ಸ್ರಷ್ಟೃತ್ವಾಚ್ಚೈವ ಪಾತೃತ್ವಾನ್ನಿಯಮಾಚ್ಚ ಪ್ರಕಾಶನಾತ್ |
ಸರ್ವತ್ವಮುಕ್ತಂ ವಿಷ್ಣೋಸ್ತು ನ ತು ಸರ್ವಸ್ವರೂಪತಃ ||
- ಮಹಾಭಾರತ (೧-೨-೧೫ ಐತರೇಯಭಾಷ್ಯ)
ಸೃಷ್ಟಾ ಪಾತಾ ಚ ಸಂಹರ್ತಾ ನಿಯಂತಾ ಚ ಪ್ರಕಾಶಿತಾ |
ಸರ್ವಸ್ಯ ಚ ತೇನಾಹಂ ಸರ್ವೋಸ್ಮೀತ್ಯೃಷಿಭಿಃ ಸ್ಮೃತಃ ||
ಉಳಿದವರಲ್ಲಿಲ್ಲದ ಸರ್ವಸ್ರಷ್ಟೃತ್ವ, ಪಾತೃತ್ವ, ನಿಯಂತತ್ವ
ಪ್ರಕಾಶಕತ್ವಾದಿಗಳಾದರೂ ಶ್ರೀಹರಿಯಲ್ಲಿ ಹೇಗೆ ಸಂಭಾವಿತಗಳೆಂದರೆ, ಇದಕ್ಕೂ ಶ್ರೀಕೃಷ್ಣ
'ವಾಸುದೇವಃ ಸರ್ವಂ' ಎಂಬ ಮಾತಲ್ಲೇ ಸಮಾಧಾನಿಸಿರುವನು. ಶ್ರೀಹರಿ ಸರ್ವಸಮರ್ಥ,
ಸರ್ವಜ್ಞ. ಆದ್ದರಿಂದಲೂ ಸರ್ವ ಎಂದೆನಿಸಿರುವನು. 'ಸರ್ವಃ ಸಂಪೂರ್ಣಸಾಮರ್ಥ್ಯಾತ್ ....'
೧೦-೪-೧೭ ಭಾ.ತಾ.ನಿ. 'ಸರ್ವಸ್ಯ ಚ ಹೃದಾ ಜ್ಞಾನಾತ್ ಸರ್ವಮೇನಂ ಪ್ರಚಕ್ಷತೇ' - ಉದ್ಯೋಗ
ಪರ್ವ, ಮಹಾಭಾರತ.
ಶ್ರೀಹರಿ ಬೇರೆ ಬೇರೆ ಸಲಕರಣೆ
ಸಾಮಗ್ರಿಯನ್ನು ಬಳಸಿಕೊಂಡು ಸೃಷ್ಟ್ಯಾದಿಗಳನ್ನು ನಿರ್ವಹಿಸುವವನು. ಒಂದುವೇಳೆ ನೀರು,
ಗಾಳಿ ಅಥವಾ ಮಹತ್ತತ್ವ, ಅಹಂಕಾರತತ್ತ್ವ ಮೊದಲಾದ ಸಾಮಗ್ರಿಯ ಕೊರತೆಯಿಂದಾಗಿ ಎಂದಾದರೂ
ಆತನ ಸೃಷ್ಟ್ಯಾದಿ ಚಟುವಟಿಕೆಗಳು ಸ್ಥಗಿತವಾಗಲಾರವೇ? ಎಂಬ ಸಂದೇಹವನ್ನೂ 'ವಾಸುದೇವಃ
ಸರ್ವಂ' ಎಂಬ ಗೀತಾಚಾರ್ಯನ ಮಾತು ಪರಿಹರಿಸುತ್ತಿದೆ. ನಿಜ. ಶ್ರೀಹರಿ ಸಾಧನಗಳನ್ನು
ಬಳಸಿಕೊಂಡೇ ಸೃಷ್ಟ್ಯಾದಿಗಳನ್ನು ನಡೆಸುವನು. ಹಾಗಂತ ಆತನ ಶೃಷ್ಟ್ಯಾದಿ ಚಟುವಟಿಕೆಗಳು ಆ
ಸಾಧನಗಳ ಅಧೀನಗಳಲ್ಲ. ಸಾಧನಗಳ ಹಂಗಿಲ್ಲದೇ ನಡೆಯಬಲ್ಲವು. ಹೆಚ್ಚೇಕೆ, ಆ ಸಾಧನಗಳ
ಇರುವಿಕೆಯೂ ಶ್ರೀಹರಿಯ ಸರ್ವನಾಗಿರುವನು.
