ನಿರಾಕರಣೆಸಂದೇಶ
"ಭಗವಂತನು ಅನಂತ ಗುಣ ಪರಿಪೂರ್ಣನಾದವನು. ಅಂತಹ ಭಗವಂತನನ್ನು ನಿರ್ಗುಣ ಎಂದು ಪ್ರತಿಪಾದಿಸುವ 'ಮಾಯಾಮತ' ಅವನ ಪ್ರತಿಯೂಂದು ಗುಣವನ್ನೂ ನಿರಾಕರಿಸುತ್ತದೆ. ಭಗವಂತನ ಒಂದೂಂದು ಗುಣದ ನಿರಾಕರಣೆಯೂ ಒಂದೊಂದು ದೋಷ ಎಂದು ಪರಿಗಣಿಸುವಲ್ಲಿ ಭಗವಂತನ ಅನಂತ ಗುಣಗಳನ್ನೂ ನಿರಾಕರಿಸುವ ಮಾಯಾಮತ 'ಅನಂತದೋಷದುಷ್ಟ' ಆಗಲೇ ಬೇಕಲಲ್ಲವೇ? ''

                                        ಭಗವದ್ಗೀತೆಯಲ್ಲಿ ಷಣ್ಮತಗಳ ನಿರಾಕರಣೆ
                                ಅನಂತದೋಷದುಷ್ಟಂ ಮಾಯಾಮತಮ್
                                'ಮಾಯಾವಾದಖಂಡನ' ದಿಂದ ವಿಶಿಷ್ಟಾದ್ವೈತವೂ ನಿರಾಕೃತ


ಭಗವದ್ಗೀತೆಯಲ್ಲಿ ಷಣ್ಮತಗಳ ನಿರಾಕರಣೆ
ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ |
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ||

- ಗೀತಾ. ೪-೧೮
        ಈ ಶ್ಲೋಕವನ್ನು ವ್ಯಾಖ್ಯಾನಿಸುತ್ತಾ  ಶ್ರೀ ಮಧ್ವರು ವಿದ್ಯಾ-ವಿನಯಸಂಪನ್ನನಾದ ಬ್ರಾಹ್ಮಣ, ಪವಿತ್ರ್ವಾದ ಹಸು, ಬಲಿಷ್ಠ ಆನೆ, ಅಪವತ್ರವೆನಿಸುವ ನಾಯಿ, ಚೆಂಡಲ ಮೊದಲಾದ ಜೀವರಲ್ಲಿ ಗುಣ-ದೋಷಗಳಿಂದ ವಿಷಮತೆ ಕಂಡುಬಂದರೂ ಈ ವಿಷಯಗಳಾದ ಅಧಿಷ್ರ್‍ಹಾನಗಳಲ್ಲಿ ಅಂತರ್ಯಾಮಿ ರೂಪದಲ್ಲಿ ನೆಲೆಸುದ ಭಗವಂತನ ರೂಪಗಳಲ್ಲಿ ವಿಷಮತೆಯನ್ನು ಜ್ಞಾನಿಗಳು ಕಾಣುವುದ್ಲ್ಲ. ಭಗವಂತನು ಗೋ-ಬ್ರಾಹ್ಮಣರಲ್ಲಿ ಪವಿತ್ರ ಹಾಗೂ ಅನಂತಗುಣಪೂರ್ಣನಾಗಿರುವಂತೆ ನಾಯಿ ಚಾಂಡಾಲರಲ್ಲೂ ಅದೇ ತೆರನಾಗಿ ಅವರಿಗೆ ಕಾಣಿಸುತ್ತಾನೆ, ಎಂಬುದಾಗಿ -
