'ಊರ್ಧ್ವಮೂಲೋವಾಕ್ ಶಾಖಃ....' ಎಂದು ಸಂಸಾರವೃಕ್ಷದ ಬೇರನ್ನೂ, ಗೆಲ್ಲನ್ನೂ ತಿಳಿಸುವ
ಮೂಲಕ ಸಂಸಾರವೃಕ್ಷದ ಪರಿಚಯವನ್ನು ನೀಡಿರುವ ಹಾಠಕೋಪನಿಷತ್ತು, ಅಂತಹ ಸಂಸಾರ ಸತ್ಯತ್ವದ
ವಿಷಯದಲ್ಲಿ ಪ್ರತ್ಯಕ್ಷ, ಅನುಮಾನ ಹಾಗೂ ಆಗಮಗಳನ್ನು ಪ್ರಮಾಣಗಳನ್ನಾಗಿ ಸೂಚಿಸಿದೆ -
'ಏಷೋಶ್ವತ್ಥಃ ಸನಾತನಃ - ಎಂಬುದಾಗಿ.
ಸರ್ವಮೂಲ ಸೌರಭ
ಏಷಃ- ಇದು ಅಂದರೆ ಕಣ್ಣು ಮುಂತಾದ ಇಂದ್ರಿಯಗಳಿಗೆ ಗೋಚರಿಸುವಂತಹದ್ದೆಂದು ನಿರ್ದೇಶಿಸುವಮೂಲಕ ಸಂಸಾರವು ಪ್ರತ್ಯಕ್ಷಗೋಚರ ಎಂದಂತಾಗುವುದು.
ಅಶ್ವತ್ಥ ಶಬ್ದಕ್ಕೆ,
'....ಸೋಶ್ವ ಆಶುಗತೋ ಹರಿಃ |
ತದ್ವ್ಯಾಪ್ತತ್ವಾತ್ ತದನ್ನತ್ವಾದಶ್ವತ್ಥೋಯಂ ಪ್ರಕೀರ್ತಿತಃ....||
ಎಂದು ಪ್ರಾಮಾಣ (ಕಾಠಕ ಭಾಷ್ಯ) ಸಾರುತ್ತಿರುವಂತೆ ಬೇಗ ಸಾಗುವ
ಭಗವಂತನು ಅಶ್ವ ಎನಿಸಿದ್ದು, ಅಂತಹ ಭಗವಂತನಿಂದ ವ್ಯಾಪಿಸಲ್ಪಟ್ಟಿರುವುದರಿಂದ, ಹಾಗೂ
ಅವನಿಗೆ 'ಅನ್ನ' ಆಗಿರುವುದರಿಂದ ಸಂಸಾರವು ಅಶ್ವತ್ಥ ಎನಿಸುವುದು ಎಂದು
ವ್ಯಾಖ್ಯಾನಿಸಲಾಗಿದೆ.
ಇದರಿಂದಾಗಿ ಸಂಸಾರವು ಸತ್ಯ ಎಂಬುದಕ್ಕೆ ಅನುಮಾನಪ್ರಮಾಣವನ್ನು
ತೋರಿಸಿದಂತಾಗಿದೆ. ಭಗವಂತನಿಂದ ವ್ಯಾಪಿಸಲ್ಪಟ್ಟಿರುವುದರಿಂದ ಹಾಗೂ ಪ್ರಲಯಕಾಲದಲ್ಲಿ
ಅವನ ಅನ್ನ ಆಗಿರುವದರಿಂದ ಸಂಸಾರ ಸತ್ಯ ಆಗಿರಲೇ ಬೇಕು ತಾನೆ? ರಜ್ಜು ಸರ್ಪದಂತೆ ಮಿಥ್ಯಾ
ಎನಿಸಿದಲ್ಲಿ ಅಂತಹ ಸಂಸಾರವನ್ನು ವ್ಯಾಪಿಸುವುದಾದರೂ ಹೇಗೆ? ಅದು ಅನ್ನ ಆಗುವುದಾದರೂ
ಹೇಗೆ?
ಸನಾತನ ಎಂಬುದಕ್ಕೆ ಸನಾದನ - ವಿಧಿನಿಷೇಧರೂಪವಾದ ಶಬ್ದಗಳಿಗೆ
ಪಾತ್ರವಾದುದು ಎಂಬ ಅರ್ಥ. ಭಗವದ್ಗೀತೆಯ (೨-೨೪) '....ಅಯಂ ಸನಾತನಃ' ಎಂಬ ಮಾತಿನ
ಸನಾತನ ಶಬ್ದವನ್ನು ಶ್ರೀ ಮಧ್ವರು ಮಹಾವಿಷ್ಣುಪುರಾಣದ ಮುಲಕ ಹೀಗೆಯೇ
ವ್ಯಾಖ್ಯಾನಿಸಿರುವರು - 'ನಿಷೇಧವಿಧ ಿಪಾತ್ರತ್ವಾತ್ ಸನಾತನ ಇತಿ ಸ್ಮೃತಃ'
ಹೀಗೆ ಸಂಸಾರಕ್ಕೆ ನೀಡಲಾದ ಸನಾತನ ಎಂಬ ವಿಶೇಷಣವು ಸಂಸಾರವು
ವೈದಿಕ ಶಬ್ಧಗಳಿಗೆ ಗೋಚರಿಸುವಂತಹದ್ದೆಂದು ಅರ್ಥ ನೀಡುವ ಮೂಲಕ ಸಂಸಾರದ ವಿಷಯದಲ್ಲಿ ಆಗಮ
ಪ್ರಮಾಣವನ್ನು ಸೂಚಿಸಿಕೊಡಬಲ್ಲದು.
ಈ ರೀತಿಯಾಗಿ ಸಂಸಾರದ ಸ್ವರೂಪವನ್ನು ಪರಿಚಯಿಸಹೊರಟ ಕಾಠಕದ
ಮಾತಿನಿಂದ, ಅಂತಹ ಸಂಸಾರದ ಸ್ತ್ಯತ್ವದ ವಿಷಯದಲ್ಲಿ ಪ್ರತ್ಯಕ್ಷ, ಅನುಮಾನ ಹಾಗೂ ಆಗಮ ಈ
ಮೂರು ಪ್ರಮಾಣಗಳೂ ಸೂಚಿಸಲ್ಪಟ್ಟಿವೆ.
(ಕೊಡಂಗಳ ವಿಷ್ಣುಮೂರ್ತಿಯ ಸನ್ನಿಧಿಯಲ್ಲಿ ನೀಡಿದ ಪ್ರವಚನದಲ್ಲಿ.....)
ಶಾರೀರಕ ನಾಮದ ಔಚಿತ್ಯ
ವಸುದೇವಾದಿರೂಪೇಣ ಚತುರ್ಮೂರ್ತಿಶ್ಚ ಸರ್ವಶಃ |
ಅಥವಾ ಪಂಚಮೂರ್ತಿಃ ಸ ಪ್ರೋಕ್ತೋಧಿಕರಣಂ ಪ್ರತಿ |
ಪ್ರತಿಸೂತ್ರಂ ಪ್ರತಿಪದಂ ಪ್ರತ್ಯಕ್ಷರಮಥಾಪಿ ವಾ ||
ಬ್ರಹ್ಮಸೂತ್ರದ ಪ್ರತಿಯೊಂದು ಅಧಿಕರಣದಲ್ಲೂ, ಪ್ರತಿಯೊಂದು
ಸೂತ್ರದಲ್ಲೂ, ಪ್ರತಿಯೊಂದು ಶಬ್ದದಲ್ಲೂ ಪ್ರತಿಯೊಂದು ಅಕ್ಷರದಲ್ಲೂ ಭಗವಂತನ ವಾಸುದೇವ,
ಸಂಕರ್ಷಣ, ಪ್ರದ್ಯುಮ್ನ ಹಾಗೂ ಅನಿರುದ್ದ ಎಂಬ ಚತುರ್ಮೂರ್ತಿಗಳಾಗಲೀ,
ನಾರಾಯಣ-ವಾಸುದೇವ-ಸಂಕರ್ಷಣ-ಪ್ರದ್ಯುಮ್ನ ಹಾಗೂ ಅನಿರುದ್ಧ ಎಂಬ ಪಂಚಮೂರ್ತಿಗಳಾಗಲೀ
ಪ್ರತಿಪಾದಿಸಲ್ಪಟ್ಟಿವೆ ಎಂದು ಶ್ರೀಮದಾಚಾರ್ಯರು ಅನುವ್ಯಾಖ್ಯಾನದಲ್ಲಿ (೧-೧-೨೪೯)
ತಿಳಿಸಿದರು.
ಸರ್ವಮೂಲ ಸೌರಭ
ಬ್ರಹ್ಮಸೂತ್ರಗಳಿಗೆ ಶಾರೀರಕ
ಸೂತ್ರಗಳೆಂಬ ಹೆಸರು ಬಂದಿರುವಂತಹದ್ದು ಅವುಗಳಲ್ಲಿ ಭಗವಂತನ ವಾಸುದೇವಾದಿ ರೂಪಗಳ
ಪ್ರ್ತಿಪಾದನೆ ನಡೆದಿರುವುದರಿಂದಲೇ ಹೊರತು ಕೆಲವರು ಭಾವಿಸುವಂತೆ ಜೀವೇಸ್ವರರ ಅಭೇದದ
ಪ್ರತಿಪಾದನೆ ನಡೆದಿರುವುದರಿಂದ ಬ್ರಹ್ಮಸೂತ್ರಗಳು ಶರೀರಕ ಎನಿಸಿರುವುದಲ್ಲ. ಶರೀರಕ
ಶ್ಬ್ದದಿಂದ ಜೀವನನ್ನೇ ಹೇಳುವಂತಹದಿದ್ದರೆ ಶಾರೀರ ಎಂದೇ ಉಲ್ಲೇಖಿಸಬಹುದಿತ್ತು. ಶಾರೀರಕ
ಎಂಬ ಪ್ರಯೋಗ ಸಲ್ಲ. 'ಅನುಪಪತ್ತೇಸ್ತು ನ ಶಾರೀರಃ' ಮುಂತಾದ ಸೂತ್ರಗಳಲ್ಲಿ
ಶರೀರಶಬ್ದದಿಂದಲೇ ಜೀವನ ಪರಾಮರ್ಶೆ ನಡೆದಿದೆ.
'ಶಾರೀರಶ್ಚೋಭಯೇಪಿ ಹಿ ಭೇದೇನೈನಮಧೀಯತೇ'
- ಎಂಬ ಬ್ರಹ್ಮಸೂತ್ರದಲ್ಲಿ ಭಗವಂತನನ್ನು ಈ ಜಗತ್ತನ್ನು ಶರೀರವನ್ನೆಂಬಂತೆ
ಹೊಂದಿರುವವನೆಂಬ ಅಭಿಪ್ರಾಯದಲ್ಲಿ ಶಾರೀರಕ ಎಂದು ಕರೆಯಲಾಗಿದೆ. ಜಗತ್ತು ಭಗವಂತನಿಗೆ
ಶರೀರದಂತೆಯೇ ಹೊರತು ಶರೀರವಲ್ಲ ಎಂಬ ಆಶಯದಲ್ಲಿ ಕುತ್ಸನಾರ್ಥಕವಾದ ಕಪ್ರತ್ಯಯವನ್ನು
ಪ್ರಯೀಗಿಸಿ 'ಶಾರೀರಕ' ಎನ್ನಲಾಗುವುದು.
