ಸುವರ್ಣಸಂದೇಶ
ಭಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶತೀರ್ಥರ
ಸುವರ್ಣ ಜಯಂತಿ ಉತ್ಸವದ ಹಾಗೂ ಪೀಠಾರೋಹಣ ರಜತೋತ್ಸವದ
ಸವಿನೆನಪಿಗಾಗಿ ಪೋಣಿಸಲ್ಪಟ್ಟ ಅವರ ಸಂದೇಶಗಳ ಸಂಗ್ರಹ

"ಓಂ ಕ್ರತೋ ಸ್ಮರ ಕೃತಂ ಸ್ಮರ"

ಮೂಲ - ಶ್ರೀ ಶ್ರೀ ವಿದ್ಯೇಶತೀರ್ಥರು
ಭಂಡಾರಕೇರಿ ಮಠ, ಬಾರ್ಕೂರು, ಉಡುಪಿ

ಸಂಗ್ರಹ - ಸಂಪಾದನೆ - ಸಗ್ರಿ ರಾಘವೇಂದ್ರ ಉಪಾಧ್ಯಾಯ

ಪರವಿದ್ಯಾಪ್ರಕಾಶನ
'ಶಮ್ಯಾಪ್ರಾಸ' ಮೂಡಸಗ್ರಿ

ಪರಿಶಿಷ್ಟ - ೩
ಶ್ರೀ ವಿದ್ಯೇಶ ತೀರ್ಥರು ಬೆಳಕಿಗೆ ತಂದ ಶ್ರೀ ವೇದವ್ಯಾಸ ಜಯಂತಿ
'ಕೃಷ್ಣ ಜಯಂತಿ, ರಾಮ ಜಯಂತಿ ಇತ್ಯಾದಿಗಳಂತೆ ವೈಶಾಖ ಶುಕ್ಲ ದ್ವಾದಶಿಯಂದು ವೇದವ್ಯಾಸ ಜಯಂತಿಯನ್ನೂ ವ್ಯಾಪಕವಾಗಿ ನಡೆಸಬೇಕು. ಜ್ಞಾನದ ವಿತರಣೆಗಾಗಿಯೇ ತಾಳಿರುವ 'ಜ್ಞಾನಕಾರ್ಯ' ದ ಅವತಾರ ಶ್ರೀ ವೇದವ್ಯಾಸವತಾರ. ಅಂತಹ ವೇದವ್ಯಾಸರ ಜಯಂತಿಯನು ಆಚರಿಸಿದಲ್ಲೆ ವಿಶೇಷವಾಗಿ ಜ್ಞಾನ ಪ್ರಚಾರ ನಡೆಸಿದಂತಾಗುವುದು.
ಶ್ರೀ ವಿದ್ಯೇಶ ತೀರ್ಥರು ಶ್ರೀ ವೇದವ್ಯಾಸ ಜಯಂತಿಯನ್ನು ವ್ಯಾಪಕವಾಗಿ ನಡೆಸುವುದರ ಮೂಲಕ ಶ್ರೀ ವೇದವ್ಯಾಸ ಜಯಂತಿಗೆ ಮೇಲ್ಪಂಕ್ತಿ ಹಾಕಿ ಕೊಟ್ಟಿರುವರು. ಅವರಿಂದ ವರ್ಷೇ ವರ್ಷೇ ಹೆಚ್ಚೆಚ್ಚು ಅರ್ಥವತ್ತಾಗಿ ವೇದವ್ಯಾಸ ಜಯಂತಿ ಆಚರಿಸುವಂತಾಗಲಿ.''
- ಶ್ರೀ ಶ್ರೀ ವಿದ್ಯಾಮಾನ್ಯ ತೀರ್ಥರು
(ಆರಂಭದ ವ್ಯಾಸ ಜಯಂತಿಯ ಉತ್ಸವದಲ್ಲಿ)

''ವೇದ ವೃಕ್ಷವನ್ನೇರಿ ಅದರಿಂದ ಶ್ರೀ ವೇದವ್ಯಾಸರು ಬೀಳಿಸಿದ ಭಾಗವತ ಹಣ್ಣನ್ನು ಹೆಕ್ಕಿ ಸುಲಿದು ನಮಗೆ ಕೊಟ್ಟವರು ಶ್ರೀ ಶುಕಾಚಾರ್ಯರು. ಆದರೆ ಆ ಶುಕಾಚಾರ್ಯರು ಈಗ ಇಲ್ಲ. ಅವರ ಆ ಕೆಲಸವನ್ನು ಇಂದು ಶ್ರೀ ವಿದ್ಯೇಶ ತೀರ್ಥರು ನೆರವೇರಿಸುತ್ತಿರುವರು.''
- ಶ್ರೀ ವಿಶ್ವೇಶ ತೀರ್ಥರು
(ಎರಡನೇ ವರ್ಷದ ವೇದವ್ಯಾಸ ಜಯಂತಿಯಲ್ಲಿ)

ಶ್ರೀ ಶ್ರೀ ವಿದ್ಯೇಶತೀರ್ಥರ ಉಲ್ಲೇಖಾರ್ಹ ಸಾಧನೆಗಳಲ್ಲಿ ಒಂದು ಶ್ರೀ ವೇದವ್ಯಾಸ ಜಯಂತಿಯ ಆಚರಣೆ. ಮೊದಲು ವೈಶಖ ಶುದ್ಧ ದ್ವಾದಶಿಯಂದು ಶ್ರೀ ವೇದವ್ಯಾಸ ಜಯಂತಿ ಪುಟ್ಟ ಪ್ರಮಾಣದಲ್ಲಿ ಅಲ್ಲಲ್ಲಿ ನಡೆಸಲ್ಪಡುತ್ತಿದ್ದಷ್ಟೇ. ದಿನಗಳ ಹಾಗೂ ಕಾರ್ಯಕ್ರಮಗಳ ದೃಷ್ಟಿಯಲ್ಲಿ ವ್ಯಾಪಕವಾಗಿ ವೇದವ್ಯಾಸ ಜಯಂತಿಯನ್ನು ನಡೆಸಲು ಆರಂಭಿಸದವರು ಶ್ರೀ ವಿದ್ಯೇಶತೀರ್ಥರು. ಅವರ ನೇತೃತ್ವದಲ್ಲಿ ೧೯೯೬ ರಿಂದ ಪ್ರತಿ ವರ್ಷ ಹೆಚ್ಚೆಚ್ಚು ವೈಭವದಿಂದ ವೇದವ್ಯಾಸ ಜಯಂತಿ ಆಚರಿಸಲ್ಪಡುತ್ತಿದೆ.
ಶ್ರೀ ಪಾದರ ಆ ಅನುಷ್ಠಾನ ಉಳಿದು ಸಾಧಕರಿಗೂ ಆ ನಿಟ್ಟಿನ ಸ್ಫೂರ್ತಿ ನೀಡುವಂತಾಗಬೇಕೆಂಬ ದೃಷ್ಟಿಯಿಂದ ಹತ್ತು ವರ್ಷಗಳಿಂದ ನಡೆಯುತ್ತ ಬಂದಿರುವ ವ್ಯಾಸ ಜಯಂತಿಯ ಸ್ಠೂಲವಾದ ವರದಿಯನ್ನು ಪ್ರಸ್ತಿತ ಪಡಿಸಲಾಗಿದೆ.

ವೇದವ್ಯಾಸ ಜಯಂತಿಯ ಉಪಕ್ರಮ
ಗಿರಿನಗರದಲ್ಲಿ ವೇದವ್ಯಾಸ ಜಯಂತಿಯ ವೈಭವ
ಹೈದರಾಬಾದಿನಲ್ಲಿ ವೇದವ್ಯಾಸ ಜಯಂತಿ
ಮಂಗಳೂರಿನಲ್ಲಿ ವ್ಯಾಸ ಜಯಂತಿಯ ವೈಶಿಷ್ಟ್ಯ
ಬೆಂಗಳೂರಿನಲ್ಲಿ ವ್ಯಾಸ ಜಯಂತಿ
ಉಡುಪಿಯಲ್ಲಿ ವಿಜೃಭಿಸಿದ ವೇದವ್ಯಾಸ ಜಯಂತಿ
ಶ್ರೀ ಮಾಧ್ವರಾದ್ಧಾಂತ ಸಂವರ್ಧಕ ಸಭೆಯ ವಜ್ರಮಹೋತ್ಸವದ ಜೊತೆ ವ್ಯಾಸ ಜಯಂತಿ
ಅನಂತಪುರದಲ್ಲಿ ಶ್ರೀ ವೇದವ್ಯಾಸ ಜಯಂತಿಯ ಕಂಪು
ರಾಯಚೂರಿನಲ್ಲಿ ವ್ಯಾಸಜಯಂತಿಯ ದಶಮಾನೋತ್ಸವ
ಸಿಂಹಾವಲೋಕನ
 