ವಿಷಮೇಷ್ವಪಿ ಜೀವೇಷು ಸಮೋ ವಿಷ್ಣು ಸದೈವ ತು |
ಯತ್ತೃಣಾದಿಗತಸ್ಯಾಪಿ ಗುಣಾಃ ಪೂರ್ಣಾಃ ಹರೇಃ ಸದಾ ||
        ಎನ್ನುವ ಶ್ಲೋಕದ ಉಲ್ಲೇಖದೊಂದಿಗೆ ಸಮರ್ಥಿಸಿದ್ದಾರೆ. ಹತ್ತು ಅರ್ಥಗಳಿಂದ ತುಂಬಿದ ಈ ಶ್ಲೋಕಕ್ಕೆ ಇನ್ನೊಂದು ಮುಖದ ಅರ್ಥವನ್ನೂ ಹೇಳಬಹುದು. ಷಣ್ಮತಖಂಡನಾಪೂರ್ವಕ ದೇವತಾತಾರತಮ್ಯಸಹಿತವಾದ ವಿಷ್ಣುಪಾರಮ್ಯವೇ ಆ ಅರ್ಥ. ಈ ಅರ್ಥವನ್ನು ದೃಷ್ಟಿಯಲ್ಲಿಟ್ಟುಕೊಂಡಾಗ ವಿದ್ಯಾವಿನಯಸಂಪನ್ನನಾದ ಬ್ರಾಹ್ಮಣನೆಂದರೆ ಸಾಧಕವರ್ಗದಲ್ಲೆ ಹಿರಿಯ ಸಾಧಕನೆನಿಸಿದ ಪೂರ್ಣ ಭಗವದ್ಭಕ್ತಿ-ಜ್ಞಾನಗಳಿಂದ ತುಂಬಿದ ಶ್ರೀಚತುರ್ಮುಖಬ್ರಹ್ಮನು. ಈ ಕಾರಣದಿಂದಲೇ ಆತ 'ಜೀವಘನ' ನೆನಿಸಿದ್ದಾರೆಂದು ಶ್ರೀ ಮಧ್ವರು ಗೀತಾತಾತ್ಪರ್ಯದಲ್ಲಿ ಸ್ಪಷ್ಟಪಡಿಸಿದ್ದಾರೆ.
        ಮನುಷ್ಯರಲ್ಲಿ ಚತುರ್ವರ್ಣಗಳಿರುವಂತೆ ದೇವತೆಗಳಲ್ಲೂ ಚತುರ್ವರ್ಣಗಳಿವೆಯೆಂದು ಆಚಾರ್ಯರು ಬೃಹದಾರಣ್ಯಕ ಉಪನಿಷದ್ಭಾಷ್ಯದಲ್ಲಿ ಸ್ಪಷ್ಟಪಡಿಸಿ ಅವರಲ್ಲಿ ಚತುರ್ಮುಖನು ಬ್ರಾಹ್ಮಣನು ಎನ್ನುವ ವಿಚಾರವನ್ನು -
        'ವಿಷ್ಣೋರ್ಬ್ರಾಹ್ಮಣಜಾತಿಃ ಸನ್ ಬ್ರಹ್ಮಾ ಜಜ್ಞೇ ಚತುರ್ಮುಖಃ ' ಎನ್ನುವ ಆಧಾರದೊಂದಿಗೆ ಸಮರ್ಥಿಸಿದ್ದಾರೆ.
        ಕೇವಲ ಹುಟ್ಟಿನಿಂದ ಚತುರ್ಮುಖನು ಬ್ರಾಹ್ಮಣನಲ್ಲ. ' ಕಃ ಛಂದಸಾಂ ಯೋಗಮಾವೇದ ಧೀರಃ' ಎಂದು ವೇದವಾಕ್ಯವು ತಿಳಿಸಿರುವಂತೆ ಸಮಗ್ರವೇದಾರ್ಥಜ್ಞಾನವಿರುವುದರಿಂದ, ಗುಣದಿಂದಲೂ ಬ್ರಾಹ್ಮಣನೆನಿಸಿದ್ದಾನೆ.