ಹಾಗೆಯೇ 'ಯಸ್ಯಾತ್ಮಾ ಶರೀರಮ್....' ಎಂಬ
ಶ್ರುತಿಯಲ್ಲಿ ಜೀವನು ಪರಮಾತ್ಮನ ಶರೀರ ಎನ್ನಲಾಗಿದೆ. ಶರೀರ ಹೇಗೆ ಶರೀರಿಗೆ
ಅಧೀನವಾಗಿರುವುದೋ ಹಾಗೆ ಅಧೀನತ್ವವಿಷಯದಲ್ಲಿ ವಿಷ್ಣುವಿನ ಶರೀರದ ಸಾದೃಶ್ಯ
ಹೊಂದಿರುವುದರಿಂದ ಜೀವನು ಅವನ ಶರೀರ ಎಂದು ವ್ಯವಹರಿಸಲ್ಪಡುವನೆಂದು ಶ್ರೀ ಮಧ್ವರು
ಸ್ಪಷ್ಟಪಡಿಸಿರುವರು - ಸಾದೃಶ್ಯಾದ್ ದೇಹವಜ್ಜೀವೋ ವಿಷ್ಣೋಃ.....' (ಷ.ಉ. ೪-೧-೭)
ಅಂತಹ ಶರೀರನಿಗೆ ಸಂಬಂಧಿಸುವ (ಶರೀರಸ್ಯೇದಂ ಶಾರೀರಂ) ಕಂ - ಸುಖವು ಯಾರಿಂದಲೋ ಅಂತಹ
ಭಗವಂತನ ವಾಸುದೇವ ರೂಪವು ಶರೀರಕ ಭಗವಂತನ ವಾಸುದೇವ ರೂಪವು ತಾನೇ ಭಕ್ತರಿಗೆ ಮುಕ್ತಿ
ನೀಡಿ ಆನಂದವನ್ನು ಅನುಭವಿಸುವಂತೆ ಮಾಡುವಂತಹದ್ದು?
ಅಲ್ಲದೆ ಬ್ರಹ್ಮಸೂತ್ರದ ಪ್ರತಿಯೊಂದು
ಸೂತ್ರ, ಅಧಿಕರಣ, ಶಬ್ದ, ಅಕ್ಷರ - ಇವುಗಳಲ್ಲಿ ಪ್ರತಿಪಾದ್ಯಗಳಾಗಿರುವ ನಾರಾಯಣ,
ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಹಾಗೂ ಅನಿರುದ್ಧ ರೂಪಗಳು ಆನಂದಮಯ, ವಿಜ್ಞಾನಮಯ,
ಮನೋಮಯ, ಪ್ರಾಣಮಯ ಹಾಗೂ ಅನ್ನಮಯ ಎನಿಸಿದ್ದು ಅನ್ನಮಯನಾಮಕ ಅನಿರುದ್ಧನು ಈ
ಅನ್ನಮಯಕೋಶಕ್ಕೆ ಶರೀರಯಂತೆ ಇದ್ದರೆ, ಅಂತಹ ಅನ್ನಮಯನಿಗೆ ಪ್ರಾಣಮಯ ನಾಮಕ
ಪ್ರದ್ಯುಮ್ನನು ಶರೀರಿಯಂತೆ ಇರುವನು.ಪ್ರಾಣಮಯ ಪ್ರದ್ಯುಮ್ನನಿಗೆ ಮನೋಮಯನಾಮಕ
ಸಂಕರ್ಷಣನು ಶರೀರಿಯಂತೆ ಇರುವನು. ಮನೋಮಯನಾಮಕ ಸಂಕರ್ಷಣನಿಗೆ ವಿಜ್ಞಾನಮಯನೆನಿಸುವ
ವಾಸುದೇವನು ಶರೀರಿಯಂತೆ ಇರುವನು. ವಿಜ್ಞಾನಮಯನಾಮಕ ವಾಸುದೇವನಿಗಾದರೂ ಆನಂದಮಯನಾಮಕ
ನಾರಾಯಣನು ಶರೀರಿಯಂತೆ ಇರುವನು - ಎಂದು ತೈತ್ತಿರೀಯೋಪನಿಷತ್ತು (೨-೨....೯)
ನಿರೂಪಿಸಿದೆ.ಯಜುಃಸಂಹಿತೆ (ತೈ.ಉ.ಭಾ) ಸ್ಪಷ್ಟಪಡಿಸುತ್ತಿರುವಂತೆ ಭಗವದೂಪಗಳ ನಡುವೆ
ಪರಸ್ಪರವಾಗಿ ಇರುವ ಶರೀರ - ಶರೀರಿಭಾವ ಸಂಬಂಧವು ತೀರಾ ಅಮುಖ್ಯವಾದುದು.
ಬಹಿಸ್ಥೋ ದೇಹವಿದ್ವಿಷ್ಣುರಂತಸ್ಥೋ ದೇಹಿವತ್ ಸ್ಮೃತಃ |
ಅಂತರ್ವ್ಯಾಪ್ತಿವಿಶೇಷೇಣ ನ ತ್ವಶಕ್ತತ್ವತೋ ಬಹಿಃ ||
ಹೊರಗಿರುವ ಭಗವದ್ರೂಪವು ದೇಹದಂತೆ ಹೊರಗಿರುವಷ್ಟೇ ಒಳಗಿರುವ ಭಗವದ್ರೂಪಕ್ಕೆ ಶರೀರವೆಂದೂ
ಒಳಗಿರುವ ಭಗವದ್ರೂಪವು ಆತ್ಮದಂತೆ ಇಳಗಿರುವುದರಿಂದ, ಹಾಗೂ ಒಳಗೆ ವ್ಯಾಪಿಸಿರುವುದರಿಂದ
ಆತ್ಮಾ ಎಂದು ಎನಿಸುವುದು. ಹೊರತು ಬೇರೆ ಶರೀರ-ಶರೀರಿಗಳಂತೆ ಇರುವವುಗಳಲ್ಲ.
ಶಾರೀರಭಾವದಲ್ಲಿರುವ ಈ ಬಗೆಯ ಅಮುಖ್ಯತ್ವವನ್ನು ಕುತ್ಸನಾರ್ಥಕವಾದ ಕ ಪ್ರತ್ಯಯವು
ಸೂಚಿಸಿಕೊಡುವುದು.
ಹೀಗೆ ಪ್ರತಿಯೊಂದು ಬ್ರಹ್ಮಸೂತ್ರದಲ್ಲೂ ಪರಸ್ಪರವಾಗಿ ಶಾರೀರ
ಎನಿಸುವ ಅನಿರುದ್ಧಾದಿಗಳ ಪ್ರತಿಪಾದನೆ ನಡೆದಿರುವುದರಿಂದ ಬ್ರಹ್ಮಸೂತ್ರ ಶಾರೀರಕ
ಸೂತ್ರ್ ಎನಿಸಿರುವುದೆಂಬುದೇ ಔಚಿತ್ಯಪೂರ್ಣವಾದುದು.
(೧೯೮೭ ರ ಮಧ್ವನವಮಿ ಅವಸರದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ಯಾರ್ಥಿಗಳಗೆ ನಡೆದ ಸುಧಾಮಂಗಲದಲ್ಲಿ ಪಾಲ್ಗೊಂಡು)
ಪ್ರತಿಪಾದನೆಯ ಪ್ರಕಾರವೂ ಸೂಚಿತ
'ವೇದ್ಯಶ್ಚ
ಸರ್ವೈರಹಮೇವ ವೇದ್ಯಃ - ಸಕಲ ವೇದಗಳಿಂದಲೂ ತಾನೇ ಪ್ರತಿಪಾದ್ಯನಾಗಿರುವನೆಂದು
ಉದ್ಘೋಷಿಸಿರುವ ಗೀತಾಚಾರ್ಯನ ಈ ಮಾತಿನಲ್ಲಿಯೇ ಅದರ ಪ್ರತಿಪಾದನೆಯ ಪ್ರಕಾರವೂ
ಸೂಚಿತವಾಗಿದೆ.
'ಅಹಮೇವ ವೇದ್ಯಃ' - ನಾನೇ ಪ್ರತಿಪಾದ್ಯ
ನಾಗಿರುವವನೆಂದು ಏವಕಾರಕ್ಕೆ ಅನ್ಯ - ಯೋಗವ್ಯವಚ್ಛೇದ ಎಂಬ ಅರ್ಥವನ್ನು ಒಪ್ಪಿಕೊಂಡಲ್ಲಿ
ಭಗವಂತನಲ್ಲದೆ ಬೇರೆ ಯಾವ ವಸ್ತುವಿನ ಪ್ರತಿಪಾದನೆಯೂ ವೇದದಲ್ಲಿ ನಡೆದಿಲ್ಲ ಎಂಬ ಅರ್ಥ
ಹೊರಡುವುದು.
ಸರ್ವಮೂಲ ಸೌರಭ
ಆದರೆ
ವೇದದಲ್ಲಿ ಯಜ್ಞಾದಿ ಧರ್ಮಗಳ, ಇತರ ದೇವತೆಗಳ ಪ್ರತಿಪಾದನೆಯೂ ನಡೆದಿದೆ. ಅದಕ್ಕಾಗಿ
ಏವಕಾರಕ್ಕೆ 'ಅನ್ಯಯೋಗವ್ಯವಚ್ಛೇದ' ಎಂಬ ಅರ್ಥದ ಬದಲು, ಪ್ರಧಾನ ಎಂಬ ಅರ್ಥವನ್ನು
ಇಟ್ಟುಕೊಳ್ಳಬೇಕು. ಸಾಮೀಪ್ಯೇ ಚ ಪ್ರಧಾನೇ ಚ ಏವ ಶಬ್ದೋವಧಾರಣೇ' - ಎಂಬ ಶಬ್ದನಿರ್ಣಯ
(ಭಾಗ.ತಾ.ನಿ. ೩-೩೧-೨೯) ತಿಳಿಸುತ್ತಿರುವಂತೆ ಏಕಶಬ್ದಕ್ಕೆ ಪ್ರಧಾನ ಎಂಬ ಅರ್ಥವೂ
ಇದ್ದೇ ಇದೆ.
ಆದುದರಿಂದ 'ಅಹಮೇವ ವೇದ್ಯಃ' ಎಂಬುದಕ್ಕೆ
ನಾನು ಪ್ರಧಾನವಾಗಿ ವೇದ್ಯ ನಾಗುವವನು. ಯಜ್ಞಾದಿಗಳು ಅಪ್ರಧಾನವಾಗಿಯಷ್ಟೇ
ಪ್ರತಿಪಾದ್ಯಗಳಾಗಿರುವವು ಎಂಬ ಅರ್ಥ ಹೊರಡುವುದು.
ಅಲ್ಲದೆ 'ಅಹಮೇವ ವೇದ್ಯಃ' ಎಂಬಲ್ಲಿಯ
ಅಹಂ ಶಬ್ದವನ್ನು ಆವೃತ್ತಿ ಮಾಡಿಕೊಂಡು 'ಅಹಮೇವ ಅಹಂವೇದ್ಯಃ' ಎಂದು ಅನ್ವಯ
ಮಾಡಿಕೊಳ್ಳಬೇಕು. ಸಕಲವೇದಗಳಲ್ಲೂ ನಾನೇ ;ಅಹೇಯನಾಗಿ' ಎಂದೂ ಬಿಡದೆ ವೇದ್ಯನಾಗಿರುವನು
ಎಂಬ ಅರ್ಥ ಹೊರಡುವುದು. 'ಅಹೇಯತ್ವಾದಹಂನಾಮಾ...' ಎಂದಿರುವಂತೆ ಭಗವಂತನು
ಅಹೇಯನಾಗಿರುವುದರಿಂದ, ತ್ಯಜಿಸಲು ಅಶಕ್ಯನಾಗಿರುವುದರಿಂದ 'ಅಹಂ' ಎನಿಸಿವವನು. 'ಅಹಂ
ವೇದ್ಯಃ' ಅಹೇಯನಾಗಿ ವೇದ್ಯ ಎಂಬಲ್ಲಿ ಅವನ ವೇದವೇದ್ಯತ್ವವು ಹೇಯ ಆಗುವುದಿಲ್ಲ ಎಂದೂ
ತ್ಯಜಿಸಲು ಬರುವುದಿಲ್ಲ ಎಂದು ಫಲಿಸುವುದು. ಅಂದರೆ ಭಗವಂತನು ಎಂದೂ ವೇದವೇಸ್ಯತ್ವವು
ತನ್ನಲ್ಲಿ ತ್ಯಜಿಸಲು ಬರದಂತೆ ವೇದದಲ್ಲಿ ಪ್ರತಿಪಾದ್ಯ ನಾಗಿರುವವನು.