'ಭಾಗವತನಿಕೇತ' ದಲ್ಲಿ
ವೇದವ್ಯಾಸ ಜಯಂತಿಯ ಉಪಕ್ರಮ
        ೧೯೯೮ ನೇ ಇಸವಿಯ ವೈಶಾಖ ಶುಕ್ಲ ದಶಮಿ, ಏಕಾದಶಿ ಹಾಗೂ ದ್ವಾದಶಿ ಈ ಮೂರುದಿನಗಳಲ್ಲಿ ಬೆಂಗಳೂರಿನ ಭಾಗವತ ನಿಕೇತದಲ್ಲಿಯೇ ವೇದವ್ಯಾಸ ಜಯಂತಿ ಆಚರಿಸಲ್ಪಟ್ಟಿತು. ಇದು ವ್ಯಾಸ ಜಯಂತಿಯ ಆಚರಣೆಯ ಉಪಕ್ರಮ.
        ಗುರುಗಳಾದ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಶ್ರೀ ವಿಶ್ವೇಶತೀರ್ಥರೂ ಉಅಪಸ್ಥಿತರಿದ್ದರು. ಅನೇಕ ವಿದ್ವಾಂಸರ ಪ್ರವಚನಗಳು ನಡೆದಿದ್ದವು.
       ಶ್ರೀ ವಿದ್ಯೇಶತೀರ್ಥರು ತಮ್ಮ ಗುರುಗಳ ಮೂಲಕ ಶ್ರೀ ವೇದವ್ಯಾಸರಿಗೆ 'ಶ್ರೀ ಭಾಗವತ ಸಂದೇಶ' - ಎಂಬ ಕೃತಿಯನ್ನು ಸಮರ್ಪಿಸಿದ್ದರು.
        ಶ್ರೀ ವಿಶ್ವೇಶತೀರ್ಥರು ಶ್ರೀಮದಾಚಾರ್ಯರ ಭಾಗವತತಾತ್ಪರ್ಯದ ವೈಶಿಷ್ಟ್ಯವನ್ನು ಎರಡು ಮೂರು ದೃಷ್ಟಾಂತಗಳೊಂದಿಗೆ ಉಪಪಾದಿಸಿದ್ದರು. ಕ್ಷೀರಸಾಗರದಿಂದ ಮೊದಲು ಕಾಲಕೂಟ ವಿಶಯ ಉದಯಿಸಿದಂತೆ ಭಾಗವತದಿಂದಲೂ ಮೇಲ್ನೋಟಕ್ಕೆ ಸಂಶಯ ವಿಪರೀತಜ್ಞಾನಗಳ ವಿಷ ಕಾಣಿಸಿಕೊಳ್ಳುವುದೇ ಹೆಚ್ಚು. ಮತ್ತಷ್ಟು ಮಥನ ನಡೆಸಿದಾಗಷ್ಟೇ ಅಮೃತ ದೊರಕುವಂತೆ ಭಾಗವತದಿಂದ ತತ್ತ್ವಜ್ಞಾನಾಮೃತ ದೊರಕಬೇಕೆಂದರೆ ಸಾಕಷ್ಟು ಮಥನವನ್ನು ನಡೇಸಬೇಕು. ಹಾಗೆ ಮಥನ ಮಾಡಿ ಸಜ್ಜನರಿಗೆ ತತ್ತ್ವಜ್ಞಾನಾಮೃತವನ್ನು ವಿತರಿಸಿದವರು ಶ್ರೀ ಮಧ್ವಾಚಾರ್ಯರು ಎಂದು ಶ್ರೀ ವಿಶ್ವೇಶತೀರ್ಥರು ಪ್ರತಿಪಾದಿಸಿದರು.
        ಶ್ರೀ ಶ್ರೀ ವಿದ್ಯಾಮಾನ್ಯತೀರ್ಥರು ತಮ್ಮ ಪ್ರವಚನದಲ್ಲಿ ಭಾಗವತದ 'ವಿದ್ಯಾತ್ಮನಿ ಭಿದಾಬೋಧಃ' - ಎಂಬ ಸಂದೇಶದ ಬಗ್ಗೆ ವಿವರಿಸುತ್ತಾ, ಕಪಿಲೋಪದೇಶದ '...ಭೇದದೃಷ್ಟ್ಯಾ ಭಿಮಾನೇನ....' ಎಂಬ ಮಾತಿಗೆ ಅನುಗುಣವಾಗಿ ಭೇದದರ್ಶನವೇ ವಿದ್ಯೆ - ಎಂದು ಸಮರ್ಥಿಸಿದರು.

'ಜ್ಞಾನ ಕಾರ್ಯ' ಕ್ಕಾಗಿಯೇ ಅವತರಿಸಿರುವ ಶ್ರೀ ವೇದವ್ಯಾಸರ ಜಯಂತಿಯನ್ನು ಕೃಷ್ಣ ಜಯಂತಿ, ರಾಮ ಜಯಂತಿಗಳಂತೆ ಅವಶ್ಯವಾಗಿ ಆಚರಿಸಬೇಕೆಂದು ಅಭಿಪ್ರಾಯಪಟ್ಟ ಶ್ರೀ ಪಾದರು,  ಶ್ರೀ ವಿದ್ಯೇಶ ತೀರ್ಥರ ಮೂಲಕ ವ್ಯಾಸ ಜಯಂತಿ ವ್ಯಾಪಕವಾಗಿ ಆಚರಿಸಲ್ಪಡುವುದನ್ನು ಅಭಿನಂದಿಸಿ, 'ಅವರಿಂದ ವರ್ಷೇ ವರ್ಷೇ ಹೆಚ್ಚೆಚ್ಚು ಅರ್ಥವತ್ತಾಗಿ ವೇದವ್ಯಾಸ ಜಯಂತಿ ಆಚರಿಸುವಂತಾಗಲಿ.'' - ಎಂದು ಹೃತ್ಪೂರ್ವಕವಾಗಿ ಹಾರೈಸಿದರು.


ಎರಡನೇ ವರ್ಷದ
ವೇದವ್ಯಾಸ ಜಯಂತಿಯ ವೈಭವ
        ೧೭-೫-೯೭ ರಿಂದ ೧೯-೫-೯೭ ರ ವರೆಗೆ ಮೂರುದಿನಗಳಲ್ಲಿ ಬೆಂಗಳೂರಿನ ಗಿರಿನಗರದ ಭಾಗವತಾಶ್ರಮದಲ್ಲಿ ಎರಡನೇ ವರ್ಷದ ವೇದವ್ಯಾಸ ಜಯಂತಿ ನಡೆಯಿತು. ಶ್ರೀ ಶ್ರೀ ವಿಶ್ವೇಶತೀರ್ಥರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮದುತ್ತಾರುದಮಠದ ಶ್ರೀ ಶ್ರೀ ಸತ್ಯಾತ್ಮ ತೀರ್ಥರು ವಹಿಸಿದ್ದರು. ವಿದ್ವಾಂಸರ ವಾಕ್ಯಾರ್ಥ ಗೋಷ್ಠಿಯಲ್ಲಿ ಪ್ರಸ್ತುತವಾಗಿದ್ದ - 'ಪರೀಕ್ಷಿದ್ರಾಜನಿಗೆ ತಕ್ಷಕದಂಶನದ ಬಗ್ಗೆ ಭಯ ಇತ್ತೇ? - ಎಂಬ ವಿಷಯವನ್ನು ಪ್ರಸ್ತಾಪಿಸಿದ ಶ್ರೀ ಪಾದರು ಪರೀಕ್ಷಿದ್ರಾಜನಿಗೆ ಪರೀಕ್ಷಿತ್ ಎಂಬ ಹೆಸರು ಬರಲು ಭಾಗವತ ನೀಡಿದ ಕಾರಣ್ವನ್ನು ವಿಮರ್ಶಿಸುತ್ತ 'ಪರೀಕ್ಷಿದ್ರಾಜ ತಕ್ಷಕನಿಗೆ ಹೆದರಿ, ಬಂದವರನ್ನು ಪರೀಕ್ಷಾ ದೃಷ್ಟಿಯಿಂದ ನೋಡುತ್ತಿದ್ದದ್ದಲ್ಲ. ಅವನ ಆ ದೇಹ ಚರಮದೇಹ. ಮುಂದೆ ಅವನಿಗೆ ಮರುಜನ್ಮವಿಲ್ಲ. ತನ್ನ ದೇಹಪಾತಕ್ಕೆ ಕಾರಣವಾದ ತಕ್ಷಕದಂಶನಕ್ಕಾಗಿ, ಸಾಧನ ಪೂರ್ತಿಗಾಗಿ ಅವನು ಕಾತರನಾಗಿದ್ದ ಅಷ್ಟೇ - ಎಂದರು. - 'ನಾವು ಮಾಡುವ ಪ್ರತಿಯೊಂದು ಧಾರ್ಮಿಕ ಕ್ರಿಯೆಗಳ ಉದ್ದೇಶವೂ ಮನೋನಿಗ್ರಹವೇ ಆಗಿರಬೇಕು. ಇದನ್ನೇ 'ಸರ್ವೇ ಮನೋನಿಗ್ರಹಲಕ್ಷಣಾಂತಾಃ' ಎಂದು ಭಾಗವತ ಹೇಳಿದೆ. ಮನಸ್ಸಿನ ನಿಗ್ರಹವಿಲ್ಲದ ಕ್ರಿಯೆಗಳು ಕೇವಲ ಡಂಭಾಚಾರವೆನಿಸುತ್ತವೆ. ಭಾಗವತ ಶ್ರವಣದಿಂದ ಸಿದ್ಧಿಸುವ ಮುಖ್ಯಫಲ - ಜ್ಞಾನ-ಭಕ್ತಿ-ವೌರಾಗ್ಯಗಳು - ಎಂದು ಕುಂದಾಪುರ ವ್ಯಾಸರಾಜ ಮಠದ ಶ್ರೀ ಶ್ರೀ ಲಕ್ಷ್ಮೀಂದ್ರ ತೀರ್ಥರು ಸಂದೇಶವಿತ್ತರು. 'ಶ್ರೀ ವೇದವ್ಯಾಸ ಮಂತ್ರ ಮತ್ತು ಶ್ರೀ ಕೃಷ್ಣ ಮಂತ್ರ ಬಹು ಬೇಗ ಫಲ ನೀಡುತ್ತದೆ - ಎಂದು ಆಚಾರ್ಯರು ಹೇಳಿರುವರು. ವೇದವ್ಯಾಸ ಮಂತ್ರ ಜಪದಿಂದ ಬುದ್ಧಿ ವಿಕಾಸದ ಜೊತೆಗೆ ವಾಕ್ ಪಟುತ್ವವೂ ಸಿದ್ದಿಸುತ್ತದೆ. ಇದಕ್ಕೆ ನಾವೇ ಸಾಕ್ಷಿ. ವೇದವ್ಯಾಸ ಮಂತ್ರ್ ಜಪದಿಂದಲೇ ನಮಗೆ ವಾಕ್ ಪಟುತ್ವ ಸಿದ್ಧಿಸಿತು. ಮೋಕ್ಷೋಪಯೋಗಿಯಾದ ಜ್ಞಾನವನ್ನು ಅರಸುವ ನಾವು ಆ ಜ್ಞಾನಗಂಗೆಯನ್ನು ಹರಿಸಿದ ವೇದವ್ಯಾಸರನ್ನು ಮರೆಯಬಾರದು. ಶ್ರೀ ವೇದವ್ಯಾಸ ಜಯಂತಿ ಎಲ್ಲಾ ಕಡೆಯೂ ಇದೇ ರೀತಿ ವೈಭವದಿಂದ ನಡೆಯುವಂತಾಗಬೇಕು' ಸಮಾರೋಪ ಸಮಾರಂಭದಲ್ಲಿ ಶ್ರೀ ವಿದ್ಯಾಮಾನ್ಯತೀರ್ಥರು ಸಂದೇಶವಿತ್ತರು.
        ಶ್ರೀ ವಿಶ್ವೇಶ ತೀರ್ಥರು ತಮ್ಮ ಅಧ್ಯಕ್ಷ ಭಾಷಣದಲ್ಲಿ - ವೇದವೃಕ್ಷವನ್ನೇರಿ ಜ್ಞಾನಫಲವನ್ನು ಪಡೆಯಲು ಅಸಮರ್ಥರಾದ ನಮಗೆ ವೇದವ್ಯಾಸರು ಆ ಮರದಿಂದ ಬೀಳಿಸಿ ನೀಡಿದ ಹಣ್ಣು ಭಗವತ. ಆದರೆ ಅದನ್ನು ಹೆಕ್ಕಿ ಸುಲಿದು ತಿನ್ನಲು ನಮ್ಮ ಆಲಸ್ಯ ಅಡ್ಡಿ ಬಂದಾಗ ಶ್ರೀ ಶುಕಾಚಾರ್ಯರು ಅದನ್ನು ಸುಲಿದು ನಮಗೆ ನೀಡಿದರು. ಆದರೆ ಆ ಶುಕಾಚಾರ್ಯರು ಇಂದಿಲ್ಲ. ಶ್ರೀ ವಿದ್ಯೇಶ ತೀರ್ಥರು ಆ ಕೆಲಸವನ್ನು ಮಾಡುತ್ತಿದ್ದಾರೆ - ಎಂದು ಅಭಿನಂದಿಸಿದರು.
        ಶ್ರೀ ವಿದ್ಯೇಶತೀರ್ಥರು ತಮ್ಮ ಭಾಷಣದಲ್ಲಿ - ಭಾಗವತ ಮಂಗಳ ಶ್ಲೋಕದಲ್ಲಿ ಹೇಗೆ ಶ್ರೀ ವೇದವ್ಯಾಸರ ಗುಣ ಮಹಿಮೆಗಳನ್ನು ಅನುಸಂಧಾನ ಮಾಡುಬಹುದೆಂದು ಪ್ರತಿಪಾದಿಸಿದರು.
        ಶ್ರೀ ವಿಶ್ವೇಶತೀರ್ಥರು ಇದನ್ನು ತಮ್ಮ ಅಧ್ಯಕ್ಷ ಬಾಷಣದಲ್ಲಿ ಪ್ರಸ್ತಾಪಿಸಿ, ಶ್ರೀ ವ್ಯಾಸರ ಅನುಗ್ರಹ ಪೂರ್ಣವಾಗಿ ಶ್ರೀ ವಿದ್ಯೇಶತೀರ್ಥರಲ್ಲಿ ಇದೆ ಎನ್ನಲು ಇದೇ ಸಾಕ್ಷಿ - ಎಂದು ಉದ್ಗರಿಸಿದ್ದರು.
        ಮೂರಿ ದಿನಗಳಲ್ಲಿ ನಡೆದ ಸಮಾರಂಭದಲ್ಲಿ ೨೫ ವಿಧ್ವಾಂಸರು ಭಾಗವತದ ಬೇರೆ ಬೇರೆ ವಿಷಯದ ಬಗ್ಗೆ ಪ್ರವಚನ ನಡೆಸಿದ್ದರು. ವಿದ್ವಾಂಸರ ಮೂಲಕ ಶಾಸ್ತ್ರೀಯ ಪ್ರಮೇಯಗಳ ಕುರಿತು ಚರ್ಚಾಗೋಷ್ಠಿಯೂ ನಡೆದಿತ್ತು.
        ತಮ್ಮ ಗುರುಗಳಾದ ಶ್ರೀ ವುದ್ಯಾಮಾನ್ಯ ತೀರ್ಥರನ್ನೂ, ಶ್ರೀ ವಿಶ್ವೇಶ ತೀರ್ಥರನ್ನೂ ನಾಣ್ಯಗಳಿಂದ ತುಲಾಭಾರ ನಡೆಸಿದ ಶ್ರೀ ವಿದ್ಯೇಶ ತೀರ್ಥರು - 'ವ್ಯಾಸ ವಾಙ್ಮಯ ಪ್ರಸಾರದಲ್ಲಿ ದೀಕ್ಷಾ ಬದ್ಧರಾದ ನಮ್ಮ ಗುರುಗಳಲ್ಲಿ ವೇದವ್ಯಾಸರ ಸನ್ನಿಧಾನವಿದೆ. ಅವರಿಗೆ ನಡೆಸುವ ಈ ಸತ್ಕಾರ ಖಂಡಿತವಾಗಿಯೂ ಶ್ರೀ ವೇದವ್ಯಾಸರಿಗೆ ಸಲ್ಲಿವುದು' - ಎಂದು ಘೋಷಿಸಿದರು.