        ಚತುರ್ಮುಖನ ಅನಂತರ ಗುಣತಾರತಮ್ಯ ಕಕ್ಷೆಯಲ್ಲಿ ಬರುವವಳು ಸಕಲವೇದಗಳಿಗೆ ಅಭಿಮಾನಿನಿಯಾದ ಆತನ ಮಡದಿ ಶ್ರೀಸರಸ್ವತೀದೇವಿ. ಅವಳೇ ಇಲ್ಲಿ ಗೋಪದದಿಂದ ಚತುರ್ಮುಖನ ಅನಂತರ ಉಲ್ಲೇಖಿಸಲ್ಪಟ್ಟಿದ್ದಾಳೆ. ಗೋ ಅಂದರೆ ವಾಕ್ ತಾನೆ? ಹೀಗಾಗಿ ಅದಕ್ಕೆ ಅಭಿಮಾನಿನಿಯಾದ ಆಕೆಯೇ ಗೊಶಬ್ದದ ಮುಖ್ಯ ಅರ್ಥವೆಂದು 'ಅಭಿಮಾನಿವ್ಯಪದೇಶಸ್ತು ವಿಶೇಷಾನುಗತಿಭ್ಯಾಂ ' ಎನ್ನುವ ಸೂತ್ರಧಾರದಿಂದ ಹೇಳಬಹುದು. ಸಾಧಕನು ಇವರೀರ್ವರ ಅನುಗ್ರಹವನ್ನು ಸಂಪಾದಿಸಿದಾಗಲೇ ಜ್ಞಾನಮಾರ್ಗದಲ್ಲಿ ಮುನ್ನೆಡಯಬಲ್ಲನು.
        ಇಲ್ಲಿ ಗುಣತಾರತಮ್ಯಕ್ಕೆ ಒತ್ತುಕೊಡದೆ, ಬಿಂಬ-ಪ್ರತಿಬಿಂಬ ಭಾವದಿಂದ ತಾರತಮ್ಯವನ್ನು ವಿವಕ್ಷೆಯಲ್ಲಿಟ್ಟುಕೊಡಾಗ ಗೋ ಶಬ್ದದ ಅರ್ಥ ಶ್ರೀರುದ್ರದೇವರು. ಇವರು ದೇವತೆಗಳಲ್ಲಿ ಕ್ಷತ್ರಿಯರು ಕೂಡಾ. 'ವಾಯುಃ ಸದಾಶಿವೋನಂತಃ ಏವಮಾದ್ಯಾಃ ಕ್ಷತ್ರಿಯಾಸ್ತು ದೇವಾನಾಂ ಬ್ರಹ್ಮನಿರ್ಮಿತಾಃ ||' ಎನ್ನುವ ಪ್ರಮಾಣವು ರುದ್ರನ ಕ್ಷತ್ರಿಯತ್ವವನ್ನು ಪ್ರತಿಪಾದಿಸಿದರೆ, 'ಆಭಾಸಕೋಸ್ಯ ಪವನಃ ಪವನಸ್ಯ ರುದ್ರಃ' ಎನ್ನುವ ಆಚಾರ್ಯರ ತಾತ್ಪರ್ಯದ ವಾಕ್ಯವು ಪವನನ (ಬ್ರಹ್ಮನ) ಪ್ರತಿಬಿಂಬತ್ವವನ್ನು ಈತನಿಗೆ ಸಾರಿದೆ. ಗೋಶ್ಬ್ದಕ್ಕೆ ಸ್ವರ್ಗ ಎನ್ನುವ ಅರ್ಥವಿದೆ. ಹೀಗಾಗಿ 'ದೌರ್ವಾವಃ ರುದ್ರಃ' 'ದ್ವ್ಯಾತ್ಮಕಶ್ಚ ಶಿವಃ ಪ್ರೋಕ್ತಃ' 'ಸ್ವರ್ಗಾಭಿಮಾನಿರುದ್ರಂ ಪ್ರತಿ ಸಾಮಾಭಿಸಂಸ್ಥಾಪಯಾಮ ||' ಮುಂತಾದ ಪ್ರಮಾಣಗಳು ತಿಳಿಸಿರುವಂತೆ ಸ್ವರ್ಗಾಭಿಮಾನಿಯಾದ ರುದ್ರದೇವರೇ ಆ ಶಬ್ದ್ಸ್ದ ಮುಖ್ಯ ಅರ್ಥ. ಆದುದರಿಂದ ಹಿಂದೆ ತಿಳಿಸಿದ ಈ ಎಲ್ಲಾ ಕಾರಣಗಳಿಂದಲೂ ಚತುರ್ಮುಖನ ಉಲ್ಲೇಖದ ಅನಂತರ ಗೋ ಶ್ಬ್ದದಿಂದ ರುದ್ರನ ಉಲ್ಲೇಖವೂ ಔಚಿತ್ಯ ಪೂರ್ಣವೆನಿಸಿದೆ. ಸಾಧಕನಿಗೆ ಭಕ್ತಿದಾರ್ಡ್ಯಕ್ಕೆ ಕಾರಣವೆನಿಸಿದ ವೈರಾಗ್ಯವನ್ನು ಸಂಪಾದಿಸಲು ವೈರಾಗ್ಯಾಧಿಪತಿಯಾದ ಈತನ ಅನುಗ್ರಹ ಅತ್ಯಾವಶ್ಯಕ.