ಉಳಿದ ಇಂದ್ರಾದಿ ದೇವತೆಗಳಾಗಲೀ, ಜ್ಯೋತಿಷ್ಟೋಮಾದಿ ಕರ್ಮಗಳಾಗಲೀ
ಸ್ಥಿತಿ ಕಾಲದಲ್ಲಷ್ಟೇ ವೇದವೇದ್ಯಗಳಾಗಬಲ್ಲವು. ಪ್ರಲಯಕಾಲದಲ್ಲಿ ಯಾವುದೇ ದೇವತೆ,
ಯಾವಿದೇ ಕರ್ಮ ಇಲ್ಲದಿರುವುದರಿಂದ ಆಗಿ ವೇದವೇದ್ಯಗಳೆನಿಸುವುದಿಲ್ಲ. ಆದರೆ ಭಗವಂತನು
ಶಾಶ್ವತನಾಗಿದ್ದು ಪ್ರಲಯಕಾಲದಲ್ಲೂ ಇರುವುದರಿಂದ ಆಗಲೂ ವೇದವೇದ್ಯನೆನಿಸುವನು ಆದುದರಿಂದ
ಅವನ ವೇದವೇದ್ಯತ್ವವು ಆ ಪ್ರಲಯಕಾಲದಲ್ಲೂ ಅಹೇಯ. ಈ ಅಭಿಪ್ರಾಯದಲ್ಲಿಯೇ ಗೀತಾಚಾರ್ಯನು
'ವೇದೈಶ್ಚ ಸರ್ವೈರಹಮೇವ ವೇದ್ಯಃ' ಎಂದು ಸಂದೇಶ ನೀಡಿರುವನು.
ಹೀಗೆ ಅಹೇಯವಾದ ವೇದವೇದ್ಯತ್ವ
ಭಗವಂತನಲ್ಲಿ ಮಾತ್ರ ಇರುವುದರಿಂದ 'ಅಹಮೇವ' ಎಂಬಲ್ಲಿಯ ಏವಕಾರವು ಅನ್ಯಯೋಗವ್ಯವಚ್ಛೇದ
ಅರ್ಥವುಳ್ಳದ್ದೂ ಆಗಬಹುದು.
ಅಹಂಶಬ್ದಾರ್ಥವಾದ ಅಹೇಯ ಎಂಬುದಕ್ಕೆ
ಬಿಡಲು ಆಗದಿದ್ದವನು ಎಂಬಂತೆ, ತ್ಯಜಿಸಲು ಯೋಗ್ಯಗಳಾದ ಅಸ್ವಾತಂತ್ರ್ಯವೇ ಮುಂತಾದ
ದೋಷಗಳಿಂದ ರಹಿತನಾದವನು ಎಂದೂ ಅರ್ಥ. ಆದುದರಿಂದ ಸಕಲವೇದಗಳಿಂದ ಭಗವಂತನು ಹೇಯಗಳಾದ
ಅಸ್ವಾತಂತ್ರ್ಯಾದದೋಷಗಳಿಂದ ರಹಿತನಾಗಿಯೂ ಪ್ರತಿಪಾದ್ಯನಾಗಿರುವನೆಂಬುದೂ ' ಅಹಮೇವ
ವೇದ್ಯಃ' ಎಂಬ ಮಾತಿನ ಆಶಯ.
(೧೯೯೫ ರಲ್ಲಿ ನೀಡಿದ ಗೀತಾಪ್ರವಚನದಲ್ಲಿ...)
ಗಾಯತ್ರೀಮಂತ್ರಪ್ರತಿಪಾದ್ಯ ನಾರಾಯಣನೇ
'ಧ್ಯೇಯಃ
ಸದಾ ಸವಿತೃಮಂಡಲಮಧ್ಯವರ್ತೀ...' ಎಂಬ ಶ್ಲೋಕವು ಗಾಯತ್ರೀ ಮಂತ್ರ ಪ್ರತಿಪಾದ್ಯನನ್ನು
ತಿಳಿಸುತ್ತಿದೆ. ನೃಸಿಂಹಪುರಾಣದಲ್ಲಿಯ ಶ್ಲೋಕವೆಂದು ಶ್ರೀ ಮಧ್ವರು ಉಲ್ಲೇಖಿಸಿರುವರು.
ವಾಚಸ್ಪತ್ಯಕೋಶಕಾರನಿಂದಲೂ ಈ ಶ್ಲೋಕದ ಉಲ್ಲೇಖ ನಡೆದಿದೆ.
ಆದ್ದರಿಂದ ಗಾಯತ್ರಿಮಂತ್ರದ ಜಪದ ಕಾಲದಲ್ಲಿ ಧ್ಯೇಯನಾದವನು ನಾರಾಯಣನೇ ಹೊರತು ಸೂರ್ಯ ಅಲ್ಲ.
ವಾಲಖಿಲ್ಯಾದಿಋಷಿಗಳು ಗಾಯತ್ರಿಮಂತ್ರಜಪಪೂರ್ವಕ ಅರ್ಘ್ಯಪ್ರದಾನ ಮಾಡುವುದರಿಂದ ಸೂರ್ಯನ
ವಿರುದ್ಧ ನಿತ್ಯವೂ ಹೋರಾಟ ನಡೆಸುವ ಮಂದೇಹ ನಾಮಕ ರಾಕ್ಷಸರು ನಾಶವನ್ನು ಹೊಂದುವರೆಂದು
ಪುರಾಣ ತಿಳಿಸಿದೆ. ಆದ್ದರಿಂದ ಸೂರ್ಯನನ್ನು ರಕ್ಷಿಸುವ ಗಾಯತ್ರೀಮಂತ್ರವು ಅವನನ್ನೆ
ಕೊಂಡಾಡಲು ಹ್ರ್‍ಗೆ ಸಾಧ್ಯ? ತನ್ನ ಸ್ತೋತ್ರದಿಂದ ತಾನೇ ರಕ್ಷಣೆ ಪಡೆಯಲು
ಸಾಧ್ಯವಿಲ್ಲ ತಾನೇ?
(ತತ್ತ್ವವಾದದಲ್ಲಿ ೧೯೮೯ ನೇ ಸೆಪ್ಟೆಂಬರ್ ಜಪದ ಬಗೆಗಿನ ಲೇಖನದಲ್ಲಿ...)
ತಾಪತ್ರ್ಯಪರಿಹಾರಕ ತಿಳಿವಳಿಕೆ
'ವಾಸುದೇವಃ ಸರ್ವಂ' - ಎಂಬ ತಿಳಿವಳಿಕೆ ಬಹು ಜನ್ಮಗಳ
ಸಾಧನೆಯಿಂದಷ್ಟೇ ಬರುವಂತಹದ್ದು. ಆದ್ದರಿಂದಲೇ ಅಂತಹ ತಿಳಿವಳಿಕೆಯನ್ನು ಪಡೆದುಕೊಂಡವ
'ಸಮಹಾತ್ಮಾ ಸುದರ್ಲಭಃ' - ಸುದುರ್ಲಭ - ಬರೇ ದುರ್ಲಭನಲ್ಲ. ಸುದುರ್ಲಭ - ಅತ್ಯಂತ
ದುರ್ಲಭ - ಎಂದು ಘೋಷಿಸುವ ಮೂಲಕ ಗೀತಾಚಾರ್ಯನು 'ವಾಸುದೇವಃ ಸರ್ವಂ' - ಎಂಬ ತಿಳಿವಳಿಕೆ
ತುಂಬ ಮಹತ್ವವನ್ನು ಸಾರಿದ್ದಾನೆ.
ಚರಾಚರಾತ್ಮಕವಾದ ಈ ಇಲ್ಲವೂ ವಾಸುದೇವ -
ಎಂಬ ಇದರ ಮೇಲ್ನೋಟದ ಅರ್ಥ ಒಪ್ಪಿಕೊಳ್ಳಲಾಗುವುದಿಲ್ಲ. ಚೇತನಸ್ವರೂಪಿ, ಗುಣಸ್ವರೂಪಿ
ವಾಸುದೇವ ಅಚೇತನಾತ್ಮಕವಾದ, ದೋಷ ದುಷ್ಟವಾದ ಪ್ರಪಂಚ ಎನಿಸುವುದಾದರೂ ಹೇಗೆ?
ಸರ್ವಂ ಸಮಾಪ್ನೋಷಿ ತತೋಸಿ ಸರ್ವಃ -
ಭಗವದ್ಗೀತೆಯಲ್ಲಿಯೇ ಶ್ರೀಕೃಷ್ಣನಿಂದ ದಿವ್ಯದೃಷ್ಟಿಯನ್ನು ಪಡೆದುಕೊಂಡು ಶ್ರೀಕೃಷ್ಣನ
ವಿಶ್ವರೂಪವನ್ನು ಕಂಡು ಅರ್ಜುನ ಶ್ರೀಕೃಷ್ಣನನ್ನು ಯಾವ ಅಭಿಪ್ರಾಯದಲ್ಲಿ 'ಸರ್ವ' ಎಂದು
ಕರೆದಿರುವನೆಂಬುದು ಹೆಚ್ಚು ಅಧಿಕೃತವಾಗುತ್ತದೆ -
ಸರ್ವಂ ಸಮಾಪ್ನೋಷಿ ತತೋಸಿ ಸರ್ವಃ |
ಎಲ್ಲವನ್ನೂ ಚೆನ್ನಾಗಿ ವ್ಯಾಪಿಸಿರುವಿ. ಆದುದರಿಂದಲೇ ನೀನು ಸರ್ವ ಎನಿಸಿರುವಿ.
ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಚ ಭ್ಅವ್ಯಂ....
ಎಂಬ ಪುರುಷಸೂಕ್ತದ ಮಾತನ್ನು ಶ್ರುತಿಯೊಂದು ವ್ಯಾಪ್ತ್ಯರ್ಥವನ್ನು ಇಟ್ಟುಕೊಂಡು ಹೀಗೆಯೇ ವ್ಯಾಖ್ಯಾನಿಸಿದೆ -
'ಪುರುಷ ಏವೇದಂ ಸರ್ವಂ ಯದ್ ಭೂತಂ ಯಚ್ಚ
ಭವ್ಯಮಿತಿ ಪುರುಷೇಣೈವೇದಂ ಸರ್ವಂ ವ್ಯಾಪ್ತಂ ಯದ್ ಭೂತಂ ಯಚ್ಚ ಭವ್ಯಮ್ ಆತೃಣಾದಾ
ಕರೀಷಾತ್ ಸರ್ವಂ ಭಗವಾನಿತಿ ಮಿಥ್ಯಾದೃಷ್ಟಿರೇಷಾ'
ತಾಪತ್ರಯ ಪರಿಹಾರ: ಸಂದೇಹ, ರಾಗ, ಪಾಪ -
ಪ್ರಯುಕ್ತಗಳಾದ ತಾಪಗಳ ಪರಿಹಾರಕವಾಗಿ ಭಗವಂತನನ್ನು ಪೂರ್ಣತ್ವ - ಆಶಯದಲ್ಲಿ ಸರ್ವ ಎಂದು
ತಿಳಿಯಬೇಕೆಂದು ಮತ್ತೊಂದು ಪ್ರಮಾಣ ಸಾರುತ್ತಿದೆ -
'ಸರ್ವಃ ಪೂರ್ಣಃ ಸಮುದ್ಧಿಷ್ಟಃ ತಥಾ ಜ್ಞೇಯೋ ಜನಾಎದನಃ |
ರಾಗಸಂದೇಹಪಾಪಾನಿ ತಥಾ ಜಾನನ್ ತರಿಷ್ಯತಿ'
ಈ ಪ್ರಮಾಣದಲ್ಲಿ ಅನುರಾಗ, ಸಂದೇಹ ಹಾಗೂ ಪಾಪ - ಈ ಮೂರರ ಪರಿಹಾರ
ದೊರಕುವಂತೆ 'ಸರ್ವತ್ವ' ವನ್ನು ತಿಳಿದುಕೊಳ್ಳಬೇಕೆಂದು ತಿಳಿಸಲಾಗಿದೆ.
ಭಗವಂತನು ಚರಾಚರಾತ್ಮಕವಾದ ಈ ಎಲ್ಲವೂ
ಆಗಿರುವನೆಂಬ್ ತಿಳಿವಳಿಕೆ ಸಂದೇಹಾದಿ ತಾಪಗಳ ಪರಿಹಾರಕ್ಕೆ ಹೇಗೂ
ಪ್ರಯೋಜಕವೆನಿಸದು. ಭಗವಂತನು ಪರಿಪೂರ್ಣನಾಗಿರುವುದರಿಂದ ಸರ್ವ ಎನಿಸುವನೆಂಬ
ತಿಳಿವಳಿಕೆಯಾದರೂ ಪರೋಕ್ಷವಾಗಿ ರಾಗಾದಿ ತಾಪಗಳಿಗೆ ಪರಿಹಾರಕವೆನಿಸಬಲ್ಲದು.