ಹೈದರಾಬಾದಿನಲ್ಲಿ ನಡೆದ
ವೇದವ್ಯಾಸ ಜಯಂತಿ
        ಹೈದರಬಾದ್ ಬಾಗಲಿಂಗಪಲ್ಲಿ ರಾಘವೇಂದ್ರ ಮಠದಲ್ಲಿ ೨-೫-೯೮ ರಿಂದ ೮-೫-೯೮ ರ ವರೆಗೆ ವೇದವ್ಯಾಸಜಯಂತಿ ಜರಗಿತು.
ಸಮಾರಂಭವನ್ನು ಉದ್ಘಾಟಿಸಿದ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥರು - 'ಅಥ ಹೈಮವತೇ ತಟಾಂತರೇ....' ಎಂದು ನಿರೂಪಿತವಾಗಿರುವಂತೆ ಶ್ರೀವೇದವ್ಯಾಸರು ತತ್ತ್ವಜ್ಞಾನವನ್ನು ನೀಡಿ ಹಿಮಾಲಯದ ಆಚೆ ಬದರಿಯಲ್ಲಿ ಕುಳಿತಿರುವರು. ಸೂರ್ಯ ಮೇರುಪರ್ವತದ ಆಚೆಗೆ ಹೋದಾಗ ಕತ್ತಲೆಯಾಗುವಂತೆ ವ್ಯಾಸರು ಕತ್ತಲೆಯಾಗಲೆಂದೇ ಹಿಮಾಲಯದ ಮತ್ತೊಂದು ಬದಿಗೆ ಹೋದರು. ಏಕೆಂದರೆ, ಕತ್ತಲೆ ಇದ್ದರಷ್ಟೇ ಬೆಳಕಿನ ಮಹತ್ತ್ವ ತಿಳಿಯುವುದು. ಆಚೆ ಸೇರಿದ ವ್ಯಾಸರನ್ನು ಈಚೆ ತರುವ ಯತ್ನವನ್ನು ಶ್ರೀ ವಿದ್ಯೇಶತೀರ್ಥರು ಮಾಡುತ್ತಿದ್ದಾರೆ. ಕೃಷ್ಣ ಜಯಂತಿ ನಮಗೆ ಗೊತ್ತು. ರಾಮನವಮಿ ಗೊತ್ತು. ಮಧ್ವಜಯಂತಿಯೂ ಗೊತ್ತು. ಆದರೆ ವ್ಯಾಸಜಯಂತಿ ಗೊತ್ತಿಲ್ಲ. ಆಚರಿಸಲೇ ಬೇಕಾದ ಅದನ್ನು ಮತ್ತೆ ಜ್ಞಾಪಿಸಿದವರು ಶ್ರೀ ವಿದ್ಯೇಶತೀರ್ಥರು - ಎಂದು ಆಶೀರ್ವಚನ ನೀಡಿದರು.
        ಸಮಾರಂಭದ ಅಂಗವಾಗಿ ನಾಲ್ಕು ಗೋಷ್ಠಿಗಳು ವಿದ್ವಾಂಸರ ಉಪನ್ಯಾಸಗಳು ಹಾಗೂ ಗುರುದ್ವಯರಿಗೆ ನಾಣ್ಯಗಳಿಂದ ತುಲಾಬಾರ ನಡೆದಿದ್ದವು. ನಾಲ್ಕು ದಿನಗಳಲ್ಲೂ ಬೆಳಿಗ್ಗೆ ಹಾಗೂ ಸಾಯಂಕಾಲ ವಿದ್ವಾಂಸರಿಂದ ಸಮಗ್ರ ಭಾಗವತದ ಪ್ರವಚನಗಳು ನಡೆದಿದ್ದವು.
        ಶ್ರೀ ವಿದ್ಯೇಶ ತೀರ್ಥರು ಗಾಯತ್ರಿ ಮಂತ್ರವನ್ನು ವ್ಯಾಸರ ಪರವಾಗಿ ಅರ್ಥೈಸಿ ಪ್ರಕಟಿಸಲಾಗಿದ್ದ ಕಿರುಕೃತಿಯನ್ನು ಶ್ರೀ ವೇದವ್ಯಾಸರಿಗೆ ಸಮರ್ಪಿಸಲಾಯಿತು.
        ವ್ಯಾಸ ಜಯಂತಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಸಂದೇಶ ನೀಡಿದ ಶ್ರೀ ವಿಶ್ವೇಶ ತೀರ್ಥರು ಶ್ರೀ ವ್ಯಾಸರ ಧೃತರಾಷ್ಟ್ರಾದಿಗಳನ್ನುಹುಟ್ಟಿಸಿದ ಘಟನೆಗೆ ಆಧ್ಯಾತ್ಮಿಕ ಅರ್ಥವನ್ನು ನಿರೂಪಿಸಿ, ಇಂದು ವ್ಯಾಸರ ಪ್ರತಿನಿಧಿಯಾಗಿ ಅವರಿಂದ ರಚಿತಗಳಾದ ಪುರಾಣೇತಿಹಾಸಗಳು ನಮ್ಮ ಮುಂದಿವೆ. ಲೌಕಿಕ ಭೋಗಭಾಗ್ಯಗಳಿಗೆ ಆಕರ್ಷಿತರಾಗಿ ಅಂಬಿಕೆಯಂತೆ ನಾವು ಆ ಕಡೆ ಕಣ್ಣು ಮುಚ್ಚಿ ಕುಳಿತುಕೊಳ್ಳದೆ, ದಾಸಿಯಂತೆ ವ್ಯಾಸರ ದಾಸರಾದರೆ ಮಾತ್ರ ಅವರ ಅನುಗ್ರಹಕ್ಕೆ ಪಾತ್ರರಾಗಿ ಪರಿಶುದ್ಧವಾದ ತತ್ತ್ವಜ್ಞಾನವನ್ನು ಪಡೆಯಬಲ್ಲೆವೆಂದು ಪ್ರತಿಪಾದಿಸಿದರು.
        'ನಮ್ಮ ದೇಶದ ಸಂಸ್ಕೃತಿ, ನೀತಿ ನಿಯಮಗಳನ್ನು ದಾಖಲೆಗೊಳಿಸಿದ ವ್ಯಾಸರು ಒಂದು ವರ್ಗಕ್ಕೆ ಆರಾಧ್ಯರಲ್ಲ ಅವರು ಸಮಗ್ರ ಭಾರತ ದೇಶಕ್ಕೇ ಮಾನ್ಯರು. ಅಂತಹವರ ಜಯಂತಿ ರಾಷ್ಟ್ರಹಬ್ಬವಾಗಬೇಕು' - ಎಂದು ಶ್ರೀ ವಿಶ್ವೇಶ ತೀರ್ಥರು ಕರೆನೀಡಿದರು.
        ವ್ಯಾಸರು ನೀಡಿದ ತತ್ತ್ವಜ್ಞಾನವೇ ಆತ್ಮೋದ್ಧಾರಕ. ಅದು ಅಪಾರ್ಥಗಳಿಂದ ತಿರೋಹಿತವಾದಾಗ ವ್ಯಾಸರ ಆಜ್ಞೆಯಂತೆ ಅದನ್ನು ಮತ್ತೆ ನಮಗೆ ನೀಡಿದ ಮಧ್ವಾಚಾರ್ಯರ್ ಸಿದ್ಧಾಂತವೇ ವ್ಯಾಸರಿಗೆ ಸಮ್ಮತವಾದುದೆಂದು ಶ್ರೀ ವಿದ್ಯಾಮಾನ್ಯ ತೀರ್ಥರು ಸಮರ್ಥಿಸಿದರು.