ತ್ವದಧೀನಂ ಯತಸ್ಸರ್ವಂ ಅತಃ ಸರ್ವೋ ಭವಾನಿತಿ |
ವದಂತಿ ಮುನಯಃ ಸರ್ವೇ ... ||
- ಗೀತಾಭಾಷ್ಯ
ಹೀಗೆ
ಸಲಕರಣೆಗಳ ಸತ್ತಾ ಶ್ರೀಹರಿಯ ಅಧೀನವಾಗಿರುವುದರಿಂದಲೇ ಅಂತಹ ಸಲಕರಣೆಗಳ ಮೂಲಕ
ಸೃಷ್ಟ್ಯಾದಿಗಳನ್ನು ನಿರ್ವಹಿಸಿದರೆ ತನ್ನ ಪ್ರಭುತ್ವವನ್ನು
ಸ್ಪಷ್ಟೀಕರಿಸಿದಂತಾಗುವುದೆಂಬ ದೃಷ್ಟಿಯಿಂದ ಶ್ರೀಹರಿ ಸರ್ವಸ್ವತಂತ್ರನಾಗಿದ್ದರೂ
ಸಲಕರಣೆಗಳ ಮೂಲಕವೇ ಸೃಷ್ಟ್ಯಾದಿಗಳನ್ನು ನಡೆಸುವನು -
ಸಾಧನಾನಾಂ ಸಾಧನತ್ವಂ ಯದಾತ್ಮಾಧೀನಮಿಷ್ಯತೇ |
ತದಾ ಸಾಧನಸಂಪತ್ತಿರೈಶ್ವರ್ಯದ್ಯೋತಿಕಾ ಭವೇತ್ ||
- ೨-೧-೧೯ ಬ್ರ್.ಸೂ.ಭಾಷ್ಯ.
ಶ್ರೀಹರಿ
ಚತುರ್ಮುಖನ ಮೂಲಕ ಸೃಷ್ಟಿಯನ್ನು ಮಾಡಿಸುವನು. ರುದ್ರನ ಮೂಲಕ ಸಂಹಾರವನ್ನು ಮಾಡಿಸುವನು.
ಹೀಗೆ ಬೇರೆ ಬೇರೆ ದೇವತೆಗಳ ಮೂಲಕ ಬೇರೆ ಬೇರೆ ಚಟುವಟಿಕೆಗಳನ್ನು ನಡೆಸುವನೆಂದ ಮೇಲೆ
ಸೃಷ್ಟ್ಯಾದಿಗಳನ್ನು ನಡೆಸುವವನು ಶ್ರೀಹರಿಯೇ ಎಂಬುದು ಹೇಗೆ? ಎಂಬುದಕ್ಕೂ 'ವಾಸುದೇವಃ
ಸರ್ವಂ ....' ಎಂಬಲ್ಲೇ ಸಮಾಧಾನ ಅಡಗಿದೆ. ಶ್ರೀಹರಿ ಸರ್ವಾಂತರ್ಯಾಮಿ,
ಆದ್ದರಿಂದಲೂ ಆತ ಸರ್ವ ಎನಿಸಿರುವನು.
ಸರ್ವಾಂತರ್ಯಾಮಕತ್ವಾತ್ತು ಸರ್ವನಾಮಾ ಜನಾರ್ದನಃ |
- ಬ್ರಹ್ಮತರ್ಕ (೪-೨೩-೪೩ ಭಾ.ತಾ.ನಿ)
ಹೀಗೆ ಸರ್ವಾಂತರ್ಯಾಮಿಯಾಗಿದ್ದು,
ಬ್ರಹ್ಮಾದಿ ಸಕಲರನ್ನೂ ಪ್ರೇರಿಸುವವನು ಶ್ರೀಹರಿಯೇ ಆಗಿರುವುದರಿಂದ, ಚತುರ್ಮುಖಾದಿಗಳು
ನಡೆಸುವ ಸೃಷ್ಟ್ಯಾದಿಗಳಿಗೂ ಮುಖ್ಯವಾಗಿ ಸ್ವತಂತ್ರವಾಗಿ ಪ್ರವರ್ತಕನಾಗಿರುವವನು
ಶ್ರೀಹರಿಯೇ.