        ಇಲ್ಲಿ ಗೋಶಬ್ದದಿಂದ ಕ್ಷತ್ರಿಯನಾದ ಇಂದ್ರನನ್ನೂ ಉಪಲಕ್ಷಣತ್ವದಿಂದ ಅದೇ ಜಾತಿಯವನಾದ ಇಂದ್ರನ ಸಮಾನನಾದ ಕಾಮನನ್ನೂ ಸ್ವೀಕರಿಸಬಹುದು. ಗೋ ಶಬ್ದಕ್ಕೆ 'ಜಲ' ಎನ್ನುವ ಅರ್ಥವಿದೆ ತಾನೆ? ಹೀಗಾಗಿ 'ಆಪ ಏವೇಂದ್ರಃ', 'ಶಕ್ರಸ್ತ್ವಬಭಿಮಾನವಾನ್' ಮುಂತಾದ ಪ್ರಮಾಣಗಳು ತಿಳಿಸಿರುವಂತೆ ಜಲಾಭಿಮಾನಿಯಾದ ಇಂದ್ರನನ್ನು ತತ್ಸಮಾನನಾದ ಕಾಮನನ್ನೂ ಗೋಶಬ್ದದಿಂದ ಸ್ವೀಕರಿಸುವುದು ಔಚಿತ್ಯಪೂರ್ಣವಾಗುವುದು. ಇಂದ್ರಕಾಮರನ್ನು ಪೂಜಿಸಿದೆ ಹೋದರೆ ಯಥಾ ಕ್ರಮವಾಗಿ ಐಶ್ವರ್ಯಪ್ರಾಪ್ತಿಯ ಅಭಾವ ಹಾಗೂ ಅವೈರಾಗ್ಯವು ಉಂಟಾಗುವುದರಿಂದ ಇಅವರೀರ್ವರ ಭಕ್ತಿಪೂಜೆಗಳು ಅತ್ಯಾವಶ್ಯಕಗಳು.
        ಇಂದ್ರನ ಆನಂತರ ತಾರತಮ್ಯ ಕಕ್ಷೆಯಲ್ಲಿ ಬರುವವನು ಹಸ್ತಾಭಿಮಾನಿಯಾದ ದಕ್ಷಪ್ರಜಾಪತಿ ಹೀಗಾಗಿ ಹಸ್ತವು ಈತನ ನಿಯಂತ್ರಣದಲ್ಲಿರುವುದರಿಂದ ಹಸ್ತಿ ಶಬ್ದದಿಂದ ಇಂದ್ರನ ಆನಂತರ ಈತನ ಉಲ್ಲೇಖವು ಔಚಿತ್ಯಪೂರ್ಣವಾಗಿದೆ. ಇಂದ್ರದೇವರ ಅವ್ಯವಹಿತ ಉತ್ತರದಲ್ಲಿ ತಾರತಮ್ಯ ಕಕ್ಷೆಯಲ್ಲಿ ಬರುವವನು ಅಹಂಕಾರಿಕ ಪ್ರಾಣನೆಂದು ಛಾಂದೋಗ್ಯ ಉಪನಿಷತ್ತು ತಿಳಿಸಿದೆ. ಆತನ ಅನಂತರವೇ ದಕ್ಷಪ್ರಜಾಪತಿಯು ಗುಣತಾರತಮ್ಯ ಕಕ್ಷೆಯಲ್ಲಿ ಬರುವನೆಂದು ಉಪನಿಷತ್ತಿನ ಆಶಯ. ಹೀಗಾಗಿ ಅವ್ಯವಧಾನದಿಂದ ಗುಣತಾರತಮ್ಯ ವಿವಕ್ಷೆಯನ್ನಿಟ್ಟುಕೊಂಡಾಗ ಗೋಶಬ್ದವಾಚ್ಯನಾದ ಇಂದ್ರನ ಅನಂತರ ಹಸ್ತಿಶಬ್ದದಿಂದ ದಕ್ಷಪ್ರಜಾಪತಿ ಉಲ್ಲೇಖವು