ಮಂಗಳೂರಿನಲ್ಲಿ ನಡೆದ
ವ್ಯಾಸ ಜಯಂತಿಯ ವೈಶಿಷ್ಟ್ಯ

        ೯-೫-೨೦೦೦ ದಿಂದ ೧೫-೫-೨೦೦೦ ವರೆಗಿನ ಸಪ್ತಾಹಾವಧಿಯಲ್ಲಿ ಐದನೆಯ ವರ್ಷದ ವ್ಯಾಸ ಜಯಂತಿ ಮಹೋತ್ಸವ ಮಂಗಳೂರಿನಲ್ಲಿ ನಡೆಯಿತು.
        ಈ ಅವಧಿಯಲ್ಲಿ ಇಪ್ಪತ್ತೈದಕ್ಕಿಂತಲೂ ಅಧಿಕ ಊರ ಹಾಗೂ ಪರವೂರ ವಿದ್ವಾಂಸರು ಪಾಲ್ಗೊಂಡು ಪೂರ್ವಾಹ್ನ ಬೇರೆ ಬೇರೆ ಶಾಸ್ತ್ರೀಯ ಪ್ರಮೇಯದ ಬಗ್ಗೆ, ಅಪರಾಹ್ನ ಮಹಾಭಾರತದ ಬೇರೆ ಬೇರೆ ಪಾತ್ರದ ಬಗ್ಗೆ ಪ್ರವಚನಗಳನ್ನು ನಡೆಸಿಕೊಟ್ಟಿದ್ದರು.
        ೧೫-೫-೨೦೦೦ ರಂದು ಬ್ರಹ್ಮ ಸುತ್ರದ ಪ್ರಕೃತ್ಯಧಿಕರಣ್ಅದ ಬಗ್ಗೆ ಮತತ್ರಯದ ವಿಚಾರಗೋಷ್ಠಿ ನಡೆದು ಶ್ರೀ ಮದಾಚಾರ್ಯರ ವ್ಯಾಖ್ಯಾನದ ವೈಶಿಷ್ಟ್ಯವನ್ನೂ ಪ್ರಮಾಣಸಿದ್ಧತ್ವವನ್ನೂ ಸ್ಪಷ್ಟಪಡಿಸಲಾಗಿತ್ತು.
        ಶ್ರೀ ವಿದ್ಯೇಶತೀರ್ಥರು ತಾವು ರಚಿಸಿದ 'ಗಾಯತ್ರೀ ಕಂಡ ರಾಮಾಯಣ' ಕೃತಿಯನ್ನು ಬಿಡುಗಡೆಗೊಳಿಸಿ ಶ್ರೀ ವೇದವ್ಯಾಸರಿಗೆ ಸಮರ್ಪಿಸಿದರು.
        ಅಂದು ಸಂಜೆ ಶ್ರೀ ವೇದವ್ಯಾಸರನ್ನು ಪ್ರತಿನಿಧಿಸುವ ಅವರ ಮಹಾಭಾರತಾದಿ ಗ್ರಂಥಗಳಿಗೆ ವೈಭವದ ಮೆರವಣಿಗೆ ನಡೆದು, 'ತುಲಾಭಾರ' ನಡೆಯಿತು.
        ಶ್ರೀ ವಿದ್ಯೇಶ ತೀರ್ಥರು ಪ್ರಕೃತ್ಯಧಿಕರಣ ವಾಕ್ಯಾರ್ಥಗೋಷ್ಠಿಯ ಅಧ್ಯಕ್ಷ ಭಾಷಣದಲ್ಲಿ ಪ್ರಕೃತ್ಯಧಿಕರಣದಲ್ಲಿ ಬರುವ ಪ್ರಕೃತಿ ಹಾಗೂ ಯೋನಿಶಬ್ದಗಳಿಗೆ ಶ್ರುತಿ ಕೋಶಾದಿಗಳಿಂದ ಸಿದ್ಧವಾಗುವ ಅರ್ಥವನ್ನು ಸ್ಪಷ್ಟಪಡಿಸಿರುವ ಆಚಾರ್ಯರು, 'ಪ್ರಕೃತಿ', 'ಯೋನಿ' ಶಬ್ದಗಳಿಂದಾಗಿ ಭಗವಂತನನ್ನು ಜಗತ್ತಿಗೆ ಉಪಾದಾನಕಾರಣನೆಂದು ಪರಮತೀಯರು ಭ್ರಮಿಸಿರುವ ಅಸ್ವಾರಸ್ಯವನ್ನು ಎತ್ತಿ ತೋರಿಸಿರುವರೆಂದು ಸ್ಪಷ್ಟಪಡಿಸಿದರು.
        ವ್ಯಾಸ ಜಯಂತಿಯ ಉದ್ಘಾಟನಾ ಸಮಾರಂಭ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಅವರು ತಮ್ಮ ಭಾಷಣದಲ್ಲಿ ಶ್ರೀ ವ್ಯಾಸಾವತಾರದ ಹಿನ್ನೆಲೆಯಲ್ಲಿ ದೇವತೆಗಳು ಅರ್ಪಿಸಿದ ಪ್ರಾರ್ಥನೆಯಲ್ಲಿ ಬ್ರಹ್ಮವರದಿಂದ ಎಲ್ಲಾ ಪ್ರಜೆಗಳನ್ನು ಅಜ್ಞಾನ, ವಿಪರೀತ ಜ್ಞಾನ ರೂಪದಿಂದ ಪೀಡಿಸುತ್ತಿರುವ ಕಲಿಯ ನಿಗ್ರಹಕ್ಕಾಗಿ ಅವತರಿಸಿ ಬರಬೇಕೆಂಬ 'ಕಲಿಸ್ತ್ವಯಂ ಬ್ರಹ್ಮವರಾದಿದಾನೀಂ ವಿಬಾಧತೇಸ್ಮಾನ್ ಸಕಲಾಃ ಪ್ರಜಾಶ್ಚ | ಅಜ್ಞಾನಮಿಥ್ಯಾಮತಿರೂಪತೋಸೌ ಪ್ರವಿಶ್ಯ ಸಜ್ಜ್ಞಾನವಿರುದ್ಧರೂಪಃ ||...... ಸಚ್ಛಾಸ್ತ್ರಶಸ್ತ್ರೇಣ ನಿಹತ್ಯ ಶೀಘ್ರಂ......| ಎಂಬ ಅಂಶವನ್ನು ಗಮನಿಸಿದರೆ ಶ್ರೀ ವೇದವ್ಯಾಸರ ಮಹಾಭಾರತಾದಿ ಗ್ರಂಥಗಳನ್ನು ಅಧ್ಯಯನ ಮಾಡಿದರೆ ನಮ್ಮ ಮನಸ್ಸಿನಲ್ಲಿ ಅಜ್ಞಾನ ವಿಪರೀತಜ್ಞಾನ ರೂಪದಿಂದ ಇರುವ ಕಲಿಯ ನಿಗ್ರಹವಾಗುವುದೆಂದು ಸ್ಪಷ್ಟವಾಗಬಲ್ಲದೆಂದು ಸಂದೇಶ ನೀಡಿದರು.
        ವ್ಯಾಸ ಜಯಂತಿಯ ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ ಶ್ರೀ ಮಧ್ವರ ವ್ಯಾಖ್ಯಾನಗಳು ಶ್ರೀ ವ್ಯಾಸರ ಸ್ಪಷ್ಟವಾಗಿ ತಿಳಿಸುವವೆಂದು ಪ್ರತಿಪಾದಿಸಿ, 'ಮಧ್ವಾಂತರ್ಗತ ವೇದವ್ಯಾಸ....' ಎಂದು ಶ್ರೀ ವಾದಿರಾಜ ಗುರುಗಳು ಸ್ತುತಿಸಿರುವಂತೆ ಶ್ರೀ ಮಧ್ವರ ವ್ಯಾಖ್ಯಾನಗಳ ಮೂಲಕವೇ ಶ್ರೀ ವ್ಯಾಸರ ಗ್ರಂಥಗಳ ಆಂತರ್ಯವನ್ನು ತಿಳಿಯಲು ಯತ್ನಿಸಬೇಕೆಂದು ಕರೆ ನೀಡಿದ್ದರು.