ರಾಮಕೃಷ್ಣಾದಿ ಅವತಾರಗಳಿಂದ
ಅತ್ಯಂತಾಭಿನ್ನನಾದವನು ಶ್ರೀಹರಿ ತಾನೇ? ರಾಮಕೃಷ್ಣಾದಿ ಅವತಾರಗಳಲ್ಲಿ ಶೋಕ, ಮೋಹ,
ಛೇದಾದಿಗಳು ಕಂಡಿವೆ. ಇಂತಹ ದೌರ್ಬಲ್ಯವುಳ್ಳ ಶ್ರೀಹರಿ ಹೇಗೆ ತಾನೇ
ಸರ್ವಸಮರ್ಥನೆನಿಸಿಯಾನು? ಎಂಬುದನ್ನು ಶ್ರೀಕೃಷ್ಣ ' ವಾಸುದೇವಃ ಸರ್ವಂ ' ಎಂಬುದರಿಂದಲೇ
ಪರಿಹರಿಸಿರುವನು.
ಶ್ರೀಹರಿ ತನ್ನ ಸರ್ವಾವತಾರಗಳಲ್ಲೂ
ಸರ್ವರೂಪಗಳಲ್ಲೂ ಸರ್ವನು: ಅರ್ಥಾತ್ ಗುಣಪೂರ್ಣನು. 'ಸರ್ವಸ್ಮಿನ್ ಸರ್ವರೂಪಸ್ತ್ವಂ
ಸರ್ವಃ ಸರ್ವಸ್ವರೂಪಧೃಕ್'
- ವಿಷ್ಣುಪುರಾಣ.
ಆದ್ದರಿಂದ ಮೂಲರೂಪದಂತೆ ರಾಮಕೃಷ್ಣಾದಿ ರೂಪಗಳಲ್ಲೂ
ಗುಣಪೂರ್ಣನೇ. ದೋಷಾಭಾವವೂ ಗುಣವೆಂದು ಪರಿಗಣಿತವಾಗಿರುವುದರಿಂದ, ಗುಣಪೂರ್ಣರೆನಿಸಿರುವ
ರಾಮಕೃಷ್ಣಾದ್ಯವತಾರಗಳಲ್ಲಿ ಯಾವುದೇ ದೋಷವಿರಲು ಅವಕಾಶವಿಲ್ಲ. ಶೋಕಾಭಾವ, ಮೋಹಾಭಾವ
ಮೊದಲಾದ ಗುಣಗಳಿಂದ ತುಂಬಿರುವ ಅವುಗಳಲ್ಲಿ ಹೇಗೆ ತಾನೇ ಶೊಕಾದಿಗಳು ಸಂಭವಿಸಿಯಾವು?
ಆದ್ದರಿಂದ ರಾಮಾದ್ಯವತಾರಗಳಲ್ಲಿ
ಅಸುರಮೋಹಾದ್ಯುದ್ದೇಶದಿಂದ ಶೋಕಾದಿಗಳನ್ನು ಪ್ರದರ್ಶಿಸಿದ್ದಷ್ಟೇ
(....ಲೀಲೈಷಾಸುರಮೋಹಿನೀ....) ವಾಸ್ತವಿಕವಾಗಿ ಶ್ರೀಹರಿಶೋಕಾದಿ ವಿದೂರ - ವಾಸುದೇವಃ
ಸರ್ವಂ...'
ಹೀಗೆಬಹುಜನ್ಮಗಳನ್ನು ಪಡೆದನಂತರ
ಗಳಿಸಲ್ಪಡುವುದೆನ್ನಲಾಗುವ ' ವಾಸುದೇವಃ ಸರ್ವಂ ' ಎಂಬ ಜ್ಞಾನ ಅನೇಕ
ಪ್ರಮುಖವಿಷಯಕವಾಗಿದೆ. ಅದಕ್ಕಾಗಿಯೇ ಗೀತಾಚಾರ್ಯ 'ವಾಸುದೇವಃ ಸರ್ವಂ ' ಎಂಬುದಾಗಿ ಅನೇಕ
ಅರ್ಥಗಳನ್ನು ಕೊಡಬಲ್ಲ ಸರ್ವಶಬ್ದವನ್ನೇ ಪ್ರಯೋಗಿಸಿರುವನು. ಹೀಗೆಯೇ 'ಪುರುಷ ಏವೇದಂ
ಸರ್ವಂ...' ಇತ್ಯಾದಿ ಮಾತುಗಳ ಅರ್ಥವನ್ನು ವಿವೇಚಿಸಿಕೊಳ್ಳಬಹುದು.
ಇನ್ನಷ್ಟು ವ್ಯಾಪ್ತಿ
ಭಗವಂತನ ಮೂಲರೂಪದಲ್ಲಿರುವಂತೆ
ಅವತಾರಗಳಲ್ಲೂ ಪರಿಪೂರ್ಣನಾದವನು. ಯಾವುದೇ ಕೊರತೆ, ನ್ಯೂನತೆಗಳು ಅಲ್ಲಿಲ್ಲ.