ಸಮರ್ಪಕವೆನಿಸುವುದಿಲ್ಲ. ಆದುದರಿಂದ ಈ ವಿವಕ್ಷೆಯಲ್ಲಿ ಗೋಶಬ್ದದಿಂದ  ಜಲಾಭಿಮಾನಿಯಾದ ಅಹಂಕಾರಿಕ ಪ್ರಾಣನನ್ನು ಸ್ವೀಕರಿಸಿ, ಹಸ್ತಿಶಬ್ದದಿಂದ ದಕ್ಷಪ್ರಜಾಪತಿಯನ್ನು ಪರಿಗ್ರಹಿಸುವುದು ಔಚಿತ್ಯಪೂರ್ಣವಾಗುವುದು. ಸ್ಕಂದನೇ ಸರ್ವೋತ್ತಮನೆಂದು ಸಾರುವ ಸ್ಕಾಂದ ಮತವನ್ನು ನಿರಾಕರಿಸುವ ದೃಷ್ಟಿಯಿಂದ ಗೋಶಬ್ದದಿಂದ ಇಂದ್ರ ಕಾಮರನ್ನು ಪರಿಗ್ರಹಿಸುವುದು ಉಚಿತವೆನಿಸುವುದು. ಗೋಶಬ್ದವಾಚ್ಯರಾದ ಇಂದ್ರ ಕಾಮರಲ್ಲೂ ಅವರವರ ಯೋಗ್ಯತಾನುಸಾರವಾಗಿ ಫಲ ನೀಡುವ ಪ್ರಯುಕ್ತ 'ಸಮ' ನೆನಿಸಿದ ಭಗವಂತನ ಅಸ್ತಿತ್ವವನ್ನು ಹೇಳುವುದರಿಂದ ಫಲದಲ್ಲಿ ಅಸ್ವತಂತ್ರರಾದ ಇಂದ್ರ ಕಾಮರಿಗೆ ಸರ್ವೋತ್ತಮತ್ವವನ್ನು ಅಲ್ಲಗಳೆದಂತಾಗುವುದು ತಾನೆ? ಸ್ಕಾಂದವಲ್ಲದೆ ಪಾಶುಪತ, ಸೌರ ಮತಗಳನ್ನೂ ನಿರಾಕರಿಸುವ ಉದ್ದೇಶದಿಂದಲೇ ಜಲಾಭಿಮಾನಿ ಇಂದ್ರ, ತತ್ ಸಮಾನ ಕಾಮ, ನೇತ್ರಾಭಿಮಾನಿಯಾದ ಸೀರ್ಯ ಹಾಗೂ ಸ್ವರ್ಗಾಭಿಮಾನಿ ರುದ್ರ ಮುಂತಾದ ನಾನಾರ್ಥಗಳನ್ನು ನೀಡುವ ಗೀ ಶಬ್ದವನ್ನು ಪ್ರಯೋಗಿಸಲಾಗಿದೆ ಎಂದು ತಿಳಿಯಬೇಕು. (ಗೋಶಬ್ದಕ್ಕೆ ನೇತ್ರ ಎನ್ನುವ ಅರ್ಥವು ಸಹಸ್ರಗುಃ - ಸಹಾಸ್ರಾಕ್ಷಃ ಎನ್ನುವ ವ್ಯಾಖ್ಯಾನದಿಂದ ಸಿದ್ಧವಾಗಿತ್ತದೆ). ಗೋಶಬ್ದವಾಚ್ಯರಾದ ರುದ್ರ ಇಂದ್ರ ಕಾಮ ಹಾಗೂ ಅಹಂಕಾರಿಕ ಪ್ರಾಣದೇವರ ಅನಂತರ ಹಸ್ತಿಶಬ್ದದಿಂದ ದಕ್ಷಪ್ರಜಾಪತಿಯ ಉಲ್ಲೇಖವು ಸಂಶಯ ಪರಿಹಾರರೂಪ ಪ್ರಯೋಜನದ  ದೃಷ್ಟಿಯಿಂದಲೂ ಔಚಿತ್ಯಪೂರ್ಣವಾಗಿದೆ.