ಶ್ರೀ ವೇದವ್ಯಾಸರ ಮೆಚ್ಚುಗೆಯನ್ನೂ, ಗುರುಗಳ ಋಣಾನುಬಂಧವನ್ನೂ,
ಉದ್ಘೋಷಿಸಿದ ವ್ಯಾಸಜಯಂತಿ
        ಆದಷ್ಟು ಅಧಿಕ ಜಿಜ್ಞಾಸುಗಳಿಗೆ ವ್ಯಾಸಜಯಂತಿಯ ಫಲ ದೊರಕು ವಂತಾಗಬೇಕೆಂದು ಅಂತಹ ಜಿಜ್ಞಾಸುಗಳು ಅಧಿಕವಾಗಿ ಉಳ್ಳ ಊರುಗಳಲ್ಲಿಯೇ ಹೆಚ್ಚಾಗಿ ವ್ಯಾಸ ಜಯಂತಿಯನ್ನು ಆಚರಿಸುತ್ತ ಬಂದಿದ್ದ ಶ್ರೀ ವಿದ್ಯೇಶ ತೀರ್ಥರು ೨೦೦೦ ನೆಯ ಇಸವಿಯಲ್ಲಿ ಮಂಗಳೂರಿನಲ್ಲಿ ವ್ಯಾಸ ಜಯಂತಿಯನ್ನು ನಡೆಸಲು ಸಂಕಲ್ಪಿಸಿದ್ದನ್ನು ಗಮನಿಸಿದಾಗ ಆಶ್ಚರ್ಯವಾಗಿತ್ತು. ವಾಣಿಜ್ಯ ಪ್ರಧಾನವಾದ ಮಂಗಳೂರಿನ ವ್ಯಸ ಜಯಂತಿಯ ಫಲವನ್ನು ಅನುಭವಿಸಬಲ್ಲ ಪ್ರಾಮಾಣಿಕ ಜಿಜ್ಞಾಸುಗಳು ಎಷ್ಟು ಮಂದಿ ದೊರಕಿಯಾರು? ಶ್ರೀ ಪಾದರು ಯಾಕೆ ಈ ನಿಟ್ಟಿನಲ್ಲಿ ಯೋಚಿಸಿಲ್ಲ? ಎಂದು
        ಆದರೆ ಅದೇ ಅವಧಿಯ ೧೪-೫-೨೦೦೦ ದಂದು ರಾತ್ರಿ ಶ್ರೀ ಪಾದರ ಗುರುಗಳಾದ ಶ್ರೀ ಶ್ರೀ ವಿದ್ಯಾಮಾನ್ಯ ತೀರ್ಥರು ಮಹಾಪ್ರಸ್ಥಾನವನ್ನು ಕೈಗೊಂಡಿದ್ದು, ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಶ್ರೀ ವಿದ್ಯೇಶ ತೀರ್ಥರು ಪಾಲ್ಗೊಳ್ಳುವಂತಾಯಿತು.
        ಒಂದು ವೇಳೆ ಜಿಜ್ಞಾಸುಗಳು ಅಧಿಕವಾಗಿ ಉಳ್ಳ ಘಟ್ಟದ ಮೇಲಿನ ಬೇರೆ ಯಾವುದೇ ಊರಿನಲ್ಲಿ ವ್ಯಾಸ ಜಯಂತಿಯನ್ನು ಹಮ್ಮಿಕೊಂಡಿದ್ದರೆ, ಶ್ರೀ ಪಾದರಿಗೆ ತಮ್ಮ ಗುರುಗಳ ಮಹಾಪ್ರಸ್ಥಾನ ಸಮಾರಂಭದಲ್ಲಿ ಪಾಲ್ಗೊಳ್ಳಲಾಗುತ್ತಿದ್ದಿಲ್ಲ. ಅಲ್ಲದೆ, ಆರನೇ ದಿನಕ್ಕೇ ಆ ವ್ಯಾಸ ಜಯಂತಿಯನ್ನು ಕೊನೆಗೊಳಿಸಬೇಕಿತ್ತು. ಹೀಗೆ ಅರ್ಧದಲ್ಲಿಯೇ ನಿಂತಂತಾಗುತ್ತಿತ್ತು! ಉಡುಪಿಯಲ್ಲಿಯೇ ಆ ವ್ಯಾಸ ಜಯಂತಿಯನ್ನು ನಡೆಸಿದ್ದರೂ, ಅಂದಿನ ವ್ಯಾಸ ಜಯಂತಿಯ ಕಾರ್ಯಕ್ರಮಕ್ಕೆ ವಿಘ್ನ ಬರುತ್ತಿತ್ತು. ಆದರೆ ಉಡುಪಿ ಕೃಷ್ಣಮಠಕ್ಕಿಂತ ಭಾರೀ ದೂರವೂ ಅಲ್ಲದೆ, ಭಾರೀ ಹತ್ತಿರವೂ ಅಲ್ಲದ ಮಂಗಳೂರಿನಲ್ಲಿ ವ್ಯಾಸ ಜಯಂತಿಯನ್ನು ನಡೆಸಿದ್ದರಿಂದಲೇ ಏಳು ದಿನಗಳ ಅವಧಿಯ ವ್ಯಾಸ ಜಯಂತಿಯೂ ನಿರ್ವಿಘ್ನವಾಗಿಯೇ ಜರಗುವಂತಾಯಿತು. ಶ್ರೀ ವಿದ್ಯೇಶತೀರ್ಥರಿಗೆ ಗುರುಗಳ ಮಹಾಪ್ರಸ್ಥಾನದಲ್ಲೂ ಪಾಲ್ಗೊಳ್ಳಲು ಅವಕಾಶ ದೊರಕುವಂತಾಯಿತು.
        ಇದರಿಂದಾಗಿ ಸ್ಪಷ್ಟವಾಗುವ ಅಂಶ ಆ ಅವಧಿಯ ವ್ಯಾಸ ಜಯಂತಿಯನ್ನು ಮಂಗಳೂರಿನಲ್ಲಿಯೇ ಸಂಯೋಜಿಸುವಂತೆ ಪ್ರೇರಿಸಿರುವ ಶ್ರೀ ವೇದವ್ಯಾಸರು ತಮ್ಮ ಜಯಂತಿಯನ್ನು ಆಚರಿಸುವ ವಿದ್ಯೇಶ ತೀರ್ಥರ ನಿಷ್ಠೆಯನ್ನು ಮೆಚ್ಚಿಕೊಂಡಿರುವರು. ಹಾಗೆಯೇ ಶ್ರೀ ವಿದ್ಯೇಶತೀರ್ಥರಿಗೆ ತಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯ ತೀರ್ಥರ ಋಣಾನುಬಂಧ ಎಷ್ಟೊಂದು ಗಾಢವಾಗಿದೆ ಎಂಬುದೂ ಸ್ಪಷ್ಟವಾಗಬಲ್ಲದು.


ಬೆಂಗಳೂರಿನ ರಾಮ ಮಂದಿರದಲ್ಲಿ ನಡೆದ
ಆರನೆಯ ವರ್ಷದ ವ್ಯಾಸಜಯಂತಿ
        ೭-೫-೨೦೦೧ ರಂದು ಬೆಂಗಳೂರಿನ ನರಸಿಂರಾಜ ಕಾಲೋನಿ ಶ್ರೀ ರಾಮ ಮಂದಿರದಲ್ಲಿ ವೇದವ್ಯಾಸ ಜಯಂತಿ ಮಹೋತ್ಸವವನ್ನು ನಡೆಸಲಾಯಿತು.
        ಅಂದು ಬೆಳಿಗ್ಗೆ ೮-೩೦ ಕ್ಕೆ ಸರಿಯಾಗಿ ಜ್ಯೋತಿ ಬೆಳಗುವ ಮೂಲಕ ವೇದವ್ಯಾಸ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿದ ಶ್ರೀ ಶ್ರೀ ವಿದ್ಯೇಶತೀರ್ಥರು ಸಾಕ್ಷಾತ್ ಭಗವತ್ ಸ್ವರೂಪರಾದ ಶ್ರೀ ವೇದವ್ಯಾಸರು ಒಂದು ವಿಶ್ವವಿದ್ಯಾಲಯವೇ ಆಗಿರುವರೆಂದು ಘೋಷಿಸಿ, ಅವರ ಹೆಸರನ್ನು ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಇಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
        ಎನ್. ವೆಂಕಟೇಶ ಇವರು ವೇದವ್ಯಾಸರ ಕವಿತಾ ಕೌಶಲದ ಬಗ್ಗೆ, ಚತುರ್ವೇದಿ ವೇದವ್ಯಾಸಾಚಾರ್ಯರು ವ್ಯಾಸರ ಧರ್ಮದೃಷ್ಟಿಯ ಬಗ್ಗೆ, ಮಳಗಿ ಜಯತೀರ್ಥಾಚಾರ್ಯರು ವ್ಯಾಸರ ನೈತಿಕ ಸಂದೇಶಗಳ ಬಗ್ಗೆ ಉಪನ್ಯಾಸ ನೀಡಿದರು.
        ಅಪರಾಹ್ನ ೫-೦೦ ಗಂಟೆಗೆ ಶ್ರೀ ವೇದವ್ಯಾಸರ ಭಾವಚಿತ್ರ ಮತ್ತು ಗ್ರಂಥಗಳ ಶೋಭಾಯಾತ್ರೆ ಜರಗಿತು.
        ಬಳಿಕ ಡಾ. ಪ್ರಭಂಜನಾಚಾರ್ಯರು ವ್ಯಾಸರ ವ್ಯಕ್ತಿತ್ವದ ಬಗ್ಗೆ ಉಪನ್ಯಾಸ ನೀಡಿದರು.
        ಶ್ರೀ ವೇದವ್ಯಾಸರ ಪ್ರತೀಕ ರೂಪದಲ್ಲಿರುವ ಮಹಾಭಾರತ, ಭಾಗವತ ಹಾಗೂ ಮೂಲ ಗ್ರಂಥಗಳಿಗೆ ತುಲಾಭಾರ ನಡೆಯಿತು.