ಭಗವಂತನೊಬ್ಬನೇ ಪೂರ್ಣ; ಉಳಿದೆಲ್ಲವೂ ಅಪೂರ್ಣ ಎಂಬ ತಿಳಿವಳಿಕೆ ಉಳಿದ ವಸ್ತುಗಳಲ್ಲಿಯ
ರಾಗವನ್ನು ದೂರ ಮಾಡಬಲ್ಲದು. ಭಗವಂತನನ್ನು ಜ್ಞಾನಪೂರ್ಣನಾದವನೆಂದು ತಿಳಿದು, ಉಪಾಸನೆ
ನಡೆಸಿದಲ್ಲಿ ಯಥಾಯೋಗ್ಯ ಜ್ಞಾನಪೂರ್ಣತೆ ಸಿದ್ಧಿಸಿ ಸಂದೇಹ, ವಿಪರೀತಜ್ಞಾನಗಳ ತಾಪ
ದೂರವಾಗಬಲ್ಲದು. ಪಾಪಗಳು ಎಸಗಲ್ಪಡುವುದು ಕಾಮಾದಿದೋಷಗಳ ಪ್ರಯುಕ್ತ. ಭಗವಂತನು
ಗುಣಪೂರ್ಣನಾಗಿರುವುದರಿಂದ ದೋಷರಹಿತ ಎಂದು ಉಪಾಸನೆ ಮಾಡಿದಲ್ಲಿ ದೋಷರಾಹಿತ್ಯ ಸಿದ್ಧಿಸಿ
ದೋಷಪ್ರಯುಕ್ತ ಪಾಪಗಳ ಪರಿಹಾರವೂ ದೊರಕಬಲ್ಲದು. ಆದ್ದರಿಂದ ರಾಗ ಸಂದೇಹ ಹಾಗೂ ಪಾಪಗಳ
ತಾಪಗಳಿಗೆ ಪರಿಹಾರಕ ವಾಗಿ ತಿಳಿಸಲ್ಪಟ್ಟ ತಿಳಿವಳಿಕೆ ಎಂದರೆ ಭಗವಂತನು
ಪೂರ್ಣನಾಗಿರುವುದರಿಂದ 'ಸರ್ವ' ಎನಿಸವನೆಂಬುದೇ ಹೊರತು ಚರಾಚರಾತ್ಮಕ ಪ್ರಪಂಚದಿಂದ
ಅಭಿನ್ನನಾಗಿರುವುದರಿಂದ ಸರ್ವ ಎನಿಸುವನೆಂಬುದು ಅಲ್ಲ.
(ಉಡುಪಿ ಶ್ರೀಕೃಷ್ಣಮಠದಲ್ಲಿ ಶ್ರೀ ವಿದ್ಯಾಮಾನ್ಯತೀರ್ಥರ ದ್ವಿತೀಯ ಸಮಾರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ನೀಡಿದ ಪ್ರವಚನ)
ಲೋಕಸಂಗ್ರಹದ ವ್ಯಾಪ್ತಿ
ಶ್ರೀಮದ್ಭಗವದ್ಗೀತೆಯು ಅಜ್ಞ-ಜ್ಞಾನಿಗಳಿಬ್ಬರಿಗೂ ಸ್ವೋಚಿತ ಕರ್ಮವು ಅನಿವಾರ್ಯವೆಂದು
ತಿಳಿಸಿದೆ. ಸ್ವತಃ ಶ್ರೀಕೃಷ್ಣನೇ ತಾನು ಕೃತಕೃತ್ಯನಾಗಿದ್ದರೂ ಲೋಕಕ್ಕೆ
ಸನ್ಮಾರ್ಗವನ್ನು ತೋರಲು ಕರ್ಮ ಮಾಡುತ್ತಿದ್ದೇನೆಂದು ತಿಳಿಸಿದ್ದಾನೆ. ತನ್ನಂತೆಯೇ
ಜ್ಞಾನಿಯೂ ಲೋಕ ಶಿಕ್ಷಣಾರ್ಥವಾಗಿ ಕರ್ಮವನ್ನು ಮಾದಬೇಕೆಂದು ೩ ನೇ ಅಧ್ಯಾಯದ ೨೦ ನೇ
ಶ್ಲೋಕದಲ್ಲಿ ಆದೇಶಿಸಿದ್ದಾನೆ.
ಇಲ್ಲಿ '' ಲೋಕಸಂಗ್ರಹ '' ಎನ್ನುವ ಶಬ್ದಕ್ಕೆ 'ಲೋಕಶಿಕ್ಷಣ '
ಯಾ 'ಲೋಕವನ್ನು ಸ್ವಧರ್ಮದಲ್ಲಿ ತೊಡಗಿಸುವುದು ' ಎಂದಿಷ್ಟೇ ಅರ್ಥವಲ್ಲ. ಸಂಸಾರದಿಂದ
ಮುಕ್ತರಾದ ಜೀವರ ಸುಖವೂ 'ಲೋಕ ' ಶಬ್ದದ ಅರ್ಥವೆಂದು ಶ್ರೀ ಮಧ್ವರು ಬೃಹದಾರಣ್ಯಕ
ಉಪನಿಷತ್ ಭಾಷ್ಯದಲ್ಲಿ ತಿಳಿಸಿದ್ದಾರೆ. ಆದುದರಿಂದ ' ಲೋಕಸಂಗ್ರಹ ' ಶಬ್ದಕ್ಕೆ '
ಮುಕ್ತಿಸುಖದ ಸಮೀಚೀನಜ್ಞಾನ - ಅಭಿವ್ಯಕ್ತಿ ' ಎನ್ನುವ ಅರ್ಥವೂ
ಸಂದರ್ಭೋಚಿತವಾಗಿದೆ. ಈ ಪ್ರಯೋಜನವನ್ನು ಅಪೇಕ್ಷಿಸಿ ಜ್ಞಾನಿಯಾದ ನೀನೂ (ಅರ್ಜುನನೂ)
ಕರ್ಮ ಮಾಡಬೇಕೆಂದು ಶ್ರೀಕೃಷ್ಣನ ಆಶಯವಾಗಿದೆ.
- ಶ್ರೀ ಶ್ರೀ ವಿದ್ಯೇಶತೀರ್ಥರು
|
ಶ್ರೀ ಟೀಕಾಚಾರ್ಯರ 'ಜಯತೀರ್ಥ'
|
'ಪ್ರೀಣಯಾಮೋ ವಾಸುದೇವಮ್'
ಇದು
ಶ್ರೀಪಾದರ ಮೊಟ್ಟಮೊದಲ ಲೇಖನ. ೧೯೮೪ ರ ಜನವರಿ ಹನ್ನೆರಡರಂದು ಶ್ರೀಪಾದರ ಸುಧಾಮಂಗಳ
ಅದಿಮಾರಿನಲ್ಲಿ ನಡೆದಿದ್ದು, ಆ ಸಮಾರಂಭದ ಸವಿನೆನಪಿಗಾಗಿ ಪ್ರಕಟಗೊಂಡ
ಸ್ಮೃತಿಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನ. ಅಂದು ನೀಡಿದ ಪ್ರವಚನದಲ್ಲೂ ಈ ಲೇಖನದ ಕೆಲವು
ವಿಚಾರಗಳ ಸಮರ್ಥನೆಯೇ ನಡೆದಿತ್ತು. ಸರ್ವಮೂಲ ಗ್ರಂಥಗಳ ಸಂದೇಶಗಳ ಅಳವಡಿಕೆಗೇ ತಮ್ಮ
ಲೇಖನ ಹಾಗೂ ಪ್ರವಚನಗಳಲ್ಲಿ ಹೆಚ್ಚು ಗಮನ ನೀಡುವ ಶ್ರೀಪಾದರ ಈ ಲೇಖನ ಅವರ
ವಿಮರ್ಶನಸಾಮರ್ಥ್ಯವನ್ನು ಸಾರುತ್ತಿದೆ. ಶ್ರೀಪಾದರಿಂದ ಈ ಬಗೆಯ ಲೇಖನ, ಪ್ರವಚನಗಳೂ
ಹೆಚ್ಚೆಚ್ಚಾಗಿ ಹೊರಹೊಮ್ಮಲೆಂದು ಪ್ರಾರ್ಥಿಸುತ್ತ ಸುಮಾರು ಎಂಟುವರ್ಷಗಳಕಾಲ
ಶಾಸ್ತ್ರಾಧ್ಯಯನ ನಡೆಸಿ, ಅದರ 'ಪೂರ್ಣಾಹುತಿ' ಯಂತೆ ಅಂದು ಪ್ರವಚನ ನೀಡಿದ್ದ, ಲೇಖನದ
ರೂಪತಾಳಿದ್ದ ಈ 'ಪ್ರಮೇಯಸಂದೇಶ' ವನ್ನು ಅದಮಾರು ಗ್ರಾಮದ ಮಠದ ಆರಾಧ್ಯನಾದ ವಾಸುದೇವನ
ಅಡಿಗೆ ಸಮರ್ಪಿಸಲಾಗುವುದು. |
ಶ್ರೀ ದ್ವೈತಸಿದ್ಧಾಂತದಲ್ಲಿ ಜಯತೀರ್ಥರ ಅನುವ್ಯಾಖ್ಯಾನದ
ವ್ಯಾಖ್ಯಾನಭೂತವಾದ ಶ್ರೀಮನ್ನ್ಯಾಯಸುಧಾವು ಮೇರುಕೃತಿ ಎಂಬುದರಲ್ಲಿ ಎರಡು ಮಾತಿಲ್ಲ. ಈ
ಕೃತಿಯು ಅವರ ಬಹುಜ್ಞತೆಗೆ ನಿದರ್ಶನವಾಗುವುದಲ್ಲದೆ, 'ಅವರು ಸಾಕ್ಷಾತ್
ಶ್ರೀಮದಾಚಾರ್ಯರಿಂದ ಶಸ್ತ್ರಶ್ರವಣ ಮಾಡಿದ್ದಾರೆ' ಎಂಬ ಸಂಗತಿಯೂ ಸಾಕ್ಷಿಯಾಗಬಲ್ಲುದು.
ಅವರು ಅನುವ್ಯಾಖ್ಯಾನದಲ್ಲಿ ಬರತಕ್ಕ
ಅಪಿ, ಚ, ತಂ, ಹಿ ಮೊದಲಾದ ಪದಗಳಿಗೆ ಅಪೂರ್ವ ಅರ್ಹಸೂಚಕತ್ವವನ್ನು ಹೇಳಿ ನಾವು ಈ
ತೀರ್ಮಾನಕ್ಕೆ ಬರುವಂತೆ ಮಾಡಿದ್ದಾರೆ.
೧. ಟೀಕಾಕೃತ್ ಪಾದರ ಸೂಕ್ಷ್ಮದರ್ಶಿತ್ವ
ಇದರ ಕಿರುಪರಿಚಯಕ್ಕಾಗಿ ಕೆಲವೊಂದು
ಪದಾರ್ಥಗಳಿಗೆ ಅವರು ಮಾಡಿರುವ ವ್ಯಾಖ್ಯಾನದ ವೈಶಿಷ್ಟ್ಯವನ್ನು ಇಲ್ಲಿ ನೀಡುತ್ತೇವೆ.
ಅ. ಶ್ರೀಮದಾಚಾರ್ಯರು ತಮ್ಮ
ಅನುವ್ಯಾಖ್ಯಾನದಲ್ಲಿ ಜನ್ಮಾಧಿಕರಣವನ್ನು ಉಪಸಂಹಾರಮಾಡುತಾ 'ಅತೋನಂತಗುಣಂ ಬ್ರಹ್ಮ
ನಿರ್ಭೇದಮಪಿ ಭಣ್ಯತೇ ಏವಂ ಧರ್ಮಾನಿತಿ ಶ್ರುತ್ಯಾ ತದಭೇದೋಪ್ಯುದೀರ್ಯತೇ' ಎಂಬಲ್ಲಿ
ಬ್ರಹ್ಮನಿಗೆ ಹಾಗೂ ಆತನ ಗುಣಗಳಿಗೆ ಪರಸ್ಪರ ಭೇದವನ್ನು ನಿಷೇಧಮಾಡಿ ಅಭೇದವನ್ನು 'ಏವಂ
ಧರ್ಮಾನ್' ಇತ್ಯಾದಿ ಶ್ರುತಿಬಲದಿಂದ ಸಮರ್ಥಿಸಿದ್ದಾರೆ. ಇಲ್ಲಿ ಶ್ರುತಿಯಿಂದ ಅಭೇದವು
ಮಾತ್ರ್ ಸಿದ್ಧ ವಾಗುವುದ ರಿಂದ, 'ತದಭೇದೋಪ್ಯುದೀರ್ಯತೇ' ಎಂಬಲ್ಲಿ 'ಅಪಿ' ಪದವು
ವ್ಯರ್ಥ ಎಂಬ ಶಂಕೆ ಸಹಜವಾಗಿ ಬರುತ್ತದೆ.