        ರುದ್ರನಿಂದ ನಮಸ್ಕೃತನಾಗದಿರುವುದರಿಂದ ದಕ್ಷಪ್ರಜಾಪತಿಯು ಕುಪಿತಗೋಂಡನೆಂದು ಭಾಗವತದ ಉಲ್ಲೇಖವನ್ನು ಗಮನಿಸಿದಾಗ ಹಾಗಾದರೆ ದಕ್ಷಪ್ರಜಾಪತಿಯು ರುದ್ರನಿಂದಾಲೂ ನಮಸ್ಕಾರಾರ್ಹ ಉತ್ತಮ ವ್ಯಕ್ತಿಯೇ ? ಎನ್ನುವ ಸಂಶಯವು ಸಹಜ. ಈ ಸಂಶಯವನ್ನು ರುದ್ರಾದಿಗಳ ಅನಂತರ ಹಸ್ತಿಶಬ್ದದಿಂದ ದಕ್ಷಪ್ರಜಾಪತಿಯನ್ನು ಉಲ್ಲೇಖಿಸುವ ಮೂಲಕ ಗೀತೆಯು ಪರಿಹರಿಸಿದೆ.
        ಇಲ್ಲಿ ಹಸ್ತಿ  ಶಬ್ದದಿಂದ ಆನೆಯ ಸೊಂಡಿಲುಳ್ಳ ಗಣಪತಿಯನ್ನು ಸ್ವೀಕರಿಸುವುದು ಗಣಪತಿಯೇ  ಸರ್ವೋತ್ತಮ ನೆಂದು ಸಾರುವ ಗಾಣಪತ್ಯಮತವನ್ನು  ನಿರಾಕರಿಸುವ  ದೃಷ್ಠಿಯಿಂದ ಸಮರ್ಪಕವೆನಿಸುವುದು. ಸಮ ಶಬ್ದದ ಸ್ವಾರಸ್ಯದ ಜೊತೆಗೆ ಹಸ್ತಿ ಶಬ್ದದ ಸ್ವಾರಸ್ಯದಿಂದ ಇಲ್ಲಿ ಮಧ್ವರ ಇನ್ನೊಂದು ಸಿದ್ಧಾಂತವೂ ಧ್ವನಿತವಾಗುತ್ತದೆ-
        ಸಾಧಕರು ಭಗವಂತನನ್ನು ಸ್ವಾಮಿ, ಗುಣಪೂರ್ಣ ಮುಂತಾದ ಬಗೆಯಯಲ್ಲಿ ಉಪಾಸನೆಗೈದರೂ ತಮ್ಮ ಯೋಗ್ಯತಾನುಸಾರವಾಗಿ ಪೂರ್ಣತೆಯನ್ನು ಪಡೆಯುವವರೇವಿನಾ ಪರಮಾತ್ಮನಂತೆ ಪೂರ್ಣತೆಯನ್ನು ಪಡೆಯಲಾರರು ಎಂದು ಮಧ್ವರು 'ಪರಮಂ ಬ್ರಹ್ಮ ವೇದ ಬ್ರಹ್ಮೈವ ಭವತಿ' ಮುಂತಾದ ಶ್ರುತಿಗಳ ಆಧಾರದಿಂದ ಸಿದ್ಧಾಂತಿಸಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನ ಗಣಪತಿ. ೧೮ ನರಮುಖ  ಹಾಗೂ ಏಕಮುಖನಾದ ವಿಶ್ವನನ್ನು ಉಪಾಸನೆಗೈದರೂ ವಿನಾಯಕನು ವಿಶ್ವನಂತೆ ೧೮ ನರಮುಖವುಳ್ಳವನಾಗಲಿಲ್ಲ. ಏಕಗಜಮುಖವನ್ನು ಮಾತ್ರ ಪಡೆದ. ಇದೇ ಪ್ರಮೇಯವನ್ನು ಸ್ಪಷ್ಟವಾಗಿ ತಿಳಿಸಲೋಸುಗವೇ ಬೇರೆ ಶಬ್ದದಿಂದ ಗಣಪತಿಯನ್ನು ಉಲ್ಲೇಖಿಸದೇ ಹಸ್ತಿಶಬ್ದದಿಂದಲೇ ಆತನನ್ನು ಉಲ್ಲೇಖಿಸಲಾಗಿದೆ.