ಆದ್ದರಿಂದಲೇ ಮೇಲ್ನೋಟಕ್ಕೆ ಕೆಲವು ಚಟುವಟಿಕೆಗಳು ಯಾವುದಾದರೊಂದು ನ್ಯೂನತೆಯನ್ನು
ತೋರಿಸಿಕೊಡುತ್ತಿದ್ದರೂ, ಅದರ ವಾಸ್ತವಿಕ ಹಿನ್ನಲೆ ಉದ್ದೇಶಾದಿಗಳನ್ನು
ವಿಶ್ಲೇಷಿಸಿಕೊಂಡು ಅನ್ಯೂನತೆಯನ್ನು ನಿರ್ದರಿಸಿ ಕೊಳ್ಳುವುದು ಅತ್ಯಾವಶ್ಯಕ.
ಭಗವದವತಾರಗಳಲ್ಲೂ ಕೃಷ್ಣಾವತಾರದ ಅನೇಕ ಚಟುವಟಿಕೆಗಳು ದೋಷಪೂರಿತಗಳಾಗಿರುವಂತೆ
ಕಾಣುವುದು ಹೆಚ್ಚು. ಆದರೆ ವಾಸ್ತವಿಕವಾಗಿ ಇವುಗಳಲ್ಲಿ ಯಾವುದೂ ದೋಷದೂಷಿತವಾಗಿಲ್ಲ
ಎಂಬುದಾಗಿ ಸಾಕ್ಷಿಸಿದ್ದವಾದ ನಿರ್ದಾರ ಸುಲಭವಾಗಿ ಬರಲಾರದು. ಬಹುಜನ್ಮಗಳಲ್ಲಿ
ಜ್ಞಾನಸಾಧನೆ ನಡೆಸಿದ ಬಳಿಕ ಸಿದ್ಧಿಸುವುದಷ್ಟೇ. ಇದನ್ನೂ ಗೀತಾಚಾರ್ಯ 'ಬಹುನಾಂ
ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದ್ಯತೇ | ವಾಸುದೇವಃ ಸರ್ವಮಿತಿ.....' ಎಂಬುದಾಗಿ
ಸಂದೇಶಿಸಿರುವನು. ಕೃಷ್ಣವತಾರದ ನಿರ್ದುಷ್ಟತ್ವವನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕೆಂಬ
ದೃಷ್ಟಿಯಿಂದಲೇ ಮೇಲಿನ ಸಂದೇಶದಲ್ಲಿ ಕೃಷ್ಣಾವತಾರವನ್ನು ವಿಶೇಷವಾಗಿ ಹೇಳುತ್ತಿರುವ
'ವಾಸುದೇವ' ಹೆಸರನ್ನು ಉಲ್ಲೇಖಿಸಿರುವನು.
'ವಾಸುದೇವಃ ಸರ್ವಮಿತಿ' ಎಂಬ ಸಂದೇಶ
ಕೃಷ್ಣಾವತಾರದ ಯಾವ ನ್ಯೂನತೆಯನ್ನು ಹೇಗೆ ಪರಿಹರಿಸುತ್ತಿದೆ ಎಂಬುದನ್ನು ಪರಿಶೀಲಿಸೋಣ.
ಶ್ರೀಕೃಷ್ಣ ಜಗದ್ಗುರು ( ಕೃಷ್ಣಂ ವಂದೇ
ಜಗದ್ಗುರುಂ ). ಸದಾ ಜ್ಞಾನಮುದ್ರೆಯನ್ನು ಧರಿಸಿಕೊಂಡು ಜಗತ್ತಿಗೆ ಜ್`ಜಾನೋಪದೇಶವನ್ನು
ನೀಡುತ್ತಿರುವವನು. (ಕೃಷ್ಣಾಯ ಯಾದವೇಂದ್ರಾಯ ಜ್ಞಾನಮುದ್ರಾಯ ಯೋಗಿನೇ ) ಇದನ್ನೂ
'ವಾಸುದೇವಃ ಸರ್ವಮಿತಿ' ಎಂಬ ಸಂದೇಶ ಸಾರುತ್ತಿದೆ. ಸರ್ವ ಶಬ್ದಕ್ಕೆ ಬೋಧಿಸಿಕೊಡುವವನು,