ಆದರೆ ಟೀಕಾಕಾರರು 'ಅಪಿ' ಪದಕ್ಕೆ,
'ಅಭೇದ ಇದ್ದರೂ ಭೇದಪ್ರತಿನಿಧಿಯಾಗಿ, ಭೇದದ ಕಾರ್ಯವನ್ನು ನಿರ್ವಹಿಸುವ ವಿಶೇಷ
ಎಂಬರ್ಥವನ್ನು ಬರೆದು ಅದರ ಸಾರ್ಥಕ್ಯವನ್ನು ತಿಳಿಸಿದ್ದಾರೆ. 'ಶ್ರುತಿಯ ಗುಣಗಳಿಗೆ
ಏಕತ್ವವಿಶಿಷ್ಟಬ್ರಹ್ಮನಿಂದ ಭೇದವನ್ನು ನಿಷೇಧ ಮಾಡಿದ್ದರೂ, ಅಂತಹ ಗುಣಗಳನ್ನು
'ಧರ್ಮಾನ್' ಎಂದು ಬಹುವಚನಾಂತ ಪದದಿಂದ ಹೇಳಿದ್ದರಿಂದ, ಇಂತಹ ಪ್ರಯೋಗವು 'ವಿಶೇಷ'
ವಿಲ್ಲದೆ ಕೂಡಿಸಲು ಅಶಕ್ಯ ವಾದುದರಿಂದ, ಶ್ರುತಿಗೆ ವಿಶೇಷದಲ್ಲಿಯೂ ತಾತ್ಪರ್ಯವಿದೆ.
ಆದುದರಿಂದ 'ಅಭೇದ' ಮತ್ತು 'ವಿಶೇಷ' ಇವೆರಡೂ ಆ ಶ್ರುತಿಸಿದ್ಧ ಪ್ರಮೇಯಗಳಾದುದರಿಂದ
ವಿಶೇಷವನ್ನು ಸಂಗ್ರಹಿಸಲು ಶ್ರೀ ಆಚಾರ್ಯರು 'ಅಪಿ' ಪದವನ್ನು ಬಳಸಿದ್ದಾರೆ, ಎಂದು
ಸಾರ್ಥಕ್ಯವನ್ನು ಹೇಳುವ ಟೀಕಾಕಾರರ ಅಭಿಪ್ರಾಯ.
ಆ. ಸ್ವಪ್ನಾಧಿಕರಣದ
ಅನುವ್ಯಾಖ್ಯಾನದಲ್ಲಿ 'ಜಾಗ್ರದ್ವತ್ ಸ್ಪಷ್ಟತಾ ನ ಚ' ಎಂಬಲ್ಲಿ ಶ್ರೀಮದಾಚಾರ್ಯರು
'ಸ್ಪಷ್ಟತಾಭಾವ' ರೂಪ ಪರಂಪರಾಹೇತುವಿನಿಂದ ಸಂಸ್ಕಾರೋಪಾದಾನಕತ್ವವನ್ನು ಸ್ವಪ್ನ
ಪದಾರ್ಥಗಳಿಗೆ ಸಮರ್ಪಿಸಿದ್ದಾರೆ. ಇಲ್ಲಿ 'ಚ' ಶಬ್ದವು ವ್ಯರ್ಥ ಎಂಬ ಶಂಕೆಯು
ಬರುತ್ತದೆ. ಇದಕ್ಕೂ ಟೀಕಾಕಾರರು ಅಪೂರ್ವ ಅರ್ಥಸೂಚಕತ್ವವನ್ನು ಹೇಳಿ, ಸಾರ್ಥಕ್ಯವನ್ನು
ಪ್ರತಿಪಾದಿಸಿದ್ದಾರೆ.
ಶ್ರೀಮದಾಚಾರ್ಯರು ಇಲ್ಲಿರತಕ್ಕ 'ಚ'
ಶಬ್ದದಿಂದ ಸ್ವಪ್ನಪದಾರ್ಥಗಳಿಗೆ ಭಗವತ್ ಕರ್ತೃತ್ವ ಹಾಗೂ ತಾತ್ಕಾಲಿಕ
(ಒಮ್ಮಿಂದೊಮ್ಮೆಲೆ) ಉತ್ಪತ್ತಿವಿನಾಶಶಾಲಿತ್ವ ಇವೆರಡರ ವಿಚಾರದಲ್ಲಿ ಪರಿಶೇಷ ಪ್ರಮಾಣ
ಹಾಗೂ 'ಯ ಏಷು ಸುಪ್ತೇಷು ಜಾಗರ್ತಿ ಏತಸ್ಮಾದ್ ದ್ಧ್ಯೇವ ಪುತ್ರೋ ಜಾಯತೇ' ,'ನ ತತ್ರ
ರಥಾಃ' ಇತ್ಯಾದಿ ಶ್ರುತಿಪ್ರಮಾಣವನ್ನೂ ಸೂಚಿಸಿದ್ದಾರೆ ಎಂದು ಟೀಕಾರಾಯರು
ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ 'ಚ' ಶಬ್ದಕ್ಕೆ ಈ ಅರ್ಥ ಸೂಚಕತ್ವವನ್ನು ಒಪ್ಪದೇ ಹೋದ
ಪಕ್ಷದಲ್ಲಿ ಆಚಾರ್ಯರಿಗೆ ನ್ಯೂನತಾರೂಪದೋಷ ಬರುತ್ತದೆಂದು ಟೀಕಾರಾಯರು ಅಭಿಸಂಧಿ.
ಹಿಂದೆ ಸ್ವಪ್ನಪದಾರ್ಥಗಳಿಗೆ ಕರ್ತೃ,
ಉಪಾದಾನ ಹಾಗೂ ತಾತ್ಕಾಲಿಕ ಇತ್ಪತ್ತಿ ವಿನಾಶಶಲಿತ್ವದ ವಿಷಯದಲ್ಲಿ ವಾದಿಯು
ಆಕ್ಷೇಪವನ್ನೆತ್ತಿದ್ದಾನೆ. ಆದುದರಿಂದ ಈ ಮೂರರ ಅಕ್ಷೇಪವನ್ನು ಪರಿಹರಿಸುವುದು
ಶ್ರೀಮದಾಚಾರ್ಯರ ಕರ್ತವ್ಯವಾಗುತ್ತದೆ. ಅದರಲ್ಲಿ ಉಪಾದಾನ ವಿಷಯದಲ್ಲಿ ಮಾತ್ರ
ಪ್ರಮಾಣವನ್ನು ಹೇಳಿ ಉಳಿದ ವಿಷಯದಲ್ಲಿ ಅದನ್ನು ಉದಾಹರಿಸದೇ ಹೋದ ಪಕ್ಷದಲ್ಲಿ ಆ ಎರಡು
ಆಕ್ಷೇಪಗಳು (ಕರ್ತೃ ಆಕ್ಷೇಪ ಹಾಗೂ ತಾತ್ಕಾಲಿಕ ಉತ್ಪತ್ತಿ ವಿನಾಶಶಾಲಿತ್ವದ ಆಕ್ಷೇಪ)
ಹಾಗೆಯೇ ಉಳಿಯುವುದರಿಂದ ಅದನ್ನು ಪರ್ಹಾರ ಮಾಡದೇ ಇದ ಪ್ರಯುಕ್ತ ಆಚಾರ್ಯರಿಗೆ
ನ್ಯೂನತಾದೋಷ ಬಂದೀತು ತಾನೇ? ಆದುದರಿಂದ ಅದರ ಪರಿಹಾರಕ್ಕೋಸ್ಕರ 'ಚ' ಶಬ್ದಕ್ಕೆ ಭಗವತ್
ಕರ್ತೃತ್ವ ಹಾಗೂ ತಾತ್ಕಾಲಿಕ ಉತ್ಪತ್ತಿವಿನಾಶಶಾಲಿತ್ವದ ವಿಚಾರದಲ್ಲಿ ಹಿಂದೆ ಹೇಳಿದ
ಪ್ರಮಾಣ ಸೂಚತ್ವವನ್ನು ಹೇಳುವುದು ಸೂಕ್ತವೆಂದು ಟೀಕಾಚಾರ್ಯರ ಇಂಗಿತ.
ಏವಂ ಚ 'ಅಪಿ' ಹಾಗೂ 'ಚ' ಶಬ್ದದ
ಸೂಕ್ಷ್ಮತೆಯನ್ನೂ ಸ್ವಾರಸ್ಯವನ್ನೂ ಟೀಕಾರಾಯರು ನಮಗೆ ತಿಳಿಸಿ, ಶ್ರೀಮದಾಚಾರ್ಯರ ಮೇಲೆ
ಬರುವ ಆಧಿಕ್ಯ, ನ್ಯೂನತಾದಿ ದೋಷದ ಭ್ರಾಂತಿಯನ್ನು ಪರಿಹರಿಸಿ ನಮಗೆ ಮಹದುಪಕಾರ
ಮಾಡಿದ್ದಾರೆ ಎಂಬ ವಿಚಾರದಲ್ಲಿ ಈ ಎರಡು ನಿದರ್ಶನಗಳೇ ಸಾಕು.
೨. ಟೀಕಾರಾಯರ ಬಹುಜ್ಞತೆಗೆ ನಿದರ್ಶನ -
'ಪ್ರತ್ಯಕ್ಷವಚ್ಚ ಪ್ರಾಮಾಣ್ಯಂ ಸ್ವತ ಏವ
ಆಗಮಸ್ಯ ಹಿ', 'ಪೂರ್ವಾಯೋಗೇಪರಗ್ರಹಃ', 'ಇತ್ಯುಕ್ತೇರ್ಬಂಧಮಿಥ್ಯಾತ್ವಂ ನೈವ
ಮುಕ್ತಿರಪೇಕ್ಷತೇ' ಇವೇ ಮೊದಲಾದ ವಾಕ್ಯಗಳಿಗೆ, ಪರಮತ ನಿರಾಸಕಗಳಾದ ಬಹ್ವರ್ಥಗಳ ವರ್ಣನೆ
ಟೀಕಾರಾಯರ ಬಹುಜ್ಞತೆಗೆ ನಿದರ್ಶನವಾಗಬಲ್ಲುದು. ಆಚಾರ್ಯರು ತಮ್ಮ ''ಗ್ರಂಥವು ಬಹ್ವರ್ಥ
ವುಳ್ಳದ್ದು, ಅದನ್ನು ಬಹುಜ್ಞರು ಮಾತ್ರ ತೀಳಿಯಲು ಸಾಧ್ಯ'' ಎಂಬ ಮಾತನ್ನು ಸ್ವತಃ ತಾವೇ
ಆಡಿದ್ದಾರೆ. ಆ ಮಾತನ್ನು (ಗ್ರಂಥವು ಬಹ್ವರ್ಥ) ನಮಗೆ ಮನದಟ್ಟಾಗುವಂತೆ ಮಾಡಿದ್ದಾರೆ
ಟೀಕಾರಾಯರು ಆದುದರಿಂದ, ಶ್ರೀಮದಾಚಾರ್ಯರು ಹೇಳಿರುವ ಬಹುಜ್ಞರಲ್ಲಿ ಟೀಕಾಕಾರರೂ ಇಬ್ಬರು
ಎಂಬ ವಿಚಾರದಲ್ಲಿ ಇದಕ್ಕಿಂತ (ಬಹ್ವರ್ಥಗಳ ವರ್ಣನೆಗಿಂತ) ಬೇರೆ ನಿದರ್ಶನ ಬೇಕೆ?
