನಾದಿಸಂಪತ್ತುಗಳ ಉನ್ನತಿಗಾಗಿ, ವರಾಹಾದಿರೂಪಗಳಲ್ಲಿ ನೀನು ಭಗವತ್ಪ್ರಾಪ್ತಿ ಸಾಧನಗಳನ್ನೂ ಭೂದೇವಿಮೊದಲಾದವರಿಗೆ ಉಪದೇಶಿಸಿರುವಂತೆ ಈ ಕಪಿಲಾವತಾರವೂ ಭಗವತ್ಪ್ರಾಪ್ತಿಸಾಧನಗಳಾದ ಭಕ್ತ್ಯಾದಿಗಳನ್ನು ಉಪದೇಶಿಸುವ ಸಲುವಾಗಿ ಇದೆ ಎಂದು ನಾನು (ದೇವಹೂತಿ) ಭಾವಿಸುತ್ತೇನೆ.
        ಇಲ್ಲಿ 'ಆತ್ಮಪಥೋಪಲಬ್ಧಯೇ' ಎಂಬ ವಚನವು ಇನ್ನೊಂದು ಅರ್ಥದಲ್ಲೂ ತೆರೆದುಕೊಳ್ಳುತ್ತದೆ. ಆತ್ಮ ಅಂದರೆ ವಾಯುದೇವ (ಆತ್ಮಾ ವಾಯುರುದಾಹೃತಃ) ಅವನ ಪಥ ಅಂದರೆ ಆತನ ಸಿದ್ಧಾಂತಮಾರ್ಗ - ಭಕ್ತಿ - ಭೇದಸಿದ್ಧಾಂತಮಾರ್ಗ - ಅದರ ಜ್ಞಾನವನ್ನು ಸಜ್ಜನರಿಗೆ ಉಪದೇಶಿಸುವ ಸಲುವಾಗಿ ಕಪಿಲನ ಅವತಾರ. ಈ ಮಾತು 'ಭೇದದೃಷ್ಟ್ಯಾಭಿಮಾನೇನ' ಮುಂತಾದಮಾತಿನಿಂದ ಸ್ಪಷ್ಟವಾಗುತ್ತದೆ.
        ಏವಂ ಚ ಕಪಿಲೋಪದೇಶದ ಸಾರಾಂಶವನ್ನು ಅವಲೋಕಿಸಿದಾಗ, ಹರಿಯ ಮತವೇ ಹನುಮನ ಮತ. ಹನುಮನ ಮತವೇ ಹರಿಯ ಮತವೆಂದು ದಿಟವಾಗಿತ್ತದೆ.
ಶ್ರೀಮಧ್ವಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
        
ಹೃದಯವಾಣಿ
ಶ್ರೀ ಮದ್ಭಾಗವತದ ಚತುರ್ಥಸ್ಕಂಧದ ಸುಲಲಿತ ಅನುವಾದದ ಪ್ರಕಾಶನಕಾರ್ಯವು 'ಶ್ರೀಭಾಗವತಾಶ್ರಮ ಪ್ರಕಾಶನ' ದಿಂದ ಇದೀಗ ನಡೆದು ಜಿಜ್ಞಾಸುಗಳ ಕೈಗೆ ತಲುಪಿಸುತ್ತಿದ್ದೇವೆ. ಈ ಹಿಂದೆ ಪ್ರಥಮ-ದ್ವಿತೀಯಸ್ಕಂಧಗಳ ಹಾಗೂ ತೃ‍ತೀಯ ಸ್ಕಂಧದ ಅನುವಾದದ ಪ್ರಕಾಶನಕಾರ್ಯವು ಇದೇ ಪ್ರಕಾಶನ ಸಂಸ್ಥೆಯಿಂದ ನಡೆದಿದೆ. ವಿದ್ವಾನ್ ಹಯವದನ ಪುರಾಣಿಕರು ಚೆನ್ನಾಗಿ ಅನುವಾದಕಾರ್ಯವನ್ನು  ಮಾಡಿದ್ದಾರೆ. ಅವರನ್ನು ಈ ಕಾರ್ಯಕ್ಕಾಗಿ  ಅಭಿನಂದಿಸತ್ತಿದ್ದೇವೆ. ಹಿಂದಿನ ಪ್ರಕಾಶನ ಹಾಗೂ ಈಗಿನ ಪ್ರಕಾಶನಕಾರ್ಯದ ಸಂಪೂರ್ಣವೆಚ್ಚವನ್ನು ಶ್ರೀ ಕೆ. ಯಾದವಾಚಾರ್ಯರು ನೀಡಿ ಮಹೌದಾರ್ಯವನ್ನು ತೋರಿದ್ದಾರೆ. ತಮ್ಮ ತೀರ್ಥರೂಪರಾದ ವಿದ್ವಾನ್ ಶ್ರೀ ಗುರುಗುಂಡಿ ರಾಮಾಚಾರ್ಯರ ಸ್ಮಾರಕವಾಗಿ ಪ್ರಕಾಶನದ ಸೇವೆಯನ್ನು ಸಲ್ಲಿಸಿದ ಆಚಾರ್ಯರನ್ನು ಅಭಿನಂದಿಸುತ್ತಾ ಅವರಿಗೆ ಹಾಗೂ ಅವರ ಧರ್ಮಪತ್ನಿಗೆ ವಿಶೇಷ ಆಯುರಾರೋಗ್ಯಸಂಪತ್ತನ್ನು ಭಗವಂತನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇವೆ.
ಶ್ರೀ ವಿದ್ಯೇಶತೀರ್ಥ ಶ್ರೀಪಾದರು
ಶ್ರೀ ಭಂಡಾರಕೇರಿ ಮಠ
ಚತುರ್ಥಸ್ಕಂಧದ ಹೃದ್ಗತ

- ಶ್ರೀವಿದ್ಯೇಶತೀರ್ಥರು, ಭಂಡಾರಕೇರಿ ಮಠ.