ಅರ್ಥಾತ್ ಗುರು ಎಂಬ ಅರ್ಥವೂ ಇದೆ. (ವಬಯೋರಭೇದಃ ಎಂಬ ನ್ಯಾಯಾನುಸಾರವಾಗಿ ಸರ್ವ ಶಬ್ದದ
ವಕಾರದ ಸ್ಥಾನದಲ್ಲಿ ಬಕಾರವನ್ನಿಟ್ಟುಕೊಂಡು, 'ಸರ್ಬ ಗತೌ ಜ್ಞಾನೇ ಚ ' ಎಂಬ
ಜ್ಞಾನಾರ್ಥಕ ಸರ್ಬಧಾತುವಿನಿಂದ ನಿಷ್ಪನ್ನವಾದ ಶಬ್ದ 'ಸರ್ಬ' ಎಂದು
ವ್ಯಾಖ್ಯಾನಿಸಿದಲ್ಲಿ, ಆ ಶಬ್ದಕ್ಕೆ ಗುರು ಎಂಬ ಅರ್ಥ ಸಿದ್ಧಿಸುವುದು) ಹೀಗೆ
'ವಾಸುದೇವಃ ಸರ್ವಮಿತಿ' ಸಂದೇಶ, ವಸುದೇವನ ಸುತನಾದ ಶ್ರೀಕೃಷ್ಣ
ಗುರುವಾಗಿರುವನೆಂಬುದಾಗಿ ಸಾರುತ್ತ, ಇಂತಹ ಸಕಲ ಜಗತ್ತಿಗೇ ಗುರುವಾಗಿರುವವನು
ಸಾಂದೀಪಿನಿ ಆಚಾರ್ಯರಲ್ಲಿ ಶಿಷ್ಯತ್ವವನ್ನು ವಹಿಸಿ ವಿದ್ಯಾಭ್ಯಾಸ ನಡೆಸಿದುದು
'ಮರ್ತ್ಯಾವತಾರಸ್ತ್ವಿಹ ಮರ್ತ್ಯಶಿಕ್ಷಣಂ' ಎಂಬಂತೆ ಮರ್ತ್ಯರಿಗೆ ಶಿಕ್ಷಣ
ನೀಡುವುದಕ್ಕಾಗಿಯೇ ಹೊರತು ಜ್ಞಾನಸಂಪಾದನೆಗಾಗಿ ಅಲ್ಲ. ಆದ್ದರಿಂದ ಶ್ರೀಕೃಷ್ಣ ಸರ್ವದಾ
ಜ್ಞಾನಪೂರ್ಣನೇ ಎಂಬುದಾಗಿ ಬೊಧಿಸುತ್ತಿದೆ.
ಶ್ರೀಕೃಷ್ಣ ಸುಖಪೂರ್ಣ, ಸ್ವರಮಣ. ತನ್ನ
ಸುಖಕ್ಕಾಗಿ ಬೇರೆ ಯಾರನ್ನೂ ಆಶ್ರಯಿಸುವವನಲ್ಲ. ಲಕ್ಷ್ಮೀದೇವಿಯಿಂದಲೂ ಅವನು ರತಿಸುಖ
ಪಡೆಯುವವನಲ್ಲ.
(ನೈವಾಸ್ಯಾಃ ರತಿಧಾತೃತ್ವಂ... ಐತರೇಯ
ಭಾಷ್ಯ) ಪ್ರಾದುರ್ಭಾವ ರೂಪಗಳಲ್ಲಿ ಇತರ ದೇವಿಯರ ಜೊತೆಗೆ ಕ್ರೀಡಿಸುವಾಗಲೂ, ಆ
ದೇವಿಯಲ್ಲಿರುವ ತನ್ನದೇ ಆದ ಸ್ತ್ರೀರೂಪಗಳಿಂದಲೂ ಕ್ರೀಡಿಸುವನು -
ಪ್ರಾದುರ್ಭಾವಸ್ಥಿತಂ ರೂಪಂ ಯಚ್ಚ ಭೂಮೌ ಪುಮಾತ್ಮಕಮ್ |
ವಿಷ್ಣೋಸ್ತದಪಿ ದೇವೀಷು ಸ್ಥಿತಸ್ತ್ರೀರೂಪಕಾತ್ಮಾನಾ ||
ಏವಮನ್ಯೋನ್ಯತೋ ವಿಷ್ಣೂರತಃ... ||
- ಐತರೇಯ ಭಾಷ್ಯ
ಆದುದರಿಂದ
ಕೃಷ್ಣಾವತಾರದಲ್ಲಿ ಹದಿನಾರುಸಾವಿರ ಗೋಪಿಕಾಸ್ತ್ರೀಯರನ್ನು ಪತ್ನಿಯರನ್ನಾಗಿ
ಪಡೆಯಲಾಗಿದೆ ಎಂದಾಕ್ಷಣ ಅಷ್ಟು ಸ್ತ್ರೀಯರಿಂದಾಗಿ ಶ್ರೀಕೃಷ್ಣನಿಗೆ ರತಿಸುಖ,
ಇಲ್ಲವಾದಲ್ಲಿ ಇಲ್ಲ ಎಂಬ ಅಪೂರ್ಣತೆಯಿಲ್ಲ ಎಂಬುದನ್ನೂ 'ವಾಸುದೇವಃ ಸರ್ವಮಿತಿ' ಎಂಬ
ಸಂದೇಶ ಸೂಚಿಸಿದೆ. ಸರ್ವ ಅನ್ನುವುದಕ್ಕೆ ಅಪರಮಿತ ಸುಖಜ್ಞಾನಸ್ವರೂಪಿ ಎಂದರ್ಥ. (ಸ, ರ,
ವಗಳು ಸೇರಿ ಸರ್ವ ಶಬ್ದ ನಿಷ್ಪನ್ನವಾದುದೆಂದಿಟ್ಟುಕೊಂಡಾಗ, ಸರ್ವ ಶಬ್ದ ಸಾರರೂಪವಾದ
ಸುಖಜ್ಞಾನ ಸ್ವರೂಪಿಯಾದವನು ಶ್ರೀಹರಿ ಎಂದು ತಿಳಿಸುತ್ತದೆ. ಸ ಎನ್ನುವುದಕ್ಕೆ 'ಯೋಸೌ
ನಿಯಮನಾದ್ವಿಷ್ಣುಃ ಸಾರತ್ವಾತ್ಸ ಇತಿ ಸ್ಮೃತಃ' ಎಂಬ ಪ್ರಮಾಣಾನುಸಾರವಾಗಿ ಸಾರ ಅರ್ಥಾತ್
ಶ್ರೇಷ್ಟ ಎಂದರ್ಥ. 'ರ' ಎನ್ನುವುದಕ್ಕೆ 'ರತಿ' (ಸುಖ) ಎಂಬ ಅರ್ಥವನ್ನು
'ಭಾರತಿಜ್ಞಾನರೂಪತ್ವಾದ್ ಭರ್ಗಃ....' ಎಂಬುದಾಗಿ ಭರ್ಗ ಶಬ್ದಾರ್ಥವನ್ನು
ವ್ಯಾಖ್ಯಾನಿಸುವಾಗ ತೋರಿಸಿಕೊಡಲಾಗಿದೆ. 'ವ' ಅನ್ನುವುದಕ್ಕೆ ಜ್ಞಾನ ಎಂಬ ಅರ್ಥವನ್ನು
ಬೃಹದ್ಭಾಷ್ಯದಲ್ಲಿ 'ಸರ್ವಾವತಃ' ಎಂಬುದನ್ನು 'ಆಸಮಂತಾತ್ ಸರ್ವಜ್ಞಾನಾನ್ಯುಪಾದಾಯ'
ಎಂದು ವ್ಯಾಖ್ಯಾನಿಸುತ್ತ ಸೂಚಿಸಿಕೊಡಲಾಗಿದೆ. ಅಪರಮಿತಗಳಾದ ಜ್ಞಾನಸುಖಗಳೇ
ಸಾರಗಳಾಗಿರುವ ಪ್ರಯಿಕ್ತ ಸಾರಸುಖಜ್ಞಾನವನ್ನು ಹೇಳುತ್ತಿರುವ ಸರ್ವಶಬ್ದಕ್ಕೆ ಅಪರಿಮಿತ
ಸುಖ ಜ್ಞಾನಸ್ವರೂಪಿ ಎಂಬ ಅರ್ಥ ಸಿದ್ಧಿಸುವುದು)
ಹೀಗೆ ಶ್ರೀಹರಿ ಅನಂತ ಸುಖಸ್ವರೂಪಿಯಾಗಿದ್ದು, ಯಾರ ಸಹಾಯದಿಂದಲೂ ಕೃತ್ರಿಮಸುಖವನ್ನು
ಅವನು ಪಡೆಯುತ್ತಿಲ್ಲದ ಪ್ರಯುಕ್ತ ಸುಖದಲ್ಲಿಯ ನ್ಯೂನತೆ ಆತನಲ್ಲಿಲ್ಲ ಎಂಬುದಾಗಿ
'ವಾಸುದೇವಃ ಸರ್ವಮಿತಿ' ಎಂಬ ಸಂದೇಶ ತಿಳಿಸುತ್ತದೆ.