೩. ಶ್ರೀ ಟೀಕಾಕಾರರ ದೃಷ್ಟಿಯಲ್ಲಿ ಆಚಾರ್ಯತ್ರಯರ ವ್ಯಾಖ್ಯಾನಗಳು -
ಶ್ರೀ ಟೀಕಾರಾಯರು ಶ್ರೀಮದಾಚಾರ್ಯರ
ವ್ಯಾಖ್ಯಾನದಲ್ಲಿ ಸ್ವಾರಸ್ಯ ಹಾಗೂ ಇನ್ನಿತರ ಆಚಾರ್ಯರ ವ್ಯಾಖ್ಯಾನದಲ್ಲಿ ಅಸ್ವಾರಸ್ಯ
ಕಂಡ ಬಗೆ ಹೇಗೆ? ಇದರ ಬಗ್ಗೆ ಕೆಲವೊಂದು ನಿದರ್ಶನಗಳನ್ನು ಇಲ್ಲಿ ಉದಾಹರಿಸುತ್ತೇವೆ.
ಅ. 'ಭೂಮಾ ಸಂಪ್ರಸಾದಾದಧ್ಯುಪದೇಶಾತ್'
ಸೂತ್ರಕ್ಕೆ ವ್ಯಾಖ್ಯಾನ ಮಾಡುತ್ತಾ ರಾಮಾನುಜಾಚಾರ್ಯರು, ಸುಪ್ತಿಯನ್ನು ಹೇಳುವ
'ಸಂಪ್ರಸಾದ' ಶಬ್ದದಿಂದ ಲಕ್ಷಣಾವೃತ್ತಿಯಿಂದ ಬೋಧ್ಯವಾಗುವ, ಸುಪ್ತಿಕಾಲದಲ್ಲಿ
ಜಾಗ್ರತವಾಗಿರುವ ಪ್ರಾಣತತ್ವದ, ಊರ್ಧ್ವಭಾಗದಲ್ಲಿ ಉಪದಿಷ್ಟನಾದುದರಿಂದ ಶ್ರೀಭಗವಂತನೇ
'ಭೂಮಾ' ಎಂದು ಹೇಳಿಸಿಕೊಳ್ಳಲು ಯೋಗ್ಯನಾಗಿದ್ದಾನೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇಲ್ಲಿ 'ಸಂಪ್ರಸಾದ' ಶಬ್ದಕ್ಕೆ ಸುಪ್ತಿರೂಪಾರ್ಥವನ್ನು ಒಪ್ಪಿ, ತತ್ಸಂಬಂಧಿಯಾದ
ಪ್ರಾಣತತ್ತ್ವವನ್ನು, ಆ ಶಬ್ದವು ಲಕ್ಷಣಾವೃತ್ತಿಯಿಂದ ಬೋಧಿಸುತ್ತದೆಂದು ಹೇಳಿದ್ದಾರೆ.
ಇದರಿಂದ ಲಕ್ಷಿತಾರ್ಥವನ್ನು ಸ್ವೀಕರಿಸುವ ಮೂಲಕ ರಾಮಾನುಜಾಚಾರ್ಯರು ತಮ್ಮ ಮೇಲೆ
ಗೌರವರೊಪದೋಷವನ್ನು ತಂದು ಕೊಂಡಿದ್ದಾರೆಂದು ಬೇರೆ ಹೇಳಬೇಕಾಗಿಲ್ಲ.
ಶ್ರೀಶಂಕರರೂ ಕೂಡಾ, 'ಸಂಪ್ರಸಾದ'
ಶಬ್ದಕ್ಕೆ 'ಜೀವಾತ್ಮಾ' ಎಂಬರ್ಥವನ್ನು ಬರೆದು, ಪ್ರಸಿದ್ಧವಾದ ಜೀವಶಬ್ದವನ್ನು ಬಳಸದೆ,
ಸೂತ್ರಕಾರರು ಅಪ್ರಸಿದ್ಧವಾದ 'ಸಂಪ್ರಸಾದ' ಶಬ್ದವನ್ನು ಏಕೆ ಬಳಸಿದರು ಎಂಬ
ಪ್ರಶ್ನೆಯನ್ನು ನಮ್ಮೆಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಮೂಡಿಸುವ ಮೂಲಕ, ಪ್ರಸಿದ್ದ
ಪದಪರಿತ್ಯಾಗರೂಪದೋಷವನ್ನು ತಮ್ಮ ಮೇಲೆ ತಂದುಕೊಂಡಿದ್ದಾರೆ. ರಾಮಾನುಜಾಚಾರ್ಯರೂ ಈ
ದೋಷದಿಂದ ವಿಮುಕ್ತರಲ್ಲ. ಇದು ಟೀಕಾರಾಯರ ಅಭಿಪ್ರಾಯ. ಶ್ರೀ ಮಧ್ವರು ತಮ್ಮ
ವ್ಯಾಖ್ಯಾನದಲ್ಲಿ ಸಂಪ್ರಸಾದ ಶಬ್ದಕ್ಕೆ 'ಸುಖ' ಎಂಬರ್ಥವನ್ನು ಬರೆದರೂ, ಸಮ್ಯಕ್
ಪ್ರಸೀದತಿ ಆನೇನ ಇತಿ ಸಂಪ್ರಾಸಾದಃ ಎಂಬ ವ್ಯುತ್ಪತ್ತಿಗನುಸಾರವಾಗಿ, ಅತಿಪ್ರಸನ್ನತೆಗೆ
ಹೇತುವಾದ ಅತಿ, 'ದುಃಖಾಮಿಶ್ರಸುಖ' ವನ್ನು ಹೇತುರೂಪದಲ್ಲಿ ಹೇಳಲು ಸುಖದಲ್ಲಿ
ಅಪ್ರಸಿದ್ಧವಾದ 'ಸಂಪ್ರಸಾದ' ಶಬ್ದವನ್ನು ಬಳಸಿದ್ದಾರೆಂದು ಹೇಳಲು ಅವಕಾಶವಿದೆ.
ಆದುದರಿಂದ ಅವರಿಗೆ ಅಪ್ರಸಿದ್ಧಪದಪ್ರಯೋಗ ಪ್ರಯುಕ್ತ ದೋಷ ಬರುವುದಿಲ್ಲ.
ಆ. 'ಅತ್ತಾ ಚರಚರಗ್ರಹಣಾತ್' ಎಂಬ
ಸೂತ್ರಕ್ಕೆ ವ್ಯಾಖ್ಯಾನ ಮಾಡುತ್ತಾ ಶ್ರೀಮದಾಚಾರ್ಯರು ಅಧಿಕರಣಕ್ಕೆ 'ಸ ಯದ್ಯದೇವಾಸೃಜತ
ತತ್ತದತ್ತುಮಧ್ರಿಯತ ಸರ್ವಂ ವಾ ಅತ್ತೀತಿ ತದದಿತೇರದಿತಿತ್ವಂ' ಎಂಬ ವಾಕ್ಯವನ್ನು ವಿಷಯ
ವಾಕ್ಯದ ರೂಪದಲ್ಲಿ ಉದಾಹರಿಸಿದ್ದಾರೆ. ಶಂಕರರು 'ಯಸ್ಯ ಚ ಬ್ರಹ್ಮ ಚ ಕ್ಷತ್ರಂ ಚೋಭೇ
ಭವತ ಓದನಃ ಮೃತ್ಯುಸ್ಯೋಪಸೇಚನಂ ಕ ಇತ್ಠಾ ವೇದ ಯತ್ರ ಸಃ' ಎಂಬ ವಾಕ್ಯವನ್ನು ವಿಷಯ
ವಾಕ್ಯದ ರೂಪದಲ್ಲಿ ಉದಾಹರಿಸಿದ್ದಾರೆ. ಇವೆರಡರ ಸ್ವಾರಸ್ಯಾಸ್ವಾರಸ್ಯಗಳನ್ನು
ಟೀಕಾರಾಯರು ತಮ್ಮ ವ್ಯಾಖ್ಯಾನದಲ್ಲಿ ಉಪಪಾದನೆ ಮಾಡಿದ್ದಾರೆ. ಶ್ರೀಮದಾಚಾರ್ಯರು
ಉದಾಹರಿಸಿದ ವಿಷಯವಾಕ್ಯವನ್ನು ಪರಿಗ್ರಹಿಸುವುದೇ ಯುಕ್ತವೆಂದು ಟ್ಕಾಕಾರರ ಅನ್ನಿಸಿಕೆ.
ಏಕೆಂದರೆ ಸೀತ್ರೋಕ್ತವಾದ ಅತ್ತೃವನ್ನು ಮುಖ್ಯವೃತ್ತಿಯಿಂದಲೇ ಪ್ರತಿಪಾದಿಸುವ,
ಅತ್ತುಮಧ್ರಿಯತ, ಅತ್ತೀತಿ ಇತ್ಯಾದಿ ಶಬ್ದಗಳು ಆಚಾರ್ಯರ ವಿಷಯ ವಾಕ್ಯದಲ್ಲಿ ಇವೆ. ಆದರೆ
ಶಂಕರರು ಉದಾಹರಿಸಿದ ವಿಷಯವಾಕ್ಯದಲ್ಲಿ ಅಂತಹ ಶಬ್ದಗಳಿಲ್ಲ. ಆದುದರಿಂದ
ಲಕ್ಷಣಾವೃತ್ತಿಯಿಂದ ಓದನ ಉಪಸೇಚನ ಶಬ್ದಗಳಿಂದ ಆ ಅರ್ಥವನ್ನು ತೆಗೆದು
ಕೊಳ್ಳಬೇಕಾಗುತ್ತದೆ. ಆದುದರಿಂದ ಲಕ್ಷಿತಾರ್ಥವನ್ನು ತೆಗೆದುಕೊಳ್ಳುವುದರಿಂದ ಗೌರವವು
ತಪ್ಪಿದ್ದಲ್ಲ ಶಂಕರರಿಗೆ ಎಂದು ಟೀಕಾಕಾರರು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಮತ ಪ್ರಕಾರ
ಅತ್ತೃರೂಪಾಂತರ ಲಕ್ಷ್ಮಿತಾರ್ಥವೆಂದು ಶಂಕರರೂ ಕೂಡಾ ಒಪ್ಪಿಕೊಂಡಿದ್ದಾರೆ.
'ಓದನೋಪಸೇಚನಸೂಚಿತೋತ್ತಾ ಪ್ರತೀಯತೇ' ಎಂಬ ಅವರ ಭಾಷ್ಯವನ್ನು ನೋಡಿದಾಗ ನಮಗೆ ಇದು
ಮನವರಿಕೆಯಾಗುತ್ತದೆ. ಆಚಾರ್ಯರ ಮತಪ್ರಕಾರ ಸೂತ್ರೋಕ್ತವಾದ 'ಚರಾಚರ ಹೇತು', 'ಸರ್ವಂ ವಾ
ಅತ್ತೀತಿ' ಎಂಬಲ್ಲಿ ಸರ್ವಶಬ್ದದಿಂದ ಮುಖ್ಯ ವ್ರ್‍ಇತ್ತಿಯಿಂದಲೇ ಉಕ್ತವಾಗಿದೆ.
ಆದರೆ ಶಂಕರರ ಪ್ರಕಾರ, ಬ್ರಹ್ಮ ಕ್ಷತ್ರ್ ಮೃತ್ಯು ಪದಗಳಿಂದ ಲಕ್ಷ್ಣಾವೃತ್ತಿಯಿಂದ
ಚರಾಚರರೂಪಹೇತು ಪ್ರತಿಪಾದ್ಯವಾಗಿದೆ. ಆದುದರಿಂದ ಶಂಕರರಿಗೆ ಎರಡು ಕಡೆ
ಲಕ್ಷಣಾವೃತ್ತಿಯನ್ನು ಆಶ್ರಯಿಸಬೇಕಾದುದರಿಂದ ಗೌರವಮಯವಾದ ವ್ಯಾಖ್ಯಾನವು ಅಸ್ವರಸ.
ಗೌರವದೋಷವಿಲ್ಲದ ಆಚಾರ್ಯರ ವ್ಯಾಖ್ಯಾನವೇ ಸ್ವರಸ, ಸಮೀಚೀನ. ಇದು ಟೀಕಾರಾಯರು
ಶ್ರೀಮದಾಚಾರ್ಯರು ಹಾಗೂ ಇನ್ನಿತರ ಆಚಾರ್ಯರುಗಳ ವ್ಯಾಖ್ಯಾನದಲ್ಲಿ ಕಂಡುಕೊಂಡ
ಸ್ವಾರಸ್ಯಾಸ್ವಾರಸ್ಯಗಳ ಬಗೆಯ ಸಂಕ್ಷಿಪ್ತ ಪರಿಚಯ.