ಮಾಧ್ವರಾದ್ಧಾಂತ ಸಂವರ್ದಕ ಸಭೆಯ ವಜ್ರಮಹೀತ್ಸವದ
ಜೊತೆಗೆ ಉಡುಪಿಯಲ್ಲಿ ವಿಜೃಂಭಿಸಿದ ವೇದವ್ಯಾಸ ಜಯಂತೀ
        ೨೩-೫-೨೦೦೨ ರಿಂದ ೨೫-೫-೨೦೦೨ ರವರೆಗೆ ಮೂರು ದಿನಗಳಲ್ಲಿ ಉಡುಪಿಯ ಭಂಡಾರಕೇರಿ ಮಠದ, ಆಗ ತಾನೇ ಉದ್ಘಾಟನೆಗೊಂಡಿದ್ದ 'ವಿದ್ಯಾಮಾನ್ಯ ವಿಜ್ಞಾನ ಭವನ' ದಲ್ಲಿ ವೇದವ್ಯಾಸ ಜಯಂತಿ ಮಾಧ್ವರಾದ್ಧಾಂತ ಸಂವರ್ಧಕ ಸಭೆಯ ವಜ್ರಮಹೋತ್ಸವದ ಜೊತೆಗೆ ವೈಭವದಿಂದ ನಡೆದಿತ್ತು.
        ಮೊದಲ ದಿನವಾದ ಏಕಾದಶಿಯಂದು ಬೆಳಿಗ್ಗೆ ವಿದ್ಯಾಮಾನ್ಯ ವಿಜ್ಞಾನಭವನದ ಉದ್ಘಾಟನೆ ನಡೆದಿತ್ತು. ಶ್ರೀ ವಿದ್ಯೇಶಾ ತೀರ್ಥರು ೩೦ ಲಕ್ಷರೂ. ವೆಚ್ಚದಲ್ಲಿ ತಮ್ಮ ಗುರುಗಳ ಸ್ಮಾರಕವಾಗಿ ರೂಪಿಸಿ ಮಾಧ್ವರಾದ್ಧಾಂತ ಸಂವರ್ದಕ ಸಭೆಯ ವಜ್ರಮಹೋತ್ಸವದ ಸಂದರ್ಭದಲ್ಲಿ ಶ್ರೀ ರಾಮಚಂದ್ರನ ಪಾದಾರವಿಂದಕ್ಕೆ ಅದನ್ನು ಅರ್ಪಿಸಿದ್ದರು.
        ಅಂದು ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ನಿರಂತರವಾಗಿ ಭಾಗವತದ ಹನ್ನೆರಡು ಸ್ಕಂದಗಳನ್ನೂ ಒಬ್ಬೊಬ್ಬ ವಿದ್ವಾಂಸರು ಒಂದೊಂದು ಸ್ಕಂಧದ ಕುರಿತಂತೆ ಪ್ರವಚನ ನಡೆಸಿಕೊಟ್ಟರು. 'ತತ್ತ್ವಮಸಿ' ಎಂಬ ವಾಕ್ಯದ ಬಗ್ಗೆ ಮತತ್ರಯದ ಅರ್ಥದ ಬಗ್ಗೆ ವಿಮರ್ಶೆ ನಡೆದಿತ್ತು. ಸಿವಿಲ್ ಸೂಟ್ ನಲ್ಲಿ ಶ್ರೀ ಸತ್ಯಧ್ಯಾನತೀರ್ಥರು ವಿಚಾರ ಮಾಡಿರುವ ಅನೇಕ ಅದ್ವೈತಪರವಾಕ್ಯಗಳ ಬಗ್ಗೆ ವಿದ್ವಾಂಸರು ಉಪನ್ಯಾಸ ನೀಡಿದ್ದರು.
        ವಜ್ರಮಹೋತ್ಸವದ ಸಂದರ್ಭದಲ್ಲಿ ಖ್ಯಾತ ವಿದ್ವಾಂಸರಾದ ಶ್ರೀ ಬನ್ನಂಜೆ ಗೋವಿಂದಾಚಾರ್ಯರಿಗೆ 'ಭಂಡಾರಕೇರಿ ರಾಜಹಂಸ' ಪ್ರಶಸ್ತಿಯನ್ನೂ ಡಾ. ಪ್ರಭಂಜನಾಚಾರ್ಯರಿಗೆ ಶ್ರೀ ವಿದ್ಯಾಮಾನ್ಯ ಭಾಸ್ಕರ ಪ್ರಶಸ್ತಿಯನ್ನೂ ನೀಡಿ ಪುರಸ್ಕರಿಸಲಾಯಿತು.
        ಸಮಾರೋಪದ ಸಮಾರಂಭದಂದು ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ನಾಣ್ಯದಿಂದ ತುಲಾಭಾರ ಮಾಡಲಾಗಿತ್ತು.
        ಪರ್ಯಾಯ ಪೀಠಾರೂಢರಾಗಿದ್ದ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಶ್ರೀ ವೇದವ್ಯಾಸರು ಶ್ರೀ ಮಧ್ವಾಚಾರ್ಯರ ಗುರುಗಳಾದರೆ, ನರಸಿಂಹ ದೇವರು 'ನನ್ನನ್ನು ಬಿಟ್ಟು ಬೇರೆ ದೇವರೇ ಇಲ್ಲ 'ಅಹಂಬ್ರಹ್ಮಾಸ್ಮಿ' ಎಂದು ಸಾರುತ್ತಿದ್ದ ಹಿರಣ್ಯಕಶಿಪುವನ್ನು ಸಂಹರಿಸುವ ಮೂಲಕ ಅದ್ವೈತವಾದ ತಮಗೆ ಸಮ್ಮತವಲ್ಲ, ಶ್ರೀ ಮದಾಚಾರ್ಯರು ಪ್ರಚುರ ಪಡಿಸಿದ ದ್ವೈತ ಸಿದ್ಧಾಂತವೇ ಸರಿಯಾದುದೆಂದು ಸಾರಿದವರು' ಎಂದು ಪ್ರತಿಪಾದಿಸಿದರು.
        ಶ್ರೀ ವಿದ್ಯೇಶತೀರ್ಥರು ನರಸಿಂಹನ ಸಿಟ್ಟಿನ ಬಗ್ಗೆ ವಿಶ್ಲೇಷಿಸುತ್ತ, ಕ್ರೋಧಕ್ಕೆ ಕಾರಣ ಮತ್ತು ಕ್ರೋಧದ ಪರಿಣಾಮ ಎರಡೂ ಇಲ್ಲದ ನರಸಿಂಹನಿಗೆ ಕ್ರೋಧವೇ ಇರಲು ಸಾಧ್ಯವಿಲ್ಲ ಎಂದು ಸಮರ್ಥಿಸಿದರು. ಕಲಿಕಾಲದಲ್ಲಿ ನರಸಿಂಹನ ಧ್ಯಾನದಿಂದ ಭಯ ದುಃಖಗಳು ನಾಶಹೊಂದುವವೆಂಬ ಶ್ರೀ ಮದಾಚಾರ್ಯರ ಸಂದೇಶದ ಹಿನ್ನೆಲೆಯಲ್ಲಿ 'ವನಂ ಗತೋ ಯದ್ಧರಿಮಾಶ್ರಯೇತ' - ಎಂಬ ಪ್ರಹ್ಲಾದನ ಮಾತಿಗೆ ನರಸಿಂಹ ದೇವರ ಕ್ಷೇತ್ರ ರೂಪದ ವನಕ್ಕೆ ಹೋಗಿ ಅಲ್ಲಿ 'ಹರಿ' - ರೂಪದ ಸಿಂಹರೂಪದ ನರಸಿಂಹನನ್ನು ಧಾನಿಸಬೇಕು - ' ಎಂದು ಅರ್ಥೈಸಿ ಸಂದೇಶಿಸಿದರು.
        ಶ್ರೀ ವಿಶ್ವೇಶ ತೀರ್ಥರು ತಮ್ಮ ಅಧ್ಯಕ್ಷ ಭಾಷಣದಲ್ಲಿ - ಶ್ರೀ ವೇದವ್ಯಾಸರು ಭಾರತೀಯ ದರ್ಶನಗಳ ಮೂಲ ಸ್ರೋತಸ್ಸು. ವೇದಗಳ ವಿಭಾಗ, ಪುರಾಣ, ಇತಿಹಾಸ, ಸೂತ್ರಗಳ ರಚನೆ ಮಾಡಿ ದರ್ಶನಗಳ ಉದಯಕ್ಕೂ ಅವರು ಕಾರಣರಾಗಿರುವರು. ವಿಶ್ವದಲ್ಲೇ ಅಮೂಲ್ಯವಾದ ಸಹಿತ್ಯ ಸಂಪತ್ತನ್ನು ಅವರು ನಮ್ಮ ದೇಶಕ್ಕೆ ನೀಡಿರುವರು. ಇಂತಹ ವೇದವ್ಯಾಸರು 'ರಾಷ್ಟ್ರ ಪಿತಾಮಹ' ಎಂದು ಉದ್ಘೋಷಿಸಿದರು.



ಮಾಧ್ವರಾದ್ಧಾಂತ ಸಂವರ್ದಕ ಸಭೆಯ ವಜ್ರಮಹೀತ್ಸವದ ಜೊತೆಗೆ
ಬೆಂಗಳೂರಿನಲ್ಲಿ ವಿಜೃಂಭಿಸಿದ ವೇದವ್ಯಾಸ ಜಯಂತೀ
           ಬೆಂಗಳೂರಿನ ಗಿರಿನಗರದಲ್ಲಿರುವ ವಿಜ್ಯ್ ಭಾರತೀ ವಿದ್ಯಾಲಯದ ಆವರಣದಲ್ಲಿ ೮-೫-೨೦೦೩ ರಿಂದ ೧೪-೫-೨೦೦೩ ರ ವರೆಗೆ ಶ್ರೀ ಮಾಧ್ವರಾದ್ಧಾಂತ ಸಂವರ್ದಕ ಸಭೆಯ ವಜ್ರಮಹೋತ್ಸವದ ಜೊತೆಗೆ ಎಂಟನೇ ವರ್ಷದ ವೇದವ್ಯಾಸ ಜಯಂತಿಯು ವಿಜೃಂಭಿಸಿತ್ತು.
        ಏಳು ದಿನಗಳಲ್ಲಿ ನಡೆದ ಪ್ರತಿನಿತ್ಯದ ಸಭಾಕಾರ್ಯಕ್ರಮದಲ್ಲಿ ಬೇರೆ ಬೇರೆ ಪೀಠಾಧಿಪತಿಗಳು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಅನೇಕ ವಿದ್ವಾಂಸರ ಪ್ರವಚನಗಳು ಬೇರೆ ಬೇರೆ ವಿಷಯದ ಬಗ್ಗೆ ನಡೆದಿದ್ದವು.
        ವೇದವ್ಯಾಸ ಜಯಂತಿಯ ಪ್ರಯುಕ್ತವಾಗಿ ೧೨-೫-೨೦೦೩ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೬ ರವರೆಗೆ ಮಹಾಭಾರತ ತಾತ್ಪರ್ಯ ನಿರ್ಣಯದ ಬಗ್ಗೆ ವಿದ್ವಾಂಸರು ಉಪನ್ಯಾಸಗೈದರು. ಶ್ರೀ ವಿದ್ಯೇಶತೀರ್ಥರು ಶ್ರೀ ವೇದವ್ಯಾಸ ಚರಿತ್ರೆಯನ್ನು ಕುರಿತು ಪ್ರವಚನ ನೀಡಿದರು.
        ೧೩-೫-೨೦೦೩ ರಂದು ಶ್ರೀ ವೇದವ್ಯಾಸರ ಕೃತಿಗಳಿಗೆ ತುಲಾಭಾರ ನಡೆದು ಆನಂತರ ಶ್ರೀ ವಿಶ್ವೇಶ ತೀರ್ಥರಿಗೆ ನಾಣ್ಯಗಳಿಂದ ತುಲಾಭಾರ ನಡೆಸಲಾಯಿತು.