ಶ್ರೀಕೃಷ್ಣ ತನಗೆ
ಪುತ್ರ ಬೇಕೆಂದು ರುದ್ರದೇವರನ್ನು ಕುರಿತು ತಪಸ್ಸು ಮಾಡಿದ್ದಿದೆ. ಆದರೆ ಎಲ್ಲರಿಗೆ
ಎಲ್ಲವನ್ನೂ ಕೊಡಬಲ್ಲ ಶ್ರೀಕೃಷ್ಣ (.....ಸತ್ಯಾಸಮೇತಮಖಿಲಪ್ರದಮಿಂದಿರೇಶಂ)
ರುದ್ರದೇವರಿಂದ ವರ ಕೇಳುವುದೇ? 'ನ ಹೀ ಮೇ ಕೇನಚ್ಚಿದ್ದೇಯೋ ವರಃ ಪಾಂಡವನಂದನ'
ಎಂಬುದಾಗಿ ಮಹಾಭಾರತದಲ್ಲಿ ಶ್ರೀಕೃಷ್ಣನೇ ತನಗೆ ಯಾರಿಂದಲೂ ವರ ಪಡೆಯುವ ಆವಶ್ಯಕತೆಯಿಲ್ಲ
ಎಂದು ಹೇಳಿಕೊಂಡಿದ್ದಿದೆ. ಆದ್ದರಿಂದ ಅಯೋಗ್ಯರ ಮೊಹಕ್ಕಾಗಿಯಷ್ಟೇ ವರ ಕೇಳಿದವನಂತೆ
ನಟಿಸಿರುವನು (ಲೀಲೈವಾಸುರಮೋಹಿನೀ - ಭಾ.ತಾ.ನಿ) ಎಂಬ ಸಮಾಧಾನವನ್ನೂ 'ವಾಸುದೇವಃ
ಸರ್ವಮಿತಿ' ಎಂಬ ಮಾತು ನೀಡುತ್ತಿದೆ. ಸರ್ವ ಅಂದರೆ ಸರ್ವಪ್ರದ ಎಂದೂ ಅರ್ಥವಿದೆ.
('ಸರ್ವಂ ಸರ್ವಪ್ರದತ್ವಾತ್ತು ಪ್ರಕೃತೌ ಪುರುಷೋತ್ತಮಃ' - ತೈತ್ತಿರೀಯಭಾಷ್ಯ) ಹೀಗೆ
ಸರ್ವಪ್ರದನಾದ ಶ್ರೀಕೃಷ್ಣ ಪುತ್ರಾಪೇಕ್ಷೆಯಿಂದ ರುದ್ರನನ್ನು ತಪಸ್ಸುಮಾಡಿದನೆಂಬುದು
ಕೂಡುವುದೇ ಇಲ್ಲ. ಅದು ಮೋಹಕ್ಕಾಗಿ ಕೈಕೊಂಡ ನಟನೆಯಷ್ಟೇ ಎಂಬುದಾಗಿ ಆ ಸಂದೇಶ
ಸೂಚಿಸುತ್ತಿದೆ.
ಅಂತಯೇ ನರಕಾಸುರನ ವಿರುದ್ಧವಾಗಿ
ಯುದ್ಧಮಾಡುವ ಪ್ರಸಂಗದಲ್ಲಿ ಆತನ ಶಸ್ತ್ರಗಳಿಂದ ಪೀಡಿತನಾಗಿ ಶ್ರೀಕೃಷ್ಣ
ಮೂರ್ಛಿತನಾದುದೂ ಅಸುರಮೋಹಕ್ಕಾಗಿಯೇ. 'ಪ್ರಾಣಂ ದೇವಾ ಅನುಪ್ರಾಣಂತಿ ಮನುಷ್ಯಾಃ ಪಶವಶ್ಚ
ಯೇ' ಇತ್ಯಾದಿ ಪ್ರಮಾಣಗಳು ಸಾರುತ್ತಿರುವಂತೆ ಸರ್ವರನ್ನೂ ಪ್ರೇರಿಸಿ ವ್ಯಾಪಾರ
ಮಾಡಿಸುತ್ತಿರುವ ಶ್ರೀಕೃಷ್ಣನಿಗೆ ವಾಸ್ತತವಿಕ ಮೂರ್ಛಾವಸ್ಥೆಯಾದರೂ ಹೇಗೆ ಕೂಡುತ್ತದೆ?