        'ವಿನಾಯಕಸ್ತು ವಿಶ್ವಸ್ಯ ಧ್ಯಾನಾದೈತ್ ಗಜಕ್ತ್ರತಾಮ್ ' ಎನ್ನುವ ಪ್ರಮಾಣವಾಕ್ಯವು ಗಣಪನು ಉಪಾಸನೆಯಿಂದ ಪಡೆದ ಫಲವನ್ನು ಉಲ್ಲೇಖಿಸಿದೆ. ಹಸ್ತಿ ಶಬ್ದದ ಜೊತೆಗೆ ಸಮ ಶಬ್ದವೂ ಹರಿಯು ಯೋಗ್ಯತಾನುಸಾರವಾಗಿ ಫಲದಾತನು ಎಂಬ ಈ ಸಿದ್ಧಾತದ ಮೇಲೆ ಬೆಳಕನ್ನು ಚೆಲ್ಲಿದೆ.
ದೇಶಕಾಲೌ ಗುಣಾಂಶ್ಚೈವ ಭಕ್ತ್ಯಾದೀನಪ್ಯಪೇಕ್ಷ್ಯ ತು |
ಯೋಗ್ಯತಾಂ ಚ ತಥಾ ಕರ್ಮ ಫಲದಾನಾತ್ ಸಮಃ ಸ್ಮೃತಃ ||
        ಎಂದು ಸ್ಕಾಂದವು ತಿಳಿಸಿರುವಂತೆ ದೇಶ ಕಾಲಗಳು, ಭಕ್ತ್ಯಾದಿಗಿಣಗಳು, ಯೋಗ್ಯತೆ ಹಾಗೂ ಕರ್ಮವನ್ನು ಅನುಸರಿಸಿ ಫಲ ನೀಡುವ ಭಗವಂತನೇ ಸಮ ಶಬ್ದದ ಅರ್ಥತಾನೆ?
        ಬ್ರಾಹ್ಮಣಶಬ್ದವಾಚ್ಯನಾದ ಚತುರ್ಮುಖನಲ್ಲಿ ಸಮವೆನಿಸಿದ ಭಗವಂತನ ಅಸ್ತಿತ್ವವನ್ನು ಹೇಳಿದ್ದರಿಂದ ಫಲದಲ್ಲಿ ಅಸ್ವತಂತ್ರನಾದ ಆತನೂ ಸರ್ವೋತ್ತಮನಲ್ಲವೆಂದು ಸಿದ್ಧವಾಗುವುದರಿಂದ ಹಿರಣ್ಯಗರ್ಭನೇ ಸರ್ವೋತ್ತಮನೆಂದು ಸಾರವ ಹಿರಣ್ಯಗರ್ಭ ಮತವೂ ನಿರಾಕೃತವಾಯಿತು. ಶಕ್ತಿಯೇ ಸರ್ವೋತ್ತಮಳೆಂದು ಸಾರುವ ಶಾಕ್ತಮತವೂ ಲಕ್ಷ್ಮಿಯ ಸಹಿತನಾದ  ಭಗವಂತನನ್ನು (ಮಯಾ ಸಹಿತಃ ಸಮಃ) ಸಾರುವ ಸಮಶಬ್ದದಿಂದ ನಿರಾಕೃತವಾಯಿತು. ಹರಿಯನ್ನು ಹೊಗಳುವ ವೇದವಿದ್ಯೆಗೆ (ಮಾ ಶಬ್ದವಾಚ್ಯವಾದ ಹರಿವಿದ್ಯೆಗೆ) ಅಭಿಮಾನಿನಿಯಾಗಿ 'ಮಾ' ಎನಿಸಿದ ಲಕ್ಷ್ಮಿಯು ಹರಿಯ ಪಾರಮ್ಯವನ್ನು ಸ್ತುತಿಸುವವಳೆಂದು ಭಾಗವತದ ಶ್ರುತಿಗೀತೆಯಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ. ಹೀಗಾಗಿ ಸ್ತುತ್ಯನಾದ ಹರಿಗಿಂತಲೂ ಯಾವಾಗಲೂ ಆತನ ಜೊತೆಗಿದ್ದು ಸ್ತುತಿ ಪರಾಯಣಳಾದ ಲಕ್ಷ್ಮೀ ಹೇಗೆ ಉತ್ತಮಳಾಗಬಲ್ಲಳು? ಎನ್ನುವ ಧ್ವನಿಯು ಸಮಶಬ್ದದ ಸ್ವಾರಸ್ಯದಿಂದ ವ್ಯಕ್ತವಾಗುವುದು. ಒಟ್ಟಿನಲ್ಲಿ ಬ್ರಾಹ್ಮಣ, ಗೋ, ಹಸ್ತಿ ಹಾಗೂ ಸಮಶಬ್ದದ ಬಲದಿಂದ ಸ್ಕಾಂದ, ಸೌರ, ಶಾಕ್ತ, ಪಾಶುಪತ, ಗಾಣಪತ್ಯ ಹಾಗೂ ಹಿರಣ್ಯಗರ್ಭ ಎನ್ನುವ ಅವೈದಿಕ ಷಣ್ಮತಗಳೂ ಈ ಶ್ಲೋಕದಿಂದ ನಿರಾಕೃತಗಳಾಗಿವೆ ಎನ್ನಬಹುದು.
        ಈ ಎಲ್ಲಾ ತಾತ್ಪರ್ಯಗಳನ್ನೊಳಗೊಂಡ ವ್ಯಾಪಕ ಅರ್ಥವನ್ನೇ 'ನಿರ್ದೋಷಂ ಹಿ ಸಮಂ ಬ್ರಹ್ಮ' ಎನ್ನುವ ಮುಂದಿನ ಭಾಗದಲ್ಲಿ ವಿವರಿಸಲಾಗಿದೆ. ಷಣ್ಮತಗಳ ನಿರಾಕರಣ ದಿಂದಲೇ ಹರಿಯ ಪಾರತಂತ್ರ್ಯಾದಿದೋಷಗಳು ನಿರಾಕೃತಗಳಾಗಿ ಆತನು ನಿರ್ದೋಷನೆಂದು ಸಾಬೀತಾಗಬಲ್ಲುದು ತಾನೆ? ಹರಿಯು ಸಾಧನೆ ಯೋಗ್ಯತಾನುಗುಣವಾಗಿ ಫಲವನ್ನು ನೀಡಿದರೆ ತಾನೆ ವೈಷಮ್ಯ - ನೈಘೃಣ್ಯ ದೋಷಗಳಿಂದ ದೂರನಾಗಬಲ್ಲನು. ಅಂತೆಯೇ ಸರ್ವಪ್ರಾಣಿಗಳಲ್ಲೂ ಗುಣಪೂರ್ಣನಾಗಿದ್ದರೆ ಮಾತ್ರ ಅಧಿಷ್ಠಾನದೋಷ ಪ್ರಯುಕ್ತ ದೋಷದಿಂದ ದೂರನಾಗಬಲ್ಲನು. ಗುಣಪೂರ್ಣತ್ವವೇ ನಿರ್ದೋಷತ್ವಕ್ಕೆ ಪ್ರಯೋಜಕವೆಂದು 'ಪ್ರಚ್ಯುತೋಶೇಷದೋಷೈಃ ಸದಾ ಪೂರ್ತಿತಃ' ಎನ್ನುವಲ್ಲಿ ಶ್ರೀಮಧ್ವರು ಅಭಿಪ್ರಾಯಪಟ್ಟಿದ್ದಾರಷ್ಟೆ.
( ೧೯೯೧, ಜೂನ್ ತತ್ವವಾದ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)


ಅನಂತದೋಷದುಷ್ಟಂ ಮಾಯಾಮತಮ್