೪. ಟೀಕಾಚಾರ್ಯರು ಭಗವನ್ನಾಮದಲ್ಲಿ ಕಂಡ ಸ್ವಾರಸ್ಯ:
ಶ್ರೀಮದಾಚಾರ್ಯರು ತಮ್ಮ
ವ್ಯಾಖ್ಯಾನದಲ್ಲಿ ಅಲ್ಲಲ್ಲಿ ಬಳಸುವ ಭಗವನ್ನಾಮಗಳ ಸ್ವಾರಸ್ಯವನ್ನು ಹಿಡಿಯುವುದರಲ್ಲಿ
ಟೀಕಾರಾಯರು ಹಿಂದೆ ಬಿದ್ದವರಲ್ಲ. ಇದರ ಬಗ್ಗೆ ಒಂದು ಉದಾಹರಣೆಯನ್ನು ಇಲ್ಲಿ
ಉದಾಹರಿಸುತ್ತೇವೆ.
ಅಕ್ಷರಾಧಿಕರಣದಲ್ಲಿ
'ಅನ್ಯಭಾವವ್ಯಾವೃತ್ತೇಶ್ಚ' ಎಂಬ ಸೂತ್ರದಲ್ಲಿರತಕ್ಕ ಚಕಾರಕ್ಕೆ ವ್ಯಾಖ್ಯಾನ ಮಾಡುತ್ತಾ
ಶ್ರೀಮದಾಚಾರ್ಯರು 'ಗೋವಿಂದೇ ಸಂತ್ಯಸ್ಥೂಲಕಾದಿಕಾನಿ ಚ ಎಂಬಲ್ಲಿ ಅದರ ಅರ್ಥ
ಹೇಳಿದ್ದಾರೆ. ಭಗವಂತನಲ್ಲಿ ಸ್ಥೂಲತ್ವ, ಅಣುತ್ವ ಇವೇ ಮೊದಲಾದ ಲೋಕದೃಷ್ಟಿಯಿಂದ
ವಿರುದ್ಧಗಳಾದ ಧರ್ಮಗಳೂ ಇವೆಯೆಂದು ಅದರ ತಾತ್ಪರ್ಯ.
ಅಲ್ಲಿ ಬೇರೆ ಭಗವನ್ನಾಮವನ್ನು ಬಳಸದೆ,
ಶ್ರೀಮದಾಚಾರ್ಯರ 'ಗೋವಿಂದ' ಎಂಬ ನಾಮ ಬಳಸಿದ್ದರ ಔಚಿತ್ಯವನ್ನು ಟೀಕಾರಾಯರು ಬಲು
ಸ್ವಾರಸ್ಯವಾಗಿ ಹೇಳಿದ್ದಾರೆ. ''ಭಗವಂತನು ವಿರುದ್ಧವುಳ್ಳವನು'' ಎಂಬ ವಿಚಾರದಲ್ಲಿ
ಭಾಷ್ಯೋದಾಹೃತ ಸ್ಮೃತ್ಯಾದಿಗಳು ಮಾತ್ರ ಪ್ರಮಾಣವಲ್ಲ. ಯಶೋದಾದಿ ಪ್ರತ್ಯಕ್ಷ ಪ್ರಮಾಣವೂ
ಇದೆಂದು ಸೂಚ್ಯವಾಗಿ ತಿಳಿಸಲು 'ಗೋವಿಂದ' ಎಂಬ ನಾಮವನ್ನು ಆಚಾರ್ಯರು ಸಂಕೀರ್ತನೆ
ಮಾಡಿದಾರೆ ಎಂದು ಟೀಕಾರಾಯರು ವರ್ಣಿಸಿದ್ದಾರೆ. ಶ್ರೀಕೃಷ್ಣನ ಅವತಾರದಲ್ಲಿಯೇ
ಶ್ರೀಹರುಯು ಗೋವುಗಳಿಂದ ಹೊಂದಲ್ಪಟ್ಟು, ಆ ನಾಮದಿಂದ ಜಗತ್ ಪ್ರಸಿದ್ಧನಾಗಿದ್ದಾನೆ. ಆ
ನಾಮವನ್ನು ಹೊತ್ತ ಶ್ರೀಕೃಷ್ಣನ ಪುಟ್ಟ ಬಾಯಲ್ಲಿ ಯಶೋದೆಯು ಬ್ರಹ್ಮಾಂಡವನ್ನೇ
ಕಂಡಿದ್ದಾಳೆ. ಅರ್ಜುನನು ಆತನ ವಿಶ್ವರೂಪವನ್ನು ಕಂಡಿದ್ದಾನೆ. ಅಕ್ರೂರನೂ ಇನ್ನಿತರ
ಮಹಾನುಭಾವರಿಗೂ ಆತನ ವಿಶ್ವರೂಪದ ದರ್ಶನವಾಗಿದೆ. ಆದುದರಿಂದ 'ಗೋವಿಂದ' ಎಂಬ ಪದದಿಂದ
ಅಣುತ್ವ ಮಹತ್ವ ವಿರುದ್ಧ ಧರ್ಮಗಳ ವಿಚಾರದಲ್ಲಿ ಪ್ರತ್ಯಕ್ಷ ಪ್ರಮಾಣವೂ
ಸೂಚಿತವಾಗಿದೆಯೆಂದು ಅಭಿಪ್ರಾಯ ಪಡುವ ಶ್ರೀ ಟೀಕಾಕಾರರ ಸೂಕ್ಷ್ಮದರ್ಶಿತ್ವಕ್ಕೆ ಎಂತವರೂ
ತಲೆದೂಗಬೇಕು.
೫. ಪರಸ್ಪರ ಅಧಿಕರಣಗಳ ಸಾರ್ಥಕ್ಯ ನಿರೂಪಣೆಯ ಜಾಣ್ಮೆ
'ನ ವಿಲಕ್ಷಣತ್ವಾಧಿಕರಣ' ಕ್ಕಿಂತ ಅನಂತರ ಇರತಕ್ಕ ಅಭಿಮನ್ಯಧಿಕರಣವು ವ್ಯರ್ಥ ಎಂಬ ಶಂಕೆ
ನಮಗೆ ಬರುತ್ತದೆ. ಏಕೆಂದರೆ, ಹಿಂದಿನ ಅಧಿಕರಣದಲ್ಲಿಯೇ ಫಲವ್ಯಭಿಚಾರಿತ್ವಾದಿ
ರೂಪಯುಕ್ತಿಗಳಿಂದ ವೇದಪ್ರಾಮಾಣ್ಯ ವಿಷಯದಲ್ಲಿ ವಿರೋಧ ಸಮರ್ಥಿಸಿ ಯಾಗಿದೆ. ಪುನಃ
ಯುಕ್ತಿವಿರೋಧವನ್ನು ಹೇಳಲು ಈ ಅಧಿಕರಣ ಏಕೆ? ಯುಕ್ತ್ಯಂತರ ವಿರೋಧವನ್ನು ಹೇಳಲು ಈ
ಅಧಿಕರಣ ಸಾರ್ಥಕವೆಂದು ಹೇಳಲು ಬರುವುದಿಲ್ಲ. ಒಂದೊಂದು ಯುಕ್ತಿವಿರೋಧವನ್ನು ಹೇಳಲು
ಒಂದೊಂದು ಅಧಿಕರಣವನ್ನು ಹೇಳುವುದಾದರೆ ಶಾಸ್ತ್ರವು ಅಪರ್ಯವಸಾನವಾಗಬೇಕಾದೀತು! ಹಾಗೂ
ಸೂತ್ರಕ್ಕೆ ವಿಶ್ವತೋಮುಖತ್ವ ಭಂಗವಾದೀತು! ಎಂಬ ಶಂಕೆ ಸಹಜವಾಗಿ ಅರುತ್ತದೆ. ಆದರೆ
ಟೀಕಾರಾಯರು ಇಲ್ಲಿ ಸಾರ್ಥಕ್ಯವನ್ನು ಸಮರ್ಥಿಸಿದ್ದಾರೆ. ಹಿಂದಿನ ಅಧಿಕರಣದಲ್ಲಿ
''ವೇದೋಕ್ತ ರೀತಿಯಲ್ಲಿ ಅನುಷ್ಠಾನ ಮಾಡಿದರೂ ಫಲವ್ಯಭಿಚಾರರೂಪಹೇತು'' ಇನ್ನೂ ಸಂದಿಗ್ಧ.
ಏಕೆಂದರೆ ಕತೃ ವೈಗುಣ್ಯದಿಂದಲೂ ಫಲವ್ಯಭಿಚಾರ ಕೂಡಬಹುದು. 'ಫಲವ್ಯಭಿಚಾರರೂಪಹೇತು'
ಪ್ರಮಾಣದಲ್ಲಿಯೂ ಕಾರಣಾಂತರದಿಂದ ಕಂಡಿದೆ. ಆದುದರಿಂದ ಹೇತು ವ್ಯಭಿಚಾರಿ ಯಾದುದರಿಂದ
ವ್ಯಾಪ್ತಿಯಿಲ್ಲ. ಏವಂ ಚ ವ್ಯಾಪ್ತಿಪಕ್ಷಧರ್ಮತಾಗಳು, ಸಾಧನಾಂಗಗಳು ಹಿಂದಿನ
ಯುಕ್ತಿಯಲ್ಲಿ ಇಲ್ಲ. ಇಲ್ಲಿ ಮಾತ್ರ ಮೃತ್ ನ ವಕ್ತ್ರೀ ಜಡತ್ವಾತ್ ಇತ್ಯಾದಿ
ಯುಕ್ತಿಗಳಿಗೆ ವ್ಯಾಪ್ತಿ ಪಕ್ಷಧರ್ಮತಾಗಳು ಪ್ರತ್ಯಕ್ಷ ಪ್ರಮಾಣಸಿದ್ಧವಾಗಿವೆ.
ಆದುದರಿಂದ ಅಭಿಮಾನ್ಯಧಿಕರಣದಲ್ಲಿ ಹೇಳಿರುವ ಯುಕ್ತಿ ದೃಡವಾದುದರಿಂದ, ಅದನ್ನು ಪರ್ಹಾರ
ಮಾಡಲು ಅಧಿಕರಣವು ಸಾರ್ಥಕ. ಇದು ಟೀಕಾರಾಯರು ಅಧಿಕರಣಗಳಿಗೆ ಸಾರ್ಥಕ್ಯವನ್ನು
ನಿರೂಪಿಸಿದ ಕ್ರಮ. ಹಾಗೆಯೇ ಅದರ ನಂತರದಲ್ಲಿರತಕ್ಕ ಅಸದಧಿಕರಣಕ್ಕೆ
ಅಭಿಮಾನ್ಯಧಿಕರಣದಿಂದ ಚರಿತಾರ್ಥತ್ವ ಶಂಕೆ ಬಂದಾಗ ಅದನ್ನು ಈ ರೀತಿಯಾಗಿ
ಪರಿಹರಿಸಿದ್ದಾರೆ. ಹಿಂದಿನ ಅಧಿಕರಣದಲ್ಲಿ ದೃಢಯುಕ್ತಿ ವಿರೋಧ ಪರಿಹರಿಸಿದ್ದಾರೆ.
ಇಲ್ಲಿ ಸುದೃಢಯುಕ್ತಿ ವಿರೋಧ. ಇಲ್ಲಿ ಪ್ರಾಗಭಾವಕ್ಕೆ ಮಹದಾದಿಕಾರ್ಯಗಳಿಗಿಂತ ನಿಯಮೇನ
ಪೂರ್ವ ಅಸ್ತಿತ್ವರೂಪ ಯುಕ್ತಿಯ ಅಂಶವು 'ಅಸದೇವ ಇದಮಗ್ರ ಆಸೀತ್' ಇತ್ಯಾದಿ
ಶ್ರುತಿಸಿದ್ಧವಾದುದರಿಂದ ಇದು ಸುದೃಢಯುಕ್ತಿ. ಆದುದರಿಂದ ಇದರ ವಿರೋಧ ಬರುವುದರಿಂದ
ಬ್ರಹ್ಮನಿಗೆ ತತ್ ಕರ್ತೃತ್ವವನ್ನೂ ಹೇಳುವ ವೇದವು ಅಪ್ರಮಾಣ. ಈ ರೀತಿಯಾಗಿ
ಸುದೃಢಯುಕ್ತಿ ವಿರೋಧವನ್ನು ನಿರೂಪಿಸಿ, ಸಾರ್ಥಕ್ಯವನ್ನು ಸ್ವಾರಸ್ಯವಾಗಿ
ತಿಳಿಸಿದ್ದಾರೆ.