ಇದನ್ನೂ 'ವಾಸುದೇವಃ ಸರ್ವಮಿತಿ' ಎಂಬ ಸಂದೇಶ ಸೂಚಿಸಿದೆ. ಸರ್ವ ಶಬ್ದಕ್ಕೆ ಚೇಷ್ಟಕ ಎಂಬ
ಅರ್ಥವೂ ಇದೆ. (ಹಿಂದೆ ತೋರಿಸಿದಂತೆ 'ಸರ್ಬ ಗತೌ' ಎಂಬ ಧಾತುವಿನಿಂದ ನಿಷ್ಪನ್ನವಾದ
ಸರ್ವಶಬ್ದವೇ ಸರ್ವ ವೆನಿಸಿದೆ ಎಂದು ಇಟ್ಟುಕೊಂಡಲ್ಲಿ ಚೇಷ್ಟಕ ಎಂಬಾರ್ಥ
ಸಿದ್ಧಿಸುವುದು) ಹೀಗೆ ಸರ್ವ ಚೇಷ್ಟಕನಾಗಿದ್ದು 'ಸರ್ಬ' ಎನಿಸುವ ವಾಸುದೇವನಿಗೆ ಸಹಜವಾದ
ಮೂರ್ಛೆ ಕೊಡ ಲಾರದೆಂಬುದು ಸಂದೇಶ ಸೂಚನೆ.
ಹೀಗೆ ಯಾವುದೇ ನ್ಯೂನತೆಯಿಂದ
ಪ್ರಯುಕ್ತವೂ ಶ್ರೀಹರಿ 'ಸರ್ವ' ಎನಿಸುವನು - 'ತದೇವ ಗುಣ ಪೂರ್ಣ ತ್ವಾತ್ ಬ್ರಹ್ಮ
ಸರ್ವಮನೂನತಃ'. ಈ ರೀತಿಯಾಗಿ ಭಗವಂತನ ಮೂಲರೂಪಕ್ಕೆ ಹಾಗೂ ಕೃಷ್ಣಾವತಾರಕ್ಕೆ ಸಂಬಂಧಿ
ಸುವ ಅನೇಕ ಗುಣಧರ್ಮಗಳನ್ನು 'ವಾಸುದೇವಃ ಸರ್ವಮಿತಿ' - ಎಂಬ ಸಂದೇಶಾರೂಢವಾಗಿ ಅನುಸಂಧಾನ ನಡೆಸ ಬಹುದಾಗಿದೆ.
|
ಪ್ರತಿಬಿಂಬತ್ವಾನುಸಂಧಾನ
ನೆರಳಿನಂತೆ
ಭಗವಂತನ ಸದಾ ವಶವಾಗಿ ಆತನಿಂದ ಅಲ್ಪ ಸಾಮ್ಯವನ್ನು ಪಡೆದ ಚೇತನವೇ 'ಪ್ರತಿಬಿಂಬ'
ಎನಿಸುವುದು. ಇದನ್ನೇ 'ಪ್ರತಿಬಿಂಬೇಷು ಅಲ್ಪ ಸಾಮಯಂ' 'ಯಥೈಷಾ ಪುರುಷೇ ಚ್ಛಾಯಾ ಏತಸ್ಮಿ
ನ್ನೇತ ದಾತತಂ' ಮುಂತಾದ ವೇದಾಂತ ವಚನಗಳು ಸಾಬೀತು ಪಡಿಸಿವೆ. ಆದುದರಿಂದ ಜೀವನು ತಾನು
ಸದಾ ಭಗವಂತನ ಅಧೀನನೆಂದು ತಿಳಿದು ಅಹಂಕಾರದಿಂದ ದೂರನಾಗಬೇಕು. 'ನಾಹಂ ಕರ್ತಾ ಹರಿಃ
ಕರ್ತಾ ತತ್ ಪೂಜಾ ಕರ್ಮಚಾಖಿಲಂ ' ಎನ್ನುವ ಉದಾತ್ತ ಅನುಸಂಧಾನದೊಂದಿಗೆ ಸಕಲ
ಕರ್ಮಗಳನ್ನು ಭಗವಂತನ ಪೂಜೆಯ ರೂಪದಲ್ಲಿ ಮಾಡಿ ಜ್ಞಾನವನ್ನು ಪಡೆದು ತನ್ನಲ್ಲಿ
ಸುಪ್ತವಾಗಿದ್ದ ಭಗವಂತನ ಕಿಂಚಿತ್ ಸಾದೃಶ್ಯ (ಜ್ಞಾನ ಆನಂದ ಸ್ವರೂಪ) ವನ್ನು ಭಗವಂತನ
ಅನುಗ್ರಹದಿಂದ ಅಭಿವ್ಯಕ್ತಿಗೊಳಿಸಿಕೊಳ್ಳಲು ಪ್ರಯತ್ನಿಸಬೇಕು ಎನ್ನುವುದೇ ವೇದಾಂತಗಳ
ಬ್ರಹ್ಮಾತ್ಮೈಕತ್ವದ ಸಂದೇಶದ ಹೃದಯವೆ.
- ಶ್ರೀಶ್ರೀ ವಿದ್ಯೇಶತೀರ್ಥರು
|