ಅನಂತಪುರದಲ್ಲಿ ನಡೆದ
ಶ್ರೀ ವೇದವ್ಯಾಸ ಜಯಂತಿಯ ಕಂಪು
        ೨೭-೪-೨೦೦೪ ರಿಂದ ೩-೫-೨೦೦೪ ರ ವರೆಗೆ ಒಂಭತ್ತನೇ ವರ್ಷದ ವೇದವ್ಯಾಸ ಜಯಂತಿ ಆಂಧ್ರ ಪ್ರದೇಶದ ಅನಂತಪುರದಲ್ಲಿರುವ ಉತ್ತರಾದಿ ಮಠದ ಶ್ರೀ ಸತ್ಯಪ್ರಮೋದತೀರ್ಥ ಸಭಾ ಮಂಟಪದಲ್ಲಿ ಜರಗಿತು, ಹಿಂದಿನ ಎರಡು ವರ್ಷಗಳಲ್ಲಿ ನಡೆದು ಬಂದಂತೆ ಮಾಧ್ವರಾದ್ದಾಂತ ಸಂವರ್ದಕ ಸಭೆ ಹಾಗೂ ಶ್ರೀ ವಿದ್ಯಾಮಾನ್ಯ ತೀರ್ಥರ ಸಮಾರಾಧನೆಯಿಂದಾಗಿ ವೇದವ್ಯಾಸ ಜಯಂತಿಗೆ ವಿಶೇಷ ಮೆರುಗು ಬಂದಿತ್ತು.
        ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿಗಳಾದ ಶ್ರೀ ಶುಶಮೀಂದ್ರತೀರ್ಥರು ದೀಪ ಬೆಳಗಿಸುವದರ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು.
        ಸಪ್ತಾಹಾವಧಿಯಲ್ಲಿ ನಡೆದ ಜ್ಞಾನಸತ್ರದಲ್ಲಿ ಮೂವತ್ತಕ್ಕಿಂತಲೂ ಅಧಿಕ ವಿದ್ವಾಂಸರು ಪ್ರವಚನಗಳನ್ನು ನೀಡಿದ್ದರು. ಪ್ರತಿನಿತ್ಯ ಅನಂತಪುರದ ವಿವಿದ ಭಜನಾ ಮಂಡಳಿಗಳು ತಾರತಮ್ಯಾನುಸಾರ ಭಜನೆಗಳನ್ನು ನಡೆಸಿಕೊಟ್ಟಿದ್ದವು. ಸಂಗೀತ ವಿದ್ವಾಂಸರಾದ ಶ್ರೀ ಶೇಷಗಿರಿರಾವ್, ಅನಂತ ಕುಲಕರ್ಣಿ ಮುಂತಾದವರ ದೇವರನಾಮಗಳ ಗಾಯನ ಕಾರ್ಯಕ್ರಮಗಳೂ ನಡೆದಿದ್ದವು.
        ಶ್ರೀ ವೇದವ್ಯಾಸರ ಅವತಾರ ಮಾಡಿದ ದ್ವಾದಶಿಯಂದು ಬೆಳಿಗ್ಗೆ ಶ್ರೀ ವೇದವ್ಯಾಸರ ಪ್ರತಿನಿಧಿಯಾಗಿ ಅವರು ರಚಿಸಿದ ಅಷ್ಟಾದಶ ಪುರಾಣಗಳು, ಮಹಾಭಾರತ ಹಾಗೂ ಬ್ರಹ್ಮ ಸೂತ್ರ ಗ್ರಂಥಗಳಿಗೆ ತುಲಾಭಾರ ನಡೆಸಲಾಯಿತು.
        ಶ್ರೀ ವಿದ್ಯಾಮಾನ್ಯ ತೀರ್ಥರ ಉತ್ತರಾಧನೆಯಂದು ಶ್ರೀ ವಿಶ್ವೇಶತೀರ್ಥರಿಗೆ ನಾಣ್ಯಗಳಿಂದ ತುಲಾಭಾರ ನಡೆಸಲಾಯಿತು.

ರಾಯಚೂರಿನಲ್ಲಿ
ವ್ಯಾಸಜಯಂತಿಯ ದಶಮಾನೋತ್ಸವ
        ೧೯೯೬ ರಿಂದ ಪ್ರತಿವರ್ಷ ಭಾಗವತಾಶ್ರಮ ಪ್ರತಿಷ್ಠಾನದ ಆಶ್ರಯದಲ್ಲಿ ಶ್ರೀ ವಿಶ್ವೇಶತೀರ್ಥರ ನೇತೃತ್ವದಲ್ಲಿ ಆಚರಿಸಲ್ಪಡುತ್ತ ಬಂದಿದ್ದ ವ್ಯಾಸಜಯಂತಿಯ ದಶಮಾನೋತ್ಸವ ೧೮-೫-೨೦೦೫ ರಿಂದ ೨೪-೫-೨೦೦೫ ರವರೆಗೆ ರಾಯಚೂರಿನ ಮುಂಗಲಿ ಪ್ರಾಣದೇವರ ಸನ್ನಿಧಾದಲ್ಲಿ ಜರಗಿತು ಮಾಧ್ವರಾದ್ಧಾಂತ ಸಂವರ್ದಕ ಸಭೆಯ ಅಧಿವೇಶನ ಶ್ರೀ ವಿದ್ಯಾಮಾನ್ಯತೀರ್ಥರ ಸಮಾರಾಧನೆ ಹಾಗೂ ನರಸಿಂಹ ಜಯಂತಿ ಇವುಗಳ ಆಚರಣೆಯೂ ಜೊತೆಗೂಡಿತ್ತು. ಪ್ರತಿ ದಿನ ಬೆಳಿಗ್ಗೆ ಶ್ರೀಮದ್ ಭಗವದ್ಗೀತೆಯ ಬಗ್ಗೆ ಸಂಜೆ ಶ್ರೀ ಮದ್ಬಾಗವತದ ಬಗ್ಗೆ ಆನೇಕ ವಿದ್ವಾಂಸರು ಪ್ರವಚನ ನಡೆಸಿದ್ದರು. ಶ್ರೀ ರಾಮನ ದೈವ ಮಾನವೀಯ ಮುಖಗಳು, ಆಧುನಿಕ ಯುಗದಲ್ಲಿ ವಿದುರ ನೀತಿಯ ಪಾತ್ರ, ಭಾಗವತದಲ್ಲಿ ಭಾರತದಲ್ಲಿ ಕೃಷ್ಣ, ಚಂದ್ರಕಾದಲ್ಲಿ ಪರಮತದ ವಿಮರ್ಶೆ ಮೊದಲಾದ ವಿಶಿಷ್ಟ ವಿಷಯಗಳ ಕುರಿತೂ ಪ್ರವಚನಗಳುನಡೆದಿದ್ದವು.
        ರಾಯಚೂರಿನ ವಿವಿಧ ಭಜನಾ ಮಂಡಳಿಗಳ ಸದಸ್ಯರು ತಾರತಮ್ಯಾನುಸಾರ ಭಜನೆಯನ್ನು ನಡಿಸಿದ್ದರು. ಶ್ರೀ ಪುತ್ತೂರು ನರಸಿಂಹ ನಾಯಕ್, ಶ್ರೀ ಅನಂತ ಕುಲಕರ್ಣಿ, ಶ್ರೀ ಬಳ್ಳಾರಿ ರಾಮಚಂದ್ರರಾವ್ ಮೊದಲಾದ ಗಾಯಕರು ದಾಸವಾಣಿ ಕಾರ್ಯಕ್ರಮದ ಮೂಲಕ ಭಕ್ತಿಯ ವಾತಾವರಣವನ್ನು ನಿರ್ಮಿಸಿದ್ದರು.
        ದ್ವಾದಶಿಯಂದು ಬೆಳಿಗ್ಗೆ ವೇದವ್ಯಾಸ ಜಯಂತಿಯ ಅಂಗವಾಗಿ ಶ್ರೀ ವೇದವ್ಯಾಸ ಮಂತ್ರ ಹೊಮ ನಡೆದಿತ್ತು.
        ಸಂಜೆ ಶ್ರೀ ವೇದವ್ಯಾಸ ಭಾವಚಿತ್ರ ಹಾಗೂ ಕೃತಿಗಳ ಶೋಭಾಯಾತ್ರೆ ನಡೆದಿತ್ತು. ಶೋಭಾಯಾತ್ರೆಯಲ್ಲಿ ರಾಯಚೂರಿನ ಹಾಗೂ ಬೇರೆ ಬೇರೆ ಊರುಗಳಿಂದ ಬಂದ ಭಕ್ತರು, ಅನೇಕ ಭಜನಾಮಂಡಳಿಗಳ ಸದಸ್ಯರು, ಪಂಡಿತರು, ಸ್ಥಳೀಯ ಶಸಕರು ಪಾಲ್ಗೊಂಡಿದ್ದರು.
        ನರಸಿಂಹ ಜಯಂತಿಯಂದು ಶ್ರೀ ವಿಶ್ವೇಶತೀರ್ಥರು ಸಭಾಧ್ಯಕ್ಷತೆ ವಹಿಸಿದ್ದು, ತಮ್ಮ ಅಧ್ಯಕ್ಷ ಭಾಷಣದಲ್ಲಿ ಶ್ರೀ ವೇದವ್ಯಾಸರು ಸಜ್ಜನರಿಗೆ ಮಾಡಿರುವ ಪರಮೋಪಕಾರವನ್ನು ಕೊಂಡಾಡಿದರು.
        ಶ್ರೀ ವಿಶ್ವೇಶತೀರ್ಥರಿಗೆ ನಾಣ್ಯದ ತುಲಾಭಾರ ನಡೆಸಿ ಗುರುಕಾಣಿಕೆಯನ್ನು ಅರ್ಪಿಸಲಾಯಿತು.