ಹೀಗೆಯೇ ಕ್ರಮವಾಗಿ ಬರತಕ್ಕ
ಅಧಿಕರಣಗಳಿಗೆ ಸಮರ್ಕವಾಗಿ ಸಾರ್ಥಕ್ಯವನ್ನು ತಮ್ಮ ವ್ಯಾಖ್ಯಾನದಲ್ಲಿ ತಿಳಿಸಿ ಮಹದುಪಕಾರ
ಮಾಡಿದ್ದಾರೆ. ಈ ಪರಿಯ ಅಧಿಕರಣಗಳಿಗೆ ಸಾರ್ಥಕ್ಯವನ್ನು ನಿರೂಪಿಸುವ ಸೊಬಗು ಬೇರಾವ
ವ್ಯಾಖ್ಯಾನದಲ್ಲಿದೆ?
೬. ಶ್ರೀಮನ್ನ್ಯಾಯಸುಧಾ ಹೇಗೆ?
ಇದಕ್ಕೆ ಉತ್ತರ, ಆಪಾತತಃ ದೋಷಿಯಾಗಿ ಕಾಣುವ ಹೇತು ನಿರ್ದೋಷಿಯಾದ ಬಗ್ಗೆ ನಿಮಗೆ ಅರಿವು ಆದಾಗ ತಿಳಿದೀತು.
ಶ್ರೀಮದಾಚಾರ್ಯರು 'ಜಾಗ್ರದ್ವತ್
ಸ್ಪಷ್ಟತಾ ನ ಚ ' ಎಂಬಲ್ಲಿ ಸಂಸ್ಕಾರೋಪಾದಾನಕಾರಣಕತ್ವವನ್ನು ಪರಿಶೇಷಪ್ರಮಾಣದಿಂದ
ಸ್ವಾಪ್ನ ಘಟಾದಿ ಪದಾರ್ಥಗಳಿಗೆ ಸಮರ್ಥನೆಮಾಡುವ ಗುರಿಯನ್ನಿಟ್ಟುಕೊಂಡು, ಅವುಗಳಿಗೆ
ಬಾಹ್ಯಮೃದಾದಿ ಉಪಾದಾನ ಕಾರಣತ್ವದ ಆಭಾವವನ್ನು ಸಾಧಿಸಲು 'ಸ್ಪಷ್ಟತ್ವಾಭಾವ' ರೂಪ
ಹೇತುವನ್ನು ಹೇಳಿದ್ದಾರೆ.
ಇಲ್ಲಿ ಎಂತಹ ಪಂಡಿತನಿಗೂ ಶಂಕಾಪಿಶಾಚಿ ಬಾಧಿಸುತ್ತದೆ.
'ಸ್ಪಷ್ಟತ್ವಾಭಾವ' ಅಂದರೆ ಜ್ಞಾನಗತವಾದ
ವಿಷಯಿತಾವಿಶೇಷದ ಅಭಾವ. ಏವಂಚ, ಈ ಹೇತುವಿನಿಂದ ಅದೆಂತು ಬಾಹ್ಯಮೃದಾದಿ
ಉಪಾದಾನಕಾರಣತ್ವದ ಅಭಾವವನ್ನು ಸ್ವಾಪ್ನ ಪದಾರ್ಥಗಳಿಂದ ಸಾಧಿಸಲು ಸಾಧ್ಯ? ಅದೆಷ್ಟೋ
ದೂರಸ್ಥಘಟಾದಿ ಜ್ಞಾನಗಳಲ್ಲಿ ಸ್ಪಷ್ಟತ್ವದ ಅಭಾವವಿದೆ. ಆದುದರಿಂದ ಅವುಗಳ ವಿಷಯಗಳಾದ
ಘಟಾದಿಗಳಲ್ಲಿ ಬಾಹ್ಯಮೃದಾದಿ ಉಪಾದಾನಕಾರಣತ್ವವು ಇಲ್ಲವೇ? ತಥಾ ವ್ಯಭಿಚಾರಿಯಾದ ಈ ಹೇತು
ವ್ಯಾಪ್ತಿರೂಪ ಸಾಧನಾಂಗವನ್ನೇ ಕಳೆದುಕೊಂಡ ಮೇಲೆ ಹೇಗೆ ಸಾಧ್ಯವಾದೀತು? ಇದು ಪಂಡಿತರಿಗೆ
ಬರುವ ಸಂದೇಹ. ಆದರೆ ಆಚಾರ್ಯರ ಮಾತಿನ ಗಾಂಭೀರ್ಯವನ್ನು ಟೀಕಾರಾಯರು 'ಸ್ಪಷ್ಟತಾ -
ಬಾಹ್ಯಾರ್ಥಕ್ರಿಯಾಸಾಮರ್ಥ್ಯಲಕ್ಷಣಾ' ಈ ಪ್ರಕಾರವಾಗಿ 'ಸ್ಪಷ್ಟತಾ' ಶಬ್ದಕ್ಕೆ
ವ್ಯಾಖ್ಯಾನಿಸುವ ಮೂಲಕ ನಮ್ಮ ಭ್ರಾಂತಿಶಂಕೆಗೆ ವಿರಾಮ ನೀಡಿದ್ದಾರೆ. ಏವಂ ಚ
ಬಾಹ್ಯಾರ್ಥಕ್ರಿಯೆಯನ್ನು ಮಾಡುವ ಶಕ್ತಿಯು ಸ್ವಾಪ್ನಪದಾರ್ಥಗಳಿಗೆ ಇಲ್ಲದೆ
ಇರುವುದರಿಂದ, ಅವುಗಳು ಬಾಹ್ಯಮೃದಾದಿ ಉಪಾದಾನ ಕಾರಣವುಳ್ಳವುಗಳಲ್ಲ. ಈ ರೀತಿಯಾಗಿ
ಸಾಧನೆ ಮಾಡಲು ಹೊರಟರೆ ಇಲ್ಲಿ ಯಾರೂ ವ್ಯಭಿಚಾರವನ್ನು ಹೇಳಲು ಸಮರ್ಥರಲ್ಲ. ಆದುದರಿಂದ
ಟೀಕಾಕಾರ ಈ ಜ್ಞಾನಸುಧೆಯಿಂದಲೇ ವ್ಯಭಿಚಾರಿಯಾಗಿ ಕಾಣುವ ಈ ಹೇತುವು 'ಶ್ರೀಮತ್'
ಅರ್ಥಾತ್ 'ಸಾಧನಾಂಗ ವ್ಯಾಪ್ತಿರೂಪ ಶ್ರೀಮಂತ' ವಾಗಿ ಜ್ಞಾತವಾಗಿದೆ. ಇದಲ್ಲದೆ ಇನ್ನೂ
ಹಲವಾರು ಹೇತುಗಳು ಈ ರೀತಿಯಾಗಿ ತಿಳಿಯಲ್ಪಟ್ಟಿದೆ. ಅಷ್ಟಲ್ಲದೆ ಅವರು ಸ್ವಂತಯಲ್ಲಿ
ಹೇಳಿದ ನ್ಯಾಯಗಳು ಎಂದೆಂದಿಗೂ ಶ್ರೀಮಂತ. (ಸಾಧನಾಂಗ ವ್ಯಾಪ್ತಿ ಮೊದಲಾದ
ಅಂಗಸಂಪತ್ತಿನಿಂದ ಭರಿತಗಳು) ಅವುಗಳನ್ನು ಯಾರೂ ಖಂಡಿಸಲಾರರು. ಆದುದರಿಂದ ಶ್ರೀಮಂತಗಳಾದ
ನ್ಯಾಯಗಳ ಆಸರೆ ಹಾಗೂ ಆಚಾರ್ಯೋಕ್ತಗಳಾದ ನ್ಯಾಯಗಳು ಶ್ರೀಮಂತಗಳಾಗಿ ಈ ಗ್ರಂಥದಿಂದಲೇ
ತಿಳಿದು ಬಂದುದರಿಂದ, ಟೀಕಾಕಾರರ ಈ ವ್ಯಾಖ್ಯಾನಕ್ಕೆ 'ಶ್ರೀಮನ್ನ್ಯಾಯ ಸುಧಾ' ಎನ್ನುವ
ಹೆಸರು ಅದೆಷ್ಟು ಅನ್ವರ್ಥವಾಗಿದೆ!
ಒಟ್ಟಿನಲ್ಲಿ ಚ ಆದಿ
ಸೂಕ್ಷ್ಮತಾದರ್ಶಕಯಂತ್ರದಂತೆ ಈ ಕೃತಿ 'ಬಾಲವಾಕ್ಯೇನ ಕಿಂ ಮೇ ಸ್ಯಾತ್ ' ಎಂಬುದನ್ನು
ನಾಚಿಕೆಗೀಡು ಮಾಡೀತು. ಪರವ್ಯಾಖ್ಯಾತೃ, ಪರಮತೀಯರಿಗೆ, ಆಚಾರ್ಯರ ಉಕ್ತಿ ಪಿಡಿದು ರೋಗ
(ದೋಷ) ದರ್ಶಕ ಎಕ್ಸರೇ ಆದೀತು. ಮಧ್ವೋಕ್ತಿ ವಿಚಾರದಲ್ಲಿ ಆರೋಗ್ಯದರ್ಶಕ ಎಕ್ಸರೇ ಇದು.
ಹೆಚ್ಚೇಕೆ? ಅನುವ್ಯಾಖ್ಯಾನದ ಬಗ್ಗೆ ಸ್ವತಃ ಆಚಾರ್ಯರೇ ಗೈದ 'ಪ್ರವಚನ' ವೇ ಎನಿಸೀತು.
ಆದುದರಿಂದಲೇ ಇದು (ಸುಧಾ) 'ಜಯತೀರ್ಥ' ಜಯಪ್ರಿಯಂ ತೀರ್ಥಂ, ಜಯತೀರ್ಥಂ,
ಸಾಕ್ಷಾಜ್ಜಯರೂಪೋ ಯತೋ ಸೌ' ಉಕ್ತಿಯಂತೆ, ಜಯಾಭಿಮಾನಿಯಾಗಿ 'ಜಯ' ವೆಂದೆನಿಸಿದ,
ಮಧ್ವರಿಗೆ ಪ್ರಿಯವಾದ 'ತೀರ್ಥ' (ಶಾಸ್ತ್ರ) ದ್ವೈತಕ್ಕೆ ಜಯ ತಂದ ತೀರ್ಥ.
ಅಂತರದ ಅರಿವೇ ಬ್ರಹ್ಮವಿದ್ಯೆ
'ವಿದ್ಯಾ
ಆತ್ಮನಿಭಿದಾಬೋಧಃ' ಜೀವ-ಬ್ರಹ್ಮರ ಸ್ವರೂಪಗಳಲ್ಲಿ ಅಂತರದ ಅರಿವೇ 'ಬ್ರಹ್ಮವಿದ್ಯೆ'
ಎಂದು ಶ್ರೀಕೃಷ್ಣನ ಮುಳಕಮಲದಿಂದ ಹೇಳಿಸಿದ ಭಾಗವತ 'ವಿವಿಕ್ತದೃಷ್ಟಿಸ್ತದುತಾರ್ಹಣಂ ಮೇ'
ಜೀವ-ಬ್ರಹ್ಮರ ಸ್ವರೂಪಗಳಲ್ಲಿ ವಿವೇಕದ (ಭೇದದ) ಜ್ಞಾನವೇ ತನ್ನ ಮಹಾ ಆರಾಧನೆ
(ಪ್ರೀತಿಜನಕ) ಎಂದು ಋಷಭನಾಮಕ ಪರಮಾತ್ಮನ ಮುಖಾರವಿಂದದಿಂದ ಹೇಳಿಸಿದೆ.
- ಶ್ರೀ ಶ್ರೀ ವಿದ್ಯೇಶತೀರ್ಥರು
|