೧. ಶುಚೀನಾಂ ಶ್ರೀಮತಾಂ ಗೇಹೇ ಯೋಗಭ್ರಷ್ಟೋsಭಿಜಾಯ್ತತೇ |
ಯತತೇ ಚ ತತೋ ಭೂಯಃ ಸಂಸಿದ್ಧೌ ಕುರುನಂದನ ||

ಗೀತಾವಚನ ಮತ್ತು ಧ್ರುವಕುಮಾರ

   
ಮೇಲೆ ಉಲ್ಲೇಖಿಸಿದ ಶ್ರೀಕೃಷ್ಣನ ಭಗವದ್ಗೀತಾವಚನವು ೬ ತಿಂಗಳು ಬಾಲ್ಯದಲ್ಲೆ ಕಠಿಣ ತಪಸ್ಸಾಧನೆಗೈದು ಭಗವಾನ್ ವಾಸುದೇವನಿಂದ ಅನುಗೃಹೀತನಾದ ಧ್ರುವನ ನಿದರ್ಶನದಿಂದ ದಿಟವೆಂದು ಸಾಬೀತಾಗುತ್ತದೆ.
    ಪೂರ್ವಜನ್ಮದಲ್ಲಿ ಸಾಧನೆಯಿಂದ ವಂಚಿತನಾದವನು ಮುಂದಿನಜನ್ಮದಲ್ಲಿ ಉತ್ತಮಕುಲದಲ್ಲಿ ಜನಿಸಿ ತನ್ನ ಸಾಧನೆಯನ್ನು ಮುಂದುವರೆಸಿ ಸಿದ್ಧಿಯನ್ನು  ಪಡೆಯುತ್ತಾನೆ ಎಂದು ನಿರ್ದಿಷ್ಟಗೀತಾವಚನದ ಆಶಯವಾಗಿದೆ.
    ಧ್ರುವಕುಮಾರನು ಹಿಂದಿನ ಜನ್ಮದಲ್ಲಿ ಬ್ರಾಹ್ಮಣನಾಗಿದ್ದನು. ಆಗ ಅವನಿಗೆ ರಾಜಕುಮಾರನ ಸಂಗವಾಯಿತು. ಅವನ ರಾಜಭೋಗವನ್ನು ನೋಡಿ, ಬ್ರಾಹ್ಮಣದೇಹದಲ್ಲಿ ಸುಖವಿಲ್ಲ ರಾಜನಾದರೆ ಸಿಖವನ್ನು ಹೊಂದ ಬಹುದು ಎಂದು ಆಶೆ ಉಂಟಾಯಿತು. ಸಾಧನಗೈಯ್ಯುತ್ತಿದ್ದ ಬ್ರಾಹ್ಮಣನಿಗೆ ಮಧ್ಯದಲ್ಲಿ ಈ ಆಶೆ ಉಂಟಾಗಿದ್ದರಿಂದ ಸಿದ್ಧಿಗೆ ಅಗತ್ಯವಾದ ಆರು ತಿಂಗಳ ಅವಧಿಯ ಸಾಧನೆ ಕೈತಪ್ಪಿ ಹೋಯಿತು. ಈತನ ಆಶೆಯನ್ನು ಗಮನಿಸಿದ ಭಗವಂತನು ಬ್ರಾಹ್ಮಣದೇಹದಿಂದ ಅವನನ್ನು ವಿಮುಕ್ತಗೊಳಿಸಿದನು. ಉತ್ತಾನಪಾದನ ಮಗನಾಗಿ ಹುಟ್ಟಿಸಿದನು. ಆದರೆ ಹಿಂದಿನ ಜನ್ಮದಲ್ಲಿ ಸಾಧನೆ ವಂಚಿತನಾದ  ಧ್ರುವನು ಬಾಲ್ಯದಲ್ಲಿ ಮಲತಾಯಿಯಿಂದ ಅಪಮಾನಿತನಾಗಿ, ಜನ್ಮವಿತ್ತತಾಯಿಯ ಮಾತಿನಿಂದ ವನಕ್ಕೆ ತೆರಳಿ ನಾರದರ ಉಪದೇಶದಿಂದ ೬ ತಿಂಗಳು ಕಠಿಣ ಸಾಧನೆಗೈದನು. ಭಗವಾನ್ ವಾಸುದೇವನನ್ನು ಒಲಿಸಿ ಕೊಂಡು ಸಿದ್ಧಿಯನ್ನು ಪಡೆದನು ಈ ರಹಸ್ಯವು ವಿಷ್ಣುಪುರಾಣದಲ್ಲಿ ಉಲ್ಲಿಖಿತವಾಗಿದೆ. ಈ ನಿದರ್ಶನದಿಂದ " ನ ಹಿ ಕಲ್ಯಾಣಕೃತ್ ಕಶ್ಚಿತ್ ದುರ್ಗತಿಂ ತಾತ ಗಚ್ಚತಿ " ಎನ್ನುವ ಕೃಷ್ಣನ ಮಾತೂ ದಿಟವೆಂದು ಸಾಬೀತಾಗುತ್ತದೆ.