ಸಿಂಹಾವಲೋಕನ
        ಹತ್ತು ವರ್ಷಗಳಿಂದ ನಡೆಸುತ್ತ ಬಂದ ವೇದವ್ಯಾಸ ಜಯಂತಿ ಉತ್ಸವದ ಆಚರಣೆಯ ವೈಶಿಷ್ಟ್ಯಗಳ ಬಗ್ಗೆ ಹೀಗೆ ಸಿಂಹಾವಲೋಕನವನ್ನು ನಡೆಸಬಹುದಾಗಿದೆ.
  • ವೇದವ್ಯಾಸ ಜಯಂತಿಯನ್ನು ವ್ಯಾಪಕವಾಗಿ ನಡೆಸಲು ಪ್ರಾರಂಭಿಸಿದ್ದರಿಂದಾಗಿ ಶ್ರೀ ವೇದವ್ಯಾಸರ ಭಗವದ್ ವ್ಯಕ್ತಿತ್ವದ ಕುರಿತೂ, ಅವರ ಕೃತಿಗಳ ಕುರಿತೂ ವ್ಯಾಪಕ ಚಿಂತನೆ ನಡೆಸುವಂತಾಯಿತು.
  • ಸಾಮಾನ್ಯವಾಗಿ ಮಠ ಮಂದಿರಗಳಲ್ಲಿ ನಡೆಸಲಾಗುವ ಹಬ್ಬ ಹರಿದಿನಗಳ ಸಮಾರಂಭಗಳಲ್ಲಿ ಭೋಜನಕ್ಕೇ ಅದಿಕ ಪ್ರಾಶಸ್ತ್ಯ ನೀಡಲಾಗುವ ಈ ಪ್ರವೃತ್ತಿಗೆ ಅಪವಾದವೆನಿಸುವಂತೆ ವೇದವ್ಯಾಸ ಜಯಂತಿಯನ್ನು ಶ್ರೀ ವೇದವ್ಯಾಸರು ಮೆಚ್ಚುವಂತೆ ಆದಷ್ಟು ಪ್ರವಚನ, ವಿಚಾರಗೋಷ್ಠಿ ಇತ್ಯಾದಿ ಜ್ಞಾನ ಕಾರ್ಯಗಳಿಗೆ ಪ್ರಾಶಸ್ತ್ಯ ಕೊಟ್ಟು ನಡೆಸುತ್ತ ಬಂದಿರುವುದು ಉಲ್ಲೇಖಾರ್ಹ.
  • ಹೆಚ್ಚಿನ ವರ್ಷಗಳಲ್ಲಿ ಜಯಂತಿಯ ಅಂಗವಾಗಿ ಒಂದೊಂದು ಅಧ್ಯಾತ್ಮಿಕ ಕೃತಿಯನ್ನೂ ಬರೆದು, ಪ್ರಕಟಿಸಿ, ಅರ್ಪಿಸಿರುವುದರಿಂದ ವ್ಯ್ಸ ಜಯಂತೀ ರೂಪದ ಆರಾಧನೆಯಲ್ಲಿ ಜ್ಞಾನಪುಷ್ಪಂ ಸಮರ್ಪಯಾಮಿ ಎಂದು ಬಾವಪುಷ್ಪಾತ್ಮಕವಾದ ಜ್ಞಾನ ಪುಷ್ಪವನ್ನು ಅರ್ಪಿಸಿದಂತಾದ ಪ್ರಯುಕ್ತ ವ್ಯಾಸಾರಾಧನೆಗೆ ಹೆಚ್ಚು ಅರ್ಥವತ್ತ್ವವನ್ನು ತಂದು ಕೊಟ್ಟಂತಾಗಿದೆ.
  • ಜಿಜ್ಞಾಸುಗಳು ಅಧಿಕವಾಗಿ ಉಳ್ಳ ಬೇರೆ ಬೇರೆ ಊರುಗಳಲ್ಲಿ ವ್ಯಾಸ ಜಯಂತಿಯನ್ನು ನಡೆಸಿದ್ದರಿಂದ ಅದರ ಕಂಪನ್ನು ಎಲ್ಲೆಡೆ ಹರಡಿದಂತಾಗಿದೆ.
  • ವ್ಯಾಸ ಜಯಂತಿಯಲ್ಲಿ ಪ್ರವಚನ, ವಾಕ್ಯಾರ್ಥಗೋಷ್ಠಿ ಇತ್ಯಾದಿವೈಚಾರಿಕ ಕಾರ್ಯಕ್ರಗಳ ಜೊತೆಗೆ ಭಜನೆ, ದಾಸವಾಣಿ ಕಾರ್ಯಕ್ರಮಗಳನ್ನೂ ಸಂಯೋಜಿಸಿದ್ದರಿಂದ ಸಮಾರಂಭಕ್ಕೆ ಭಾವುಕತೆಯ ನೆರಗನ್ನು ನೀಡಿದಂತಾಗಿದೆ.
  • ಬೇರೆ ಬೇರೆ ವರ್ಷದಲ್ಲಿ ನಡೆದ ವ್ಯಾಸ ಜಯಂತಿಯಲ್ಲಿ ಬೇರೆ ಬೇರೆ ಪೀಠಾಧಿಪತಿಗಳೂ ಭಾಗವಹಿಸುವಂತೆ ಮಾಡಿದ್ದರಿಂದಾಗಿ ಆದಷ್ಟು ಹೆಚ್ಚು ಮಾಧ್ವ ಪೀಠಾಧಿಪತಿಗಳು ವೇದವ್ಯಾಸ ಜಯಂತಿಯ ಕಂಪನ್ನು ಅನುಭವಿಸುವಂತೆ ಮಾಡಿದಂತಾಗಿದೆ.

ಸೌಹಾರ್ದದ ಸೂಚನೆಗಳು
  • ಭಾಗವತ, ಮಹಾಭಾರತ ಮುಂತಾದ ಪ್ರಸಿದ್ಧ ವ್ಯಾಸ ಕೃತಿಗಳ ಬಗ್ಗೆಯೇ ಪ್ರತಿವರ್ಷ ಪ್ರವಚನಾದಿಗಳನ್ನು ಆಯೋಜಿಸುವಬದಲು, ಒಂದೊಂದು ವರ್ಷದ ವ್ಯಾಸ ಜಯಂತಿಯಲ್ಲೂ ವ್ಯಾಸರ ಯಾವುದಾದರೊಂದು ಗ್ರಂಥದ ಬಗ್ಗೆಯೇ, ಗ್ರಂಥವನ್ನು ಪೂರ್ಣವಾಗಿ ಸ್ಪರ್ಶಿಸಲು ಆಗದಿದ್ದರೆ ಆ ಗ್ರಂಥದ ಕೆಲವು ಭಾಗದ ಕುರಿತಷ್ಟೇ ಪ್ರವಚನಗಳನ್ನೂ, ವಿಚಾರಗೋಷ್ಠಿಗಳನ್ನೂ ಆಯೋಜಿಸಿ ಅದರಲ್ಲಿ ಪ್ರಸ್ತುತಗಳಾದ ಸಂದೇಶಗಳನ್ನೂ, ಪ್ರಮೇಯಗಳನ್ನೂ, ಚರ್ಚೆಯನ್ನೂ ಕ್ರೂಢೀಕರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು.
  • ದಾಸ ಸಾಹಿತ್ಯ ಹಾಡುವ, ಕಥಾ ನಿರೂಪಣ, ವರ್ಚೆ ನಡೆಸುವ, ಸಮಾನ್ಯ್ ಜಿಜ್ಞಾಸುಗಳ ಪ್ರಶ್ನೆಗಳಿಗೆ ಎದುರಲ್ಲೇ ಸಮಾಧಾನಿಸುವ ಸಂವಾದ ಕಾರ್ಯಕ್ರಮ ಇತ್ಯಾದಿ ಸರಳ ಕಾರ್ಯಕ್ರಮಗಳನ್ನೂ ಈ ಸಮಾರಂಭದಲ್ಲಿ ಸಂಯೋಜಿಸಿ, ಆ ಮೂಲಕ ಜಿಜ್ಞಾಸು ಸಾಮಾನ್ಯರೂ ಹೆಚ್ಚೆಚ್ಚಾಗಿ ಈ ಸಮಾರಂಭದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕಾಗಿದೆ.
  • ಹರಿಗುರುಗಳು ಮೆಚ್ಚುವಂತೆ ನಡೆಸಬೇಕಾದ ಮಾಧ್ವವಾಙ್ಮಯದ ಸಾಧಕರನ್ನು ಸಮ್ಮಾನಿಸುವ ಜೊತೆಗೆ ಹರಿಗುರುಗಳ ವ್ಯಕ್ತಿತ್ವಕ್ಕೆ ಅಪಚಾರ ಎಸಗಿದ ಮತದ ವಿದ್ವಾಂಸರನ್ನೂ, ಲೌಕಿಕ ಕಲೆಗಳ, ವಿದ್ಯೆಗಳ ಪರಿಣತಿಗಾಗಿ ತಮ್ಮ ಜೀವನವನ್ನು ವ್ಯರ್ಥಗಳಿಸಿ ಆಯಾ ಕಲೆಯಲ್ಲೋ, ವಿದ್ಯೆಯಲ್ಲೋ ಬಹಳಷ್ಟು ಎತ್ತರ ಏರಿದ ವ್ಯಕ್ತಿಗಳನ್ನೂ ಪುರಸ್ಕರಿಸುವ ಮೂಲಕ ವೇದವ್ಯಾಸ ಜಯಂತಿಯ ಅಂಗವಾಗಿ ಪರಿಶುದ್ಧವಾಗಿ ನಡೆಯಬೇಕಾದ ಸಮ್ಮಾನ ಪ್ರಕ್ರಿಯೆ ಕಲುಷಿತಗೊಳ್ಳದಂತೆ ಎಚ್ಚರ ವಹಿಸಬೇಕಾಗಿದೆ.